ಕಾಮಿಡಿ ಕಿಲಾಡಿಗಳು ಖ್ಯಾತಿಯ ಹುಲಿ ಕಾರ್ತಿಕ್, RCB ಪಂದ್ಯ ವೀಕ್ಷಿಸಲು ಬಡ ಅಭಿಮಾನಿಗಳ ಕಷ್ಟದ ಬಗ್ಗೆ ಧ್ವನಿ ಎತ್ತಿದ್ದಾರೆ. ದುಬಾರಿ ಟಿಕೆಟ್, ಪ್ರಭಾವಿಗಳಿಗೆ ಆದ್ಯತೆ, ಕ್ರೀಡಾಂಗಣದೊಳಗಿನ ಬೆಲೆ ಏರಿಕೆ ಖಂಡಿಸಿ, ವಿರಾಟ್ ಕೊಹ್ಲಿ ಹಾಗೂ ಆಡಳಿತ ಮಂಡಳಿಗೆ ಬಡವರಿಗೆ ಮೀಸಲಾತಿ ನೀಡುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು (ಏ.19): ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಎಂದರೆ ಕೇವಲ ಒಂದು ತಂಡವಲ್ಲ, ಅದು ಕನ್ನಡಿಗರ ಎಮೋಷನ್. ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಅವರ ಒಂದು ಸಣ್ಣ ಝಲಕ್ ನೋಡಲು ಲಕ್ಷಾಂತರ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಆದರೆ, ಈ 'ಕಿಂಗ್ ಕೊಹ್ಲಿ'ಯನ್ನು ನೋಡುವ ಭಾಗ್ಯ ಕೇವಲ ಹಣವಂತರಿಗೆ ಮತ್ತು ಪ್ರಭಾವಿಗಳಿಗೆ ಮಾತ್ರ ಸೀಮಿತವಾಗಿದೆಯೇ? ಇಂತಹದೊಂದು ಕಟು ಸತ್ಯವನ್ನು 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟ ಹುಲಿ ಕಾರ್ತಿಕ್ ಬಿಚ್ಚಿಟ್ಟಿದ್ದಾರೆ. ಈ ವಿಡಿಯೋ ಈಗ 'ವಿರಾಟ್ ಕೊಹ್ಲಿ ಅವರಿಗೆ ತಲುಪಲಿ' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ವೈರಲ್ ಆಗುತ್ತಿದೆ.
ಕೊಹ್ಲಿ ನೋಡುವ ಆಸೆ ಬಡವರಿಗಿಲ್ಲವೇ?
ನಿನ್ನೆ ನಡೆದ ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಸೋಲಿನಿಂದ ಕಂಗೆಟ್ಟಿರುವ ಅಭಿಮಾನಿಗಳ ನಡುವೆಯೇ ಕಾರ್ತಿಕ್ ಅವರು ಒಂದು ಗಂಭೀರ ವಿಷಯದ ಮೇಲೆ ಬೆಳಕು ಚೆಲ್ಲಿದ್ದಾರೆ. 'ವಿರಾಟ್ ಕೊಹ್ಲಿ ಅವರನ್ನು ಕಣ್ಣಾರೆ ನೋಡಬೇಕು ಎನ್ನುವುದು ಪ್ರತಿಯೊಬ್ಬ ಬಡ ಅಭಿಮಾನಿಯ ಕನಸು. ಆದರೆ ಚಿನ್ನಸ್ವಾಮಿ ಸ್ಟೇಡಿಯಂನ ಪರಿಸ್ಥಿತಿ ನೋಡಿದರೆ ಬಡವರಿಗೆ ಅಲ್ಲಿ ಜಾಗವೇ ಇಲ್ಲದಂತಾಗಿದೆ. ಟಿಕೆಟ್ ಖರೀದಿಸಲು ಹೋದರೆ ದುಡ್ಡು ಮತ್ತು ಪವರ್ ಇರುವವರಿಗೆ ಮಾತ್ರ ಮೊದಲ ಆದ್ಯತೆ ಸಿಗುತ್ತಿದೆ. ಸಾಮಾನ್ಯ ಜನರಿಗೆ ಟಿಕೆಟ್ ಸಿಗುವುದು ಗಗನಕುಸುಮವಾಗಿದೆ' ಎಂದು ಕಾರ್ತಿಕ್ ಬೇಸರ ಹೊರಹಾಕಿದ್ದಾರೆ.
