ಕಾಲ ಭೈರವ ದೇಗುಲದ ಗರ್ಭಗುಡಿಯಲ್ಲಿ ಕೇಕ್ ಕತ್ತರಿಸಿದ ಮಾಡೆಲ್ ವಿರುದ್ದ ಭಕ್ತರ ಆಕ್ರೋಶ!
ವಾರಾಣಾಸಿಯ ದೇಗುಲದ ಗರ್ಭಗುಡಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ ಮಾಡೆಲ್ ಮಮತಾ ರಾಜ್ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮಮತಾ ರಾಜ್ ವಿಡಿಯೋ ಹರಿದಾಡುತ್ತಿದ್ದಂತೆ ಕೋಲಾಹಲವೇ ಸೃಷ್ಟಿಯಾಗಿದೆ.
ವಾರಣಾಸಿ(ಡಿ.01) ವಿಡಿಯೋಗಾಗಿ, ಪ್ರಚಾರಕ್ಕಾಗಿ, ರೀಲ್ಸ್ ಹಾಗೂ ಲೈಕ್ಸ್‌ಗಾಗಿ ಅದ್ಯಾವ ಮಟ್ಟಕ್ಕೂ ಬೇಕಾದರೂ ಹೋಗಲು ಹಲವರು ಸನ್ನದ್ಧರಾಗಿರುತ್ತಾರೆ. ಈ ಪೈಕಿ ದೇಗುಲದ ಒಳಗೆ, ಗರ್ಭಗುಡಿಯಲ್ಲಿ ಡ್ಯಾನ್ಸ್ ಮಾಡಿ, ಫೋಟೋ ಶೂಟ್ ಮಾಡಿ ಭಕ್ತರ ಆಕ್ರೋಶಕ್ಕೆ ಗುರಿಯಾದ ಹಲವು ಘಟನೆಗಳಿವೆ. ಇದೀಗ ಈ ಸಾಲಿಗೆ ಮಾಡೆಲ್ ಮಮತಾ ರಾಜ್ ಸೇರಿಕೊಂಡಿದ್ದಾರೆ. ವಾರಣಾಸಿಯ ಕಾಲ ಭೈರವ ದೇಗುಲದ ಗರ್ಭಗುಡಿಯಲ್ಲಿ ಕೇಕ್ ಕತ್ತರಿಸಿ, ಲೈಟನಿಂಗ್ ಪಟಾಕಿ ಹಚ್ಚಿ ಸಂಭ್ರಮಿಸಿದ ಘಟನೆ ನಡೆದಿದೆ. ಈ ವಿಡಿಯೋ ಹರಿದಾಡುತ್ತಿದ್ದಂತೆ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಮೊಟ್ಟೆ ಹಾಕಿದ ಕೇಕ್‌ನ್ನು ದೇಗುಲದ ಗರ್ಭಗುಡಿಯೊಳಗೆ ಇರಿಸಿ ಕತ್ತರಿಸಿದು ಅಕ್ಷಮ್ಯ ಅಪರಾಧ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.
ಮಾಡೆಲ್ ಮಮತಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಮಮತಾ ರಾಜ್ ತನ್ನ ಪಟಾಲಂ ಜೊತೆ ವಾರಣಿಯಾ ಪವಿತ್ರ ಹಾಗೂ ಪ್ರಸಿದ್ಧ ಕಾಲ ಭೈರವ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಕ್ಯಾಮೆರಾ ಹಿಡಿದು ಗರ್ಭಗುಡಿಗೆ ಆಗಮಿಸಿದ ಮಮತಾ ರಾಜ್, ದೊಡ್ಡ ಕೇಕ್ ಕೂಡ ತಂದಿದ್ದಾರೆ. ಕಾಲ ಭೈರವ ದೇವಸ್ಥಾನದ ಗರ್ಭಗುಡಿಯ ಮುಂದೆ, ಮೂರ್ತಿಯ ಕೆಲವೆ ಅಡಿ ಹತ್ತಿರ ನಿಂತು ವಿಕೃತಿ ಮೆರೆದಿದ್ದಾರೆ.
ಕೊನೆಯ ಇನ್ಸ್ಟಾ ಪೋಸ್ಟ್ನಲ್ಲೇ ಸಾವಿನ ಮುನ್ಸೂಚನೆ ನೀಡಿದ್ರಾ ಶೋಭಿತಾ ಶಿವಣ್ಣ?
