ಮೈಸೂರು ಮಹಾರಾಣಿ ಅವತಾರದಲ್ಲಿ ಕನ್ನಡತಿ, ಯಾಕೀ ಅಲಂಕಾರ?
ಮೈಸೂರಿನ ಹಿಂದಿನ ಮಹಾರಾಣಿ ಕೆಂಪನಂಜಮ್ಮಣ್ಣಿಯವರ ದಿರಿಸಿನಲ್ಲಿ ಮಿಂಚುತ್ತಿರುವ ರಂಜನಿ ರಾಘವನ್ ಅವರ ಫೋಟೋಶೂಟ್‌ನ ರಹಸ್ಯವೇನು?
ಕನ್ನಡತಿ ಸೀರಿಯಲ್‌ನ ಲೀಡ್ ರೋಲ್ ಭುವಿ ಪಾತ್ರದಲ್ಲಿ ಮಿಂಚುತ್ತಿರುವ ರಂಜನಿ ರಾಘವನ್ ಅವರು ಫೇಸ್‌ಬುಕ್‌ನಲ್ಲಿ ತಮ್ಮ ಹೊಸದೊಂದು ಅವತಾರದೊಂದಿಗೆ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಅವರು ಮಾಡಿರುವುದು ಮೈಸೂರಿನ ಮಹಾರಾಣಿ ಪಾತ್ರವನ್ನು.
ಜೊತೆಗಿರುವ ಈ ಫೋಟೋ ನೋಡಿದರೆ ಅವರ ಡ್ರೆಸ್‌ನ ಸ್ವರೂಪ ನೋಡಿದರೆ ನಿಮಗೆ ಗೊತ್ತಾಗಬಹುದು- ಜೊತೆಗೆ ಅವರು ''ಮೈಸೂರು ಮಹಾರಾಣಿಯರ ಗೌರವಾರ್ಥವಾಗಿ'' ಎಂದು ಕನ್ನಡ ಕ್ಯಾಪ್ಷನ್ ಕೊಟ್ಟಿದ್ದಾರೆ. ಅದಕ್ಕೆ ಕಾರಣವೂ ಇದೆ. ಇಂದು ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ಪುಣ್ಯತಿಥಿಯ ದಿನವಂತೆ, ಅವರು ಧರಿಸಿರುವ ಡ್ರೆಸ್ ಮಹಾರಾಣಿಯವರ ಕಾಲದ್ದು. ಸೀರೆಯ ಸೆರಗು ಆ ಕಾಲದ ಅರಸು ಮನೆತನದವರು ಧರಿಸುತ್ತಿದ್ದ ಸೀರೆಯ ಸೆರಗಿನಂತೆ ಬಲಗಡೆ ಭುಜದ ಮೇಲಿನಿಂಧ ಚುಟುಕಾಗಿ ಇಳಿಬಿದ್ದಿದೆ. ಗಾಢ ಕೆಂಪು ಬಣ್ಣದ ರೇಷ್ಮೆ ಸೀರೆ. ನೀಲಿ ಬಣ್ಣದ, ಅದರ ಮೇಲಿನಿಂದ ಕುಸುರಿ ಕೆಲಸಗಳನ್ನು ಮಾಡಿರುವ ಕುಪ್ಪಸ ತೊಟ್ಟಿದ್ದಾರೆ.
ಪಾಕ್ ಗ್ರೀನ್ ಸಿಗ್ನಲ್ ಕೊಟ್ರೂ ನನಸಾಗಲೇ ಇಲ್ಲ ದಿಲೀಪ್ ಕುಮಾರ್ ಆ ಆಸೆ! ...