ಸ್ಟೇಡಿಯಂ ಒಳಗೆ ಬೆಲೆ ಏರಿಕೆಯ ಸುಲಿಗೆ!
ಪಂದ್ಯ ನೋಡಲು ಬಂದ ಬಡ ಅಭಿಮಾನಿಗಳನ್ನು ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಕಾರ್ತಿಕ್, 'ಕಷ್ಟಪಟ್ಟು ಟಿಕೆಟ್ ಪಡೆದು ಒಳಗೆ ಹೋದರೆ, ಅಲ್ಲಿ ಒಂದು ನೀರಿನ ಬಾಟಲ್ ಅಥವಾ ಚಿಪ್ಸ್ ಪ್ಯಾಕೆಟ್ ಬೇಕೆಂದರೂ ಹೊರಗಿನ ಬೆಲೆಗಿಂತ ಎರಡು ಪಟ್ಟು ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ವಿರಾಟ್ ಕೊಹ್ಲಿ ಅವರನ್ನು ನೋಡಲು ಬರುವ ಸಾಮಾನ್ಯ ಅಭಿಮಾನಿ ಇಷ್ಟೊಂದು ಹಣ ಎಲ್ಲಿಂದ ತರಬೇಕು? ಸ್ಟೇಡಿಯಂ ಒಳಗೆ ನಡೆಯುತ್ತಿರುವ ಈ ಬೆಲೆ ಏರಿಕೆಯ ದಗಾಕ್ಕೆ ಕೊನೆಯಿಲ್ಲವೇ?' ಎಂದು ಪ್ರಶ್ನಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಆಡಳಿತ ಮಂಡಳಿಗೆ ಹುಲಿ ಕಾರ್ತಿಕ್ ಮನವಿ:
- ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು ನೇರವಾಗಿ ಕಿಂಗ್ ಕೊಹ್ಲಿ ಮತ್ತು ಕೆಎಸ್ ಸಿಎಗೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ:
- ಬಡವರಿಗೆ ಮೀಸಲಾತಿ: ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲು ಬಡವರಿಗೆ ಮತ್ತು ವಯಸ್ಸಾದವರಿಗೆಂದೇ ವಿಶೇಷ ಟಿಕೆಟ್ ಕೋಟಾವನ್ನು ಮೀಸಲಿಡಬೇಕು.
- ಟಿಕೆಟ್ ದಂಧೆಗೆ ಬ್ರೇಕ್: ಪ್ರಭಾವಿಗಳಿಗೆ ಮಾತ್ರ ಟಿಕೆಟ್ ಸಿಗುವ ಪದ್ಧತಿ ನಿಲ್ಲಬೇಕು, ಸಾಮಾನ್ಯ ಜನರಿಗೂ ಸಮಾನ ಅವಕಾಶ ಸಿಗಬೇಕು.
- ಬೆಲೆ ನಿಯಂತ್ರಣ: ಸ್ಟೇಡಿಯಂ ಒಳಗೆ ಕನಿಷ್ಠ ನೀರಿನ ಬಾಟಲ್ ಮತ್ತು ಲಘು ಆಹಾರವನ್ನು ಎಂಆರ್‌ಪಿ ದರದಲ್ಲೇ ನೀಡಬೇಕು.
'ವಿರಾಟ್ ಕೊಹ್ಲಿ ಅವರೇ, ನಿಮ್ಮ ಮೇಲೆ ನಮಗೆ ಅಪಾರ ಪ್ರೀತಿ ಇದೆ. ಆದರೆ ನಿಮ್ಮನ್ನು ನೋಡಲು ಬರುವ ನಿಮ್ಮ ಬಡ ಅಭಿಮಾನಿಗಳ ಪರಿಸ್ಥಿತಿ ಇಂದು ಶೋಚನೀಯವಾಗಿದೆ. ಈ ವ್ಯವಸ್ಥೆ ಬದಲಾಗಲಿ' ಎಂಬ ಕಾರ್ತಿಕ್ ಅವರ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಆರ್ ಸಿಬಿ ಅಭಿಮಾನಿಗಳು ಈ ವಿಡಿಯೋವನ್ನು ಕೊಹ್ಲಿ ಅವರಿಗೆ ಟ್ಯಾಗ್ ಮಾಡುವ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ.


