‘ನೀನಾದೆ ನಾ’ ಧಾರಾವಾಹಿಯಲ್ಲಿ ರೋಚಕವಾದ ಎಪಿಸೋಡ್‌ ಪ್ರಸಾರ ಆಗಲಿದೆ. ಈ ರೀತಿ ಚಿತ್ರಕಥೆ ಬಂದಿದ್ದು ತುಂಬ ಅಪರೂಪ ಎನಿಸತ್ತೆ. ಹಾಗಾದರೆ ಏನದು? 

‘ನೀನಾದೆ ನಾ’ ಧಾರಾವಾಹಿಯಲ್ಲಿ ರೋಚಕ ಎಪಿಸೋಡ್‌ ಪ್ರಸಾರ ಆಗಲಿದೆ. ಹೌದು, ಇನ್‌ಸ್ಪೆಕ್ಟರ್‌ ವಿಶ್ವನಿಗೆ ವಿಕ್ರಮ್‌ ಕಂಡ್ರೆ ಆಗೋದೇ ಇಲ್ಲ. ಈಗ ಅವನು ವಿಕ್ರಮ್‌ ಪ್ರಾಣ ತೆಗೆಯುವ ಹಂತಕ್ಕೆ ಹೋಗಿದ್ದಾನೆ. ವೇದಾಳನ್ನು ತನ್ನತ್ತ ಸೆಳೆಯಬೇಕು ಅಂತ ವಿಶ್ವ ಪ್ರಯತ್ನಪಟ್ಟಾಗಲೇ ವಿಕ್ರಮ್‌ ಅವಳೆ ನೆರವಿಗೆ ಬರುತ್ತಾನೆ. ಈಗ ವಿಕ್ರಮ್‌ನನ್ನು ವಿಶ್ವ ಜೀವಂತವಾಗಿ ಮಣ್ಣು ಮಾಡಿದ್ದನು. ಆದರೆ ವಿಕ್ರಮ್‌ ಎದ್ದು ಬಂದಿದ್ದು ಮಾತ್ರ ಸಖತ್‌ ರೋಚಕ. ಕನ್ನಡ ಕಿರುತೆರೆಯಲ್ಲಿ ಈ ರೀತಿ ಆಗಿದ್ದು ಬಹಳ ಕಡಿಮೆ ಎನ್ನಬಹುದು.

ಪ್ರಾರ್ಥನೆ ಮಾಡಿದ ವೇದಾ! 
ವಿಕ್ರಮ್‌ ಎಲ್ಲಿಯೂ ಕಾಣಸ್ತಿಲ್ಲ ಅಂತ ವೇದಾ ತುಂಬ ಹುಡುಕ್ತಾಳೆ. ಆದರೂ ಪ್ರಯೋಜನ ಆಗೋದಿಲ್ಲ. ವಿಶ್ವ ಮಾತ್ರ ವಿಕ್ರಮ್‌ನನ್ನು ಹುಡುಕ್ತೀನಿ, ಏನಾಗಿದೆ ಅಂತ ಕಂಡುಹಿಡಿಯುತ್ತೇನೆ ಅಂತ ವೇದ ಮುಂದೆ ಅವನು ನಾಟಕ ಮಾಡುತ್ತಾನೆ. ವೇದಾಗೆ ಇನ್ನೂ ವಿಶ್ವನ ಅಸಲಿಮುಖ ಗೊತ್ತಾಗಿಲ್ಲ. ಇನ್ನೊಂದು ಕಡೆ ವೇವಾ ವಿಕ್ರಮ್‌ನನ್ನು ಹುಡುಕುತ್ತ, ಅವನನ್ನು ಮಣ್ಣು ಮಾಡಿದ ಜಾಗದತ್ತ ಬಂದಿದ್ದಾಳೆ. “ನನಗೆ ಏನು ಮಾಡಬೇಕು ಅಂತ ಗೊತ್ತಾಗ್ತಿಲ್ಲ, ವಿಕ್ರಮ್‌ನನ್ನು ಹುಡುಕಲು ಸಹಾಯ ಮಾಡು ದೇವರೆ” ಅಂತ ವೇದಾ ಪ್ರಾರ್ಥನೆ ಮಾಡಿದ್ದಾಳೆ. 

ಎದ್ದುನಿಂತ ವಿಕ್ರಮ್!
ವೇದಾ ಪ್ರಾರ್ಥನೆಗೆ ದೇವರು ಮಣಿದಿದ್ದಾನೆ. ವಿಕ್ರಮ್‌ ಮಣ್ಣು ಮಾಡಿದ ಜಾಗದಲ್ಲಿ ಕಲ್ಲಿನ ಕಂಬವನ್ನು ಹೂಳಲಾಗಿತ್ತು. ಆಗ ವೇದಾ ದುಪ್ಪಟ್ಟಾ ಆ ಕಲ್ಲಿಗೆ ತಾಗಿತ್ತು. ಯಾಕೆ ನನ್ನ ದುಪ್ಪಟ್ಟಾ ಆ ಕಲ್ಲಿಗೆ ತಾಗಿದೆ ಅಂತ ವೇದಾ ಯೋಚನೆ ಮಾಡುತ್ತಿದ್ದಳು. ಅದೇ ಸಮಯಕ್ಕೆ ಬಿರುಗಾಳಿ ಬಂದು ಇದ್ದ ಮಣ್ಣೆಲ್ಲವೂ ಅದಾಗಿಯೇ ಎಲ್ಲೆಡೆ ತೂರಿತು, ವಿಕ್ರಮ್‌ ಎದ್ದು ನಿಂತಿದ್ದನು. ಈ ರೀತಿ ಎಪಿಸೋಡ್‌ ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗಿಲ್ಲ ಬಿಡಿ

