ಕೆಲವು ವರ್ಷಗಳ ಹಿಂದೆ ಹಿರಿಯ ಸಿನಿಮಾ ನಿರ್ದೇಶಕರೊಬ್ಬರು ತಮ್ಮ ಆತ್ಮಚರಿತ್ರೆ ಬರೆಯಬೇಕು ಅಂತ ಮನಸ್ಸು ಮಾಡಿದರು. ಅದನ್ನು ಪ್ರಕಟಿಸುತ್ತೀರಾ ಎಂದು ಹಲವು ಪತ್ರಿಕೆಗಳ ಬಳಿ ವಿಚಾರಿಸಿದರು. ಆ ಸಿನಿಮಾ ನಿರ್ದೇಶಕರು ಸಿನಿಮಾ ಮಾಡುವುದನ್ನು ನಿಲ್ಲಿಸಿ ಹತ್ತು ಹನ್ನೆರಡು ವರ್ಷಗಳೇ ಆಗಿದ್ದವು. ಹೀಗಾಗಿ ಯಾರೂ ಅವರ ಕುರಿತು ಆಸಕ್ತಿ ತೋರಲಿಲ್ಲ. ಕೊನೆಗೆ ಅವರು ಅದನ್ನು ಪುಸ್ತಕ ರೂಪದಲ್ಲಿ ತರುವಂತೆ ಅನೇಕ ಪ್ರಕಾಶಕರ ಬಳಿ ಕೇಳಿಕೊಂಡರು. ಜನಪ್ರಿಯತೆಯೂ ಇಲ್ಲದ, ಈ ಕಾಲಕ್ಕೆ ಪ್ರಸ್ತುತರೂ ಅಲ್ಲದ ಅವರ ಆತ್ಮಕತೆಯನ್ನು ಪುಸ್ತಕ ರೂಪದಲ್ಲಿ ತರಲು ಯಾವ ಪ್ರಕಾಶಕರೂ ಮುಂದೆ ಬರಲಿಲ್ಲ. ಕೊನೆಗೆ ಅವರೇ ಸ್ವತಃ ತಮ್ಮ ಪುಸ್ತಕ ತರಬೇಕೆಂದು ಅಂದುಕೊಂಡರು.

ರಘು ದೀಕ್ಷಿತ್ ಆತ್ಮಹತ್ಯೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಚಾನೆಲ್‌ ವಿರುದ್ಧ ದೂರು? 

ಅಷ್ಟುಹೊತ್ತಿಗೆ ಅವರನ್ನು ಒಬ್ಬ ವ್ಯಕ್ತಿ ಸಂಪರ್ಕಿಸಿದರು. ಆತ್ಮಕತೆ ಬರೆಯುವುದೆಲ್ಲ ಹಳೇ ಕಾಲದ ಶೈಲಿ. ನೀವೇ ಪ್ರಿಂಟು ಮಾಡಿದರೂ ಹೆಚ್ಚೆಂದರೆ ಸಾವಿರ ಪ್ರತಿ ಮಾರಬಹುದು. ಅದಕ್ಕೆ ಐದು ವರ್ಷ ಬೇಕಾಗುತ್ತದೆ. ನಿಮ್ಮ ಪುಸ್ತಕವನ್ನು ಯಾರಾದರೂ ಕೊಂಡುಕೊಳ್ಳುತ್ತಾರೆ ಎಂಬ ನಂಬಿಕೆ ನನಗಂತೂ ಇಲ್ಲ. ಸುಮ್ಮನೆ ದುಡ್ಡು ವೇಸ್ಟುಮಾಡಬೇಡಿ. ನಿಮಗೆ ನಾನು ಬೇರೆ ಉಪಾಯ ಹೇಳಿಕೊಡುತ್ತೇನೆ. ನಿಮಗೆ ಹೇಳಬೇಕು ಅನ್ನಿಸಿದ್ದನ್ನೆಲ್ಲ ಮಾತಾಡುತ್ತಾ ಹೋಗಿ. ನಾನು ಅದನ್ನು ರೆಕಾರ್ಡು ಮಾಡಿಕೊಳ್ಳುತ್ತೇನೆ. ಅದನ್ನು ಹತ್ತಾರು ಕಂತುಗಳಲ್ಲಿ ಪ್ರಸಾರ ಮಾಡೋಣ ಅಂದರು.

