Asianet Suvarna News Asianet Suvarna News

ಜಿಬಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದ ವಿಮಲಾಗೆ ಕನ್ನಡತಿಯ ಕಿರಣ್‌ ರಾಜ್ ಮಾಡಿದ ಕಾಳಜಿ ನೋಡಿ!

ಸೀರಿಯಲ್, ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಸಮಾಜಸೇವೆಯನ್ನೂ ಮಾಡುವ 'ಕನ್ನಡತಿ' ಸೀರಿಯಲ್ ಹೀರೋ ಕಿರಣ್ ರಾಜ್ ಇದೀಗ ವಿಮಲಾ ಎಂಬ ಹೆಣ್ಣುಗಳ ಬದುಕಲ್ಲೂ ಹೀರೋ ಆಗಿದ್ದಾರೆ. ಜಿಬಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದ ಈಕೆ ಗುಣಮುಖವಾಗುವಂತೆ ಮಾಡಿದ್ದು ಕನ್ನಡತಿ ಹರ್ಷನ ಒಂದೊಳ್ಳೆ ಸಾಧನೆ.

Kannadathi serial hero Kiran Raj's inspiration to Vimala, she is suffering from GB Syndrome
Author
Bengaluru, First Published Aug 8, 2022, 12:30 PM IST

ಕನ್ನಡತಿ ಸೀರಿಯಲ್ ನ ಹರ್ಷ ಎಂಬ ಪಾತ್ರದಲ್ಲಿ ಮನೆ ಮಾತಾದವರು ಕಿರಣ್‌ ರಾಜ್. ಮಿಲಿಟ್ರಿ ಸ್ಕೂಲ್‌ನಲ್ಲಿ ಓದಿದ ಈ ಹೃದಯವಂತ ನಟ ತನ್ನ ಸೋಷಿಯಲ್ ವರ್ಕ್ ಮೂಲಕವೂ ಹೆಸರಾದವರು. ಕೋವಿಡ್‌ ಸಮಯದಲ್ಲಿ ಇವರು ಸಾವಿರಾರು ಜನ ಬಡವರಿಗೆ ಹೊಟ್ಟೆಗೆ ಹಿಟ್ಟು ನೀಡಿದ್ದಾರೆ. ಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಕಿರಣ್ ರಾಜ್‌ ಫೌಂಡೇಶನ್‌ ಮೂಲಕ ಈವರೆಗೆ ಸಾವಿರಾರು ಮಂದಿ ಸಹಾಯ ಪಡೆದಿದ್ದಾರೆ. ಈ ನಟನ ಔದಾರ್ಯಕ್ಕೆ ಲೇಟೆಸ್ಟ್ ಉದಾಹರಣೆ ಒಂದಿದೆ. ಜಿಬಿ ಸಿಂಡ್ರೋಮ್‌ ಎಂಬ ಅಪರೂಪದ ಸಮಸ್ಯೆಗೆ ತುತ್ತಾಗಿದ್ದ ವಿಮಲಾ ಎಂಬ ಹೆಣ್ಣುಮಗಳು ಕಿರಣ್‌ ರಾಜ್ ಸಹಾಯದಿಂದ ಮತ್ತೆ ಒಂದೊಳ್ಳೆ ಬದುಕು ಕಂಡುಕೊಳ್ಳುವುದು ಸಾಧ್ಯವಾಗಿದೆ. 'ಕನ್ನಡತಿ' ಸೀರಿಯಲ್‌ ಅನ್ನು ತಪ್ಪದೇ ನೋಡುತ್ತಿದ್ದ ವಿಮಲಾಗೆ ಹರ್ಷನ ಬಗ್ಗೆ, ಈ ಪಾತ್ರ ಮಾಡುವ ಕಿರಣ್ ರಾಜ್ ಬಗ್ಗೆ ಬಹಳ ಕುತೂಹಲವಿತ್ತು. ಅವರ ಈ ಮನಸ್ಥಿತಿಯನ್ನು ಅರಿತ ಕಿರಣ್ ರಾಜ್ ವಿಮಲಾ ಜೊತೆಗೆ ಫೋನ್‌ನಲ್ಲಿ ಮಾತಾಡಿದ್ದು ಮಾತ್ರವಲ್ಲದೇ ಅವರ ಆರೋಗ್ಯದಲ್ಲಿ ಸುಧಾರಣೆ ಆಗೋ ಹಾಗೆ ಮಾಡಿದ್ದಾರೆ. ಅವರ ಈ ಒಳ್ಳೆಯ ಕೆಲಸಕ್ಕೆ ಅಪಾರ ಮೆಚ್ಚುಗೆ ಹರಿದುಬರುತ್ತಿದೆ.

