ಕನ್ನಡತಿ ಸೀರಿಯಲ್‌ ಹರ್ಷ ಅಂದರೆ ಕಿರಣ್‌ ರಾಜ್‌ ಅವರು ತಮ್ಮ ಚೆಂದದ ಅಭಿನಯದ ಜೊತೆಗೆ ಕೈಎತ್ತಿ ಸಹಾಯ ಮಾಡೋದರಲ್ಲೂ ಗಮನಸೆಳೆದವರು. ಎಲ್ಲರೂ ತಮ್ಮ ಬರ್ತ್ ಡೇಗೆ ಗಿಫ್ಟ್‌ ಸಿಗಲಿ ಅಂತ ನಿರೀಕ್ಷೆಯಲ್ಲಿದ್ರೆ ಇವ್ರು ತಾವೇ ಮುಂದಾಗಿ ಅಭಿಮಾನಿಗಳಿಗೆ ಗಿಫ್ಟ್‌ ನೀಡುತ್ತಿದ್ದಾರೆ. 

ಕಲರ್ಸ್ ಕನ್ನಡ ವಾಹಿನಿಯ 'ಕನ್ನಡತಿ' ಸೀರಿಯಲ್ ನ ಹೀರೋ ಕಿರಣ್‌ರಾಜ್. ಜುಲೈ ೫ ಅವರ ಹ್ಯಾಪಿ ಬರ್ತ್ ಡೇ. ಫ್ರೆಂಡ್ಸ್ ಬಳಗದ ಜೊತೆಗೆ ಅಭಿಮಾನಿ ಬಳಗವೂ ಹೆಚ್ಚಿರುವ ಕಿರಣ್‌ ರಾಜ್ ಈ ಬಾರಿಯ ಬರ್ತ್ ಡೇಯನ್ನು ಡಿಫರೆಂಟ್ ಆಗಿ ಆಚರಿಸಲು ಸಜ್ಜಾಗಿದ್ದಾರೆ. ಇನ್ನೊಂದು ಕಡೆ ಕಲರ್ಸ್ ಕನ್ನಡ ಚಾನೆಲ್‌ನಲ್ಲಿ 'ಕನ್ನಡತಿ' ಸೀರಿಯಲ್‌ ದಿನ ಕಳೆದಂತೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿದೆ. ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ 'ಕನ್ನಡತಿ' ಸೀರಿಯಲ್‌ ನಿಂತೇ ಹೋಗುತ್ತೇನೋ ಅನ್ನುವ ಆತಂಕ ಎದುರಾಗಿತ್ತು. ಆದರೆ ಹೈದರಾಬಾದ್‌ನ ರಾಮೋಜಿರಾವ್‌ ಫಿಲಂ ಸಿಟಿಯಲ್ಲಿ ಶೂಟಿಂಗ್‌ಗೆ ಅವಕಾಶ ಸಿಕ್ಕ ಕಾರಣ ಕನ್ನಡತಿ ಮುಂದುವರಿಯಿತು.