ಅವರ ಮಾತುಗಳನ್ನೆಲ್ಲ ರೆಕಾರ್ಡ್‌ ಮಾಡಲಾಯಿತು. ಅದರ ನಾಲ್ಕು ಕಂತುಗಳು ಸುದ್ದಿವಾಹಿನಿಯಲ್ಲಿ ಪ್ರಸಾರವಾದವು. ಐದನೇ ಕಂತು ಪ್ರಸಾರ ಮಾಡಲಿಕ್ಕೆ ಸಾಧ್ಯವಿಲ್ಲ ಎಂದು ಸುದ್ದಿವಾಹಿನಿ ಕೈ ಚೆಲ್ಲಿತು. ಆ ಕಾರ್ಯಕ್ರಮವನ್ನು ನೋಡಿದವರ ಸಂಖ್ಯೆ ಸಾವಿರ ಕೂಡ ದಾಟುತ್ತಿಲ್ಲ ಅನ್ನುವುದು ಸುದ್ದಿ ವಾಹಿನಿಗೆ ಗೊತ್ತಾಯಿತು. ಅಲ್ಲಿಗೆ ಅವರ ಆತ್ಮಚರಿತ್ರೆಯ ಆಸೆ ಸತ್ತು ಹೋಯಿತು.

ಇದಾಗಿ, ಸರಿಯಾಗಿ ಐದು ವರ್ಷಗಳ ನಂತರ ಅದೇ ನಿರ್ದೇಶಕರ ಆತ್ಮಚರಿತ್ರೆಯನ್ನು ತಾನು ಎಲ್ಲರಿಗೂ ತಲುಪಿಸುತ್ತೇನೆ ಎಂದು ಮತ್ತೊಬ್ಬ ಉತ್ಸಾಹಿ ಮುಂದೆ ಬಂದ. ಅಷ್ಟುಹೊತ್ತಿಗೆ ಅವರಿಗೆ ಅದೆಲ್ಲ ನಡೆಯುವುದಿಲ್ಲ ಅನ್ನಿಸಿತು. ಆದರೆ ಈತ ತನ್ನ ಪ್ರಯತ್ನ ಬಿಡಲಿಲ್ಲ. ಒತ್ತಾಯ ಮಾಡಿ ಅವರಿಂದ ಮಾತಾಡಿಸಿದ. ಅವರ ಆತ್ಮಚರಿತ್ರೆಯನ್ನು ಚಿತ್ರೀಕರಿಸಿದ. ತನ್ನ ಯೂಟ್ಯೂಬ್‌ ಚಾನಲ್ಲಿನಲ್ಲಿ ಪ್ರಸಾರ ಮಾಡಿದ.

ನನ್ನ ವಿಡಿಯೋ ಡಿಲೀಟ್ ಆಗಿದೆ; ಬಿಗ್ ಬಾಸ್ ಲಾಸ್ಯ ಅಳಲು

ಮೂರನೇ ಕಂತಿಗೆ ಅದು ಭರ್ಜರಿ ಜನಪ್ರಿಯತೆ ಗಳಿಸಿತು. ಅದನ್ನು ಲಕ್ಷಾಂತರ ಮಂದಿ ನೋಡಿದರು. ಕೆಲವು ಕಂತುಗಳನ್ನು ಆರೇಳು ಲಕ್ಷ ಮಂದಿ ನೋಡಿ ಸಂತೋಷಪಟ್ಟರು. ಆ ನಿರ್ದೇಶಕರಿಗೆ ಫೋನ್‌ ಮಾಡಿ ತಮ್ಮ ಸಂಭ್ರಮ ಹಂಚಿಕೊಂಡರು.

ಒಂದು ಪುಸ್ತಕ, ಒಂದು ಟೆಲಿವಿಶನ್‌ ಧಾರಾವಾಹಿ ಮಾಡದೇ ಇದ್ದದ್ದನ್ನು ಒಂದು ಯೂಟ್ಯೂಬ್‌ ಚಾನಲ್‌ ಮಾಡಿತ್ತು.

