ನನ್ನ ನಂತರವೂ ರಂಗಶಂಕರ ಯಶಸ್ವಿಯಾಗಿ ಮುಂದುವರಿಯಬೇಕು: ಅರುಂಧತಿ ನಾಗ್!
'ಈ ಕ್ಷಣ ಸಂಪೂರ್ಣ ಇವೆಂಟ್‌ಫುಲ್ ಆಗಿದೆ’ ಅಂತ ಮುಕ್ತವಾಗಿ ನಕ್ಕರು ಅರುಂಧತಿ ನಾಗ್. ಅವರು ಹೇಳಿದ್ದು ಅಕ್ಷರಶಃ ನಿಜ. ರಂಗಶಂಕರದಲ್ಲಿ ಮೂರು ಸಂಭ್ರಮ ಒಟ್ಟೊಟ್ಟಿಗೇ ನಡೆಯುತ್ತಿವೆ. ಇಂದು ಶಂಕರನಾಗ್ ಅವರ ಜನ್ಮದಿನ. ಆ ಖುಷಿ ಒಂದೆಡೆ, ರಂಗಶಂಕರದಲ್ಲಿ ನಡೆಯುತ್ತಿರುವ ‘ಥಿಯೇಟರ್ ಫೆಸ್ಟಿವಲ್’ನ ಗೌಜು ಮತ್ತೊಂದೆಡೆ, ರಂಗ ಶಂಕರಕ್ಕೆ 15 ವರ್ಷವಾದ ಸಂಭ್ರಮ ಮಗದೊಂದೆಡೆ. ಈ ಎಲ್ಲ ಸಂಗತಿಗಳಿಗೂ ನೇರವಾಗಿ ಕನೆಕ್ಟ್ ಆಗುವ ಅರುಂಧತಿ ಮಾತಾಡ್ತಾರೆ..
ಪ್ರಿಯಾ ಕೆರ್ವಾಶೆ
ಶಂಕರ್‌ನಾಗ್ ಬರ್ತ್‌ಡೇ ಇವತ್ತು. ಎಲಿಟ್ ಕ್ಲಾಸ್ ಅವರನ್ನು ಹೇಗೆ ನೆನಪಿಸಿಕೊಳ್ಳುತ್ತಿದೆಯೋ ಗೊತ್ತಿಲ್ಲ, ಆದರೆ ನಾವು ನೀವು ರಸ್ತೆಗಿಳಿದರೆ ಎದುರು ಸಿಗೋ ಅಟೋರಿಕ್ಷಾದಲ್ಲಿ ಅವರ ಚಿತ್ರ ಇರುತ್ತೆ. ಇವ್ರ ನಮ್ಮ ಶಂಕ್ರಣ ಅಂತಾರೆ ಜನ. ಈ ನೆನಪಿಗೆ ಏನೆನ್ನುತ್ತೀರಿ?
ಇದೊಂದು ಮಹಾ ಅದ್ಭುತ. ಕೆಲವು ಸಲ ಪವಾಡ ಅನಿಸುತ್ತೆ. ಜನರ ಮನಸ್ಸಲ್ಲಿ ಈ ಥರ ಸ್ಥಾನ ಕಾಯ್ದುಕೊಳ್ಳೋದು ಸುಲಭ ಅಲ್ಲ. ಇದಕ್ಕೆ ‘ಹೋಪ್’ ಅಥವಾ ‘ಭರವಸೆ’ ಅಂತೀನಿ ನಾನು. ಜನಸಾಮಾನ್ಯನೊಬ್ಬ ಬಹಳ ಕಂಗಾಲಾದಾಗ ಯಾವುದೋ ಸಿನಿಮಾದಲ್ಲಿ ಮಾಡಿದ ಶಂಕರ್ ಪಾತ್ರ ಅಥವಾ ಸ್ವತಃ ಶಂಕರ್ ಅವನಿಗೆ ಭರವಸೆ ತುಂಬುತ್ತಾರೆ. ನಂಗೆ ಅಚ್ಚರಿ ಅನಿಸುತ್ತೆ, ಶಂಕರ್ ಸತ್ತಾಗ ಇನ್ನೂ ಹುಟ್ಟಿರದ ಹುಡುಗ ಜೀವನೋಪಾಯಕ್ಕೆ ಅಟೋ ಓಡಿಸ್ತಾನೆ, ಅದರಲ್ಲಿ ಶಂಕರ್ ಫೋಟೋ ಹಾಕಿ ಅಭಿಮಾನದಿಂದ ನೋಡುತ್ತಾನೆ. ಶಂಕರ್ ಡೈಲಾಗ್ ಉದುರಿಸ್ತಾನೆ, ಅವರ ಹಾಡಿಗೆ ಎಲ್ಲಿಲ್ಲದ ಜೋಶ್‌ನಲ್ಲಿ ಹೆಜ್ಜೆ ಹಾಕ್ತಾನೆ.. ಯಾವ ಕಲಾವಿದನಿಗೆ ಸಿಗುತ್ತೆ ಇಂಥಾ ಭಾಗ್ಯ!
