ಉಪಾಸನಾ ಮೋಹನ್‌ಗೆ ಇಂದು ಗೌರಿ ಸುಂದರ್ ಪ್ರಶಸ್ತಿ!
ಉಪಾಸನಾ ಮೋಹನ್ ಭಾವಗೀತೆಗಳಿಗೆ ನಿಷ್ಠರಾದವರು. ಈವರೆಗೆ 500ಕ್ಕೂ ಅಧಿಕ ಭಾವಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಮುಂದಿನ ತಿಂಗಳು ಈ ಕುರಿತ ವಿಶಿಷ್ಟಕೃತಿಯನ್ನೂ ಹೊರ ತರುತ್ತಿದ್ದಾರೆ. ಜಿ ವಿ ಅತ್ರಿ ಅವರ ಶಿಷ್ಯನಾಗಿ ಸಂಗೀತ ಕಲಿತದ್ದು, ಹಾಗೆ ಕಲಿತಿದ್ದನ್ನು ಎಷ್ಟೋ ಸಾವಿರ ಮಂದಿಗೆ ಧಾರೆ ಎರೆದ ಮೇಲೂ ಅವರಿಗೆ ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟುಕೆಲಸ ಮಾಡುವ ಹುರುಪು.
ಪ್ರಿಯಾ ಕೆರ್ವಾಶೆ
ಉಪಾಸನಾ ಮೋಹನ್ ಮೂಲತಃ ಮಂಡ್ಯದವರು. ಇವರ ತಾತ ಶಾಸ್ತ್ರೀಯ ಸಂಗೀತ ವಿದ್ವಾಂಸರು. ಒಂದು ಕಡೆ ತಾತ ಹಾಡುವ ಶಾಸ್ತ್ರೀಯ ಸಂಗೀತ, ಇನ್ನೊಂದು ಕಡೆ ಕ್ಯಾಸೆಟ್‌ಗಳಲ್ಲಿ ಕೇಳುತ್ತಿದ್ದ ಭಾವಗೀತೆಗಳು. ಇವೆರಡನ್ನೂ ಆಸಕ್ತಿಯಿಂದ ಕೇಳುತ್ತಿದ್ದ ಮೋಹನ್ ಅವರಿಗೆ ಸುಗಮ ಸಂಗೀತವೇ ತನ್ನ ನೆಲೆ ಅಂತನಿಸಿದಾಗ ಅವರ ವಯಸ್ಸು 18 ವರ್ಷ. ಆಗ ಕ್ಯಾಸೆಟ್‌ಗಳಲ್ಲಿ ಅನಂತ ಸ್ವಾಮಿ ಅವರ ಭಾವಗೀತೆಗಳನ್ನು ಕೇಳಿ ತಾನೂ ಹಾಡಲು ಪ್ರಯತ್ನಿಸಿದ್ದುಂಟು. ಆದರೆ ಈ ಕಲಿಕೆಗೆ ಸ್ಪಷ್ಟತೆ ನೀಡಿದ್ದು ಮೋಹನ್ ಅವರ ಸಂಗೀತ ಗುರು ಖ್ಯಾತ ಗಾಯಕ ಜಿ ವಿ ಅತ್ರಿ. ಆಗ ಅತ್ರಿ ಅವರು ಬಸವನ ಗುಡಿಯಲ್ಲಿ ‘ಸಂಗೀತ ಗಂಗಾ’ ಎಂಬ ಮ್ಯೂಸಿಕ್ ಸ್ಕೂಲ್ ನಡೆಸುತ್ತಿದ್ದರು. ಇಲ್ಲಿ ಗಾಯನದ ಜೊತೆಗೆ ವಿವಿಧ ಸಂಗೀತ ಉಪಕರಣಗಳೂ ಇದ್ದವು. ಬಹಳ ಬೇಗ ಭಾವಗೀತೆ ಗಾಯನ, ವಾದ್ಯ ಸಂಗೀತ ಕಲಿತ ಮೋಹನ್ ಮುಂದೆ ಈ ಶಾಲೆಯಲ್ಲೇ ಟೀಚರ್ ಆಗುತ್ತಾರೆ. ಕೆಲ ಕಾಲದ ಬಳಿಕ ಈ ಶಾಲೆಯ ಪ್ರಿನ್ಸಿಪಾಲ್ ಆಗುತ್ತಾರೆ.
