ಲವ್ಲೆಟರ್ ಜೊತೆ ಸಿಕ್ಕಿಬಿದ್ದ ತಾಂಡವ್: ಅಮ್ಮನಿಗೆ ಪ್ರಾಮಾಣಿಕ ಮಗನಾಗ್ಬೇಕಂತೆ, ಹೆಂಡ್ತಿಗೆ?
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ತಾಂಡವ್ ಲವ್ಲೆಟರ್ ಜೊತೆ ಸಿಕ್ಕಿಬಿದ್ದಿದ್ದಾನೆ. ಇನ್ನಾದರೂ ಅಮ್ಮನಿಗೆ ತಕ್ಕ ಪ್ರಾಮಾಣಿಕ ಮಗನಾಗು ಅಂತಿದ್ದಾರೆ ಕಮೆಂಟಿಗರು. ಹಾಗಿದ್ದರೆ ಪತ್ನಿಗೆ ತಕ್ಕ ಪತಿಯಾಗೋದು ಬೇಡ್ವಾ?
ದಾಂಪತ್ಯ ಜೀವನದಲ್ಲಿ ಪತಿ-ಪತ್ನಿ ಇಬ್ಬರೂ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎನ್ನುವ ಮಾತಿದೆ. ಕುಟುಂಬ ಎಂದ ಮೇಲೆ ದಂಪತಿ ನಡುವೆ ಎಷ್ಟೇ ಪ್ರೀತಿ ಇದ್ದರೂ ಒಂದಷ್ಟು ಮಾತು-ಕತೆ, ವಿರಸ-ಮುನಿಸು ಎಲ್ಲವೂ ಇದ್ದೇ ಇರುತ್ತದೆ. ಆ ಸಮಯದಲ್ಲಿ ಇಬ್ಬರೂ ಹೊಂದಾಣಿಕೆ ಮಾಡಿಕೊಂಡು ಹೋದರೆ ಜೀವನ ಸುಗಮವಾಗಿ ನಡೆಯುತ್ತದೆ ಎನ್ನುವುದು ನಿಜವೇ. ಆದರೆ ಕಾಲ ಎಷ್ಟೇ ಬದಲಾದರೂ ಹೆಂಡತಿಯಾದವಳೇ ಸ್ವಲ್ಪ ಸಂಯಮದಿಂದ ವರ್ತಿಸಬೇಕು, ಸಂಸಾರದಲ್ಲಿ ಹೊಂದಿಕೊಂಡು ಹೋಗಬೇಕು, ಗಂಡ ಹಾಗೂ ಆತನ ಕುಟುಂಬದವರು ಏನೇ ಹೇಳಿದರೂ ಅದನ್ನು ಅನುಸರಿಸಿಕೊಂಡು, ಸಹಿಸಿಕೊಂಡು ಹೋಗಬೇಕು ಎನ್ನುವ ಮಾತೇ ಬಹುತೇಕ ಕಡೆಗಳಲ್ಲಿ ಕೇಳಿಬರುತ್ತದೆ. ಗಂಡ ಏನೇ ತಪ್ಪು ಮಾಡಿದರೂ ಹೆಂಡತಿಯಾದವಳು ತಾಳ್ಮೆ ವಹಿಸಬೇಕು ಎನ್ನುತ್ತಾರೆಯೇ ವಿನಾ ಈ ಮಾತು ಗಂಡಿಗೆ ಹೇಳುವುದು ಕಮ್ಮಿಯೇ. ತಾಯಿಗೆ ತಕ್ಕ ಮಗನಾಗು, ಅಪ್ಪನ ಮರ್ಯಾದೆ ಕಾಪಾಡುವ ಮಗನಾಗು, ಮಕ್ಕಳಿಗೆ ತಕ್ಕ ಅಪ್ಪನಾಗು ಎನ್ನುವ ಮಾತುಗಳು ಕೇಳಿ ಬರುತ್ತದೆಯೇ ವಿನಾ, ಪತ್ನಿಗೆ ತಕ್ಕ ಪತಿಯಾಗಿ ಬಾಳು ಎಂಬ ಮಾತು ಕೇಳಿ ಬರುವುದೇ ಇಲ್ಲವೆನ್ನಬಹುದೇನೋ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮಿ (Bhagyalakshmi) ಧಾರಾವಾಹಿಯ ಪ್ರೊಮೋಕ್ಕೆ ಬಂದಿರುವ ಕಮೆಂಟ್ಸ್ಗಳತ್ತ ಒಮ್ಮೆ ದೃಷ್ಟಿ ಹಾಯಿಸಿದರೆ, ಇಂದಿಗೂ ಈ ಮಾತು ಎಷ್ಟು ಜನಜನಿತ ಎನ್ನುವುದು ತಿಳಿಯುತ್ತದೆ. ಇದು ಧಾರಾವಾಹಿಯಾದರೂ, ಜನರ ಮನಸ್ಥಿತಿಯನ್ನು ಅರಿತುಕೊಳ್ಳುವುದಕ್ಕೆ ಇದೊಂದು ವೇದಿಕೆಯೂ ಆಗಿರುತ್ತದೆ. ದಿನದಿನಕ್ಕೂ ಕುತೂಹಲ ಕೆರಳಿಸುತ್ತಿರುವ ಈ ಧಾರಾವಾಹಿ ಒಂದು ಇಂಟರೆಸ್ಟಿಂಗ್ ಘಟ್ಟಕ್ಕೆ ಬಂದು ನಿಂತಿದೆ. ಹೆಚ್ಚು ಓದಿಲ್ಲದ ಭಾಗ್ಯಾ ಸಂಸ್ಕಾರ ಇರೋ ಹೆಣ್ಣು ಮಗಳು. ಸಿರಿವಂತ ತಾಂಡವ್ ಮದುವೆಯಾಗಿದ್ದಾಳೆ. ಆದರೆ, ಅವನಿಗೋ ಇವಳ ಕಂಡ್ರೆ ತಾತ್ಸಾರ. ಭಾಗ್ಯಾಳ ವ್ಯಕ್ತಿತ್ವಕ್ಕೆ ಬೆಲೆ ಕೊಡೋ ಅತ್ತೆ ಇವಳನ್ನು ಓದಿಸಬೇಕು ಅಂತ ಮುಂದಾಗಿದ್ದಾಳೆ. ಅದಕ್ಕೆ ಕಲ್ಲು ಹಾಕಲು ತಾಂಡವ್ ಶತಯಾ ಗತಾಯ ಯತ್ನಿಸುತ್ತಿದ್ದು, ಅತ್ತೆ-ಸೊಸೆಗೆ ಜಗಳ ತಂದಿಡಲು ಹತ್ತು ಹಲವು ಪ್ಲ್ಯಾನ್ ಮಾಡುತ್ತಿದ್ದಾನೆ. ಇದರ ಬೆನ್ನಲ್ಲೇ ಇನ್ನೊಬ್ಬಳನ್ನು ಈತ ಪ್ರೀತಿಸುತ್ತಿದ್ದು, ಅದರ ಬಣ್ಣವೀಗ ಬಯಲಾಗಿದೆ.
ಮಹಿಳೆಯರು ವಾಷ್ರೂಮ್ನಲ್ಲಿ ಹೆಚ್ಚೊತ್ತು ಇರೋದ್ಯಾಕೆ: ಬಾತ್‌ರೂಮಲ್ಲೇ ವೀಡಿಯೋ ಮಾಡಿದ ಸತ್ಯ ಸೀರಿಯಲ್ ನಟಿ
ಭಾಗ್ಯಳ ಅಮ್ಮ ಸುನಂದಾ (Sunanada) ತನ್ನ ಅಳಿಯನ ಪ್ರೇಮ ಪತ್ರಗಳನ್ನು ನೋಡಿಬಿಟ್ಟಿದ್ದಾಳೆ. ಅತ್ತೆ ಲವ್ ಲೆಟರ್ ನೋಡಿದರೆಂದು ಎಲ್ಲಾ ಲವ್ ಲೆಟರ್ಗಳನ್ನು ತಾಂಡವ ಸುಟ್ಟುಹಾಕಿದ್ದರೂ ಎರಡು ಉಳಿದುಕೊಂಡು ಬಿಟ್ಟಿದೆ. ಅದನ್ನು ಎಲ್ಲರ ಎದುರು ಅತ್ತೆ ತೋರಿಸಿದ್ದಾರೆ. ಇದನ್ನು ಸುಟ್ಟು ಹಾಕಿದರೂ ಹೇಗೆ ಉಳಿದುಕೊಳ್ತು ಎನ್ನೋ ಯೋಚನೆಯಲ್ಲಿ ತಾಂಡವ್ ಇದ್ದರೆ ಅವನ ಬಂಡವಾಳವನ್ನು ಅತ್ತೆ ಬಯಲು ಮಾಡಿದ್ದಾರೆ. ಆಗ ರೇಗಾಡುವ ಅತ್ತೆ ಸುನಂದಾ, ನಿನ್ನೆನೇ ರೋಡ್ನಲ್ಲಿ ಸುಟ್ಟುಹಾಕಿದ್ನಲ್ಲ, ಇದು ಹೇಗೆ ಉಳಿದುಕೊಳ್ತು ಅಂತ ಯೋಚ್ನೆ ಮಾಡ್ತಾ ಇದ್ದೀಯಾ, ನೀನು ಸುಟ್ಟು ಹಾಕಿದ ತಕ್ಷಣ ಪ್ರೇಮ ಪುರಾಣ ಮುಚ್ಚಿಹೋಗತ್ತೆ ಅಂದುಕೊಳ್ಳಬೇಡ, ದೇವರೆಲ್ಲಾ ನೋಡ್ತಾ ಇರುತ್ತಾನೆ ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇದನ್ನು ಕೇಳಿ ಭಾಗ್ಯ ಹಾಗೂ ತಾಂಡವ್ ಮನೆಯವರಿಗೆ ಶಾಕ್ ಆಗುತ್ತದೆ. ಭಾಗ್ಯಳ ಅಪ್ಪ ಕೂಡ, ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ, ತಪ್ಪಿತಸ್ಥರ ವಿರುದ್ಧ ಏನಾದರೂ ಸಾಕ್ಷಿ ಉಳಿಸಿರ್ತಾನೆ ಎನ್ನುತ್ತಾರೆ ಅಪ್ಪ.