****

ಇದು ಕೇವಲ ಒಬ್ಬರ ಕತೆಯಲ್ಲ. ಇವತ್ತು ಪ್ರತಿಯೊಬ್ಬ ಸಾಧಕನೂ, ತನ್ನ ಆತ್ಮಚರಿತ್ರೆಯನ್ನು ದಾಖಲಿಸುತ್ತಲೇ ಇದ್ದಾನೆ. ಕನ್ನಡದಲ್ಲಿ ಈ ಆತ್ಮಕತೆಯನ್ನು ಬಿತ್ತರಿಸುವ ಇಪ್ಪತ್ತೈದಕ್ಕೂ ಹೆಚ್ಚು ಜನಪ್ರಿಯವಾದ ಯೂಟ್ಯೂಬ್‌ ಚಾನಲ್ಲುಗಳಿವೆ. ಅವುಗಳಲ್ಲಿರುವ ವಿಡಿಯೋ ತೆರೆದು ಕಣ್ಣಾಡಿಸಿದರೆ ಆಶ್ಚರ್ಯ ಆಗುತ್ತದೆ. ನಮಗೆ ಗೊತ್ತೇ ಇಲ್ಲದ ಎಷ್ಟೋ ಮಂದಿಯ ಆತ್ಮಚರಿತ್ರೆಯ ಪುಟಗಳು ಅವರದೇ ಮಾತುಗಳಲ್ಲಿ ಅವರದೇ ಶೈಲಿಯಲ್ಲಿ ದಾಖಲಾಗಿವೆ. ಅವುಗಳನ್ನು ರೆಕಾರ್ಡ್‌ ಮಾಡಲು ವಿಶೇಷ ಶ್ರಮವನ್ನಾಗಲೀ, ಅದ್ಭುತ ಕಲೆಗಾರಿಕೆಯಾಗಲೀ ಬಳಕೆಯಾಗಿಲ್ಲ. ಒಂದು ಕುರ್ಚಿಯಲ್ಲಿ ಕುಳಿತು ಮಾತಾಡುತ್ತಾ ಹೋದದ್ದನ್ನು ಕೆಮರಾ ದಾಖಲಿಸುತ್ತಾ ಹೋಗುತ್ತದೆ. ಕೇಳುವವರು ಸುಮ್ಮನೆ ಕೇಳುತ್ತಾ ಹೋಗಬೇಕು. ನಡುವೆ ಯಾರ ಹಸ್ತಕ್ಷೇಪವೂ ಇರುವುದಿಲ್ಲ.

ಇದು ಆತ್ಮಚರಿತ್ರೆಯ ಹೊಸ ಶೈಲಿ. ಇಲ್ಲಿ ಮಾತಾಡುವ ವ್ಯಕ್ತಿ ಪ್ರಸಿದ್ಧನೇನೂ ಆಗಿರಬೇಕಾಗಿಲ್ಲ. ಆತ ಪ್ರಸಿದ್ಧರ ಕುರಿತು ಮಾತಾಡಿದರೂ ಸಾಕು. ಒಬ್ಬ ಜನಪ್ರಿಯ ನಟನ ಕಾರ್‌ ಡ್ರೈವರ್‌ ಆ ನಟ ಏನು ತಿನ್ನುತ್ತಿದ್ದ, ಆತನನ್ನು ತಾನು ಹೇಗೆ ಶೂಟಿಂಗಿಗೆ ಕರೆದೊಯ್ಯುತ್ತಿದ್ದೆ ಎಂದು ಮಾತಾಡುತ್ತಾ ಹೋಗಬಹುದು. ಅದನ್ನು ಲಕ್ಷಾಂತರ ಮಂದಿ ನೋಡುತ್ತಾರೆ. ಒಬ್ಬ ನಿರ್ದೇಶಕ ತಾನು ಹೇಗೆ ಕಷ್ಟಪಟ್ಟು ಮೇಲೆ ಬಂದು ನಿರ್ದೇಶಕ ಆದೆ ಅನ್ನುವುದನ್ನು ಹೇಳಬಹುದು. ಹೇಗೆ ತನ್ನನ್ನು ಶೋಷಿಸಿದರು ಎಂದು ಮಾತಾಡಬಹುದು. ತನ್ನ ಕಷ್ಟಸುಖ, ಸಂಭ್ರಮ, ಸಂಕಟ, ಅವಮಾನ, ಸನ್ಮಾನ ಏನು ಬೇಕಿದ್ದರೂ ಎಷ್ಟುಬೇಕಿದ್ದರೂ ಹೇಳಿಕೊಳ್ಳಬಹುದು. ಅದಕ್ಕೆ ಬೇಡಿಕೆ ಇದೆ. ನಿಮ್ಮ ಕತೆ ನಮಗೆ ಹೇಳಿ ಅಂತ ಕೇಳುವುದಕ್ಕೆ ಲಕ್ಷಾಂತರ ಮಂದಿ ಕಾಯುತ್ತಿದ್ದಾರೆ.