ಜಿಬಿ ಸಿಂಡ್ರೋಮ್ ಬದುಕನ್ನೇ ನರಕವಾಗಿಸುವ ವಿಚಿತ್ರ ಸಮಸ್ಯೆ. ಇದೊಂದು ನರದ ಸಮಸ್ಯೆ. ದೇಹದಲ್ಲಿ ಪ್ರತಿರೋಧ ಶಕ್ತಿಯೇ ನರ ದೌರ್ಬಲ್ಯಕ್ಕೆ ಕಾರಣವಾಗುವ ಈ ಸಮಸ್ಯೆಗೆ ಪರಿಹಾರ ಬಲುಕಷ್ಟ. ಮೈಸೂರಿನ ವಿಮಲಾ ಅನ್ನುವವರು ಕಳೆದ 20 ವರ್ಷಗಳಿಂದ ಈ ಜಿ ಬಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದರು. ಗಿಲೈನ್ ಬರ್ರೆ ಸಿಂಡ್ರೋಮ್ ನಿಂದಾಗಿ ವಿಮಲಾ ಅವರಿಗೆ ಅಂಗಾಗಗಳನ್ನು ಅಲ್ಲಾಡಿಸೋದಕ್ಕೂ ಆಗುತ್ತಿರಲಿಲ್ಲ. ಮಾತನಾಡುವ, ನೋಡುವ, ಕೇಳುವ ಶಕ್ತಿ ಏನೋ ಇತ್ತು, ಆದರೆ ತಮ್ಮ ದೇಹದ ಅಂಗಾಗಗಳ ಮೇಲೆ ಯಾವ ಹತೋಟಿಯೂ ಇರಲಿಲ್ಲ. ಈ ಸಮಸ್ಯೆಯಿಂದ ಜೀವನೋತ್ಸಾಹವನ್ನೇ ಅವರು ಕಳೆದುಕೊಂಡಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಈ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ವಿಮಲಾ ಬಹಳ ಇಷ್ಟಪಟ್ಟು ನೋಡುತ್ತಿದ್ದ ಸೀರಿಯಲ್ 'ಕನ್ನಡತಿ'. ಈ ಸೀರಿಯಲ್‌ನಲ್ಲಿ ಹರ್ಷ ಪಾತ್ರ ಮಾಡುವ ಕಿರಣ್ ರಾಜ್ ಅಂದರೆ ಅವರಿಗೆ ಅಚ್ಚುಮೆಚ್ಚು. ಕಳೆದ ತಿಂಗಳಿಂದ ವಿಮಲಾ ಅವರ ಈ ದೈಹಿಕ ಸಮಸ್ಯೆ ಉಲ್ಬಣಿಸಿತ್ತು.

Kannadathi: ರಂಜಿನಿ ರಾಘವನ್ ಒಗಟು ಚಾಲೆಂಜ್, ನೀವಿದ್ದೀರಾ?

