ಹಿರಿಯ ಕಲಾವಿದೆ ಮಮತಾ ಗುಡೂರ ಆಸ್ಪತ್ರೆಗೆ ದಾಖಲು, ಆರ್ಥಿಕ ಸಹಾಯಕ್ಕೆ ಸರ್ಕಾರಕ್ಕೆ ಮೊರೆ ಇಟ್ಟ ಕುಟುಂಬ
ಅನಾರೋಗ್ಯಕ್ಕೀಡಾಗಿ ಸಂಕಷ್ಟದಲ್ಲಿರುವ ಹಿರಿಯ ರಂಗಭೂಮಿ ಕಲಾವಿದೆ ಮಮತಾ ಗುಡೂರ. ಬಾಗಲಕೋಟೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ. ಆರ್ಥಿಕ ಸಹಕಾರಕ್ಕೆ ಸರ್ಕಾರಕ್ಕೆ ಮೊರೆ ಇಟ್ಟ ಮಮತಾ ಗುಡೂರು ಕುಟುಂಬ. 15ಕ್ಕೂ ಹೆಚ್ಚು ಕನ್ನಡ ಸಿನೆಮಾಗಳಲ್ಲೂ ನಟಿಸಿ ಕಲಾಕ್ಷೇತ್ರದಲ್ಲಿ 50 ವರ್ಷಕ್ಕೂ ಹೆಚ್ಚು ಕಾಲ ಸೇವೆ ಮಾಡಿರುವ ಮಮತಾ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಫೆ.13): ಆಕೆ ಹಿರಿಯ ರಂಗಭೂಮಿ ಕಲಾವಿದೆ, ನಾಟಕ ಸಿನಿಮಾ ಸೇರಿದಂತೆ ಹಲವೆಡೆ ಉತ್ತಮ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದ ಹಿರಿಯ ಜೀವ, ಆದರೆ ಅಂತಹ ಕಲಾವಿದೆ ಇದೀಗ ಏಕಾಏಕಿ ಮೆದುಳಿನಲ್ಲಿ ರಕ್ತಸ್ರಾವವಾಗಿ ಅನಾರೋಗ್ಯಕ್ಕೀಡಾಗಿ ದಯನೀಯ ಸ್ಥಿತಿಯಲ್ಲಿದ್ದು, ಆ ಕಲಾವಿದೆ ಕುಟುಂಬ ಆರ್ಥಿಕ ಸಹಾಯಕ್ಕಾಗಿ ಸರ್ಕಾರಕ್ಕೆ ಮೊರೆ ಇಟ್ಟಿದೆ. ಒಂದೆಡೆ ಅನಾರೋಗ್ಯಕ್ಕೀಡಾಗಿ ಬೆಡ್ ಮೇಲೆ ಮಲಗಿ ಚಿಕಿತ್ಸೆ ಪಡೆಯುತ್ತಿರೋ ಹಿರಿಯ ಕಲಾವಿದೆ, ಕಲಾವಿದೆ ಆರೈಕೆಯಲ್ಲಿ ತೊಡಗಿರೋ ಕುಟುಂಬಸ್ಥರು, ಆನಾರೋಗ್ಯದ ದಯನೀಯ ಸ್ಥಿತಿ ಕಂಡು ಮಮ್ಮಲ ಮರುಗುತ್ತಿರೋ ಕಲಾವಿದೆ ಅಭಿಮಾನಿಗಳು. ಅಂದಹಾಗೆ ಇಂತಹವೊಂದು ಪರಿಸ್ಥಿತಿ ಕಂಡು ಬಂದಿದ್ದು ಬಾಗಲಕೋಟೆಯಲ್ಲಿ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಿರುವ ಈ ಹಿರಿಯ ಕಲಾವಿದೆಯ ಹೆಸರು ಮಮತಾ ಗುಡೂರು. ಮೂಲತ: ಬಾಗಲಕೋಟೆ ಜಿಲ್ಲೆಯ ಗುಡೂರು ಗ್ರಾಮದವರು. ಇನ್ನು ವಯಸ್ಸು 75 ಆಗಿದ್ರೂ ರಂಗಭೂಮಿಯಲ್ಲಿ ವಿಶೇಷ ಪಾತ್ರಗಳ ಮೂಲಕ ಜನಮಾನಸ ಗೆದ್ದವರು. ಇವರ ಅಪ್ರತಿಮ ಕಲಾಸೇವೆಯನ್ನು ಮನಗಂಡು ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಜನಮನ ಗೆದ್ದ ಹಿರಿಯ ಕಲಾವಿದೆಯ ಮೆದುಳಿನಲ್ಲಿ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲು:
ರಂಗಭೂಮಿಯಲ್ಲಿ ತಮ್ಮದೇಯಾದ ವಿಶೇಷ ಪಾತ್ರಗಳ ಮೂಲಕ ಜನಮನ ಗೆದ್ದ ಇಂತಹ ಹಿರಿಯ ರಂಗಭೂಮಿ ಕಲಾವಿದೆ ಮಮತಾ ಗುಡೂರ ಅವರ ಮೆದುಳಿನಲ್ಲಿ ಏಕಾಏಕಿ ರಕ್ತಸ್ರಾವವಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ವೈದ್ಯರ ಸಲಹೆ ಮೇರೆಗೆ ಇನ್ನು ಶಸ್ತ್ರ ಚಿಕಿತ್ಸೆಯನ್ನು ಸಹ ಮಮತಾ ಗುಡೂರ ಅವರಿಗೆ ಮಾಡಬೇಕಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಅವರ ಕುಟುಂಬವಿದ್ದು, ಇನ್ನು ಶಸ್ತ್ರಚಿಕಿತ್ಸೆ ಕೈಗೊಳ್ಳುವಷ್ಟು ದುಡ್ಡು ನಮ್ಮ ಬಳಿಯಿಲ್ಲ. ಹೀಗಾಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರ ನೆರವಿಗೆ ಧಾವಿಸಬೇಕೆಂದು ಮಮತಾ ಗುಡೂರು ಮೊಮ್ಮಗ ರಿಯಾಜ್ ಮನವಿ ಮಾಡಿಕೊಂಡಿದ್ದಾರೆ.