ಯಾವೆಲ್ಲ ಥರದ ದೃಶ್ಯ ಬಂದಿತ್ತು ಗೊತ್ತಾ? 
ಗೀತಾ ಧಾರಾವಾಹಿಯಲ್ಲಿ ವಿಜಯ್ ಗೂಳಿ ಜೊತೆ ಹೋರಾಡಿದ್ದು‌ ಆಮೇಲೆ ಗೀತಾ ದುಷ್ಟರ ಜೊತೆ ಹೋರಾಡಿದ್ದು, ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಮಣ್ಣು ಮಾಡಿದ ನಂತರದಲ್ಲಿ ಸಿದ್ದಾರ್ಥ್‌ ಆಮೇಲೆ ಬಂದು ಕಾಪಾಡಿದ್ದು, ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿ ಹುಲಿ ಜೊತೆ ಹೋರಾಡಿದ್ದು ಈ ರೀತಿ ಎಪಿಸೋಡ್‌ಗಳು ಪ್ರಸಾರ ಆಗಿವೆ. ಅವುಗಳ ಸಾಲಿಗೆ ಈಗ ʼನೀನಾದೆ ನಾʼ ಎಪಿಸೋಡ್‌ ಕೂಡ ಸೇರಲಿದೆ.

ವೀಕ್ಷಕರು ಏನು ಹೇಳಬಹುದು?
ಅಂದಹಾಗೆ ಇನ್ನೂ ಈ ಎಪಿಸೋಡ್‌ ಪ್ರಸಾರ ಆಗಿಲ್ಲ. ಇಂದು ಸಂಜೆ ಈ ಎಪಿಸೋಡ್‌ ಪ್ರಸಾರ ಆಗಲಿದೆ. ಈ ಎಪಿಸೋಡ್‌ ನೋಡಿ ವೀಕ್ಷಕರು ಏನು ಹೇಳ್ತಾರೆ ಅಂತ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಈ ಚಿತ್ರಕಥೆಗೆ ಮಾತ್ರ ಏನು ಹೇಳಬೇಕೋ ಏನೋ! ನೀವೇ ಹೇಳಿ..! 

ಧಾರಾವಾಹಿ ಕತೆ ಏನು?
ವಿಕ್ರಮ್‌ ರೌಡಿ ಮಗ. ವೇದಾ ಬಟ್ಟೆ ವ್ಯಾಪಾರಿ ಮಗಳು. ಆರಂಭದಲ್ಲಿ ಇವರಿಬ್ಬರ ಮಧ್ಯೆ ಜಗಳ ಆಗುತ್ತದೆ. ಸಾಕಷ್ಟು ಮನಸ್ತಾಪಗಳ ಮಧ್ಯೆಯೂ ವಿಕ್ರಮ್‌ಗೆ ವೇದಾ ಮೇಲೆ ಲವ್‌ ಆಗುವುದು. ಆದರೆ ವೇದಾಳನ್ನು ಇನ್‌ಸ್ಪೆಕ್ಟರ್‌ ವಿಶ್ವ ಕೂಡ ಪ್ರೀತಿ ಮಾಡ್ತಿದ್ದಾನೆ. ವೇದಾ-ವಿಕ್ರಮ್‌ ಒಂದಾಗೋಕೆ ಅವನು ಬಿಡೋದಿಲ್ಲ. ಇನ್ನೊಂದು ಕಡೆ ವಿಕ್ರಮ್‌ ತಾಯಿ ಮನೆ ಬಿಟ್ಟು ಬೇರೆ ಕಡೆ ವಾಸವಿದ್ದಾಳೆ. ವಿಕ್ರಮ್‌ ತಂದೆಗೆ ಹೆಣ್ಣು ಕಂಡರೆ ಆಗೋದಿಲ್ಲ. ಒಟ್ಟಿನಲ್ಲಿ ವೇದಾ-ವಿಕ್ರಮ್‌ ಜೋಡಿ ಆಗೋಕೆ ಸಾಕಷ್ಟು ಸಮಸ್ಯೆಗಳು ಇವೆ. ಇವರಿಬ್ಬರು ಒಂದಾಗ್ತಾರಾ ಅಂತ ಕಾದು ನೋಡಬೇಕಿದೆ. 

ವಿಕ್ರಮ್‌ ಪಾತ್ರದಲ್ಲಿ ದಿಲೀಪ್‌ ಶೆಟ್ಟಿ, ವೇದಾ ಪಾತ್ರದಲ್ಲಿ ಖುಷಿ ಶಿವು ಅವರು ನಟಿಸುತ್ತಿದ್ದಾರೆ.