ಮರಾಠಿ ನಟಿ ಧನಶ್ರೀ ಕಾಡಗಾಂವ್ಕರ್ ಅವರು ಮಹಾಮಳೆಯಿಂದಾಗಿ ಪುಣೆ-ಮುಂಬೈ ಹೆದ್ದಾರಿಯಲ್ಲಿ 9 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರು. ಈ ಸಮಯದಲ್ಲಿ ಮುಟ್ಟಿನ ನೋವಿನಿಂದ ಬಳಲಿದರೂ, ತಮ್ಮ ವೃತ್ತಿಪರ ಬದ್ಧತೆಯಿಂದಾಗಿ ಶೂಟಿಂಗ್ ಸ್ಥಳವನ್ನು ತಲುಪಿದ ತಮ್ಮ ಕಠಿಣ ಅನುಭವವನ್ನು ಹಂಚಿಕೊಂಡಿದ್ದಾರೆ.

ಮುಂಬೈ (ಜು.8): ಮಹಾಮಳೆಯಿಂದಾಗಿ ಮಹಾರಾಷ್ಟ್ರದ ಪ್ರಮುಖ ಹೆದ್ದಾರಿಗಳು ಸಂಪೂರ್ಣ ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿರುವ ಬೆನ್ನಲ್ಲೇ, ಕಿರುತೆರೆಯ ಪ್ರಖ್ಯಾತ ನಟಿಯೊಬ್ಬರು ಪುಣೆ-ಮುಂಬೈ ಹೆದ್ದಾರಿಯಲ್ಲಿ ಬರೋಬ್ಬರಿ ಒಂಬತ್ತು ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ನರಕಯಾತನೆ ಅನುಭವಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಖುದ್ದು ನಟಿಯೇ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ನೋವಿನ ವಿಚಾರ ಬರೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮರಾಠಿ ಟಿವಿ ಸೀರಿಯಲ್‌ಗಳ ಪ್ರಖ್ಯಾತ ನಟಿ ಧನಶ್ರೀ ಕಾಡಗಾಂವ್ಕರ್ (Dhanashri Kadgaonkar) ಈ ಕಠಿಣ ಪರಿಸ್ಥಿತಿ ಎದುರಾಗಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಹಾಗೂ ಹಳೆಯ ಮುಂಬೈ-ಪುಣೆ ಹೆದ್ದಾರಿಯ ಎರಡೂ ಮಾರ್ಗಗಳಲ್ಲಿ ಭಾರಿ ಮಳೆಯಿಂದಾಗಿ ಸರಣಿ ಭೂಕುಸಿತ ಸಂಭವಿಸಿತ್ತು. ಮುಖ್ಯವಾಗಿ ಪುಣೆ ಯಶವಂತರಾವ್ ಚವಾಣ್ ಎಕ್ಸ್‌ಪ್ರೆಸ್‌ವೇಯ 'ಮಿಸ್ಸಿಂಗ್ ಲಿಂಕ್' ಪ್ರದೇಶದಲ್ಲಿ ಬಂಡೆಗಳು ಉರುಳಿ ಬಿದ್ದಿದ್ದವು. ಜೊತೆಗೆ ಹೆದ್ದಾರಿಯ ಹಲವು ಕಡೆಗಳಲ್ಲಿ ಮಂಡಿಯುದ್ದ ನೀರು ನಿಂತಿದ್ದರಿಂದ ಸೋಮವಾರ ಮುಂಜಾನೆಯಿಂದಲೇ ವಾಹನಗಳ ಸಂಚಾರ ಸಂಪೂರ್ಣ ಸ್ತಬ್ಧಗೊಂಡು ಕಿಲೋಮೀಟರ್‌ಗಟ್ಟಲೆ ಉದ್ದದ ಸಾಲು ನಿರ್ಮಾಣವಾಗಿತ್ತು. ಇದೇ ದಟ್ಟಣೆಯ ಮಧ್ಯೆ ನಟಿ ಧನಶ್ರೀ ಅವರ ಕಾರು ಕೂಡ ಸಿಲುಕಿಕೊಂಡಿತ್ತು.