ಶಂಕರ್ ಇಂದು ಇದ್ದಿದ್ರೆ.. ಅನ್ನುವ ಪ್ರಶ್ನೆ ನಿಮಗೆ ಬಹಳ ಸಲ ಬಂದಿರಬಹುದು, ಇನ್ನೊಮ್ಮೆ ಅದನ್ನೇ ಕೇಳ್ತೀನಿ. ಏಕೆಂದರೆ ಶಂಕರ್ ಮಹಾ ಕನಸುಗಾರ, ನಗರ ಅಭಿವೃದ್ಧಿಯಿಂದ ಹಿಡಿದು ಥಿಯೇಟರ್ ಅನ್ನು ಮತ್ತೊಂದು ಲೆವೆಲ್‌ಗೆ ಕೊಂಡೊಯ್ಯುವ ತನಕ ಏನೆಲ್ಲ ಯೋಜನೆಗಳಿದ್ದವು. ಅವರು ಇದ್ದಿದ್ದರೆ..
ಹೌದು. ಆದರೆ ಅವನು ಬರೀ ಕನಸುಗಾರ ಮಾತ್ರ ಅಲ್ಲ, ತಾನು ಕನಸಿಸಿದ್ದನ್ನು ಕಾರ್ಯಗತಗೊಳಿಸುವ ಹುಮ್ಮಸ್ಸೂ ಅವನಿಗಿತ್ತು. ಅವನು ತೀರಿಕೊಂಡಾಗ ಕೇವಲ 35 ವರ್ಷ. ಅಷ್ಟರಲ್ಲೇ ಅಷ್ಟೊಂದು ಭರವಸೆ ಹುಟ್ಟಿಸಿದವನು ಇದ್ದಿದ್ದರೆ ಅವುಗಳನ್ನು ಖಂಡಿತಾ ಅನುಷ್ಠಾನಕ್ಕೆ ತರುತ್ತಿದ್ದ. ಅವನಿಗೆ ರಂಗಭೂಮಿಯನ್ನು ಬೆಳೆಸುವ ಜೊತೆಗೆ ಬೆಂಗಳೂರನ್ನು ಭಿನ್ನ ಬಗೆಯಲ್ಲಿ ಕಟ್ಟುವ ಕನಸೂ ಇತ್ತು. ಇಷ್ಟಾದರೂ ಅವನೊಬ್ಬ ಮನುಷ್ಯ ಅನ್ನೋದನ್ನು ನಾವು ಒಪ್ಕೊಳ್ಳಲೇ ಬೇಕು. ಅವನಿಂದ ಒಂದಿಷ್ಟು ತಪ್ಪುಗಳೂ ಆಗುತ್ತಿದ್ದವು. ಅವನನ್ನು, ಅವನ ಕಲ್ಪನೆಗಳನ್ನು ಜನ ಪುರಾಣದ ಥರ ಮನಸ್ಸಲ್ಲಿಟ್ಟುಕೊಂಡಿದ್ದಾರೆ. ಆತ ತೀರಿ ಹೋಗಿ ಮೂವತ್ತು ವರ್ಷ ಕಳೆದರೂ, ನಿನ್ನೆ ಮೊನ್ನೆ ಅವನು ಗತಿಸಿದಂತೆ ಜನರ ನಡೆ ನುಡಿ ಇದೆ. ಎಷ್ಟೋ ಜನ ಇವತ್ತಿಗೂ
ನನ್ನ ಬಳಿ ಅದೇ ಟೋನ್‌ನಲ್ಲೇ ಮಾತನಾಡುತ್ತಾರೆ.
ಅವರಿದ್ದಾಗ ಬರ್ತ್‌ಡೇಗೆ ಹೇಗೆ ವಿಶ್ ಮಾಡ್ತಿದ್ರಿ?
