- Home
- News
- Politics
- ರಾಜಕೀಯಕ್ಕೆ ಸುಮಲತಾ ರೀ-ಎಂಟ್ರಿ, ಮತ್ತೆ ಸ್ವತಂತ್ರವಾಗಿ ಸ್ಫರ್ಧೆ, ದೇವೇಗೌಡ ನಮ್ಮ ತ್ಯಾಗ ಮರೆತಿದ್ದಾರೆ, ಮಾಜಿ ಸಚಿವ ನಾರಾಯಣ ಕಿಡಿ
ರಾಜಕೀಯಕ್ಕೆ ಸುಮಲತಾ ರೀ-ಎಂಟ್ರಿ, ಮತ್ತೆ ಸ್ವತಂತ್ರವಾಗಿ ಸ್ಫರ್ಧೆ, ದೇವೇಗೌಡ ನಮ್ಮ ತ್ಯಾಗ ಮರೆತಿದ್ದಾರೆ, ಮಾಜಿ ಸಚಿವ ನಾರಾಯಣ ಕಿಡಿ
ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರು ಮುಂದಿನ ಚುನಾವಣೆಯಲ್ಲಿ ಸಕ್ರಿಯ ರಾಜಕೀಯಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದು, ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಇದೇ ವೇಳೆ, ಜೆಡಿಎಸ್ ವಿರುದ್ಧ ಅಸಮಾಧಾನ ಹೊರಹಾಕಿದ ನಾರಾಯಣ ಗೌಡರು ಮಂಡ್ಯದಲ್ಲಿ ಬಿಜೆಪಿ ಬಲವರ್ಧನೆಗೆ ಶಪಥಗೈದಿದ್ದಾರೆ.

ರಾಜ್ಯ ನಾಯಕರ ಜತೆ ಚರ್ಚೆ ನಡೆಸುವೆ
ಬೆಂಗಳೂರು : ಮುಂದಿನ ಚುನಾವಣೆಯಲ್ಲಿ ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳುವ ವಿಶ್ವಾಸವನ್ನು ಮಾಜಿ ಸಂಸದೆ ಸುಮಲತಾ ಅಂಬರೀಷ್ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ಮುಂದಿನ ರಾಜಕೀಯ ಭವಿಷ್ಯ ಕುರಿತು ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ಮುಂದಿನ ಚುನಾವಣೆಯ ವಿಚಾರದಲ್ಲಿ ಹೈಕಮಾಂಡ್ ಹಾಗೂ ಪಕ್ಷದ ನಾಯಕರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾನು ಬದ್ಧಳಾಗಿರುತ್ತೇನೆ. ನಾನೂ ಸಹ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಜತೆ ಚರ್ಚೆ ನಡೆಸುವ ಉದ್ದೇಶವಿದೆ ಎಂದು ಸುಮಲತಾ ಹೇಳಿದರು.
ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಕುರಿತು ಯಾವುದೇ ವಿರೋಧವಿಲ್ಲ
ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಕುರಿತು ಯಾವುದೇ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಮಯ, ಸಂದರ್ಭ ಎಲ್ಲವೂ ಕೂಡಿಬಂದಾಗ ಎಲ್ಲವೂ ಸಾಧ್ಯ. ಜಿಲ್ಲೆಯ ಮಟ್ಟದಲ್ಲಿ ಪಕ್ಷದಿಂದ ನಡೆಯುವ ಹೋರಾಟಗಳು, ಸಭೆಗಳು ಮತ್ತು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತಾ ಬಂದಿದ್ದೇನೆ. ಪಕ್ಷವನ್ನು ಕೆಳಮಟ್ಟದಿಂದ ಜಿಲ್ಲೆಯಲ್ಲಿ ಗಟ್ಟಿಗೊಳಿಸಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಿದೆ ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೂ ತಮ್ಮ ವಿರೋಧವಿಲ್ಲ ಎಂದು ತಿಳಿಸಿದ ಅವರು, ಅದರ ಅಂತಿಮ ತೀರ್ಮಾನವನ್ನು ಹೈಕಮಾಂಡ್ ನಾಯಕರು ಕೈಗೊಳ್ಳಬೇಕು. ಜಿಲ್ಲೆಯಲ್ಲೀಗ ಬಿಜೆಪಿ ಮತಗಳಿಕೆ ಪ್ರಮಾಣವೂ ಹೆಚ್ಚಾಗಿದೆ. ಪಕ್ಷ ಸಂಘಟನೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಳ್ಳಾರಿ ಘಟನೆ ಕುರಿತು ಬೇಸರ
ಇದೇ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ನಡೆದ ಇತ್ತೀಚಿನ ದುರ್ಘಟನೆ ಕುರಿತು ಮಾತನಾಡಿದ ಸುಮಲತಾ, ಬಳ್ಳಾರಿ ಘಟನೆ ಅತ್ಯಂತ ಬೇಸರ ತರಿಸಿದೆ. ಪಕ್ಷದ ಒಳಗಿನ ಕಲಹವಾಗಿರಲಿ ಅಥವಾ ಬೆಂಬಲಿಗರ ನಡುವಿನ ಸಂಘರ್ಷವಾಗಿರಲಿ, ಇಂತಹ ಘಟನೆಗಳು ಸಹಜವಾಗಿರಬಹುದು. ಆದರೆ ಆ ಕಚ್ಚಾಟದಲ್ಲಿ ಒಬ್ಬ ವ್ಯಕ್ತಿಯ ಪ್ರಾಣವೇ ಹೋಗಿರುವುದು ನೋವಿನ ಸಂಗತಿ. ಶತ್ರುತ್ವ ಈ ಮಟ್ಟಕ್ಕೆ ಹೋಗಬಾರದು ಎಂದು ಕಳವಳ ವ್ಯಕ್ತಪಡಿಸಿದರು.
