ಜೀ ಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಸೀರಿಯಲ್ ನಿಂದ ನಾಯಕ ಅನಿರುದ್ಧಅವರನ್ನು ಹೊರಕ್ಕೆ ಹಾಕಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಅವರನ್ನು ಕಿರುತೆರೆಯಿಂದಲೂ ಬಹಿಷ್ಕರಿಸಿದ್ದಾರೆ ಅನ್ನುವ ಸುದ್ದಿ ಓಡಾಡ್ತಿದೆ. ಈ ಬಗ್ಗೆ ಸುವರ್ಣನ್ಯೂಸ್ ವೆಬ್‌ಸೈಟ್‌ ಜೊತೆಗೆ ಮಾತನಾಡಿದ ಅನಿರುದ್ಧ, ಈ ಸಂಬಂಧ ತನ್ನನ್ನು ತಂಡದವರ್ಯಾರೂ ಸಂಪರ್ಕಿಸಿಲ್ಲ, ಈ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದಿದ್ದಾರೆ.

ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ' ನಾಯಕ, ವಿಷ್ಣುವರ್ಧನ್ ಅಳಿಯ, ಜನಪ್ರಿಯ ನಟ ಅನಿರುದ್ಧ ತಮ್ಮ ಬಗೆಗೆ ಹರಿದಾಡುತ್ತಿರುವ ವದಂತಿ ಬಗ್ಗೆ ಸುವರ್ಣನ್ಯೂಸ್ ವೆಬ್‌ಸೈಟ್‌ಗೆ ಸ್ಪಷ್ಟನೆ ನೀಡಿದ್ದಾರೆ. 'ನಿರ್ದೇಶಕರಾಗಲಿ, ಚಾನೆಲ್‌ನವರಾಗಲಿ ಈ ವಿಚಾರವಾಗಿ ನನ್ನನ್ನು ಸಂಪರ್ಕಿಸಿಲ್ಲ. ನನ್ನನ್ನು ಕಿರುತೆರೆಯಿಂದ ಬಹಿಷ್ಕರಿಸುವ ಕುರಿತಾಗಿ ನಿರ್ಮಾಪಕರ ಸಂಘದಲ್ಲಿ ನಡೆದಿದೆ ಎನ್ನಲಾದ ಮೀಟಿಂಗ್‌ಗೂ ಕರೆದಿಲ್ಲ. ಹೀಗೆಲ್ಲ ಸುದ್ದಿಗಳಷ್ಟೆ ನನ್ನ ಕಿವಿಗೆ ಬೀಳುತ್ತಿವೆ. ಅದು ಬಿಟ್ಟರೆ ಮತ್ಯಾರೂ ಸಂಪರ್ಕ ಮಾಡಿಲ್ಲ. ಹೀಗಾಗಿ ಈಗಲೇ ನಾನು ಏನು ಹೇಳಲೂ ಸಾಧ್ಯವಿಲ್ಲ' ಎಂದು ಅನಿರುದ್ಧ ತಿಳಿಸಿದ್ದಾರೆ. ಅಷ್ಟಕ್ಕೂ ಅನಿರುದ್ಧ ಅವರ ಮೇಲಿರುವ ಆಪಾದನೆಗಳೇನು, ಅವರನ್ನು ಏಕಾಏಕಿ ಸೀರಿಯಲ್‌ನಿಂದ ಯಾಕೆ ಹೊರ ಹಾಕಲಾಗುತ್ತಿದೆ, ನಿರ್ಮಾಪಕರ ಸಂಘದಲ್ಲಿ ಯಾವ ವಿಚಾರಗಳು ಚರ್ಚೆಯಾದವು, ಅಂತಿಮವಾಗಿ ಅನಿರುದ್ಧ ಅವರನ್ನು ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿದ್ದಾರೆ ಅನ್ನುವ ವಿಚಾರ ಎಷ್ಟರ ಮಟ್ಟಿಗೆ ನಿಜ ಈ ಎಲ್ಲ ವಿಚಾರಗಳ ಕುರಿತಾದ ವಿವರವಾದ ಮಾಹಿತಿ ಇಲ್ಲಿದೆ.

