ಜೀ ಕನ್ನಡದ ಲಕ್ಷ್ಮೀ ನಿವಾಸ ಧಾರಾವಾಹಿಯ ಚಂದನಾ ಅಲಿಯಾಸ್ ಚಿನ್ನುಮರಿ, ಉದ್ಯಮಿ ಪ್ರತ್ಯಕ್ಷ್ ಅವರನ್ನು ವಿವಾಹವಾಗಿದ್ದಾರೆ. ಮೊದಲ ಭೇಟಿಯಲ್ಲಿ ಪ್ರತ್ಯಕ್ಷ್ ಅವರ ಹೈಫೈ ಇಂಗ್ಲಿಷ್ ಚಂದನಾ ಅವರಿಗೆ ಅರ್ಥವಾಗದೇ ಭಯ ಹುಟ್ಟಿಸಿತ್ತು. ಬಿಗ್ ಬಾಸ್ ಮೂಲಕ ಜನಪ್ರಿಯರಾದ ಚಂದನಾ, ಪ್ರತ್ಯಕ್ಷ್ ಅವರೊಂದಿಗೆ ಅರೆಂಜ್ಡ್ ಮ್ಯಾರೇಜ್ ಆಗಿದ್ದು, ಮೊದಲ ಭೇಟಿಯ ತಮಾಷೆಯ ಘಟನೆಯನ್ನು ಹಂಚಿಕೊಂಡಿದ್ದಾರೆ.
ಚಿನ್ನುಮರಿ ಎಂದರೆ ಸಾಕು... ಸೀರಿಯಲ್ ಪ್ರಿಯರ ಕಣ್ಮುಂದೆ ಬರುವುದು ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್‌ನ ಸೈಕೋ ಜಯಂತ್ ಪತ್ನಿ ಜಾಹ್ನವಿ. ಇವರ ರಿಯಲ್ ಹೆಸರು ಚಂದನಾ. ಚಂದನಾ ಅವರು ಉದ್ಯಮಿ ಪ್ರತ್ಯಕ್ಷ್ ಜೊತೆ ಮದುವೆಯಾಗಿ ತಿಂಗಳಾಗಿದೆ. ಇವರದ್ದು ಅರೆಂಜ್ಡ್ ಮ್ಯಾರೇಜ್. ಪತಿ ಪ್ರತ್ಯಕ್ಷ್ ಜೊತೆ ಚಂದನಾ ಅವರು, ಮೊದಲ ಬಾರಿಗೆ ಸಂದರ್ಶನವೊಂದನ್ನು ನೀಡಿದ್ದಾರೆ. ಕೀರ್ತಿ ಎಂಟರ್ಟೇನ್ಮೆಂಟ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಕೆಲವೊಂದು ವಿಷಯಗಳನ್ನು ಈ ಜೋಡಿ ತೆರೆದಿಟ್ಟಿದೆ. ಮೊದಲಿಗೆ ಭೇಟಿಯಾಗಿರುವ ಬಗ್ಗೆ ಕೇಳಿದಾಗ, ಪ್ರತ್ಯಕ್ಷ್ ಅವರು ಇಂಗ್ಲಿಷ್ನಲ್ಲಿ ಮಾತನಾಡಿ, ಅದೂ ಹೈ ಫೈ ಇಂಗ್ಲಿಷ್ನಲ್ಲಿ ಮಾತನಾಡಿ ತಮ್ಮನ್ನು ಅಳಿಸಿರುವ ಘಟನೆಯನ್ನು ಚಂದನಾ ತೆರೆದಿಟ್ಟಿದ್ದಾರೆ..