ದೇವೇಗೌಡರ ವಿರುದ್ಧ ಅಸಮಾಧಾನ ಹೊರಹಾಕಿದ ಮಾಜಿ ಸಚಿವ ನಾರಾಯಣ ಗೌಡ
ಈ ನಡುವೆ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ನಾರಾಯಣ ಗೌಡ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯಾಧ್ಯಕ್ಷರು ನಮ್ಮನ್ನು ಸಭೆಗೆ ಕರೆಸಿದ್ದರು. ಸ್ಥಳೀಯ ಚುನಾವಣೆ ಸಂಬಂಧ ದೇವೇಗೌಡರು ಹೇಳಿಕೆ ನೀಡಿದರು. ನಾವು ನಮ್ಮ ಹಕ್ಕನ್ನು ಬಿಟ್ಟುಕೊಟ್ಟೆವು, ನಮ್ಮ ಎಂಪಿ ಸ್ಥಾನವನ್ನೂ ತ್ಯಾಗ ಮಾಡಿದೆವು. ಅವರು ಗೆದ್ದರು, ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾದರು. ಆದರೆ ಈಗ ಅವರಿಗೆ ನಾವು ಬೇಡವಾಗಿದ್ದೇವೆ ಎಂದು ಆರೋಪಿಸಿದರು.
ಕುಮಾರಸ್ವಾಮಿ ಅವರಿಗೆ ಟಿಕೆಟ್ ಕೊಟ್ಟಾಗ, ಸುಮಲತಾ ಮೇಡಂ ಮನೆಗೆ ಹೋಗಿ ನಾವು ಮನವಿ ಮಾಡಿಕೊಂಡಿದ್ದೆವು. ಆಗ ನಾವು ಬೇಕಾಗಿದ್ದೆವು, ಈಗ ನಮ್ಮ ಶಕ್ತಿ ಅವರಿಗೆ ಅಗತ್ಯವಿಲ್ಲ. ಆದರೆ ನಮಗೆ ಪಕ್ಷ ಕಟ್ಟುವ ಶಕ್ತಿ ಇದೆ. ಹಿರಿಯರು ಹೇಳಿದಂತೆ ನಾವು ಇದುವರೆಗೆ ನಡೆದುಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಯಾಗಿ ಕಟ್ಟುತ್ತೇವೆ, ಅದನ್ನು ಭದ್ರಕೋಟೆಯಾಗಿ ರೂಪಿಸುತ್ತೇವೆ ಎಂದು ನಾರಾಯಣ ಗೌಡ ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆಗಳತ್ತ ಬಿಜೆಪಿ ಗಮನ: ಸಚ್ಚಿದಾನಂದ
ಬಿಜೆಪಿ ನಾಯಕ ಸಚ್ಚಿದಾನಂದ ಮಾತನಾಡಿ, ಮಂಡ್ಯ ಜಿಲ್ಲೆಯ ಎಲ್ಲಾ ಪ್ರಮುಖ ನಾಯಕರು ಸೇರಿ ಕ್ಷೇತ್ರದ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದೇವೆ. ಕಾರ್ಯಕರ್ತರ ಚುನಾವಣೆ ಇರುವುದರಿಂದ ನಾವು ಕಾರ್ಯಕರ್ತರ ಜೊತೆಯಲ್ಲೇ ಇರುತ್ತೇವೆ. ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಗೆಲ್ಲುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು. ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಾವು ಎದುರಿಸುತ್ತೇವೆ. ಸುಮಲತಾ ಅಂಬರೀಷ್ ಮತ್ತು ನಾರಾಯಣ ಗೌಡ ಅವರ ದಿನಾಂಕ ಪಡೆದು ಜಿಲ್ಲಾ ಪ್ರವಾಸ ಕೈಗೊಳ್ಳಲಾಗುತ್ತದೆ. ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರವನ್ನು ನಾವು ಮಾಡಿಕೊಂಡಿದ್ದೇವೆ. ನಾವೆಲ್ಲರೂ ಪಕ್ಷದ ಶಿಸ್ತಿನ ಸಿಪಾಯಿಗಳೇ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಶಕ್ತಿ ಪ್ರದರ್ಶಿಸದೇ ನಾಯಕತ್ವ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