ತನ್ನ ಗುರು ಅತ್ರಿ ಅವರನ್ನು ಅಭಿಮಾನದಿಂದ ನೆನೆಯುವ ಮೋಹನ್, ‘ಯುವ ಗಾಯಕರ ಪಡೆಯನ್ನು ಕಟ್ಟಿದವರಲ್ಲಿ ಅತ್ರಿ ಮೊದಲಿಗರು. ಅವರ ಶಿಷ್ಯರದ್ದೇ 10ಕ್ಕೂ ಹೆಚ್ಚು ಸಂಗೀತ ಶಾಲೆಗಳಿವೆ. ಅತ್ರಿ ಬದುಕಿದ್ದು ಕೇವಲ 35 ವರ್ಷ. ಆ ಸಣ್ಣ ಅವಧಿಯಲ್ಲಿ ಅವರು ಮೊದಲ ಕನ್ನಡ ಸಂಗೀತ ಸಮ್ಮೇಳನ ನಡೆಸಿದರು. ಗರ್ತಿಗೆರೆ ರಾಘಣ್ಣನಂಥಾ ಪ್ರತಿಭೆಗಳನ್ನು ಪರಿಚಯಿಸಿದರು. ಅನೇಕ ಕಡೆ ಕ್ಯಾಂಪ್ ಮಾಡಿ ಭಾವಗೀತೆಗಳನ್ನು ಜನರ ಬಳಿ ಕರೆದೊಯ್ದರು. ಸ್ಲಂನ ಮಕ್ಕಳಿಗೆ ಹಾಡಿನ ಟ್ರೈನಿಂಗ್ ಕೊಟ್ಟರು’ ಎನ್ನುತ್ತಾ ಅವರ ಕಾರ್ಯವನ್ನು ಸ್ಮರಿಸುತ್ತಾರೆ.
ಎರಡು ದಶಕಗಳ ಸಂಗೀತ ಉಪಾಸನೆ
ಒಂದು ಹೊತ್ತಲ್ಲಿ ಮೋಹನ್ ಅವರಿಗೆ ಐಡೆಂಟಿಟಿಯ ಪ್ರಶ್ನೆ ಬರುತ್ತದೆ. ಆ ಪ್ರಶ್ನೆಗೆ ಉತ್ತರವಾಗಿ ಸಿಕ್ಕಿದ್ದು, ‘ಉಪಾಸನಾ’.
‘ನನ್ನ ಸ್ನೇಹಿತರೊಬ್ಬರ ಮನೆಯಲ್ಲಿ ಹೊಸ ಸಂಗೀತ ಸಂಸ್ಥೆಗೆ ಹೆಸರು ಹುಡುಕುತ್ತಿದ್ದಾಗ ಫ್ರೆಂಡ್ ಪತ್ನಿ ಹೇಳಿದ ಹೆಸರು ‘ಉಪಾಸನೆ’. ಆ ಕ್ಷಣಕ್ಕೆ ಇದೊಂದು ಸಿನಿಮಾ ಹೆಸರು ಅನಿಸಿದರೂ, ಆಮೇಲೆ ಆ ಹೆಸರಿನ ಬಗ್ಗೆ ಯೋಚಿಸಿದಾಗ ಉಪಾಸನಾ ಅನ್ನೋದಕ್ಕೆ ನಿರಂತರ ಆರಾಧನೆ ಎಂಬ ಅರ್ಥ ಇರುವುದು ಗೊತ್ತಾಯ್ತು. ಇದು ನನ್ನ ಉದ್ದೇಶಕ್ಕೆ ಹತ್ತಿರವಿರುವ ಕಾರಣ ಉಪಾಸನಾ ಅನ್ನು ಹೆಸರು ಅಂತಿಮವಾಯ್ತು’ ಎನ್ನುತ್ತಾ ಸಂಸ್ಥೆ ಹೆಸರಿನ ಹಿನ್ನೆಲೆ ವಿವರಿಸುತ್ತಾರೆ ಮೋಹನ್.