'ಇವರು ಓದಿದ್ದು ಬಿಷಪ್ ಕಾಟನ್ ಶಾಲೆ. ಅದಕ್ಕಾಗಿ ಹೈ ಫೈ ಇಂಗ್ಲಿಷು. ನಾನು ಗೊತ್ತಲ್ಲ ಪಕ್ಕಾ ಲೋಕಲ್ ಮಾಸು. ಮೊದಲು ಇವರು ಮೀಟ್ ಆದ ದಿನ ಹೈಫೈ ಇಂಗ್ಲಿಷ್ನಲ್ಲಿ ಮಾತನಾಡಿಬಿಟ್ರು. ನನಗಂತೂ ಏನೂ ಅರ್ಥನೇ ಆಗ್ಲಿಲ್ಲ. ತುಂಬಾ ಹೆದರಿಕೊಂಡು ಬಿಟ್ಟೆ. ಆದ್ರೆ ಇವರು ಮಾತ್ರ ಅರ್ಥವಾಗದ ಇಂಗ್ಲಿಷ್ನಲ್ಲಿಯೇ ಮಾತು ಮುಂದುವರೆಸಿದ್ರು. ಅದು ಹೇಗಿತ್ತು ಎಂದರೆ ನನಗಂತೂ ಸ್ವಲ್ಪನೂ ಅರ್ಥ ಆಗ್ತಿರಲಿಲ್ಲ. ಅಯ್ಯೋ ದೇವ್ರೆ ಹೀಗೆ ಆದ್ರೆ ಇವರ ಜೊತೆ ಸಂಸಾರ ಹೇಗೆ ಮಾಡೋದು? ನನ್ನ ಕಷ್ಟ ಸುಖ ಎಲ್ಲಾ ಹೇಳಿಕೊಳ್ಳಲು ನನಗೆ ಕನ್ನಡನೇ ಬೇಕಲ್ಲಪ್ಪಾ ಎಂದುಕೊಂಡು ಅಳುನೇ ಬಂದೋಯ್ತು. ಕೊನೆಗೆ ಅಳುತ್ತಲೇ ಅವರ ಹತ್ರ, ನನಗೆ ನಿಜವಾಗಿಯೂ ನೀವು ಏನು ಹೇಳ್ತಾ ಇದ್ದೀರಾ ಎಂದು ಅರ್ಥ ಆಗ್ತಿಲ್ಲ. ನನಗೆ ಅಂಥ ಇಂಗ್ಲಿಷ್ ಬರಲ್ಲ ಎಂದಾಗ ಅಬ್ಬಾ ಕೊನೆಗೂ ಸಾಮಾನ್ಯ ಜನರು ಮಾತನಾಡುವ ರೀತಿಯಲ್ಲಿ ಇಂಗ್ಲಿಷ್ ಮಾತನಾಡಿದರು' ಎಂದು ಅಂದು ನಡೆದ ಘಟನೆಯನ್ನು ತಿಳಿಸಿದ್ದಾರೆ ಚಂದನಾ.
ಪತಿ ಎದುರು ಲಕ್ಷ್ಮೀನಿವಾಸ ಚಿನ್ನುಮರಿ ನವರಸ ಪ್ರದರ್ಶನ! ಪತ್ನಿಯ ಅಭಿನಯಕ್ಕೆ ಮನಸೋತ ಪ್ರತ್ಯಕ್ಷ್
ನಟಿ ಚಂದನಾ ಅವರು ಚಿನ್ನುಮರಿ ಆಗುವ ಮುನ್ನ, ರಾಜಾ ರಾಣಿ ಸೀರಿಯಲ್‌ನಲ್ಲಿ ನಟಿಸಿದ್ದರು. ಆದರೆ ಇವರ ಫೇಮಸ್ ಆಗಿದ್ದು, ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ. ಬಿಗ್ ಬಾಸ್ ಕನ್ನಡ 7 ಹಾಗೂ 'ಭರ್ಜರಿ ಬ್ಯಾಚುಲರ್ಸ್' ಕಾರ್ಯಕ್ರಮಗಳಲ್ಲಿ ಇವರು ಸ್ಪರ್ಧಿಸಿದ್ದರು. ಹೂಮಳೆ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದ ನಟಿ ಚಂದನಾ ಅನಂತಕೃಷ್ಣ ಇದೀಗ ಲಕ್ಷ್ಮೀ ನಿವಾಸ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ. ಇನ್ನು ಪ್ರತ್ಯಕ್ಷ್ ಕುರಿತು ಹೇಳುವುದಾದರೆ, ಮೂಲತಃ ಚಿಕ್ಕಮಗಳೂರಿನವರು. ಇವರ ತಂದೆ ಉಯದ್ ಅವರು, ಕೆಲ ವರ್ಷ ಹಲವು ಚಿತ್ರಗಳಲ್ಲಿ ನಟಿಸಿದರು. 