Kannadathi: ರಂಜಿನಿ ರಾಘವನ್ ಒಗಟು ಚಾಲೆಂಜ್, ನೀವಿದ್ದೀರಾ?

ಕನ್ನಡತಿ ಸೀರಿಯಲ್‌ನ ಭುವಿ ಅಂದರೆ ಭುವನೇಶ್ವರಿ ಈಗೀಗ ಕನ್ನಡ ಒಗಟು ಹೇಳಿ ಗಮನಸೆಳೆಯುತ್ತಿದ್ದಾರೆ. ಒಗಟಿನ ರೀಲ್ಸ್ ಮಾಡಿ ಅದನ್ನು ಜನಪ್ರಿಯಗೊಳಿಸ್ತಿದ್ದಾರೆ. ಅಷ್ಟಕ್ಕೂ ಅವ್ರು ಕೇಳ್ತಿರೋ ಒಗಟು ಯಾವ್ದು, ಅದರ ಅರ್ಥ ನಿಮಗೆ ಗೊತ್ತಿದ್ಯಾ ಚೆಕ್ ಮಾಡಿ..

Kannadathi actress Ranjani Raghavan gives puzzle challenge to co artist

ಕನ್ನಡತಿ ಸೀರಿಯಲ್‌ ಅಂದರೆ ಅಚ್ಚ ಕನ್ನಡದ ಘಮ. ಈ ಧಾರಾವಾಹಿಯ ನಾಯಕಿ ಪಾತ್ರದ ಹೆಸರು ಭುವನೇಶ್ವರಿ. ಈ ಹೆಸರು ಕೇಳಿದ ತಕ್ಷಣ ಕನ್ನಡ ತಾಯಿ ಭುವನೇಶ್ವರಿಯ ನೆನಪಾಗುತ್ತೆ. ಕನ್ನಡದ ದೇವಿ ಭುವನೇಶ್ವರಿಯ ನೆನಪಲ್ಲೇ ಈ ಪಾತ್ರವನ್ನೂ ಸೃಷ್ಟಿಸಲಾಗಿದೆ. ಈ ಪಾತ್ರವನ್ನು ಸೊಗಸಾಗಿ ನಿರ್ವಹಿಸುತ್ತಾ ಇರೋದು ರಂಜನಿ ರಾಘವನ್ ಎಂಬ ಕನ್ನಡದ ಹುಡುಗಿ. ಈ ಹಿಂದೆ 'ಪುಟ್ಟಗೌರಿ ಮದುವೆ' ಅನ್ನೋ ಸೀರಿಯಲ್‌ ಮೂಲಕ ಮನೆ ಮಾತಾದ ನಟಿ ರಂಜನಿ. ಸಿನಿಮಾಗಳಲ್ಲೂ ಅವರು ನಟಿಸುತ್ತಿದ್ದಾರೆ. ಇಷ್ಟೇ ಆಗಿದ್ರೆ ಅಂಥಾ ಸುದ್ದಿ ಆಗ್ತಿರಲಿಲ್ಲ. ಆದ್ರೆ ರಂಜನಿ ಅವರ ಕಾರ್ಯವೈಖರಿ ನೋಡಿದರೆ ಅವರು ಪಾತ್ರವನ್ನಷ್ಟೇ ಮಾಡಿ ಸುಮ್ಮನಿದ್ದುಬಿಡುವ ಹುಡುಗಿ ಥರ ಕಾಣಲ್ಲ. ಅದರಾಚೆಗೂ ತನ್ನಿಂದಾದ ಕೆಲಸ ಮಾಡ್ತಾನೇ ಬಂದಿದ್ದಾರೆ.