ಅವನ ಬರ್ತ್‌ಡೇ ದಿನ ಅವನನ್ನು ಮದುವೆಯೇ ಆದ್ನಲ್ಲಾ(ನಗು). ಅವನ ಬದುಕಿನ ಭಾಗವೇ ಆಗೋದಕ್ಕಿಂತ ಮತ್ತೇನು ಕೊಡಲು ಸಾಧ್ಯ.. ಅವನ ಬರ್ತ್‌ಡೇ, ಜೊತೆಗೆ ನಮ್ಮ ಆ್ಯನಿವರ್ಸರಿಯನ್ನು ನಾವೇನು ಕೇಕ್ ಕಟ್ ಮಾಡಿ ಸೆಲೆಬ್ರೇಟ್ ಮಾಡಿದ್ದಿಲ್ಲ. ಬೆಂಗಳೂರಿನಲ್ಲೇ ಹೊಟೇಲ್‌ನಲ್ಲಿ ಒಂದು ರೂಮ್ ಮಾಡುತ್ತಿದ್ದೆವು. ಅಲ್ಲಿ ಟಿವಿಯಲ್ಲಿ ಯಾವುದೇ ಸಿನಿಮಾ ನೋಡ್ತಾ, ಸ್ಪೋರ್ಟ್ಸ್ ಎನ್ ಜಾಯ್ ಮಾಡ್ತಾ, ಜೊತೆಗೇ ಊಟ ಮಾಡ್ತಾ ಕಳೀತಿದ್ವಿ. ಮಗಳು ಹುಟ್ಟಿದ ಮೇಲೆ ಅವಳೂ ನನ್ನ ಜೊತೆಗಿರುತ್ತಿದ್ದಳು.
ಶಂಕರ್ ಹುಟ್ಟುಹಬ್ಬದ ಸಂದರ್ಭದಲ್ಲೇ ರಂಗಶಂಕರ ಥಿಯೇಟರ್ ಫೆಸ್ಟಿವಲ್ ಆಗ್ತಿದೆ. ‘ನಕ್ಕು ಮರೆಯುವ ಹಬ್ಬ’ ಅನ್ನುವ ಕಾಂಸೆಪ್ಟ್. ಮಿಲಾನ್ ಕುಂದೇರ ಅವರ ‘ನೆನಪಿನ ವಿರುದ್ಧದ ಮರೆವು’ ಎಂಬ ಹೆಚ್ಚುತ್ತಿರುವ ಪ್ರಜಾಪ್ರಭುತ್ವ ವಿರೋಧಿ ನಿಲುವಿಗೆ ಪ್ರತಿಕ್ರಿಯೆಯಾಗಿ ಈ ಬಾರಿಯ ಫೆಸ್ಟಿವಲ್ ಇದೆ. ಆ ಬಗ್ಗೆ ಹೇಳಿ?
ಈ ಎಲ್ಲ ಕಾನ್ಸೆಪ್ಟ್ ಸಿದ್ಧಪಡಿಸಿದ್ದು ಸೂರಿ (ಸುರೇಂದ್ರನಾಥ್) ಮತ್ತು ಇನ್ನೊಂದು ಸಂಸ್ಥೆಯೂ ಜೊತೆಗೂಡಿದೆ. ಬಂದು ನಾಟಕ ನೋಡೋದಷ್ಟೇ ನನ್ನ ಜವಾಬ್ದಾರಿ. ಹೌದು, ಇದು ಪ್ರಜ್ಞಾಪೂರ್ವಕವಾಗಿಯೇ ತೆಗೆದುಕೊಂಡ ನಿರ್ಧಾರ. ಏಕೆಂದರೆ ರಂಗಶಂಕರ ನನ್ನ ನಂತರವೂ ಹೀಗೇ ನಡೆದುಕೊಂಡು ಹೋಗಬೇಕು. ನನಗೇ ಕೊನೆಯಾಗಬಾರದು. ಅದಕ್ಕೋಸ್ಕರ ಅವರಿಗೆ ಎಲ್ಲ ಜವಾಬ್ದಾರಿ ಕೊಟ್ಟು ನಿರಾಳತೆಯಿಂದಿದ್ದೇನೆ.
