ರಾಮಾಚಾರಿ ಜೆರಾಕ್ಸ್ ಕಾಪಿ ಈ ಕಿಲ್ಲರ್ ಕಿಟ್ಟಿ! ಇದೊಂದು ಬಾಕಿ ಇತ್ತು ಕರ್ಮ ಅಂತಿದ್ದಾರೆ ವೀಕ್ಷಕರು
ರಾಮಾಚಾರಿ ಸೀರಿಯಲ್‌ನಲ್ಲಿ ರಾಮಾಚಾರಿಯ ಜೆರಾಕ್ಸ್ ಕಾಪಿಯೊಂದು ಇದ್ದಕ್ಕಿದ್ದ ಹಾಗೆ ಮಾರ್ಕೆಟ್‌ನಲ್ಲಿ ಪ್ರತ್ಯಕ್ಷ ಆಗಿದೆ. ಅವ್ನು ರಾಮಾಚಾರಿ ಆದ್ರೆ ಇವ್ನು ಕಿಲ್ಲರ್ ಕಿಟ್ಟಿ ಅಂತೆ.
ರಾಮ್‌ಜಿ ಸೀರಿಯಲ್ ಅಂದ್ಮೇಲೆ ಅದ್ರಲ್ಲೊಂದು ಜಗಮಗ, ವಿಎಫ್‌ಎಕ್ಸ್‌ನ ಭಯಾನಕ ಜಗತ್ತು, ಅತಿಯಾದ ಎಮೋಶನ್, ಜನಪ್ರಿಯ ಸ್ಟೋರಿಲೈನು ಇದೆಲ್ಲ ಕಾಮನ್ ಅನ್ನೋದು ಒಂದು ವರ್ಗದ ಜನರ ಅಭಿಪ್ರಾಯ. ಪುಟ್ಟ ಗೌರಿ ಮದುವೆ, ಮಂಗಳ ಗೌರಿ ಮದುವೆಯ ಗೋಳಾಟಗಳೆಲ್ಲ ಮುಗಿದ ಮೇಲೆ ರಾಮಾಚಾರಿ ಅನ್ನೋ ಪ್ರಾಜೆಕ್ಟ್ ಕೈಗೆತ್ತಿಕೊಂಡ ರಾಮ್‌ಜೀ ಅದರಲ್ಲಿ ಸಿನಿಮಾದ ಕೆಲವು ಝಲಕುಗಳನ್ನು ಟ್ರೈ ಮಾಡ್ತಿದ್ದಾರೆ. ಹಿಂದೊಮ್ಮೆ ಅವರು ಟ್ರೈ ಮಾಡಿದ ಕಳಪೆ ವಿಎಫ್‌ಎಕ್ಸ್ ಸೀನ್‌ಗಳು ಸಿಕ್ಕಾಪಟ್ಟೆ ನಗೆಪಾಟಲಿಗೆ ಕಾರಣವಾಗಿತ್ತು. ಅದು ಬೇರೆ ವಿಷ್ಯ. ಆದರೆ ಈಗ ಡಬಲ್ ರೋಲ್ ಕತೆ ಹೇಳಲು ಹೊರಟಿದ್ದಾರೆ. ಸೋ ಕಿಲ್ಲರ್ ಕಿಟ್ಟಿ ಎಂಟ್ರಿ ಆಗಿದೆ.