ಸಾಧನೆಯಲ್ಲಿ ನಿರಂತರತೆ ಮುಖ್ಯ. ಆ ನಿಟ್ಟಿನಲ್ಲಿ ಮೋಹನ್ ಪ್ರತಿಕ್ಷಣವೂ ಸುಗಮ ಸಂಗೀತ ಲೋಕದಲ್ಲೇ ಇರ್ತಾನೆ. ಅನೇಕ ಕವಿಗಳ ಗೀತೆಗಳನ್ನು ಸಂಯೋಜನೆ ಮಾಡುವುದು ಆತನಿಗೆ ದಿನಚರಿಯೇ ಆಗಿದೆ. ಸುಗಮ ಸಂಗೀತದ ನಿಜ ಉಪಾಸನೆಯನ್ನೇ ಆತ ಮಾಡುತ್ತಾನೆ. - ಹೆಚ್ ಎಸ್ ವೆಂಕಟೇಶ್ ಮೂರ್ತಿ
ಇಂದು ಜನ ಅವರನ್ನು ಗುರುತಿಸುವುದು ಉಪಾಸನಾ ಮೋಹನ್ ಎಂದೇ. ಈ ಸಂಸ್ಥೆ ಒಂದು ಕಡೆ ಸಾವಿರಾರು ಮಕ್ಕಳಿಗೆ ಭಾವಗೀತೆ ಕಲಿಸುವ ಸಂಗೀತ ಶಾಲೆಯಾಗಿ, ಮೋಹನ್ ಅವರ ಸಂಗೀತ ಸಂಯೋಜನೆಗೆ ಸಾಕ್ಷಿಯಾಗಿದೆ. ಭಾವಗೀತೆಗಳ ಮೊದಲ ಮ್ಯೂಸಿಕ್ ಟ್ರ್ಯಾಕ್ ಹೊರಬಂದದ್ದು ಇಲ್ಲಿಂದಲೇ. ಆರಂಭದಲ್ಲಿ 50ಕ್ಕೂ ಹೆಚ್ಚು ಮ್ಯೂಸಿಕ್ ಟ್ರ್ಯಾಕ್ ಸೃಷ್ಟಿಸಿ ಭಾವಗೀತೆಗಳಲ್ಲಿ ಮ್ಯೂಸಿಕ್ ಟ್ರ್ಯಾಕ್ ಟ್ರೆಂಡ್ ಸೃಷ್ಟಿಸಿದವರು ಮೋಹನ್. ಇದೀಗ ಹತ್ತಿರತ್ತಿರ 20 ಸಾವಿರ ಮಕ್ಕಳು ಈ ಸಂಸ್ಥೆಯಡಿ ಕಲಿತು, ಭಾವಗೀತೆ ಎಂಬ ಕನ್ನಡದ ಅನನ್ಯ ಗಾಯನ ಪರಂಪರೆಯನ್ನು ಮುಂದುವರಿಸುವ ಹುಮ್ಮಸ್ಸಿನಲ್ಲಿದ್ದಾರೆ. 55ಕ್ಕೂ ಹೆಚ್ಚು ಭಾವಗೀತೆ ಆಲ್ಬಂಗಳು ಹೊರಬಂದಿವೆ. ತಾನು ಸಂಗೀತ ಸಂಯೋಜಿಸಿದ ಲಕ್ಷ್ಮೇ ನಾರಾಯಣ ಭಟ್ಟರ ‘ನಿನಗಾಗಿ ಕಾಯುತಿರುವೆ..’ ಹಾಡು ಮೋಹನ್ ಅವರಿಗೆ ಬಹಳ ಇಷ್ಟ. ಜೊತೆಗೆ ಇವರು ಸಂಗೀತ ನೀಡಿದ ಎಚ್‌ಎಸ್‌ವಿ ಅವರ ‘ಬಯಲಿನೊಳಗೆ ಯಾರೋ ಮರೆತು’, ಬಿಆರ್ ಲಕ್ಷ್ಮಣ ರಾವ್ ಅವರ, ‘ಆಗು ಗೆಳೆಯ’ ಹಾಡುಗಳು ಜನಪ್ರಿಯವಾಗಿವೆ.