ಈ ಬಾರಿ ಮೊದಲ ದಿನ ಪ್ರದರ್ಶನವಾದ ನಾಟಕ ‘ನವ’. ನಾವು ಕಂಡರೂ ಕಾಣದಂತೆ ನಿರ್ಲಕ್ಷಿಸುವ, ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುತ್ತಾ ಬಂದಾಗ ಕಾರಿನ ಗ್ಲಾಸ್ ಏರಿಸುವ ಆ ಟ್ರಾನ್ಸ್‌ಜೆಂಡರ್ಸ್ ಮಾಡಿದ ನಾಟಕ. ಆ ಅಮಾಯಕರ ಪ್ರತಿಭೆಗೆ ವೇದಿಕೆ ಒದಗಿಸಿದ್ದು ರಂಗಶಂಕರದ ಹೆಮ್ಮೆ. ಮರುದಿನ ‘ಹೆಲೋ ಫಾರ್ ಮಹೇಶ್’ ನಾಟಕ. ಸಣ್ಣ ಹಳ್ಳಿಯಲ್ಲಿ ಬರೀ ಹೆಣ್ಣುಮಕ್ಕಳೇ ಸೇರಿಕೊಂಡು ಅವರದೇ ರೇಡಿಯೋ ಆರಂಭಿಸಿ ಆ ಮೂಲಕ ತಮ್ಮ ಆಂತರ್ಯವನ್ನು ತೆರೆದಿಡುವ ಸಬ್ಜೆಕ್ಟ್. ದೆಹಲಿಯ ಬಹಳ ಬಡತನದ ಹಿನ್ನೆಲೆಯಿಂದ ಬಂದ 14 ಮುಸ್ಲಿಮ್ ಹುಡುಗಿಯರು ಸಂಪೂರ್ಣವಾಗಿ ತೊಡಗಿಸಿಕೊಂಡ ನಾಟಕವಿದು. ಕೊನೆಯ ದಿನ ಕಾಶ್ಮೀರದ ಇಂದಿನ ಸ್ಥಿತಿಗೆ ಕನ್ನಡಿ ಹಿಡಿಯುವ ನಾಟಕ ಪ್ರದರ್ಶನವಿದೆ. ಪ್ರಜಾಪ್ರಭುತ್ವದಲ್ಲಿ ಒಂದು ಸಮುದಾಯದ ಜನರಿಗಾಗುವ ಅನ್ಯಾಯವನ್ನು ನಾಟಕ ಸೂಕ್ಷ್ಮವಾಗಿ ಪ್ರಶ್ನಿಸುತ್ತಾ ಹೋಗುತ್ತದೆ.
ಈ ಫೆಸ್ಟಿವಲ್‌ನಲ್ಲಿ ಪ್ರತೀ ವರ್ಷ ಒಬ್ಬ ಯುವ ಸಾಧಕನಿಗೆ ಶಂಕರ್ ಹೆಸರಿನಲ್ಲಿ ಒಂದು ಪ್ರಶಸ್ತಿ ಕೊಡುತ್ತೇವೆ. 40 ವರ್ಷದೊಳಗಿನ ಕಲಾವಿದರಿಗೆ ಕೊಡೋದು. 1 ಲಕ್ಷದಷ್ಟು ಮೊತ್ತದ ಪ್ರಶಸ್ತಿಯದು. ಅದನ್ನು ಈ ಬಾರಿ ಶಂಕರ್ ವೆಂಕಟೇಶ್ವರನ್ ಅವರಿಗೆ ಕೊಡುತ್ತಿದ್ದೇವೆ. ಆತ ಬಹಳ ಚಿಕ್ಕ ವಯಸ್ಸಿನಲ್ಲಿ ಇಬ್ಸನ್ ಸ್ಕಾಲರ್‌ಶಿಪ್ ಪಡೆದ ಕಲಾವಿದ. ಬಹಳ ರಂಗಪ್ರಯೋಗ ಮಾಡಿದ್ದಾನೆ.
ರಂಗ ಶಂಕರಕ್ಕೆ 15 ವರ್ಷ ತುಂಬಿದೆ. ಎಲ್ಲ ವರ್ಗದ ಜನರನ್ನು ನಾಟಕ ಪ್ರೀತಿಯತ್ತ ಕರೆದೊಯ್ಯುವಲ್ಲಿ ರಂಗಶಂಕರ ಯಶಸ್ವಿಯಾಗಿದೆ ಅನಿಸುತ್ತಾ?
