ಪತ್ನಿ ಎಷ್ಟು ಪ್ರೀತಿ ಮಾಡ್ತಾಳಂತ ಗಂಡನಿಗೆ ತಿಳಿಯಲು ಅವಳಿಗೆ ಮದ್ಯ ಕುಡಿಸೋದು ಅನಿವಾರ್ಯನಾ?
ಅಲ್ಲಿ ಭೂಮಿಕಾ... ಇಲ್ಲಿ ಲಕ್ಷ್ಮೀ... ಪತಿಯನ್ನು ಹೆಂಡತಿ ಎಷ್ಟು ಪ್ರೀತಿ ಮಾಡ್ತಾಳೆ ಎಂದು ಸಾಬೀತು ಮಾಡಲು ಡ್ರಿಂಕ್ಸ್ ಮಾಡೋದು ಅನಿವಾರ್ಯನಾ? ನಿರ್ದೇಶಕರು ಏನು ಹೇಳಹೊರಟಿದ್ದಾರೆ ಅಂತಿದ್ದಾರೆ ಫ್ಯಾನ್ಸ್
ಮಧ್ಯ ವಯಸ್ಕರಾದರೂ ಮದುವೆಯಾಗದೇ ಇದ್ದ ಹಲವರು ತೊಳಲಾಟದಲ್ಲಿ ಇರುವ ಸಮಯದಲ್ಲಿ ಅಂಥವರಿಗೆ ತುಂಬಾ ಇಷ್ಟವಾದ ಧಾರಾವಾಹಿಗಳಲ್ಲಿ ಒಂದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಧಾರಾವಾಹಿ. ವಯಸ್ಸಾದರೂ ಮದುವೆಯಾಗದೇ ಉಳಿದ ಮಧ್ಯಮ ಕುಟುಂಬದ ಹೆಣ್ಣುಮಗಳೊಬ್ಬಳು ಒತ್ತಾಯಪೂರ್ವಕವಾಗಿ ವಯಸ್ಸಾಗಿರುವ ಕೋಟ್ಯಧಿಪತಿ ಬಿಜಿನೆಸ್ಮೆನ್ ಜೊತೆ ಮದುವೆಯಾಗಿ ಇಬ್ಬರೂ ಸಂಸಾರದಲ್ಲಿ ಹೊಂದಿಕೊಳ್ಳಲು ಪರದಾಡುತ್ತಿರುವ ಕಥಾಹಂದರವನ್ನು ಹೊಂದಿರುವ ಈ ಧಾರಾವಾಹಿ ಸ್ವಲ್ಪ ವಿಭಿನ್ನ ಎನಿಸಿರುವುದು ನಿಜವೇ. ಆದರೆ ಇದೀಗ ಭೂಮಿಕಾಗೆ ಪತಿ ಗೌತಮ್ ಮೇಲೆ ಲವ್ ಆಗಿದೆ. ಅದನ್ನು ತನ್ನದೇ ಆದ ರೀತಿಯಲ್ಲಿ ವ್ಯಕ್ತಪಡಿಸಿದರೂ, ಅದು ಗೌತಮ್ಗೆ ತಿಳಿಯುವುದಿಲ್ಲ. ಇದೇ ಕಾರಣಕ್ಕೆ ನಿರ್ದೇಶಕರು ಭೂಮಿಕಾಗೆ ಮದ್ಯ ಸೇವಿಸುವಂತೆ ಮಾಡಿದರು.
ಹೀಗೆ ಭೂಮಿಕಾ ಗೊತ್ತಿಲ್ಲದೇ ಡ್ರಿಂಕ್ಸ್ ಮಾಡಿರೋದು 2-3 ಸಲ ಆಗಿಬಿಟ್ಟಿದೆ ಈ ಸೀರಿಯಲ್ನಲ್ಲಿ. ಅವಳಿಗೆ ಗೊತ್ತಿಲ್ಲದಂತೆಯೇ, ಪಾರ್ಟಿಯಲ್ಲಿ ಕೂಲ್ ಡ್ರಿಂಕ್ಸ್ನಲ್ಲಿ ಮದ್ಯ ಸೇವಿಸಿ ಕೊಟ್ಟಾಗಿದೆ. ಇದರಿಂದ ಅವಳು ಗೌತಮ್ಗೆ ತನ್ನ ಪ್ರೀತಿಯ ವಿಷಯ ತಿಳಿಸಿದ್ದಾಳೆ. ಪತಿ-ಪತ್ನಿಯನ್ನು ಒಂದು ಮಾಡಲು, ಪತಿಯ ಬಗ್ಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿ ಅವನ ಮನಸ್ಸನ್ನು ಪರಿವರ್ತನೆ ಮಾಡುವ ಸಂಬಂಧ ಈ ಸನ್ನಿವೇಶಗಳನ್ನು ಪದೇ ಪದೇ ತುರುಕಲಾಗುತ್ತಿದೆ. ಇದನ್ನು ತಮಾಷೆಯ ರೂಪದಲ್ಲಿ ಮಾಡಿದರೂ, ಪದೇ ಪದೇ ಅದನ್ನೇ ತೋರಿಸುವುದು ತುಂಬಾ ಅಸಭ್ಯ ಎನಿಸುವ ಹೊತ್ತಿನಲ್ಲಿಯೇ ಇದೇ ತಂತ್ರವನ್ನು ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಲಕ್ಷ್ಮೀ ಬಾರಮ್ಮ ಸೀರಿಯಲ್ನಲ್ಲಿಯೂ ತೋರಿಸಲಾಗಿದೆ.
