Puttagowri Maduve Serial Popularity:  ಪುಟ್ಟಗೌರಿ ಮದುವೆ ಧಾರಾವಾಹಿ ಮತ್ತೆ ನೋಡಲು ಅಜ್ಜಿಯೊಬ್ಬರು ತಮ್ಮ ಕಿಚನ್ ರೆಸಿಪಿಯನ್ನು ಹಂಚಿಕೊಂಡಿದ್ದಾರೆ. 5 ವರ್ಷದ  ಹಿಂದಿನ ಪುಟ್ಟಗೌರಿ ನೋಡುವ ಆಸೆಗಾಗಿ ಅಜ್ಜಿ ಹೇಳಿಕೊಟ್ಟ ಸೀಕ್ರೆಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರು: ಪುಟ್ಟಗೌರಿ ಮದುವೆ ಕನ್ನಡ ಕಿರುತೆರೆ ಲೋಕದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಸೀರಿಯಲ್ ಮುಕ್ತಾಯವಾಗಿ ಸುಮಾರು 4 ವರ್ಷ ಕಳೆದರೂ ಧಾರಾವಾಹಿಯ ಜನಪ್ರಿಯತೆ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ. ಇಂದಿಗೂ ಜನರು ಸೋಶಿಯಲ್ ಮೀಡಿಯಾದಲ್ಲಿ ಸಿಗುವ ಪುಟ್ಟಗೌರಿ ಮದುವೆ ಸೀರಿಯಲ್‌ನ ವಿಡಿಯೋಗಳನ್ನು ನೋಡಿ ಆನಂದಿಸುತ್ತಾರೆ.

ಇದೀಗ ವೈರಲ್ ಅಗಿರೋ ವಿಡಿಯೋದಲ್ಲಿ ಅಜ್ಜಿಯೊಬ್ಬರು ಪುಟ್ಟಗೌರಿ ಮದುವೆ ಸೀರಿಯಲ್ ಮತ್ತೊಮ್ಮೆ ನೋಡುವ ಆಸೆಗಾಗಿ ತಮ್ಮ ಅಡುಗೆ ರಹಸ್ಯ ಬಿಟ್ಟುಕೊಟ್ಟಿದ್ದಾರೆ. ಅಡುಗೆ ರೆಸಿಪಿ ಹೇಳಿದ್ರೆ ಪುಟ್ಟಗೌರಿ ಮದುವೆಯ ಎಲ್ಲಾ ಸಂಚಿಕೆಗಳನ್ನು ಡೌನ್‌ಲೋಡ್ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾನೆ. ಅಜ್ಜಿ ಹೇಳಿಕೊಟ್ಟ ರೆಸಿಪಿ ಯಾವುದು ಅಂತ ನೋಡೋಣ ಬನ್ನಿ.

ಬಸ್ಸಾರು ಮಾಡುವ ರಹಸ್ಯ ಬಿಚ್ಚಿಟ್ಟ ಅಜ್ಜಿ

ಅಜ್ಜಿ ಬಳಿಯಲ್ಲಿ ಬಂದ ಮೊಮ್ಮಗ, ಬಸ್ಸಾರು ಮಾಡೋದು ಹೇಗೆ ಅಂತ ಹೇಳಿಕೊಡು ಅಂತ ಕೇಳುತ್ತಾನೆ. ಇದಕ್ಕೆ ಅಜ್ಜಿ, ಎಷ್ಟು ಬಾರಿ ಹೇಳೋದು ಹೋಗು ಅಂತಾರೆ. ಇದಕ್ಕೆ ಮೊಮ್ಮಗ 5 ವರ್ಷದ ಹಿಂದಿನ ಪುಟ್ಟಗೌರಿ ಮದುವೆ ಸೀರಿಯಲ್ ಹಾಕಿಕೊಡುವೆ ಎಂದು ಹೇಳುತ್ತಾನೆ. ಆಗ ಅಜ್ಜಿ, ಹಳ್ಳಿ ಶೈಲಿಯಲ್ಲಿ ರುಚಿಯಾಗಿ ಬಸ್ಸಾರು ಮಾಡೋದು ಹೇಗೆ ಅಂತ ಹೇಳಿಕೊಡುತ್ತಾರೆ. ಅಜ್ಜಿ ಹೇಳಿಕೊಟ್ಟ ಬಸ್ಸಾರು ಮಾಡೋದು ಹೇಗೆ ಅಂತ ನೋಡೋಣ ಬನ್ನಿ.

ಬಸ್ಸಾರು ಮಾಡಲು ಬೇಕಾಗುವ ಸಾಮಾಗ್ರಿಗಳು

  • ಜೀರಿಗೆ: 1/2 ಟೀ ಸ್ಪೂನ್
  • ಕಾಳು ಮೆಣಸು: 8 ರಿಂದ 10
  • ಬೆಳ್ಳುಳ್ಳಿ: 5 ರಿಂದ 10 ಎಸಳು
  • ಈರುಳ್ಳಿ: 2
  • ಮೆಣಸಿನಕಾಯಿ: ನಾಲ್ಕರಿಂದ ಐದು
  • ತೊಗರಿಬೇಳೆ: 50 ಗ್ರಾಂ
  • ಬಸ್ಸಾರು ಸೊಪ್ಪು: ಒಂದು ಹಿಡಿ
  • ಟೊಮೆಟೋ: 1 (ದೊಡ್ಡ ಗಾತ್ರದ್ದು)
  • ಹುಣಸೆಹಣ್ಣು: ನಿಂಬೆಹಣ್ಣಿನ ಗಾತ್ರದಷ್ಟು
  • ಹಸಿ ತೆಂಗಿನಕಾಯಿ: ಒಂದು ಕಪ್
  • ಕೋತಂಬರಿ ಸೊಪ್ಪು
  • ಅಡುಗೆ ಎಣ್ಣ: ನಾಲ್ಕು ಟೀ ಸ್ಪೂನ್
  • ಉಪ್ಪು ರುಚಿಗೆ ತಕ್ಕಷ್ಟು