ಒಂದರ್ಥದಲ್ಲಿ ಹೌದು, ಇನ್ನೊಂದು ಅರ್ಥದಲ್ಲಿ ಅಲ್ಲ. ನಮ್ಮ ನಾಟಕಕ್ಕೆ ಬರುವ ಪ್ರೇಕ್ಷಕರಲ್ಲಿ ಮಧ್ಯಮವರ್ಗದವರೇ ಅಧಿಕ. ಕೂಲಿ ಮಾಡುವ ಒಬ್ಬ ವ್ಯಕ್ತಿ ಇಲ್ಲಿಗೆ ಬರಲ್ಲ. ಆದರೆ ಅವರೂ ಬರಬೇಕು ಅನ್ನುವುದು ನಮ್ಮ ಆಸೆ. ಏಕೆಂದರೆ ಇವತ್ತು ಎಂಥವರೂ 200 ರುಪಾಯಿ ಕೊಟ್ಟು ಐನಾಕ್ಸ್‌ನಲ್ಲಿ ಸಿನಿಮಾ ನೋಡ್ತಾರೆ. ಆದರೆ ನಾಟಕದ ವಿಷಯಕ್ಕೆ ಬಂದರೆ ದುಡ್ಡು ಸ್ವಲ್ಪ ಹೆಚ್ಚಾಯ್ತೇನೋ ಅಂದುಕೊಳ್ಳುತ್ತಾರೆ. ಹಾಗಂದುಕೊಳ್ಳದೇ ನಾಟಕವೂ ಅವರ ಪ್ರೀತಿಯಾಗಬೇಕು ಅಂದುಕೊಳ್ಳುವೆ.
ರಂಗ ಶಂಕರ ಅಂದರೆ ಅದು ಶಂಕರ್ ಕನಸು ಅಂತಾರೆ ಜನ. ಹಾಗಿದ್ದರೆ ರಂಗಶಂಕರ ಕಟ್ಟಿ ಬೆಳೆಸುವಲ್ಲಿ ಅರುಂಧತಿ ಕನಸುಗಳೇನಿದ್ದವು?
ನಾವು ಕಲಾವಿದರು. ಆದರೆ ನಮ್ಮ ಮನೆಯಲ್ಲೇ ನಾಟಕ ರಿಹರ್ಸಲ್ ಮಾಡಿದರೆ ಎಷ್ಟು ಚೆನ್ನಾಗಿರುತ್ತೆ ಅನ್ನೋ ಕನಸು ಯಾವ ಕಲಾವಿದನಿಗೆ ಇರಲ್ಲ ಹೇಳಿ. ಸಿ.ಆರ್ ಸಿಂಹ ಅವರಂಥವರು ಈ ಕಲ್ಪನೆಯನ್ನು ಅನುಷ್ಠಾನಕ್ಕೂ ತಂದರು. ಅವರ ಮನೆಯಲ್ಲೇ ಒಂದು ಸಣ್ಣ ವೇದಿಕೆ ಮಾಡಿ ಅಲ್ಲಿ ನಾಟಕ ಮಾಡುತ್ತಿದ್ದರು. ಹಾಗಾಗಿ ರಂಗ ಶಂಕರ ಕೇವಲ ಶಂಕರ್ ಕನಸು ಮಾತ್ರ ಅಲ್ಲಾ, ಅದು ರಮೇಶ್ ಭಟ್ ಕನಸೂ ಹೌದು, ನಾಟಕಾಸಕ್ತರೆಲ್ಲರ ಕನಸೂ ಹೌದು. ಆದರೆ ಇದರ ನೇತೃತ್ವಕ್ಕೆ ಒಬ್ಬ ಮುಂದಾಳು ಬೇಕೇ ಬೇಕು. ಶಂಕರ್ ನನ್ನು ಕಳೆದುಕೊಂಡ ಮೇಲೆ ನನಗೆ ಸಂಸಾರ ಇಲ್ಲ. ನಾನು ಮಗಳನ್ನು ನೋಡಿಕೊಳ್ಳುವ ಜೊತೆಗೆ ಈ ಕನಸಿನ ಬೆನ್ನತ್ತಿದೆ. ಸಾಂಸಾರಿಕ ಹೊಣೆಗಾರಿಕೆ ಇಲ್ಲದ ಕಾರಣ ಈ ತಪಸ್ಸಿಗೆ ಸಂಸಾರಸ್ಥರಂಥಾ ಆತಂಕಗಳಿರಲಿಲ್ಲ. ಸಂಪೂರ್ಣ ಸಮರ್ಪಿಸಿಕೊಂಡೆ. ಇಂದು ಅದು ಬೆಳೆದ ರೀತಿಯನ್ನು ಕಂಡರೆ ಸಾರ್ಥಕ ಅನಿಸುತ್ತದೆ, ಇದು ನನಗೆ ಒದಗಿಬಂದ ಭಾಗ್ಯ ಅನಿಸುತ್ತ