ಜನ ಜಂಗುಳಿ ಇರೋ ಮಾರ್ಕೆಟ್. ಅಲ್ಲಿಗೆ ಪೊಲೀಸ್ ಜೊತೆಗೆ ವಿಲನ್ ಮಾನ್ಯತಾ ಬಂದಿದ್ದಾಳೆ. 'ಆ ಕೆಕೆ ಎಲ್ಲೋ ಗೋಡೌನ್‌ನಲ್ಲೋ ಮತ್ತೆಲ್ಲೋ ಬಿದ್ದಿರ್ತಾನೆ. ಅಲ್ಲಿಗೆ ಕರ್ಕೊಂಡು ಹೋಗೋ ಬದ್ಲು ಈ ಮಾರ್ಕೆಟ್‌ಗೆ ಯಾಕೆ ಕರ್ಕೊಂಡು ಬಂದೆ?' ಅಂತ ಪೊಲೀಸ್ ಹತ್ರ ಮಾನ್ಯತಾ ಕೇಳ್ತಾಳೆ. 'ಅವ್ನು ಹಫ್ತಾ ವಸೂಲಿಗೆ ಬರೋ ದಿನ ಇವತ್ತು' ಅಂತ ಇನ್ಸ್‌ಪೆಕ್ಟರ್ ಹೇಳುವಾಗ ಬ್ಯಾಗ್ರೌಂಡ್ ಸ್ಕೋರ್‌ನಲ್ಲಿ ಬದಲಾವಣೆ ಆಗುತ್ತೆ. ಭಾರೀ ಬಿಲ್ಡಪ್‌ನೊಂದಿಗೆ ಓಪನ್ ಜೀಪ್ ನಲ್ಲಿ ಟೋಪಿಯಲ್ಲಿ ಮುಖ ಮುಚ್ಕೊಂಡು ಲೋ ಆಂಗಲ್‌ನಿಂದ ಕಿಲ್ಲರ್ ಕಿಟ್ಟಿ ಎಂಟ್ರಿ. ಲೊಕೇಶನ್ ಬಂತು ಬಾಸ್ ಅಂತ ಸಹಚರರ ಸೂಚನೆ. ಆಗ ಎದ್ದೇಳ್ತಾನೆ, ಹೀರೋ ರೇಂಜ್‌ನಲ್ಲಿ ತಗ್ಗಿಸಿದ ತಲೆ ಮೇಲೆತ್ತುತ್ತಾನೆ ಕೆಕೆ ಆಲಿಯಾಸ್ ಕಿಲ್ಲರ್ ಕಿಟ್ಟಿ.
'ಜಾನಕಮ್ಮ ನಾರಾಯಣಚಾರ್ ಅವರ ಅವಳಿ ಗಂಡು ಮಕ್ಕಳಲ್ಲಿ ಎರಡನೆಯವನು ಕೃಷ್ಣಚಾರಿ, ಚಿಕ್ಕೋನಿದ್ದಾಗ ಜಾತ್ರೇಲಿ ಕಳೆದು ಹೋಗಿ ರೌಡಿ ಗ್ಯಾಂಗ್ ಸೇರಿದ್ದ. ಈಗ ಸಿಕ್ಕಿದಾನೆ ಪಾಪ. ಒಟ್ಟಿನಲ್ಲಿ ಇದು ದಾರಿ ತಪ್ಪಿದ ಮಗ ಸೀರಿಯಲ್' ಇದು ಮುಂದುವರಿದ ಸೀರಿಯಲ್ ಕತೆಯ ಒನ್‌ಲೈನ್ ಅಂತ ನೀವು ಊಹಿಸಿದ್ರೆ ನಿಮ್ ಊಹೆ ತಪ್ಪು. ಇದು ಜಾಣ ವೀಕ್ಷಕರು ಇಂಥಾ ಸೀರಿಯಲ್ ಕತೆ ನೋಡಿ ನೋಡಿ ಬೇಸತ್ತು ವ್ಯಂಗ್ಯವಾಗಿ ಮಾಡಿರೋ ಕಮೆಂಟ್. 'ರಾಮಾಚಾರಿ ಸೀರಿಯಲ್‌ಗೆ ವಕ್ರದೆಸೆ ಬಂತು' ಅಂತೊಬ್ಬರು ಕಮೆಂಟ್ ಮಾಡಿದರೆ, 'ಇದೊಂದು ಬಾಕಿ ಇತ್ತು, ಕರ್ಮ' ಅಂತ ಮಗದೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಹಿಟ್ಲರ್ ಕಲ್ಯಾಣಕ್ಕೆ ಚಿಲ್ಲಿ ಚಿಕನ್, ಅಮೃತಧಾರೆಗೆ ಪಾಯಸ... ಪುಟ್ಟಕ್ಕನ ಮಕ್ಕಳು ಇಟ್ರು ಹೊಸ ಹೆಸ್ರು...