ಮುಟ್ಟಿನ ಸಮಯದ ನರಕಯಾತನೆ ಬಿಚ್ಚಿಟ್ಟ ನಟಿ

ಇನ್‌ಸ್ಟಾಗ್ರಾಮ್‌ನಲ್ಲಿ ಹೆದ್ದಾರಿಯ ಟ್ರಾಫಿಕ್ ವಿಡಿಯೋ ಹಂಚಿಕೊಂಡಿರುವ ಧನಶ್ರೀ, ಮಹಿಳೆಯರು ಇಂತಹ ಸಂದರ್ಭದಲ್ಲಿ ಎದುರಿಸುವ ಅತ್ಯಂತ ಕಠಿಣ ಪರಿಸ್ಥಿತಿಯನ್ನು ವಿವರಿಸಿದ್ದಾರೆ. "ನಾನು ಯಾವಾಗಲೂ ಮಾಧ್ಯಮಗಳಲ್ಲಿ ಹೆದ್ದಾರಿ ಟ್ರಾಫಿಕ್, ಅಪಘಾತ ಅಥವಾ ಭೂಕುಸಿತದ ಸುದ್ದಿಗಳನ್ನಷ್ಟೇ ನೋಡುತ್ತಿದ್ದೆ. ಆದರೆ ಜುಲೈ 6ರಂದು ನಾನೇ ಸ್ವತಃ ಆ ಕಠಿಣ ಪರಿಸ್ಥಿತಿಯ ಭಾಗವಾಗಿದ್ದೆ. ಈ ರೀತಿ ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಳ್ಳುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ಆಯಾಸ ಹಾಗೂ ಕಿರಿಕಿರಿ ಉಂಟುಮಾಡುತ್ತದೆ. ಆ ಸಮಯದಲ್ಲಿ ನನಗೆ ಪೀರಿಯಡ್ಸ್‌ ಶುರುವಾಗಿತ್ತು.ತೀವ್ರ ನೋವಿನ ನಡುವೆ ನನಗೆ ತುರ್ತಾಗಿ ವಾಶ್‌ರೂಮ್‌ಗೆ ಹೋಗಬೇಕಿತ್ತು. ಆದರೆ ಸುತ್ತಲೂ ವಾಹನಗಳಿದ್ದರಿಂದ ಕಾರಿನಿಂದ ಇಳಿದು ಎಲ್ಲಿಗೂ ಹೋಗಲು ಸಾಧ್ಯವಾಗದೆ ತತ್ತರಿಸಿದೆ. ಹತ್ತಿರದ ಫುಡ್ ಕೋರ್ಟ್‌ಗೆ ಹೋಗಿ ಏನಾದರೂ ತಿನ್ನೋಣ ಅಥವಾ ನಿಶ್ಚಿಂತೆಯಾಗೋಣ ಎಂದರೆ ಅದಕ್ಕೂ ದಾರಿಯಿರಲಿಲ್ಲ" ಎಂದು ತಮ್ಮ ನೋವಿನ ಅನುಭವವನ್ನು ಹಂಚಿಕೊಂಡಿದ್ದಾರೆ.