'ಜೊತೆ ಜೊತೆಯಲಿ' ಟ್ರ್ಯಾಕ್ ಸಾಂಗ್‌ಗೆ 11 ತಿಂಗಳಲ್ಲಿ 2 ಕೋಟಿ ವೀಕ್ಷಣೆ 

ಹೊಂಬಿಸಿಲು ಮುಂತಾದ ಪ್ರಸಿದ್ಧ ಚಿತ್ರಗಳನ್ನು ನಿರ್ದೇಶಿಸಿದ ಗೀತಪ್ರಿಯರ ಒಂದು ಸಂದರ್ಶನ ಮಾಡಿ ಎಂದರೆ ಸಿನಿಮಾ ಪತ್ಪಿಕೆಗಳು ಹಿಂಜರಿಯಬಹುದು. ಆದರೆ ಯೂಟೂಬ್‌ ಚಾನಲ್ಲಿಗೆ ಅವರೇ ಬೇಕು. ಹುಣಸೂರು ಕೃಷ್ಣಮೂರ್ತಿಯವರನ್ನು ಚಿತ್ರರಂಗ ಮರೆತಿರಬಹುದು. ಆದರೆ ಅಜ್ಞಾತ ಕೇಳುಗ ಮರೆತಿಲ್ಲ. ಟಿಎನ್‌ ಬಾಲಕೃಷ್ಣ ಕಷ್ಟದಲ್ಲಿದ್ದಾಗ ರಾಜ್‌ಕುಮಾರ್‌ ಅವರ ಹಾಸಿಗೆ ಕೆಳಗೆ ಇಟ್ಟು ಹೋಗಿದ್ದ ದುಡ್ಡೆಷ್ಟುಅನ್ನುವ ಬಾಲಕೃಷ್ಣ ಲೈಫ್‌ ಸ್ಟೋರಿಯನ್ನು ಎರಡು ಲಕ್ಷ ಮಂದಿ ಮೈಯೆಲ್ಲ ಕಿವಿಯಾಗಿ ಕೇಳಿಸಿಕೊಳ್ಳುತ್ತಾರೆ.

ಮಿಮಿಕ್ರಿ ದಯಾನಂದ್‌ ಕಣ್ಣೀರ ಕತೆ, ರೇಣುಕಾ ಶರ್ಮ ಆತ್ಮಕತೆ, ರಜನಿಕಾಂತ್‌ ಆಪ್ತಮಿತ್ರನ ಆತ್ಮಕತೆ, ನಾಗತಿಹಳ್ಳಿ ಚಂದ್ರಶೇಖರ್‌ ಸಿನಿಮಾಕತೆ- ಹೀಗೆ ಯೂಟ್ಯೂಬು ಚಾನಲ್ಲಿನ ತುಂಬ ಕತೆಗಳದೇ ಸಾಮ್ರಾಜ್ಯ. ಯಾವುದೇ ಹಳೆಯ ಕತೆ ಬೇಕಿದ್ದರೂ ನೀವು ಯೂಟ್ಯೂಬ್‌ ಚಾನಲ್ಲಿಗೆ ಹೋಗಬೇಕು. ಅಲ್ಲಿ ಹುಡುಕಾಡಿದರೆ ಸದ್ಯಕ್ಕೆ ಸುದ್ದಿಯಲ್ಲಿಲ್ಲದ, ಒಂದು ಕಾಲದಲ್ಲಿ ಪ್ರಸಿದ್ಧರಾಗಿದ್ದವರ ಕತೆಗಳು ಸಿಗುತ್ತವೆ.