ಕಿರುತೆರೆಯ ಜನಪ್ರಿಯ ಸೀರಿಯಲ್‌ಗಳಲ್ಲೊಂದು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ'. ವರ್ಷಾನುಗಟ್ಟಲೆಯಿಂದ ಪ್ರಸಾರವಾಗುತ್ತಿರುವ ಈ ಸೀರಿಯಲ್‌ಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಟಿಆರ್‌ಪಿಯಲ್ಲೂ ಈ ಸೀರಿಯಲ್ ಸದಾ ಮುಂದಿದೆ. ಆರಂಭದಿಂದ ಇಲ್ಲೀವರೆಗೆ ಅತ್ಯುತ್ತಮ ಸ್ಪಂದನೆ ಪಡೆಯುತ್ತಿರುವುದು ಈ ಸೀರಿಯಲ್‌ನ ಹೆಚ್ಚುಗಾರಿಕೆ. ಇದೀಗ ಈ ಸೀರಿಯಲ್ ಟೀಮ್‌ನೊಳಗೆ ಎಲ್ಲವೂ ಸರಿಯಿಲ್ಲ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ಧಾರಾವಾಹಿಯ ನಾಯಕ ಅನಿರುದ್ಧ ಅವರ ಬಗ್ಗೆ ಸೀರಿಯಲ್‌ ತಂಡದಲ್ಲಿ ತಕರಾರು ಎದ್ದಿದೆ ಎಂಬ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಕೆಲವು ದಿನಗಳಿಂದ ಅನಿರುದ್ಧ ಅವರ ವರ್ತನೆಯ ಬಗ್ಗೆ ಸೀರಿಯಲ್ ಟೀಮ್‌ಗೆ ಅಸಮಾಧಾನವಿತ್ತು. ಚಿತ್ರೀಕರಣ ನಡೆಯುವಾಗ ಒಂದು ಸೀನ್ ಬಗ್ಗೆ ಅನಿರುದ್ಧ ಅವರು ವಿರೋಧ ವ್ಯಕ್ತಪಡಿಸಿದ್ದರು. ಆ ಸೀನ್‌ಅನ್ನು ತೆಗೆದುಹಾಕಬೇಕು ಎಂದು ಹೇಳಿದ್ದರು. ಆದರೆ ಕಥೆಯ ದೃಷ್ಟಿಯಿಂದ ಆ ಸೀನ್ ಇರಬೇಕಿತ್ತು. ಹೀಗಾಗಿ ತಂಡ ಇದನ್ನು ಒಪ್ಪಲಿಲ್ಲ. ಆಗ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ ಆ ಸೀನ್‌ನ ಶೂಟಿಂಗ್‌ ಅನ್ನು ಅರ್ಧಕ್ಕೇ ಬಿಟ್ಟು ಹೊರ ನಡೆದಿದ್ದರು ಎನ್ನಲಾಗಿದೆ. ಅನಿರುದ್ಧ ಅವರ ಈ ವರ್ತನೆ ಬಗ್ಗೆ ಅಸಾಮಾಧಾನ ತಾಳಿದ ಸೀರಿಯಲ್ ಟೀಮ್ ಈ ಸೀರಿಯಲ್‌ನ ಆರ್ಯವರ್ಧನ್ ಪಾತ್ರದಿಂದ ಅನಿರುದ್ಧ ಅವರನ್ನು ತೆಗೆದು ಹಾಕುವ ಬಗ್ಗೆ ಯೋಚಿಸಿತ್ತು ಎನ್ನಲಾಗಿದೆ.

kannadathi serial: ಹರ್ಷ ಭುವಿ ಫಸ್ಟ್‌ನೈಟಲ್ಲಿ ಮತ್ತೆ ಅಡ್ಡ ಬಂತು ತುರಿಮಣೆ!

ಅನಿರುದ್ಧ್ ಈ ಹಿಂದೆಯೂ ಈ ರೀತಿ ವರ್ತಿಸಿದ್ದರು, ಆಗ ಸೀರಿಯಲ್ ತಂಡದವರು ಅವರ ಮನವೊಲಿಸಿ ಸೀರಿಯಲ್ ಗೆ ವಾಪಾಸ್ ಕರೆತಂದಿದ್ದರು. ಈ ಥರ ಮೂರು ಬಾರಿ ಆಗಿತ್ತು. ಆದರೆ ಈ ವರ್ತನೆ ಪದೇ ಪದೇ ರಿಪೀಟ್ ಆದಾಗ ಸೀರಿಯಲ್ ಟೀಮ್ ಅವರನ್ನು ಹೊರ ಹಾಕಲು ನಿರ್ಧರಿಸಿತ್ತು. ಈ ಸಂಬಂಧ ನಿರ್ದೇಶಕ ಮಧು ಉತ್ತಮ್ ಹಾಗೂ ನಿರ್ಮಾಪಕ ಆರೂರು ಜಗದೀಶ್ ಅವರು ನಿರ್ಮಾಪಕರ ಸಂಘಕ್ಕೆ ದೂರನ್ನೂ ನೀಡಿದ್ದಾರೆ. ನಿರ್ಮಾಪಕರ ಸಂಘದಲ್ಲಿ ಈ ಸಂಬಂಧ ಸಭೆ ನಡೆದಿದೆ. ಈ ವೇಳೆ ಇನ್ನು ಮೇಲೆ ಯಾವ ನಿರ್ಮಾಪಕರೂ ಅನಿರುದ್ಧ ಅವರಿಗೆ ಸೀರಿಯಲ್‌ಗಳಲ್ಲಿ ಅವಕಾಶ ನೀಡಬಾರದು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂಬ ಸುದ್ದಿ ಇದೆ.

ಪತಿಗಿಂತ ನಾನೇ ಜಾಸ್ತಿ ರೊಮ್ಯಾಂಟಿಕ್; ಶ್ವೇತಾ ಚಂಗಪ್ಪಗೆ ವೇದಿಕೆ ಮೇಲೆ ಪ್ರಪೋಸ್‌ ಮಾಡಿದ ಕಿರಣ್!

ಈ ಹಿಂದೆ ಈ ಸೀರಿಯಲ್ ನಾಯಕಿ ಮೇಘ ಶೆಟ್ಟಿ ಅವರ ವಿಚಾರದಲ್ಲೂ ವಿವಾದ ಉಂಟಾಗಿತ್ತು. ಅವರ ಉದ್ಧಟ ವರ್ತನೆಗೆ ಬೇಸತ್ತು ಸೀರಿಯಲ್ ತಂಡ ಅವರನ್ನು ಸೀರಿಯಲ್‌ನಿಂದ ಕೈ ಬಿಡಲು ನಿರ್ಧರಿಸಿತ್ತು. ಆದರೆ ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಮಾತುಕತೆ ಮೂಲಕ ಈ ವಿವಾದ ಬಗೆಹರಿದಿತ್ತು. ಈ ಬಗ್ಗೆ ನಾಯಕಿ ಮೇಘ ಶೆಟ್ಟಿ ಅವರೂ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದರು. ಇದೀಗ ನಾಯಕನ ವಿಚಾರದಲ್ಲೂ ಇಂಥದ್ದೊಂದು ಬೆಳವಣಿಗೆ ನಡೆಯುತ್ತಿದ್ದು ಮುಂದೇನಾಗುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.