ರಂಜನಿ ರಾಘವನ್ ಒಂದು ಕಡೆ 'ಕನ್ನಡತಿ' ಸೀರಿಯಲ್‌ನಲ್ಲಿ ಅಚ್ಚಗನ್ನಡದಲ್ಲಿ ಮಾತಾಡ್ತಾ, ಈ ಸೀರಿಯಲ್‌ನ ಕೊನೆಯಲ್ಲಿ ಕನ್ನಡದ ರಿಯಲ್ ಟೀಚರ್ ಆಗಿ ಕನ್ನಡದ ಬಗ್ಗೆ ತಿಳಿವಳಿಕೆ ಹೆಚ್ಚಿಸೋ ಕೆಲಸ ಮಾಡ್ತಿದ್ದಾರೆ. ಇದು ಒಂದು ಕಡೆ ಸೀರಿಯಲ್ ಮೂಲಕ ನಡೆದರೆ ಇನ್ನೊಂದು ಕಡೆ ವೈಯುಕ್ತಿಕವಾಗಿಯೂ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಪ್ರೀತಿ ಬೆಳೆಸುವ ಕೆಲಸವನ್ನೂ ರಂಜನಿ ಮಾಡ್ತಿದ್ದಾರೆ. 'ಕತೆ ಡಬ್ಬಿ' ಅನ್ನೋ ಒಂದು ಸಣ್ಣಕತೆಗಳ ಪುಸ್ತಕವನ್ನೂ ಹೊರತಂದಿದ್ದಾರೆ ರಂಜನಿ. ಅಷ್ಟೇ ಅಲ್ಲ, ಒಬ್ಬ ಸಾಹಿತಿಯಾಗಿ ಮೈಸೂರು ಲಿಟರರಿ ಫೆಸ್ಟಿವಲ್‌ನಂಥಾ ಪ್ರತಿಷ್ಠಿತ ವೇದಿಕೆಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅನೇಕ ಕತೆಗಳನ್ನು ಬರೆಯುತ್ತಾರೆ. ಕನ್ನಡಕ್ಕೆ ತನ್ನ ಕೈಲಾದ ಕೊಡುಗೆ ನೀಡುತ್ತಲೇ ಬಂದಿದ್ದಾರೆ.

Amoolya ಸ್ಟ್ರೈಟ್‌ ಫಾರ್ವರ್ಡ್‌: ನನ್ನರಸಿ ರಾಧೆಯ ಅಶ್ವಿನಿ ಪಾತ್ರಧಾರಿಯ ಸಂದರ್ಶನ

ಇದಕ್ಕೆ ಲೇಟೆಸ್ಟ್ ಉದಾಹರಣೆ ಅಂದರೆ ಒಗಟು. ಇತ್ತೀಚೆಗೆ ಕನ್ನಡದ ಒಗಟುಗಳನ್ನು ಕೇಳುವವರೇ ಇಲ್ಲವಾಗಿದೆ. ದಶಕಗಳ ಹಿಂದೆ ಜನರ ತಿಳುವಳಿಕೆ ಹೆಚ್ಚಿಸೋ ಜೊತೆಗೆ ಮನರಂಜನೆಯನ್ನೂ ನೀಡುವ ಕೆಲಸ ಮಾಡುತ್ತಿದ್ದವು ಈ ಒಗಟುಗಳು. ಒಳ್ಳೆಯ ಟೀಚರ್ ಇದ್ರೆ ಮಕ್ಕಳಿಗೆ ಒಗಟಿನ ಮೂಲಕವೇ ಕನ್ನಡ ಕಲಿಸ್ತಾ ಅವರಲ್ಲಿ ಕನ್ನಡ ಭಾಷೆ ಬಗ್ಗೆ ಪ್ರೀತಿ ಬೆಳೆಸ್ತಿದ್ದರು. ಆದರೆ ಯಾವಾಗ ಮೊಬೈಲ್ ಕ್ರಾಂತಿಯಾಯ್ತೋ ಒಗಟು ಮೂಲೆಗುಂಪಾಯ್ತು. ಸದ್ಯಕ್ಕೀಗ ರಂಜನಿ ರಾಘವನ್ ಕನ್ನಡದ ಒಗಟುಗಳಿಗೆ ಮರು ಜೀವ ಕೊಡುವ ಕೆಲಸ ಮಾಡ್ತಿದ್ದಾರೆ. ಸೀರಿಯಲ್‌ನ ಸಹಪಾತ್ರಧಾರಿಗಳಿಗೆ ಒಗಟಿನ ಚಾಲೆಂಜ್ ಕೊಡುತ್ತಾ ಅವರಲ್ಲೂ ಒಗಟಿನ ಬಗ್ಗೆ ಪ್ರೀತಿ ಬೆಳೆಸುವ ಕೆಲಸ ಮಾಡ್ತಿದ್ದಾರೆ. ರಂಜನಿ ತನ್ನ ತಂಗಿ ಬಿಂದು ಪಾತ್ರ ಮಾಡ್ತಿದ್ದ ಮೊಹಿರಾ ಆಚಾರ್ಯ ಅವರಿಗೆ ಒಂದು ಒಗಟು ಹೇಳಿದ್ರು.

ಗಟ್ಟಿಮೇಳ ಸೀರಿಯಲ್‌ನಲ್ಲಿ ವರಮಹಾಲಕ್ಷ್ಮೀ ಹಬ್ಬದ ಸೆಲೆಬ್ರೇಶನ್ ಹೇಗಿದೆ?