ಅವು ಸಣ್ಣಪುಟ್ಟಕತೆಗಳಲ್ಲ. ಕೆಲವು ಯೂಟ್ಯೂಬು ಚಾನಲ್ಲುಗಳಲ್ಲಿ ನೂರಕ್ಕೂ ಹೆಚ್ಚು ಆತ್ಮಕತೆಗಳಿವೆ. ಹಿರಿಯ ಸಾಹಿತಿಗಳು, ಸಂಗೀತಗಾರರು, ಸಿನಿಮಾ ನಟರು, ಸಂಗೀತ ನಿರ್ದೇಶಕರು, ಹಾಸ್ಯ ಕಲಾವಿದರು- ಎಲ್ಲರೂ ತಮ್ಮ ಕತೆಗಳನ್ನು ಗಂಟೆಗಟ್ಟಲೆ ಹೇಳಿಕೊಂಡಿದ್ದಾರೆ. ತಮ್ಮ ಬಗ್ಗೆ ಕತೆಗಳಿಲ್ಲದೇ ಇದ್ದವರು, ತಮಗೆ ಗೊತ್ತಿದ್ದವರ ಕತೆಗಳನ್ನು ಹೇಳಿದ್ದಾರೆ. ಉದಾಹರಣೆಗೆ ಶಂಕರ್‌ ನಾಗ್‌ ಕುರಿತು ಮುನ್ನೂರ ಮೂವತ್ತೆಂಟು ಕತೆಗಳಿವೆ. ಪೂರ್ಣಚಂದ್ರ ತೇಜಸ್ವಿಯವರ ಕುರಿತು ಐನೂರಕ್ಕೂ ಹೆಚ್ಚು ಕಥಾಪ್ರಸಂಗಳಿವೆ. ರಾಜ್‌ಕುಮಾರ್‌, ವಿಷ್ಣುವರ್ಧನ್‌- ಮೊದಲಾದ ಪ್ರಸಿದ್ಧರ ಕುರಿತ ಕತೆಗಳಿವೆ.

****

ಬರಹದ ಜಗತ್ತು ಕ್ರಮೇಣ ಮರೆಯಾಗುತ್ತಿದೆ ಅನ್ನುವುದಕ್ಕೆ ಇವು ಸಾಕ್ಷಿಯಂತಿವೆ. ಇಲ್ಲಿ ಅಕ್ಷರಗಳ ಹಂಗಿಲ್ಲ. ಯಾರೂ ಓದಬೇಕಾಗಿಲ್ಲ. ಮಾತುಗಳನ್ನು ಅವರವರ ದನಿಯಲ್ಲೇ ಕೇಳಬಹುದು. ಇದು ಅತಿ ಹೆಚ್ಚು ಕಾಣಿಸುವುದು ಆತ್ಮಚರಿತ್ರೆಯ ಪುಟಗಳಲ್ಲಿ. ಅದರ ಜೊತೆಗೆ ಸಣ್ಣಪುಟ್ಟಓದು ಕೂಡ ಮರೆಯಾಗುವಂಥ ವಿಡಿಯೋಗಳು ಇಲ್ಲಿ ಸಿಗುತ್ತವೆ. ಉದಾಹರಣೆಗೆ ಒಂದು ಕಾಲದಲ್ಲಿ ಪ್ರತಿಯೊಂದು ಅಡುಗೆ ಮನೆಯಲ್ಲೂ ಅಡುಗೆ ಪುಸ್ತಕ ಇರುತ್ತಿತ್ತು. ಇವತ್ತು ಆ ಜಾಗಕ್ಕೆ ಯೂಟ್ಯೂಬ್‌ ಚಾನಲ್ಲುಗಳು ಬಂದಿವೆ.