15ಕ್ಕೂ ಹೆಚ್ಚು ಕನ್ನಡ ಸಿನೆಮಾಗಳಲ್ಲಿ ನಟಿಸಿರುವ ಹಿರಿಯ ಕಲಾವಿದೆ ಮಮತಾ ಗುಡೂರ:
ಇನ್ನು ಹಿರಿಯ ರಂಗಭೂಮಿ ಕಲಾವಿದೆಯಾಗಿರೋ ಮಮತಾ ಗುಡೂರ ಅವರು, ಪಿ.ಬಿ.ದುತ್ತರಗಿ ನಾಟಕ ಕಂಪನಿ, ಚಿಂದೋಡಿ ನಾಟಕ ಕಂಪನಿ, ಹುಚ್ಚೇಶ್ವರ ನಾಟಕಕಂಪನಿಗಳು ಸೇರಿದಂತೆ ಬೇರೆ ಬೇರೆ ನಾಟಕ ಕಂಪನಿಗಳಲ್ಲಿ ಅಭಿನಯಿಸಿ ಮನೆ ಮಾತಾಗಿದ್ದರು.
Rajinikanth: ಮಂಗಳೂರಿಗೆ ತಲೈವಾ ಆಗಮನ: ಭದ್ರತೆ ಇಲ್ಲದೆ ರಜನಿ ಏಕಾಂಗಿ ಪಯಣ
ಇನ್ನು 15ಕ್ಕೂ ಹೆಚ್ಚು ಕನ್ನಡ ಸಿನೆಮಾಗಳಲ್ಲೂ ನಟಿಸಿರುವ ಅವರು ಕಲಾಕ್ಷೇತ್ರದಲ್ಲಿ 50 ವರ್ಷಕ್ಕೂ ಹೆಚ್ಚುಕಾಲ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಮನೆ ಮುಂದೆ ನಿಂತಾಗಲೇ ಅವರು ಕುಸಿದಿ ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಕರೆತಂದಾಗ ತಲೆಯಲ್ಲಿ ರಕ್ತಸ್ರಾವವಾಗಿದೆ ಎಂದು ವೈದ್ಯರು ತಿಳಿಸಿ ಶಸ್ತ್ರಚಿಕಿತ್ಸೆ ಕೈಗೊಳ್ಳಬೇಕೆಂದು ಕುಟುಂಬಸ್ಥರಿಗೆ ಸೂಚಿಸಿದ್ದಾರೆ ಹೀಗಾಗಿ ಅವರ ಕುಟುಂಬಕ್ಕೆ ಸರ್ಕಾರ, ಬಾಗಲಕೋಟೆ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೆರವು ನೀಡಲು ಮುಂದಾಗಬೇಕಿದೆ ಅಂತಾರೆ ರಂಗಭೂಮಿಕೆ ಎಸ್.ಎ.ಸೊಪ್ಪೇರಿ ಮಠ ಮತ್ತು ರಫೀಕ್.
ಸ್ಟಾರ್‌ಕಿಡ್ಸ್ ಲೇಟ್ ನೈಟ್ ಪಾರ್ಟಿ ಫೋಟೋ: ನಶೆಯಲ್ಲಿ ಅಜಯ್ ದೇವಗನ್ ಪುತ್ರಿ!
ಒಟ್ಟಿನಲ್ಲಿ ಸುಮಾರು 50 ವರ್ಷಗಳ ಕಾಲ ರಂಗಭೂಮಿ, ಸಿನಿಮಾ ಕ್ಷೇತ್ರಗಳಲ್ಲಿ ತಮ್ಮದೇಯಾದ ಛಾಪು ಮೂಡಿಸಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಮುಡಿಗೇರಿಸಿಕೊಂಡ ಹಿರಿಯ ರಂಗಭೂಮಿ ಕಲಾವಿದೆ ಮಮತಾ ಗುಡೂರು ಅನಾರೋಗ್ಯಕ್ಕೀಡಾಗಿ ದಯನೀಯ ಸ್ಥಿತಿಯಲ್ಲಿದ್ದು, ಇನ್ನಾದ್ರೂ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಕಲಾವಿದೆ ಚಿಕಿತ್ಸೆ ನೆರವಿಗೆ ಧಾವಿಸುವುದೇ ಅಂತ ಕಾದು ನೋಡಬೇಕಿದೆ.