ಆಗ ಅವರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರ ಶುಶ್ರೂಷೆ ಮಾಡುತ್ತಿದ್ದ ನರ್ಸ್ ಒಬ್ಬರು ವಿಮಲಾಗೆ ಬಹಳ ಕ್ಲೋಸ್ ಆಗಿದ್ದಾರೆ. ಆ ನರ್ಸ್ ಜೊತೆಗೆ ಮಾತನಾಡುವ ವೇಳೆ ವಿಮಲಾ ತನಗೆ 'ಕನ್ನಡತಿ' ಸೀರಿಯಲ್‌ನ ಕಿರಣ್‌ ರಾಜ್ ಅಂದ್ರೆ ಬಹಳ ಇಷ್ಟ ಅಂದಿದ್ದಾರೆ. ಆ ನರ್ಸ್‌ಗೆ ರೋಗಿ ಗುಣಮುಖರಾಗಲು ಅವರು ಮಾನಸಿಕವಾಗಿ ಸಂತೋಷದಿಂದಿರೋದೂ ಬಹಳ ಮುಖ್ಯ ಅನ್ನೋ ಸೂಕ್ಷ್ಮ ಅರಿವಿತ್ತು. ವಿಮಲಾ ಅವರಲ್ಲಿ ಸಂತೋಷ ಮೂಡುವಂತೆ ಮಾಡಲು ಕಿರಣ್‌ರಾಜ್‌ ಅವರಿಂದ ಸಾಧ್ಯ ಎಂಬುದನ್ನು ಅರಿತ ಅವರು ಕಿರಣ್‌ ರಾಜ್‌ ಅವರನ್ನ ಸಂಪರ್ಕಿಸುವ ಪ್ರಯತ್ನ ಮಾಡುತ್ತಾರೆ. ಅದರಲ್ಲಿ ಯಶಸ್ವಿಯೂ ಆಗುತ್ತಾರೆ.

ಮೂವತ್ತಾರು ವರ್ಷ ವಯಸ್ಸಿನ ವಿಮಲಾ ಅವರ ಬಗ್ಗೆ ತಿಳಿದುಕೊಂಡ ಕಿರಣ್‌ ರಾಜ್ ಆರಂಭದಲ್ಲಿ ಅವರನ್ನು ಫೋನ್‌ ಮೂಲಕ ಸಂಪರ್ಕಿಸುತ್ತಾರೆ. ವಿಮಲಾ ಅವರಿಗೆ ಸ್ಫೂರ್ತಿಯ ಮಾತುಗಳನ್ನು ಹೇಳುತ್ತಾರೆ. ದೈಹಿಕ ಸಮಸ್ಯೆಯಿಂದ ಬದುಕಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದ್ದ ಅವರ ಮುಖದಲ್ಲಿ ನಗು ಮೂಡುವಂತೆ ಮಾಡುತ್ತಾರೆ. ಕಿರಣ್ ಮಾತುಗಳಿಂದ ಸ್ಫೂರ್ತಿ ಪಡೆದ ವಿಮಲಾ ವ್ಯಾಯಾಮಗಳನ್ನು ಮಾಡುತ್ತಾ ದೈಹಿಕ ಸಮಸ್ಯೆಯಿಂದ ಹೊರಬರಲು ಮನಃಪೂರ್ವಕ ಪ್ರಯತ್ನ ಮಾಡುತ್ತಾರೆ. ಪರಿಣಾಮವಾಗಿ ಅವರ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡು ಬಂದಿದೆ. ಅವರು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದಾರೆ.

ನನ್ನ ಜೀವನ ಓಪನ್‌ಬುಕ್‌, ರೀಸೆಂಟ್ ಆಗಿ ಬ್ರೇಕಪ್ ಮಾಡ್ಕೊಂಡೆ: ರಾಕೇಶ್ ಅಡಿಗ ಶಾಕಿಂಗ್ ಹೇಳಿಕೆಗಳು!

ಆ ಬಳಿಕ ವಿಮಲಾ ಅವರನ್ನು ಕಿರಣ್ ರಾಜ್ ಭೇಟಿ ಮಾಡಿದ್ದಾರೆ. ವಿಮಲಾ ಜೊತೆಗಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಬಹಳ ಜನ ಕಿರಣ್‌ ರಾಜ್ ಅವರ ಈ ಕಾರ್ಯವನ್ನು ಮನದುಂಬಿ ಶ್ಲಾಘಿಸಿದ್ದಾರೆ.

Follow Us:
Download App:
  • android
  • ios