ಅಮೃತಧಾರೆ ಭೂಮಿಕಾ ಫುಲ್ ಟೈಟ್! ಈ ಕ್ಯಾರೆಕ್ಟರ್ಗೆ ಇದೆಲ್ಲಾ ಬೇಕಿತ್ತಾ- ಫ್ಯಾನ್ಸ್ ಆಕ್ರೋಶ
ಈ ಸೀರಿಯಲ್ನಲ್ಲಿ ಲಕ್ಷ್ಮೀ ಕೂಡ ಕೂಲ್ಡ್ರಿಂಕ್ಸ್ನಲ್ಲಿ ಮದ್ಯ ಸೇವಿಸಿದ್ದು ಗೊತ್ತಾಗದೇ ಕುಡಿದಿದ್ದಾಳೆ. ಆಮೇಲೆ ತನ್ನ ಗಂಡ ವೈಷ್ಣವ್ಗೆ ಪ್ರೀತಿಯ ಕುರಿತು ಹೇಳಿದ್ದಾಳೆ. ತನ್ನ ಪತ್ನಿ ತನ್ನನ್ನು ಇಷ್ಟೆಲ್ಲಾ ಲವ್ ಮಾಡ್ತಾ ಇದ್ದಾಳೆ ಎಂದು ಗಂಡನಿಗೆ ತಿಳಿದದ್ದು ಅವಳು ಡ್ರಿಂಕ್ಸ್ ಮಾಡಿ ಮಾತನಾಡಿದ ಮೇಲೆ. ಇಲ್ಲಿ ಸ್ವಲ್ಪ ಕಥೆ ಭಿನ್ನವಾಗಿದೆ ಅಷ್ಟೇ. ಲಕ್ಷ್ಮೀ ಜನ್ಮದಿನವನ್ನು ವೈಷ್ಣವ್ ಆಚರಿಸಬಾರದು ಅಂತ ವೈಷ್ಣವ್ನನ್ನು ಪ್ರೀತಿಸ್ತಿರೋ ಕೀರ್ತಿ ಅಂದುಕೊಂಡಿದ್ದಳು. ಕೊನೆಗೂ ವೈಷ್ಣವ್, ಲಕ್ಷ್ಮೀ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ. ಪತ್ನಿ ಜೊತೆ ಡಿನ್ನರ್ ಮಾಡುತ್ತಾನೆ ಅಂತ ಗೊತ್ತಾದ ಕೂಡಲೇ ಕೀರ್ತಿ ವೈಷ್ಣವ್ ಕುಡಿಯುವ ಜ್ಯೂಸ್‌ಗೆ ಡ್ರಿಂಕ್ಸ್ ಮಿಕ್ಸ್ ಮಾಡಿಕೊಟ್ಟಿದ್ದಾಳೆ. ಹೀಗೆ ಮಾಡಿದ್ರೆ ಪತ್ನಿ ಬಳಿ ಆತ ನನ್ನನ್ನೇ ಲವ್ ಮಾಡುವ ವಿಷ್ಯ ಹೇಳುತ್ತಾನೆ ಎಂದು ಅವಳು ಅಂದುಕೊಂಡಿದ್ದಳು.
ಆದರೆ ಹಾಗೆ ಆಗಲಿಲ್ಲ. ವೈಷ್ಣವ್ ಕುಡಿಯಬೇಕಿದ್ದ ಡ್ರಿಂಕ್ಸ್‌ನ್ನು ಲಕ್ಷ್ಮೀ ಕುಡಿದಳು. ಗಂಡನನ್ನು ಎಷ್ಟು ಲವ್ ಮಾಡ್ತಿದೀನಿ ಅಂತೆಲ್ಲ ಹೇಳಿದಳು. ಆಗಲೇ ಅವನಿಗೆ ಗೊತ್ತಾದದ್ದು, ತನ್ನ ಪತ್ನಿ ಎಷ್ಟು ಲವ್ ಮಾಡ್ತಾಳೆ ಎಂದು. ಆದರೆ ಪತ್ನಿ ಎಷ್ಟು ಲವ್ ಮಾಡ್ತಾಳೆ ಎಂದು ತಿಳಿಯಲು ಈ ರೀತಿ ಹೆಣ್ಣುಮಕ್ಕಳಿಗೆ ಡ್ರಿಂಕ್ಸ್ ಕುಡಿಸುವುದು ಅನಿವಾರ್ಯನಾ ಎನ್ನುವ ಪ್ರಶ್ನೆ ಎದುರಾಗಿದೆ. ಆಗ ಭೂಮಿಕಾ, ಈಗ ಲಕ್ಷ್ಮಿ ಸೀರಿಯಲ್ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆ ಎಂದು ಸೀರಿಯಲ್ ಪ್ರೇಮಿಗಳು ಪ್ರಶ್ನಿಸುತ್ತಿದ್ದಾರೆ.