ತಾಂಡವ್ ಅಮ್ಮ ಶಾಕ್ ಆಗಿ, ತಮ್ಮ ಮಗನ ಮೇಲೆ ವಿನಾಕಾರಣ ಆರೋಪ ಹೊರಿಸಬೇಡಿ ಎನ್ನುತ್ತಾರೆ. ಆಗ ಸುನಂದಾ ಅವರು, ನಿಮ್ಮ ಮಗನ ಮುಖವಾಡ ಕಳಚಿ ಬಿದ್ದಿದೆ. ಸಾಕ್ಷಿಯನ್ನು ಸುಟ್ಟುಹಾಕಿ ಗೆದ್ದೆ ಅಂತ ಮನೆಗೆ ಬಂದಿದ್ದಾನೆ, ಹೇಸಿಗೆ ಮನುಷ್ಯ. ನಿಮ್ಮ ಮಗನ ಪ್ರೇಮ ಪತ್ರ ಇವು, ಕಳ್ಳಾಟಕ್ಕೆ ಸಿಕ್ಕಿರೋ ಸಾಕ್ಷಿ ಇವು. ಅವನ ಕಪಾಟಿನಲ್ಲಿಯೇ ಇತ್ತು. ಬೀಗ ಹಾಕಿ ಇಟ್ಟಿದ್ದ ಎಂದು ಹೇಳಿದಾಗ ಎಲ್ಲರೂ ಪುನಃ ಶಾಕ್ಗೆ ಒಳಗಾಗುತ್ತಾರೆ. ಈ ಪ್ರೋಮೋ ನೋಡಿದ ಹಲವರು ಇದನ್ನು ಕನಸು ಎಂದು ಮಾತ್ರ ಬಿಂಬಿಸಬೇಡಿ, ತಾಂಡವ್ (Tandav) ಗುಟ್ಟು ನಿಜವಾಗಿಯೂ ರಟ್ಟು ಮಾಡಿ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಇನ್ನಾದರೂ ಅಮ್ಮನಿಗೆ ಪ್ರಾಮಾಣಿಕ ಮಗನಾಗಿ ಇರು ಅಂದಿದ್ದಾರೆ. ಆದರೆ, ಭಾಗ್ಯಲಕ್ಷ್ಮಿ ಅಷ್ಟು ಒಳ್ಳೆಯ ಪತ್ನಿ. ಗಂಡನಿಗಾಗಿ ಜೀವನವನ್ನೇ ಸಮರ್ಪಿಸಿದವಳು. ಇಷ್ಟಾದರು ಕೂಡ ಹೆಂಡತಿಗೆ ಪ್ರಾಮಾಣಿಕನಾಗಿರು ಅಂತ ಮಾತ್ರ ನೆಟ್ಟಿಗರು ಎಲ್ಲಿಯೂ ಹೇಳಿಲ್ಲ. ಇದರ ಅರ್ಥ ಅಮ್ಮನಿಗೆ ಪ್ರಾಮಾಣಿಕ ಮಗನಾದರೆ ಸಾಕಾ, ಪತ್ನಿಗೆ ಪ್ರಾಮಾಣಿಕವಾಗಿರುವುದು ಬೇಡವಾ ಎನ್ನುವ ಸಂದೇಹ ಹುಟ್ಟುತ್ತದೆ.
ಮಿಡಲ್ ಕ್ಲಾಸಲ್ಲಿ ಮಗಳ ಮದುವೆ ಕನಸು, ಸಂಬಂಧದ ಬಾಂಡಿಂಗ್ ವ್ಯಾಖ್ಯಾನಿಸಿದ ಅಮೃತಧಾರೆ