ಪುಟ್ಟಕ್ಕನ ಮಕ್ಕಳಿಗೂ ಎಂಟ್ರಿ ಕೊಟ್ಟೇ ಬಿಟ್ಟಳು ಕೊರವಂಜಿ: ನಿಜಕ್ಕೂ ಇವರು ತ್ರಿಕಾಲ ಜ್ಞಾನಿಗಳಾ?
ಪುಟ್ಟಕ್ಕನ ಮಕ್ಕಳು ಸೀರಿಯಲ್ಗೆ ಕೊರವಂಜಿ ಎಂಟ್ರಿ ಕೊಡುತ್ತಿದ್ದಂತೆಯೇ ನೆಟ್ಟಿಗರು ಥಹರೇವಾರಿ ಪ್ರಶ್ನೆ ಮಾಡುತ್ತಿದ್ದಾರೆ.
ಪುಟ್ಟಕ್ಕನ ಮಗಳು ಸಹನಾ ಬದುಕಿದ್ದಾಳೆ. ಆದರೆ ಅದು ಗೊತ್ತಿಲ್ಲದೇ ಮನೆಯಲ್ಲಿ ಶ್ರಾದ್ಧಾ ನಡೆಯುತ್ತಿದೆ. ಮನೆಗೆ ಕೊರವಂಜಿ ಬಂದಿದ್ದಾಳೆ. ಬುಟ್ಟಿಯ ಮೇಲೆ ತಲೆಯ ಮೇಲೆ, ಪುಟ್ಟಕ್ಕನ ಕೈ ಮೇಲೆ ಕೈಯಾಡಿಸಿ ಸಹನಾ ಬದುಕಿರುವ ಸೂಚನೆ ಕೊಟ್ಟಿದ್ದಾಳೆ. ಆದರೆ ನೇರಾನೇರ ಏನೂ ಹೇಳಲಿಲ್ಲ. ಕೆಲವು ಜ್ಯೋತಿಷಿಗಳು ಅಡ್ಡಗೋಡೆಯ ಮೇಲೆ ದೀಪ ಇಟ್ಟವಂತೆ ಹೇಳುವ ಹಾಗೆ ಇವಳೂ ಹೇಳಿದ್ದಾಳೆ. ಪುಟ್ಟಕ್ಕನಿಗೆ ಅದು ಅರ್ಥವಾಗ್ತಿಲ್ಲ, ಕೊರವಂಜಿ ಅದನ್ನು ಬಿಡಿಸಿ ಹೇಳ್ತಿಲ್ಲ. ಸಹನಾ ಬದುಕಿದ್ದಾಳೆ ಎಂದು ತಿಳಿದಿರುವ ವೀಕ್ಷಕರಿಗಷ್ಟೇ ಕೊರವಂಜಿ ಏನು ಹೇಳುತ್ತಿದ್ದಾಳೆ ಎನ್ನುವುದು ಗೊತ್ತಾಗುತ್ತದೆ.
ಇಲ್ಲೊಂದು ವಿಶೇಷವಾಗಿ ಗಮನಿಸಬೇಕಾದ ಅವಶ್ಯಕತೆ ಇದೆ. ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಬಹುತೇಕ ಎಲ್ಲಾ ಸೀರಿಯಲ್ಗಳಲ್ಲಿಯೂ ಕೊರವಂಜಿ ಇಲ್ಲವೇ ಜೋಗಮ್ಮನ ಪಾತ್ರ ಇದ್ದೇ ಇರುತ್ತದೆ. ತ್ರಿಕಾಲ ಜ್ಞಾನಿಗಳಂತೆ ಅವರು ಭವಿಷ್ಯವನ್ನೂ ನುಡಿಯುತ್ತಾರೆ, ವರ್ತಮಾನದ ಬಗ್ಗೆಯೂ ಹೇಳುತ್ತಾರೆ. ಆದರೆ ಯಾವುದನ್ನೂ ಸ್ಪಷ್ಟವಾಗಿ ಹೇಳುವುದಿಲ್ಲ, ಏಕೆಂದರೆ ಸ್ಪಷ್ಟವಾಗಿ ಹೇಳಿಬಿಟ್ಟರೆ ಕಥೆ ಮುಂದುವರೆಯುವುದಿಲ್ಲ. ಎಲ್ಲವೂ ಗೊತ್ತಾಗಿಬಿಟ್ಟರೆ ಕಥೆಯನ್ನು ಎಳೆಯುವುದಾದರೂ ಹೇಗೆ?