ಆದರೆ ಕತೆಯಲ್ಲಿ ಕೊಂಚ ಮಾರ್ಪಾಡಾಯ್ತು. ಅಲ್ಲೀವರೆಗೂ ಕಂಪೆನಿ ಸಿಇಓ ಆಗಿ ಮಿಂಚುತ್ತಿದ್ದ ಹರ್ಷ ಏಕಾಏಕಿ ಮಧ್ಯಮ ವರ್ಗದ ಮನೆ ಮಗನಾಗಿಬಿಟ್ಟ! ಆ ಕ್ಷಣದ ಸನ್ನಿವೇಶಕ್ಕೆಂದು ಹೆಣೆದಿದ್ದ ಈ ಎಮೋಶನಲ್ ಟ್ರ್ಯಾಕ್ ಜನರಿಗೆ ಇಷ್ಟವಾಗುತ್ತೋ ಇಲ್ವೋ ಅನ್ನುವ ಆತಂಕ ಇದ್ದೇ ಇತ್ತು. ಆದರೆ ಈ ಕತೆಯ ಎಳೆಯೂ ಜನರ ಮನಸ್ಸಿಗೆ ಹತ್ತಿರವಾಯ್ತು. ಇದಕ್ಕೆ ಹರ್ಷ ಪಾತ್ರಧಾರಿ ಕಿರಣ್ ರಾಜ್ ಅವರ ಆಪ್ತ ಅಭಿನಯವೂ ಕಾರಣ ಅನ್ನೋದು ಸುಳ್ಳಲ್ಲ. ಕಳೆದುಹೋದ ಮಗನಿಗಾಗಿ ಹಂಬಲಿಸುತ್ತಿರುವ ತಾಯಿ ತನ್ನ ಮಗನ ಹೆಸರಿಂದಲೇ ಹರ್ಷನನ್ನು ಕರೆಯಲಾರಂಭಿಸಿದಾಗ ಸಂತೋಷದಿಂದಲೇ ಆ ಮಗನ ಪಾತ್ರವನ್ನೂ ನಿಭಾಯಿಸಿದ ರೀತಿ ಜನರಿಗೆ ಇಷ್ಟವಾದ ಹಾಗಿದೆ. ಜೊತೆಗೆ ಹಿಂದೆ ಕಾಲೇಜು ಹುಡುಗ ಹುಡುಗಿಯರಿಗೆ, ಯಂಗ್ ಆಡಿಯನ್ಸ್ ಗೆ ಹೆಚ್ಚು ಹತ್ತಿರವಾಗಿದ್ದ ಈ ಸೀರಿಯಲ್ ಈಗ ಫ್ಯಾಮಿಲಿ ಎಂಟರ್ ಟೈನರ್ ಆಗಿದೆ ಅನ್ನೋದು ಮತ್ತೊಂದು ವಿಷಯ. 

ಮಧ್ಯಪ್ರದೇಶದಲ್ಲಿ ಬೆಳೆದ ಕಿರಣ್ ರಾಜ್ ಈಗ ಕನ್ನಡತಿಯ ಜನ ಮೆಚ್ಚಿದ ಹೀರೋ ...

ಸೀರಿಯಲ್‌ನಲ್ಲಿ ಮನೆ ಮಾತಾಗಿರುವ ಕಿರಣ್ ರಾಜ್ ಕೋವಿಡ್ ಲಾಕ್ ಡೌನ್ ಟೈಮ್ ನಲ್ಲಿ ಸಾವಿರಾರು ಮಂದಿಗೆ ನೆರವಿನ ಹಸ್ತ ಚಾಚಿದವರು. ನಿತ್ಯ ನೂರಾರು ಮಂದಿ ಬಡವರು ಇವರು ನೀಡುವ ಊಟ ಉಂಡು ಬದುಕಿನ ಭರವಸೆ ಕಂಡುಕೊಳ್ಳುತ್ತಿದ್ದರು. ಕಿರಣ್ ರಾಜ್ ಸೀರಿಯಲ್ ಮಾತ್ರ ಅಲ್ಲ, ರಿಯಲ್‌ನಲ್ಲೂ ಹೀರೋ ಅನ್ನೋ ಥರದ ಮಾತುಗಳು ಕೇಳಿಬರತೊಡಗಿದವು. ಇದೀಗ ಮತ್ತೊಂದು ಲೆವೆಲ್‌ನ ಅಭಿಮಾನಿಗಳ ಋಣ ತೀರಿಸಲು ಈ ನಟ ಮುಂದಾಗಿದ್ದಾರೆ. ಸಾಮಾನ್ಯವಾಗಿ ಬರ್ತ್ ಡೇ ಇದೆ ಅಂದರೆ ಹೆಚ್ಚಿನವರು ಲಕ್ಸುರಿ ಗಿಫ್ಟ್‌ನ ನಿರೀಕ್ಷೆಯಲ್ಲಿರುತ್ತಾರೆ. ಆದರೆ ಯಾವತ್ತೂ ಕೊಡುವುದರಲ್ಲೇ ಖುಷಿ ಕಾಣುವ ಕಿರಣ್ ರಾಜ್ ತಮ್ಮ ಬರ್ತ್ ಡೇಗೂ ಗಿಫ್ಟ್ ಸ್ವೀಕರಿಸುವ ಬದಲಿಗೆ ಗಿಫ್ಟ್ ನೀಡುವುದಕ್ಕೆ ಮುಂದಾಗಿದ್ದಾರೆ. ಮಾಡೆಲಿಂಗ್ ಮೂಲಕವೂ ಗುರುತಿಸಿಕೊಂಡಿರುವ ಈ ನಟ ತಮ್ಮ ಅಭಿಮಾನಿ ಬಳಗಕ್ಕೆ ಗಿಫ್ಟ್ ಹ್ಯಾಂಪರ್ ನೀಡಲಿದ್ದಾರೆ. ಈಗಾಗಲೇ ಅಭಿಮಾನಿ ಪೇಜ್‌ಗಳ ಅಡ್ಮಿಮ್ ಅಡ್ರೆಸ್ ಕಲೆಕ್ಟ್ ಮಾಡಿದ್ದಾರೆ. ಶೀಘ್ರದಲ್ಲಿ ಅವರಿಗೆ ಗಿಫ್ಟ್ ಹ್ಯಾಂಪರ್ ತಲುಪಿಸೋದಾಗಿ ಹೇಳಿದ್ದಾರೆ. 