ವೀಕ್ಷಕರು ಹೀಗೆ ಹೇಳಲೂ ಕಾರಣ ಇದೆ. ಈಗಷ್ಟೇ ರಾಮಾಚಾರಿ ಸೀರಿಯಲ್‌ನಲ್ಲಿ ರಾಮಾಚಾರಿ ಮತ್ತು ಚಾರುಲತಾ ನಡುವೆ ರೊಮ್ಯಾಂಟಿಕ್ ಸನ್ನಿವೇಶಗಳು ಶುರು ಆಗ್ತಿವೆ. ಇದು ಮುಂದುವರಿಯುತ್ತೆ ಅಂದುಕೊಂಡರೆ ಇದೀಗ ಸ್ಟೋರಿಯ ಟ್ರ್ಯಾಕೇ ಬದಲಾಗೋ ಸೂಚನೆ ಸಿಕ್ಕಿದೆ. ಹೊತ್ತಲ್ಲದ ಹೊತ್ತಲ್ಲಿ ಬಂದ ಕಿಟ್ಟಪ್ಪನ ಕಥೆ ವೀಕ್ಷಕರಿಗೆ ಕೇಳೋ ಮೂಡಿಲ್ಲ. ಆದರೂ ಅವ್ರು ಕೊಟ್ಟಿರೋ ಬಿಲ್ಡಪ್‌ಗೆ ಸೀರಿಯಲ್ ಮುಂದೇನಾಗಬಹುದು ಅನ್ನೋ ಕುತೂಹಲ ಒಂಚೂರ್ ಚೂರೇ ಮೂಡ್ತಾ ಇದೆ.
ಹಾಗೆ ನೋಡಿದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿಗಳ ಪೈಕಿ ‘ರಾಮಾಚಾರಿ’ ಕೂಡ ಒಂದು. ‘ರಾಮಾಚಾರಿ’ ಧಾರಾವಾಹಿ ಇದೀಗ ಕುತೂಹಲ ಹಂತದಲ್ಲಿದೆ. ರಾಮಾಚಾರಿ ಹಾಗೂ ಚಾರುಲತಾಳನ್ನ ಬೇರೆ ಮಾಡಲು ಮಾನ್ಯತಾ ಸಂಚುಗಳನ್ನು ರೂಪಿಸುತ್ತಿದ್ದಾಳೆ. ಇದಕ್ಕೆ ರಾಮಾಚಾರಿ ಅತ್ತಿಗೆ ವೈಶಾಖ ಸಾಥ್ ನೀಡುತ್ತಿದ್ದಾಳೆ. ಈಗಾಗಲೇ ಮಾನ್ಯತಾಗೆ ರಾಮಾಚಾರಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾನೆ. 'ಚಾರುಲತಾ ಕುತ್ತಿಗೆಯಲ್ಲಿರುವ ತಾಳಿ ಕಿತ್ತು ಹಾಕ್ತೀನಿ ಅಂತಿದ್ದೀರಲ್ಲಾ.. ನನ್ನ ಚಾರುನ ಮುಟ್ಟೋಕೆ ತಾಕತ್ತು ಇದ್ಯಾ ನಿಮಗೆ?’ ಅಂತ ಮಾನ್ಯತಾ ಮುಂದೆ ರಾಮಾಚಾರಿ ಗುಡುಗಿದ್ದಾನೆ. ಆದರೂ ಮಾನ್ಯತಾ ಕಿಲ್ಲರ್ ಕಿಟ್ಟಿ ಮೂಲಕ ರಾಮಾಚಾರಿ ಸೋಲಿಸಲು ಹೊಸ ಸಂಚು ಮಾಡ್ತಾ ಇದ್ದಾಳೆ.
ಮಾನ್ಯತಾ ಆಗಿ ಝಾನ್ಸಿ ಸುಬ್ಬಯ್ಯ, ರಾಮಾಚಾರಿ ಹಾಗೂ ಕಿಲ್ಲರ್ ಕಿಟ್ಟಿ ಆಗಿ ಡಬ್ಬಲ್ ರೋಲ್‌ನಲ್ಲಿ ರಿತ್ವಿಕ್ ಕೃಪಾಕರ್, ನಾಯಕಿ ಚಾರುಲತಾ ಪಾತ್ರದಲ್ಲಿ ಮೌನಾ ಗುಡ್ಡೆಮನೆ, ಅತ್ತಿಗೆ ವೈಶಾಖ ಆಗಿ ಐಶ್ವರ್ಯಾ ಸಾಲಿಮಠ, ಜಾನಕಿ ಆಗಿ ಅಂಜಲಿ ಸುಧಾಕರ್, ಜೈಶಂಕರ್ ಆಗಿ ಚಿ ಗುರುದತ್ ನಟಿಸುತ್ತಿದ್ದಾರೆ.
ಸೂಪರ್ ಚಿನ್ನ; 'ರಾಮಚಾರಿ'ನ ಮೆಚ್ಚಿಸಲು ಮುಂದಾದ ಚಾರು, ನೆಟ್ಟಿಗರಿಂದ ಮೆಚ್ಚುಗೆ