ಕೊರಳನ್ನು ಮೂರು ಬಗೆಯ ಕಂಠೀಹಾರಗಳು ಆವರಿಸಿದ್ದು, ಮೈಸೂರು ಅರಮನೆಯ ಶ್ರೀಮಂತಿಕೆಯನ್ನು ಸಾರುವಂತಿವೆ. ಕಿವಿಯಿಂದ ಮುತ್ತಿನ ಜುಮುಕಿ ಹಾಗೂ ಮುತ್ತಿನ ಬೈತಲೆಬೊಟ್ಟುಗಳು ಇಳಿಬಿದ್ದಿವೆ. ಸೊಂಟದಲ್ಲಿ ಅಪೂರ್ವವಾದ ಕಟಿಬಂಧ ಒಡ್ಯಾಣ ಹಾಗೂ ಕೈಗಳಲ್ಲಿ ಕೈಕಡಗಗಳನ್ನೂ ಧರಿಸಿದ್ದಾರೆ. ಇವೆಲ್ಲವೂ ಒಂದು ಕಾಲದ ಮಹಾರಾಣಿಯ ಗ್ರ್ಯಾಂಡ್ ವೈಭವವನ್ನು ಎತ್ತಿ ಹಿಡಿಯುತ್ತಿವೆ; ಜೊತೆಗೆ ರಂಜನಿ ಅವರ ಸೌಂದರ್ಯವನ್ನೂ ಉದ್ದೀಪಕ ರೀತಿಯಲ್ಲಿ ಕಾಣಿಸುತ್ತಿವೆ ಎನ್ನಲು ಅಡ್ಡಿಯಿಲ್ಲ.
ಈ ಫೋಟೋದ ಜೊತೆಗೆ ಅವರು ಕೆಲವು ಹ್ಯಾಷ್‌ಟ್ಯಾಗ್ ಹಾಕಿದ್ದಾರೆ- ಕಮಿಂಗ್ ಸೂನ್, ಫ್ಯಾಶನ್ ವಿದ್ ಪರ್ಪಸ್, ಸಮ್‌ತಿಂಗ್ ಎಕ್ಸೈಟಿಂಗ್, ಮೈಸೂರು ಹೆರಿಟೇಜ್, ಫೋಟೋಶೂಟ್ ವಿದ್ ಮಿ, ಒಡೆಯರ್ಸ್ ಆಫ್ ಮೈಸೂರ್- ಎಂದು ಕೊಟ್ಟಿದ್ದಾರೆ. ಅಂದರೆ ಮೈಸೂರಿನ ಒಡೆಯರ್ಸ್ ಅನ್ನು ಕೇಂದ್ರವಾಗಿ ಇರುವ ಯಾವುದೋ ಮಹತ್ವದ ಫೋಟೋಶೂಟ್ ಮಾಡುತ್ತಿದ್ದಾರೆ ಎನ್ನಲು ಅಡ್ಡಿಯಿಲ್ಲ. ಮುಂಬರುವ ದಸರಾ ಹಿನ್ನೆಲೆಯಲ್ಲಿ ಇದೊಂದು ಒಳ್ಳೆಯ ವೆಂಚರ್ ಆಗಬಹುದು.
ಈ ಫೋಟೋಗೆ ಸಕತ್ ಕಾಮೆಂಟ್‌ಗಳೂ ಬಂದಿವೆ- ನೀವು ಮೈಸೂರು ಯುವರಾಣಿ ಥರಾನೇ ಕಾಣ್ತಿದೀರಾ; ಈ ಫೋಟೋಶೂಟ್‌ಗೆ ನೀವು ಸೂಕ್ತ ವ್ಯಕ್ತಿ; ರಾಯಲ್ ಲುಕ್ ನಿಮಗೆ ಒಪ್ಪುತ್ತೆ; ಆದ್ರೆ ಇನ್ನೂ ಒಂಚೂರು ಗಾಂಭೀರ್ಯ ಇರಬೇಕಿತ್ತು- ಅಂತೆಲ್ಲ ಕಾಮೆಂಟ್‌ಗಳು ಬಂದಿವೆ.
ಶೂಟಿಂಗ್ ರೇಂಜ್‌ಗೆ ವಿದ್ಯಾಬಾಲನ್ ಹೆಸರಿಟ್ಟು ಭಾರತೀಯ ಸೇನೆ ಗೌರವ! ...