ಕಲಾವಿದರ ಕಮಿಟ್‌ಮೆಂಟ್ ಮತ್ತು ಆತಂಕ

'ರಸ್ತೆಯುದ್ದಕ್ಕೂ ಮಂಡಿ ಉದ್ದಕ್ಕೆ ನೀರು ನಿಂತಿತ್ತು. ಎಲ್ಲಾದರೂ ಇಳಿದು ಮಳೆಯಲ್ಲಿ ನೆನೆದರೆ ಅನಾರೋಗ್ಯ ಕಾಡಬಹುದು. ಸದ್ಯದ ಪರಿಸ್ಥಿತಿಯಲ್ಲಿ ಅನಾರೋಗ್ಯಕ್ಕೆ ಈಡಾಗುವುದನ್ನು ನಾನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಏಕೆಂದರೆ ಸದ್ಯ ಬ್ಯಾಕ್ ಟು ಬ್ಯಾಕ್ ಶೂಟಿಂಗ್ ನಿಗದಿಯಾಗಿದೆ. ಹೆದ್ದಾರಿಯ ಪರಿಸ್ಥಿತಿ ನೋಡಿ ನನ್ನ ಡ್ರೈವರ್, 'ಮೇಡಮ್‌, ಶೂಟಿಂಗ್ ಸಾಕು, ಪುಣೆಗೆ ವಾಪಸ್ ಹೊರಟುಬಿಡೋಣ' ಎಂದಿದ್ದ. ಆದರೆ ಒಬ್ಬ ಕಲಾವಿದೆಯಾಗಿ ನನಗೆ ನನ್ನ ಕಮಿಟ್‌ಮೆಂಟ್ ಮುಖ್ಯವಾಗಿತ್ತು. ಧಾರಾವಾಹಿಯ ಮುಂದಿನ ಸಂಚಿಕೆಗಳ ಪ್ರಸಾರ ಬಾಕಿ ಇತ್ತು. ನಾವು ಹೋಗದಿದ್ದರೆ ಶೂಟಿಂಗ್ ನಿಂತು ವಾಹಿನಿಗೆ ತೊಂದರೆಯಾಗುತ್ತಿತ್ತು. ಹಾಗಾಗಿ ನೋವಿದ್ದರೂ ಧೃತಿಗೆಡದೆ ಅಲ್ಲೇ ಕಾಯಲು ನಿರ್ಧರಿಸಿದೆ" ಎಂದು ಧನಶ್ರೀ ಬರೆದುಕೊಂಡಿದ್ದಾರೆ.

ಕೊನೆಗೂ ಬರೋಬ್ಬರಿ 9 ಗಂಟೆಗಳ ಕಾಲ ಆಮೆಗತಿಯಲ್ಲಿ ಸಾಗಿದ ಪ್ರಯಾಣದ ನಂತರ ಧನಶ್ರೀ ಸುರಕ್ಷಿತವಾಗಿ ಶೂಟಿಂಗ್ ಸೆಟ್ ತಲುಪಿದ್ದಾರೆ. ಹೆದ್ದಾರಿಯ ಜಾಮ್‌ಗೆ ಬೇಸರಿಸಿದ ಅವರು, "ಕೊನೆಗೂ ನಾನು ಶೂಟಿಂಗ್ ಸ್ಥಳಕ್ಕೆ ಸುರಕ್ಷಿತವಾಗಿ ಬಂದಿಳಿದಿದ್ದೇನೆ. ಪ್ರಕೃತಿಯ ಮುನಿಸಿನ ಮುಂದೆ ಯಾರ ಆಟವೂ ನಡೆಯುವುದಿಲ್ಲ. ಆದರೆ ನಾನು ದೇವರಲ್ಲಿ ಕೈಮುಗಿದು ಕೇಳಿಕೊಳ್ಳುವುದು ಇಷ್ಟೇ, ಯಾರ ಬದುಕೂ ಇಷ್ಟು ದುಸ್ತರವಾಗುವಂತಹ ಭೀಕರ ಹಾಗೂ ಭಯಾನಕ ಪರಿಸ್ಥಿತಿಯನ್ನು ಯಾರಿಗೂ ತರಬೇಡ. ಪ್ರತಿಯೊಬ್ಬರೂ ಸುರಕ್ಷಿತವಾಗಿರಿ" ಎಂದು ಪೋಸ್ಟ್ ಕೊನೆಗೊಳಿಸಿದ್ದಾರೆ. ನಟಿಯ ಈ ಪೋಸ್ಟ್‌ಗೆ ನೆಟ್ಟಿಗರು ಹಾಗೂ ಸಹ ಕಲಾವಿದರು ವ್ಯಾಪಕ ಪ್ರತಿಕ್ರಿಯೆ ನೀಡುತ್ತಿದ್ದು, ಕಠಿಣ ಪರಿಸ್ಥಿತಿಯಲ್ಲೂ ಜವಾಬ್ದಾರಿ ಮೆರೆದ ಅವರ ವೃತ್ತಿಪರತೆಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

View post on Instagram