ಕೇಕ್ ತಂದ ಮಮತಾ ರಾಜ್, ಕಾಲ ಭೈರವನ ಮುಂದಿರುವ ಕಾಣಿಕೆ ಡಬ್ಬದ ಮೇಲೆ ಇಟ್ಟು ಕತ್ತರಿಸಿದ್ದಾರೆ. ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ. ಮಮತಾ ರಾಜ್ ತಮ್ಮ ಹುಟ್ಟು ಹಬ್ಬವನ್ನು ಈ ರೀತಿ ಆಚರಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತ ದೇಗುಲದ ಆಡಳಿತ ಮಂಡಳಿ ಮಮತಾ ರಾಜ್‌ಗೆ ಈ ರೀತಿ ವಿಕೃತಿಗೆ ಅನುಮತಿ ನೀಡಿದೇ ಅನ್ನೋದು ಮತ್ತೊಂದು ದುರಂತ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗರ್ಭಗುಡಿಯ ಮುಂದೆ ಕೇಕ್ ಕತ್ತರಿಸಿ ಒಂದು ಪೀಸ್ ಕೇಕನ್ನು ಕಾಲಭೈರವನ ಸನ್ನಿಧಿಗೆ ನೀಡಿದ್ದಾರೆ.ಈ ಸಂಪೂರ್ಣ ವಿಕೃತಿಯನ್ನು ಮಾಡೆಲ್ ಮಮತಾ ರಾಜ್ ವಿಡಿಯೋ ಶೂಟ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಆಕ್ರೋಶ ಹೆಚ್ಚಾಗಿದೆ. ಗರ್ಭಗುಡಿಯಲ್ಲಿ ಕಾಲ ಭೈರವನ ಮುಂದೆ ಈ ರೀತಿಯ ವಿಕೃತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹಲವರು ಆಕ್ರೋಶ ಹೊರಹಾಕಿದ್ದರೆ. ದೇಗುಲದ ಆಡಳಿತ ಮಂಡಳಿ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿವಾದ ಜೋರಾಗುತ್ತಿದ್ದಂತೆ ದೇಗುಲದ ಅರ್ಚಕ ನವೀನ್ ಗಿರಿ ಸ್ಪಷ್ಟನೆ ನೀಡಿದ್ದಾರೆ. ಕಾಲ ಭೈರವ ದೇವಸ್ಥಾನದಲ್ಲಿ ಈ ರೀತಿಯ ಘಟನೆ ನಡೆದಿರುವುದು ಬೇಸರವಾಗಿದೆ. ಇದು ಆಡಳಿತ ಮಂಡಳಿ, ಅರ್ಚಕರ ಅರಿವಿನಲ್ಲಿ ನಡೆದಿಲ್ಲ. ಕಾಲಭೈರವನ ಸನ್ನಿಧಿಯಲ್ಲಿ ಹಲವರು ಕೇಕ್ ತಂದು ದೇವರಿಗೆ ಅರ್ಪಿಸುತ್ತಾರೆ. ಇದು ಹೊಸದಲ್ಲ. ಆದರೆ ಇಲ್ಲ ಹುಟ್ಟು ಹಬ್ಬ ಆಚರಣೆಗೆ ಅವಕಾಶವಿಲ್ಲ. ಈ ರೀತಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಾರೆ ಅನ್ನೋ ಮಾಹಿತಿ ನಮಗೆ ಇರಲಿಲ್ಲ. ಇಷ್ಟೇ ಅಲ್ಲ ಬಂದಿರುವ ಭಕ್ತೆಗೆ ಫಾಲೋವರ್ಸ್ ಇದ್ದಾರೆ, ಆಕೆ ಮಾಡೆಲ್ ಅನ್ನೋ ವಿಚಾರ ನಮಗೆ ತಿಳಿದಿರಲಿಲ್ಲ ಎಂದು ನವೀನ್ ಗೀರಿ ಹೇಳಿದ್ದಾರೆ.
ಹಲವರು ಕೇಕ್ ಕತ್ತರಿಸಿ ದೇವರಿಗೆ ನೀಡುತ್ತಾರೆ. ಆದರೆ ಈ ಘಟನೆಯಿಂದ ದೇಗುಲ ಆಡಳಿತ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಗುಲದ ಒಳಗೆ ಯಾರಿಗೂ ಕೇಕ್ ಕತ್ತರಿಸಲು ಅವಕಾಶವಿಲ್ಲ. ಕೇಕ್ ಕತ್ತರಿಸುವುದು, ದೇವರಿಗೆ ಅರ್ಪಿಸುವುದಕ್ಕೆ ಅವಕಾಶವಿಲ್ಲ ಎಂದು ನವೀನ್ ಗಿರಿ ಸ್ಪಷ್ಟಪಡಿಸಿದ್ದಾರೆ.
ಕಾಶಿಯ ಧಾರ್ಮಿಕ ಕೇಂದ್ರಗಳ ಸಮಿತಿ ಕಾಶಿ ವಿದ್ವತ್ ಪರಿಷದ್ ಮುಖ್ಯಸ್ಥರು ಈ ಕುರಿತು ಕಾಲ ಭೈರವ ದೇಗುಲ ಸಮತಿ ಬಳಿ ವರದಿ ಕೇಳಿದ್ದಾರೆ. ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ಮಮತಾ ರಾಜ್‌ಗೆ ಕಾನೂನಾತ್ಮಕ ನೋಟಿಸ್ ನೀಡಲು ಸಿದ್ಥತೆ ನಡೆಸಿದ್ದಾರೆ. ಕೇಕ್ ಕತ್ತರಿಸುವುದು, ದೇವರಿಗೆ ಅರ್ಪಿಸುವುದು ಹಿಂದೂ ಸಂಪ್ರದಾಯವಲ್ಲ. ಇದಕ್ಕೆ ಅವಕಾಶವಿಲ್ಲ. ದೇಗುಲದ ಒಳಗೆ ಕ್ಯಾಂಡಲ್ ಹಚ್ಚಿ ಬಳಿಕ ಆರಿಸುವ ಪದ್ದತಿಯೂ ಇಲ್ಲ. ಇದ್ಯಾವುದಕ್ಕೂ ಅವಕಾಶವಿಲ್ಲ ಎಂದು ಕಾಶಿ ವಿದ್ವತ್ ಪರಿಷದ್ ಎಚ್ಚರಿಸಿದೆ.