ರಂಜನಿ ಯಾರ ನೆನಪಿನಲ್ಲಿ ಈ ಫೋಟೋ ಹಾಕಿದ್ದಾರೋ ಆ ಕೆಂಪನಂಜಮ್ಮಣ್ಣಿ ಅವರು, ಹತ್ತನೇ ಚಾಮರಾಜ ಒಡೆಯರ್ ಅವರ ಪತ್ನಿ. ಕೆಆರ್ಎಸ್ ಡ್ಯಾಮ್, ಗಂಧದ ಫ್ಯಾಕ್ಟರಿ ಮುಂತಾದವುಗಳನ್ನು ನಾಡಿಗೆ ಕೊಟ್ಟು ಇಂದು ಹೆಸರುವಾಸಿಯಾಗಿರುವ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ. ಇವರಿಗೆ ಇತಿಹಾಸದಲ್ಲಿ ದೊಡ್ಡದೊಂದು ಸ್ಥಾನವೇ ಇದೆ. ಇವರ ಪತಿ ಚಾಮರಾಜ ಒಡೆಯರ್ ಅವರು ೧೮೯೪ರಲ್ಲಿ ಕೋಲ್ಕೊತಾಕ್ಕೆ ಭೇಟಿ ನೀಡಿದ್ದಾಗ ದಿಡೀರ್ ಎಂದು ಡಿಫ್ತೀರಿಯಾದಿಂದ ಮರಣ ಹೊಂದಿದರು. ಆಗ ಕೃಷ್ಣರಾಜ ಒಡೆಯರ್ ಇನ್ನೂ ಅಪ್ರಾಪ್ತ ವಯಸ್ಕರಾಗಿದ್ದರು. ಬ್ರಿಟಿಷ್ ಸರಕಾರ ಇಡೀ ರಾಜಸಂಸ್ಥಾನವನ್ನು ಒಳಗೆ ಹಾಕಲು ಹೊಂಚು ಹಾಕುತ್ತಿತ್ತು. ಸುತ್ತಲೂ ಮುಸ್ಲಿಂ ಆಡಳಿತಗಾರರು ಹೊಂಚು ಹಾಕುತ್ತಿದ್ದರು. ಬ್ಯುಬೋನಿಕ್ ಪ್ಲೇಗ್ ಎಂಬ ಕ್ರೂರ ಕಾಯಿಲೆ ಆವರಿಸಿತ್ತು. ಜನ ಭೀತರಾಗಿದ್ದರು. ಇಂಥ ಎಲ್ಲ ಸವಾಲುಗಳ ನಡುವೆ ಕೆಂಪನಂಜಮ್ಮಣ್ಣಿಯವರು ಇಡೀ ರಾಜ್ಯವನ್ನು ಯಾವುದೇ ಅರೆಕೊರೆಗಳಿಲ್ಲದೆ, ಬ್ರಿಟಿಷರು ಮುಗಿಸಿಹಾಕಲು ಅವಕಾಶ ಕೊಡದೆ ಮುತ್ಸದ್ದಿತನದಿಂದ ನಿರ್ವಹಿಸಿದರು. ಅವರ ಆಡಳಿತದ ಎಂಟು ವರ್ಷಗಳ ಕಾಲ ರಾಜ್ಯ ಸುಭಿಕ್ಷವಾಗಿತ್ತು. ನಂತರ ಅವರ ಪುತ್ರ ಕೃಷ್ಣರಾಜ ಒಡೆಯರ್ ಆಡಳಿತ ಸ್ವೀಕರಿಸಿ, ರಾಜ್ಯವನ್ನು ಪ್ರಗತಿಪಥದತ್ತ ಕೊಂಡೊಯ್ದದ್ದು ನಮಗೆ ಗೊತ್ತೇ ಇದೆ.
ಇಂಥ ಮಹಾರಾಣಿಯವರ ದಿರಸಿನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ರಂಜನಿ ರಾಘವನ್ ನಮಗೆ ಅವರನ್ನು ಮತ್ತೊಮ್ಮೆ ನೆನಪಿಸಿಕೊಟ್ಟಿದ್ದಾರೆ.
ಶರಾವತಿ ಕಣಿವೆಯಲ್ಲಿ ಸಂಯುಕ್ತಾ ಹೊರನಾಡು..! ...