ಬಸ್ಸಾರು ಮಾಡುವ ವಿಧಾನ

ಮೊದಲಿಗೆ ಒಲೆ ಆನ್ ಮಾಡ್ಕೊಂಡು ಪ್ಯಾನ್ ಇರಿಸಿಕೊಳ್ಳಿ. ಇದಕ್ಕೆ 1 ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಇದಕ್ಕೆ ಜೀರಿಗೆ, ಕಾಳು ಮೆಣಸು, ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಾಲ್ಕರಿಂದ ಐದು ನಿಮಿಷ ಫ್ರೈ ಮಾಡಿಕೊಂಡು ನಂತರ ಎತ್ತಿಟ್ಟುಕೊಳ್ಳಿ.

ತದನಂತರ ಕುಕ್ಕರ್‌ನಲ್ಲಿ ತೊಗರಿಬೇಳೆ, ಒಂದು ಟೊಮೆಟೋ, ಒಂದು ಈರುಳ್ಳಿ, ಒಂದು ಹಿಡಿಯಷ್ಟು ಸೊಪ್ಪು ಹಾಕಿಕೊಂಡು ಒಂದು ಕೂಗು ಕೂಗಿಸಿಕೊಳ್ಳಿ. ನಂತರ ಇದರಿಂದ ಈರುಳ್ಳಿ, ಟೊಮೆಟೋ ಮತ್ತು ಸೊಪ್ಪು ಬೇರ್ಪಡಿಸಿಕೊಂಡು ತಣ್ಣಗಾಗುವರೆಗೂ ಬಿಡಿ.

ಈಗ ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡಿರುವ ಜೀರಿಗೆ, ಕಾಳು ಮೆಣಸು, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಹಾಕಿಕೊಳ್ಳಿ. ನಂತರ ಇದಕ್ಕೆ ಬೇಯಿಸಿಕೊಂಡಿರುವ ಟೊಮೆಟೋ, ಈರುಳ್ಳಿ ಮತ್ತು ಅರ್ಧದಷ್ಟು ಬೇಳೆ ಹಾಗೂ ಸೊಪ್ಪು ಹಾಕಿಕೊಳ್ಳಬೇಕು. ಈಗ ಅರ್ಧ ನಿಂಬೆಹಣ್ಣಿನಷ್ಟು ಹುಣಸೆ, ಕೋತಂಬರಿ ಸೊಪ್ಪು, ತೆಂಗಿನಕಾಯಿ ಸೇರಿಸಿ ಸಣ್ಣದಾಗಿ ರುಬ್ಬಿಕೊಳ್ಳಿ.

ಈಗ ಒಲೆ ಮೇಲೆ ಪಾತ್ರೆ ಇರಿಸಿಕೊಂಡು ಒಗ್ಗರಣೆಗೆ 2 ಟೀ ಸ್ಪೂನ್ ಎಣ್ಣೆ ಹಾಕಿ. ಜೀರಿಗೆ, ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಸೇರಿಸಿ ಫ್ರೈ ಮಾಡಿಕೊಳ್ಳಿ. ತದನಂತರ ರುಬ್ಬಿಕೊಂಡಿರುವ ಮಿಶ್ರಣವನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ. ಬೇಳೆ ಬೇಯಿಸಿಕೊಂಡಿದ್ದ ನೀರನ್ನು ಸಹ ಇದಕ್ಕೆ ಹಾಕಿಕೊಳ್ಳಬೇಕು. ನಂತರ ಬೇಕಾದಷ್ಟು ನೀರು ಸೇರಿಸಿಕೊಂಡು 10 ರಿಂದ 15 ನಿಮಿಷ ಬೇಯಿಸಿಕೊಂಡ್ರೆ ರುಚಿಯಾದ ಬಸ್ಸಾರು ಸವಿಯಲು ಸಿದ್ಧವಾಗುತ್ತದೆ. ಇದನ್ನು ಮೂರು ದಿನವಿಟ್ರೂ ಇದು ಹಾಳಾಗಲ್ಲ.

ಇನ್ನು ಉಳಿದ ಬೇಳೆ ಮತ್ತು ಸೊಪ್ಪ ಬಳಸಿ ಪಲ್ಯ ಮಾಡಿಕೊಳ್ಳಬೇಕು. ಬೇಳೆ ಮತ್ತು ಸೊಪ್ಪಿಗೆ ಜೀರಿಗೆ, ಸಾಸವೆ, ಈರುಳ್ಳಿ, ಒಣಮೆಣಸಿನಕಾಯಿ ಮತ್ತು ಅರಿಶಿನ ಸೇರಿಸಿ ಒಗ್ಗರಣೆ ಹಾಕಿಕೊಂಡ್ರೆ ಬಸ್ಸಾರು ಜೊತೆಗೆ ರುಚಿಯಾದ ಪಲ್ಯವೂ ಸಿದ್ಧವಾಗುತ್ತದೆ.

View post on Instagram