ದುಡಿಮೆಯ ಶೇ.40ರಷ್ಟನ್ನು ದಾನ ಮಾಡುವ ನಟ ಕಿರಣ್‌ರಾಜ್! ...

'ನನ್ನ ಕುಟುಂಬಕ್ಕೆ ಒಂದು ಸರ್ಪೈಸ್ ಇದೆ. ನನ್ನ ನಟನಾ ಜರ್ನಿಯ ಭಾಗವಾಗಿದ್ದಕ್ಕೆ, ಆ ಮೂಲಕ ನನ್ನ ಆತ್ಮವಿಶ್ವಾಸ, ಶಕ್ತಿ ಹೆಚ್ಚಿಸಿದ್ದಕ್ಕೆ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ಕನಸು ಈಡೇರಿಸಿ ಗುರಿ ತಲುಪಲು ಯಾವ ಗಾಡ್‌ಫಾದರ್‌ಗಳ ಅವಶ್ಯಕತೆಯೂ ಇಲ್ಲ. ನಿಮಗೆ ನನ್ನ ಬಗ್ಗೆ ನನ್ನ ನಟನೆಯ ಬಗ್ಗೆ ಇರುವ ನಂಬಿಕೆ, ಪ್ರೀತಿಯೇ ನನ್ನನ್ನು ಗುರಿ ಮುಟ್ಟಿಸಲಿದೆ. ನಾನು ಎಲ್ಲದರಲ್ಲೂ ಪರ್ಫೆಕ್ಟ್ ಅಂತ ಭಾವಿಸಿಲ್ಲ. ಆದರೆ ಯಾವತ್ತೂ ನೀವು ಹೆಮ್ಮೆ ಪಡುವಂತೆ ಇರುತ್ತೇನೆ, ಇದು ನನ್ನ ಪ್ರಾಮಿಸ್‌' ಅಂತ ಕಿರಣ್‌ ರಾಜ್ ಅಭಿಮಾನಿಗಳನ್ನು ಶ್ಲಾಘಿಸುತ್ತಾರೆ. ತನ್ನ ಶಕ್ತಿಯಾದ ಅಭಿಮಾನಿಗಳಿಗೆ ಹುಟ್ಟುಹಬ್ಬದ ದಿನ ಗಿಫ್ಟ್‌ ಹ್ಯಾಂಪರ್ ನೀಡುವ ಮೂಲಕ ಕೃತಜ್ಞತೆ ಸಲ್ಲಿಸುತ್ತಿರುವುದಾಗಿಯೂ ಕಿರಣ್ ತಿಳಿಸಿದ್ದಾರೆ.

ಮತ್ತೆ ಬಿಗ್ ಬಾಸ್‌ಗೆ ಹೋಗಲು ಅರವಿಂದ್‌ಗೆ ಇಷ್ಟವಿರಲಿಲ್ಲವೇಕೆ? ...