ರೊಮ್ಯಾಂಟಿಕ್ ಮೂಡ್ನಲ್ಲಿ ಶ್ರೀರಸ್ತು ಶುಭಮಸ್ತು ಪೂರ್ಣಿ: ಹನಿಮೂನ್ ಮೂಡ್ ಮುಗಿದಿಲ್ವಾ ಕೇಳ್ತಿದ್ದಾರೆ ಫ್ಯಾನ್ಸ್
ಅದೇನೇ ಇರಲಿ. ಈಗಿರುವ ಪ್ರಶ್ನೆ ಎಂದರೆ ಇವರ ಪಾತ್ರಗಳನ್ನು ಅನಿವಾರ್ಯವಾಗಿ ಏಕೆ ತುರುಕಲಾಗುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಬಹುತೇಕ ಎಲ್ಲಾ ಚಾನೆಲ್ಗಳಲ್ಲಿಯೂ ಈ ಪಾತ್ರಕ್ಕೆ ಅದರದ್ದೇ ಆದ ಮಹತ್ವ ಇದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ನಮ್ಮನೆ ಯುವರಾಣಿ ಸೇರಿದಂತೆ ಜೀ ಕನ್ನಡದ ಜೊತೆ ಜೊತೆಯಲಿ ಸೀರಿಯಲ್ನಲ್ಲಿ ಜೋಗ್ತಮ್ಮನೇ ಒಂದು ರೀತಿ ಹೀರೋಯಿನ್ ಇದ್ದ ಹಾಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದಳು. ವಿವಿಧ ಭಾಷೆಗಳ ಧಾರಾವಾಹಿಗಳಲ್ಲಿಯೂ ಈ ಪಾತ್ರ ಇರುತ್ತದೆ. ಇದೀಗ ಪುಟ್ಟಕ್ಕನ ಮಕ್ಕಳು ಸೀರಿಯಲ್ಗೂ ಎಂಟ್ರಿ ಕೊಟ್ಟಿದ್ದಾಳೆ.
ನಿಜಕ್ಕೂ ಇವರು ತ್ರಿಕಾಲ ಜ್ಞಾನಿಗಳಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ನಿಜ ಬದುಕಿನಲ್ಲಿ ಇದೇ ರೀತಿ ಚಿತ್ರ ವಿಚಿತ್ರ ವೇಷ ಭೂಷಣ ತೊಟ್ಟು ಭಿಕ್ಷೆ ಬೇಡುತ್ತಾ ಹಣ ಕೀಳುತ್ತಾರೆ ಎಂದು ಹಲವರು ತಮಗಾಗಿರುವ ಅನುಭವವನ್ನು ಹೇಳಿಕೊಂಡಿದ್ದಾರೆ. ಸೀರಿಯಲ್ಗಳಲ್ಲಿ ನಾಯಕಿಗೆ ಬರುವ ಅಪಾಯದ ಬಗ್ಗೆ ಮೊದಲೇ ಎಚ್ಚರಿಕೆ ಕೊಡುವ ಇಂಥ ತ್ರಿಕಾಲ ಜ್ಞಾನಿಗಳು ನಿಜ ಜೀವನದಲ್ಲಿ ಇದ್ದುಬಿಟ್ಟರೆ ಮೊದಲೇ ಅಪಾಯಕ್ಕೆ ಸನ್ನದ್ಧರಾಗಬಹುದು, ಆದರೆ ನಮಗೆ ಒಬ್ಬರೂ ಸಿಗುವುದಿಲ್ಲವಲ್ಲ ಎನ್ನುತ್ತಿದ್ದಾರೆ ಇನ್ನು ಕೆಲವರು. ಬರೋದು ಬರ್ತಾರೆ. ಸರಿಯಾಗಿ ಇರೋದನ್ನು ಹೇಳಿ ಹೋದರೆ ಏನಾಗುತ್ತದೆ ಎಂದು ಇನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ. ಜೊತೆ ಜೊತೆಯಲಿ ಸೀರಿಯಲ್ ನೆನಪು ಮಾಡಿಕೊಳ್ಳುವ ನೆಟ್ಟಿಗರು, ಅಲ್ಲಿ ಪದೇ ಪದೇ ಈಕೆ ಕಾಣಿಸಿಕೊಳ್ಳುತ್ತಿದ್ದಳು. ಆದರೆ ಯಾವತ್ತಿಗೂ ನೇರಾನೇರ ಏನನ್ನೂ ಹೇಳಿಯೇ ಇಲ್ಲ. ಅರೆಬರೆ ಹೇಳಿ ತಲೆಗೆ ಹುಳುಬಿಟ್ಟು ಹೋಗುತ್ತಿದ್ದಳು ಎಂದು ಹೇಳುತ್ತಿದ್ದಾರೆ.
400 ರೂಪಾಯಿ ಚಾಲೆಂಜ್ ತೆಗೆದುಕೊಂಡಿರೋ ಸೀತೆಯ ಈ ರಾಮನಿಗೆ ಸಹಾಯ ಮಾಡ್ತೀರಾ?