'ಗೂಡಲ್ಲಿರೋ ಹಕ್ಕಿ ಊರೆಲ್ಲ ನೋಡುತ್ತೆ...' ಈ ಒಗಟನ್ನು ಮೊಹಿರಾಗೆ ಕೇಳಿದಾಗ ಅವರು ಉತ್ತರ ಕೊಡೋದಕ್ಕೆ ಒದ್ದಾಡಿದ್ರು. ಆದರೆ ಇದನ್ನು ಬಿಡಿಸಿ ಬಿಡಿಸಿ ಹೇಳುವ ಮೂಲಕ ಮೊಹಿರಾ ಬಾಯಿಂದಲೇ ಈ ಒಗಟಿಗೆ ಉತ್ತರ ಹೊರ ತೆಗೆಸಿದ್ದಾರೆ ರಂಜನಿ. ಕೊನೆಗೂ ಇದಕ್ಕುತ್ತರ 'ಕಣ್ಣು' ಅಂತ ಬಿಂದು ಹೇಳೇ ಬಿಟ್ಲು.

ಕನ್ನಡದಲ್ಲಿ ಹರ್ಷನ ತಂಗಿ ಸುಚಿ ಪಾತ್ರ ಮಾಡ್ತಿರೋದು ಅಮೃತಾ ಮೂರ್ತಿ. ಸಖತ್ ಮಾಡ್ ಆಗಿರೋ ಈ ಹುಡುಗಿ ಒಗಟಿಗೆಲ್ಲ ಉತ್ತರ ಹೇಳೋದು ಅಷ್ಟರಲ್ಲೇ ಇದೆ ಅಂದುಕೊಂಡರೆ ತಾನು ಒಗಟು ಬಿಡಿಸೋದ್ರಲ್ಲೂ ಜಾಣೆ ಅಂತ ತೋರಿಸಿಕೊಟ್ರು ಅಮೃತಾ. 'ಹಸಿರು ಕೋಟೆ ಕೆಂಪು ಅರಮನೆ ಕಪ್ಪು ಸೈನಿಕರು' ಅನ್ನೋ ಒಗಟನ್ನು ರಂಜನಿ ಕೇಳಿದಾಗ ಒಂದಿಷ್ಟು ಯೋಚನೆ ಮಾಡಿ ಏನೇನೆಲ್ಲ ಹೆಸರು ಹೇಳಿ ಕೊನೆಗೆ 'ಕಲ್ಲಂಗಡಿ ಹಣ್ಣು' ಅನ್ನೋ ಉತ್ತರ ಕೊಟ್ರು ಅಮೃತಾ.

 

ಇದ್ರಲ್ಲೊಂದು ಮಜಾ ಅಂದರೆ ಈ ಚಾಲೆಂಜನ್ನು ಕನ್ನಡತಿ ಸೀರಿಯಲ್ ನೋಡೋ ಕನ್ನಡಿಗರೂ ಸ್ವೀಕರಿಸಿದ್ದು. ರಂಜನಿ ರೀಲ್ಸ್ ಗೆ ಮೆಚ್ಚುಗೆ ಸೂಚಿಸಿರುವ ಅವರು ತಾವೂ 'ಒಗಟು'ಗಳಿಗೆ ಮರುಜೀವ ನೀಡುವ ಭರವಸೆ ನೀಡಿದ್ದಾರೆ. ಸೀರಿಯಲ್ ನಟಿಯರು ಬರೀ ಸ್ಟೈಲ್ ಮಾಡ್ಕೊಂಡು ಕೊಟ್ಟ ಡೈಲಾಗ್‌ ಒಪ್ಪಿಸಿ ಸೋಷಿಯಲ್ ಮೀಡಿಯಾದಲ್ಲಿ ಮೆರೆಯೋದಷ್ಟೇ ಅಂತ ಮೂಗು ಮುರೀತಿದ್ದವರಿಗೆ, ಅಪ್ಪಟ ಕನ್ನಡಾಭಿಮಾನಿ ನಟಿಯರು ಕನ್ನಡದ ಪ್ರೀತಿಯನ್ನೂ ಬೆಳೆಸಬಹುದು ಅಂತ ತೋರಿಸಿಕೊಟ್ಟಿದ್ದಾರೆ ರಂಜನಿ ರಾಘವನ್.

Latest Videos
Follow Us:
Download App:
  • android
  • ios