1987ರಲ್ಲಿ ತೆರೆ ಕಂಡಿದ್ದ ಆರಂಭ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದವರು. ಅಗ್ನಿಪರ್ವ , ಶುಭ ಮಿಲನ , ಜಯಭೇರಿ , ಉದ್ಭವ , ಅಮೃತ ಬಿಂದು , ಶಿವಯೋಗಿ ಅಕ್ಕಮಹಾದೇವಿ , ಉಂಡು ಹೋದ ಕೊಂಡು ಹೋದ , ಕ್ರಮ ಮುಂತಾದ ಚಿತ್ರಗಳಲ್ಲಿ ಇವರು ಬಣ್ಣ ಹಚ್ಚಿದ್ದಾರೆ. ಬಳಿಕ ಅವರು, ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮುಂದುವರೆಸಿದರು. ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿದ್ದಾರೆ. 2022ರಲ್ಲಿ ಅವರು ನಿಧನರಾಗಿದ್ದು, ಪ್ರತ್ಯಕ್ಷ್ ಅವರೂ ಕಾಫಿ ಎಸ್ಟೇಟ್ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಇವರದ್ದು ಹಿರಿಯರು ನೋಡಿ ಆಗಿರುವ ಮದುವೆಯಾಗಿರುವ ಕಾರಣ, ಮದುವೆಯ ಬಗ್ಗೆ ಇದೇ ಸಂದರ್ಶನದಲ್ಲಿ ಕೀರ್ತಿ ಅವರು ಕೇಳಿದಾಗ, ಈ ಜೋಡಿ ಸಕತ್ ತಮಾಷೆಯಾಗಿ ಉತ್ತರ ಕೊಟ್ಟಿದೆ. ಪ್ರತ್ಯಕ್ಷ್ ಅವರು ಹೇಳಿದ್ದೇನೆಂದರೆ, ಹೀಗೆ ಒಂದು ದಿನ ಆಫೀಸ್ನಲ್ಲಿ ಕೆಲಸ ಮಾಡುತ್ತಿರುವಾಗ, ಅಮ್ಮ ಮದುವೆಯ ಬಗ್ಗೆ ಹೇಳಿದ್ರು. ಅದು ಇದು ಮಾತೆಲ್ಲಾ ಆದ ಬಳಿಕ ಫೋಟೋ ನೋಡಿದೆ. ಫೋಟೋ ನೋಡಿದ ತಕ್ಷಣ ಈಕೆಯನ್ನು ನಾನು ಮದುವೆಯಾಗುವುದಿಲ್ಲ ಎಂದು ಹೇಳಿದೆ. ಯಾಕೆಂದ್ರೆ ಈ ಫೋಟೋದಲ್ಲಿ ಇವಳು ಒಳ್ಳೆ ಮಗು ಥರ ಕಾಣಿಸ್ತಾ ಇದ್ಲು. ಬಾಲ್ಯ ವಿವಾಹ ಆಗತ್ತೆ, ಬೇಡಪ್ಪಾ ಇವಳು ನನಗೆ ಎಂದೆ ಎಂದು ಹಾಸ್ಯದ ರೂಪದಲ್ಲಿ ಹೇಳಿದ್ದಾರೆ.
ಲಕ್ಷ್ಮಿನಿವಾಸದ ಚಿನ್ನುಮರಿಯ ರಿಯಲ್ ಗಂಡನನ್ನು ಮದ್ವೆಗೆ ರೆಡಿ ಮಾಡಿದ್ದು ಹೀಗೆ ನೋಡಿ: ವಿಡಿಯೋ ವೈರಲ್