ಜ್ಯೂಸ್ ಕುಡೀತೀಯಾ ಎಂಬ Rap ಸಾಂಗ್ ಮೂಲಕ ಗಮನ ಸೆಳೆದ ವಿರಾಜ್ ಕನ್ನಡಿಗ! 

ಉಳುಮೆ ಮಾಡುವುದು ಹೇಗೆ, ತೆಂಗಿನಕಾಯಿ ಸುಲಿಯುವುದು ಹೇಗೆ, ರೇಷ್ಮೆ ಬೆಳೆಯುವುದು ಹೇಗೆ, ಪೆಟ್ರೋಲ್‌ ಪಂಪ್‌ ಆರಂಭಿಸುವುದು ಹೇಗೆ- ಎಂಬುದರಿಂದ ಹಿಡಿದು ಕೆಮ್ಮು ಬಂದರೆ ಏನು ಮಾಡಬೇಕು, ಹಾವು ಹಿಡಿಯುವುದು ಹೇಗೆ ಅನ್ನುವ ತನಕ ನೂರಾರು ಚಾನಲ್ಲುಗಳು ಮಾಹಿತಿ ನೀಡುತ್ತವೆ. ಅಕ್ಷರ ಲೋಕದಿಂದ ಓದುಗರನ್ನು ಸಂಪೂರ್ಣವಾಗಿ ವಿಮುಖವಾಗಿಸಿದ್ದು ಈ ಯೂಟ್ಯೂಬ್‌ ಚಾನಲ್ಲುಗಳೇ ಅನ್ನುವುದರ ಬಗ್ಗೆ ಅನುಮಾನ ಬೇಕಿಲ್ಲ.

ಇವತ್ತು ಒಂಚೂರು ಪ್ರತಿಭೆ, ಮಾತಾಡುವ ಶಕ್ತಿ, ಬೇಕಾದಷ್ಟುಪುರುಸೊತ್ತು ಇರುವ ಯಾರು ಬೇಕಿದ್ದರೂ ಯೂಟ್ಯೂಬು ಚಾನಲ್ಲಿನಲ್ಲಿ ಮಾತಾಡಬಹುದು. ಅಂದಹಾಗೆ, ಹಿಂದೆಲ್ಲ ಖಡಕ್‌ ಪೋಲಿಸ್‌ ಅಧಿಕಾರಿಗಳ ಕತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಕಂತುಕಂತಾಗಿ ಬರುತ್ತಿದ್ದವು. ಅವು ಈಗ ಯೂಬ್ಯೂಟ್‌ ಚಾನಲ್ಲುಗಳಲ್ಲಿ ಬಲು ಜನಪ್ರಿಯ. ಪುಸ್ತಕ ಬರೀರಿ ಅಂದಾಗ ಒಬ್ಬರು ಪೊಲೀಸ್‌ ಅಧಿಕಾರಿ ಹೇಳಿದರು:

ಪುಸ್ತಕ ಬರೆದರೆ ಪ್ರಕಾಶಕರನ್ನು ಹುಡುಕಬೇಕು. ಅವರು ಸಾವಿರವೋ ಎರಡು ಸಾವಿರವೋ ಪುಸ್ತಕ ಮಾರಾಟ ಮಾಡುತ್ತಾರೆ. ನಾನು ಅರ್ಧ ಗಂಟೆ ಮಾತಾಡಿದ್ದನ್ನು ಹತ್ತು ಲಕ್ಷ ಮಂದಿ ನೋಡುತ್ತಾರೆ. ಪುಸ್ತಕ ಯಾಕ್ರೀ ಬೇಕು!

ಓದು ಜನಮೇಜಯ ಈಗ ನೋಡು ಜನಮೇಜಯ ಆಗಿದೆ. ಕಂಟೆಂಟ್‌ ಅದೇ, ಫಾರ್ಮಾಟ್‌ ಮಾತ್ರ ಬೇರೆ!

ನಾವು ಮತ್ತೆ ಮೌಖಿಕ ಪರಂಪರೆಗೆ ಮರಳುತ್ತಿದ್ದೇವೆ ಅನ್ನಿಸುತ್ತಿಲ್ಲವೇ!