ಮೋಹನನದು ಏಕನಿಷ್ಠೆ. ಭಾವಗೀತೆಯಲ್ಲಿ ಕವಿಗೀತೆಗಳನ್ನಷ್ಟೇ ಆತ ಹಾಡುವುದು. ಅನಂತಸ್ವಾಮಿ ಹಾಗೂ ಅಶ್ವತ್‌್ಥ ಇಬ್ಬರಿಂದಲೂ ಪ್ರಭಾವಿತನಾಗಿದ್ದಾನೆ. ಅನಂತಸ್ವಾಮಿ ಅವರಿಂದ ಮಾಧುರ್ಯ, ಘರಾನಾ, ಅಶ್ವತ್‌್ಥ ಅವರಿಂದ ನಾಟಕೀಯತೆ, ಸಂಘಟನೆಯನ್ನು ಮೈಗೂಡಿಸಿಕೊಂಡಿದ್ದಾನೆ.
- ಬಿ ಆರ್ ಲಕ್ಷ್ಮಣ ರಾವ್
ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಕಲಿತ ಪ್ರತಿಭೆಗಳು ಇಂದು ಕನ್ನಡದ ಜನಪ್ರಿಯ ಗೀತೆಗಳಿಗೆ ದನಿಯಾಗಿದ್ದಾರೆ. ‘ಬಸಣ್ಣಿ ಬಾ’ ಅನ್ನೋ ಫೇಮಸ್ ಚಿತ್ರಗೀತೆ ಹಾಡಿದ ವರ್ಷಾ ಸುರೇಶ್ ಇಲ್ಲಿನ ವಿದ್ಯಾರ್ಥಿನಿ. ಮೇಘನಾ ಭಟ್, ಶ್ರೀಲಕ್ಷ್ಮೇ ಬೆಣ್ಮಣ್ಣು ಸೇರಿದಂತೆ ಹಲವರು ಇಂಡಿಯನ್ ಐಡಲ್‌ಗಳಂಥಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ‘ನನ್ನ ಸಂಗೀತ ಶಾಲೆಯ ಮಕ್ಕಳು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬೇಕು ಅನ್ನುವ ಇರಾದೆ ನನಗಿಲ್ಲ. ಭಾವಗೀತೆ ಗಾಯನದಲ್ಲಿ ಅವರೆಲ್ಲ ವೃತ್ತಿಪರರಾಗಿ ಮುಂದುವರಿಯಬೇಕು ಅನ್ನುವುದು ನನ್ನ ಕನಸು’ ಎನ್ನುತ್ತಾರೆ.
ಮೋಹನ್ ಅವರ ಇನ್ನೊಂದು ವೈಶಿಷ್ಠ್ಯ ಎಂದರೆ ಅವರು ಭಾವಗೀತೆಗಳಿಗೇ ನಿಷ್ಠರಾಗಿರುವುದು. ಯಾವ ಕಾರ್ಯಕ್ರಮದಲ್ಲೂ ಅವರು ಭಕ್ತಿಗೀತೆ, ಜನಪದ ಗೀತೆ ಅಥವಾ ಇತರೆ ಸಂಗೀತ ಪ್ರಕಾರಗಳನ್ನು ಹಾಡಿದ್ದಿಲ್ಲ. ‘ಕವಿತಾ ಗಾಯನ’ದ ಮೂಲಕ ಭಾವಗೀತೆಯನ್ನು ಮುಖ್ಯನೆಲೆಗೆ ತರುವುದನ್ನೇ ಗುರಿಯಾಗಿಸಿಕೊಂಡಿದ್ದಾರೆ. ಜೊತೆಗೆ ಹೊಸ ಹೊಸ ಕವಿಗಳ ಕವಿತೆಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿರುತ್ತಾರೆ. ಹಾಗೆ ಇವರು ಪರಿಚಯಿಸಿದ ರಂಜನಿ ಪ್ರಭು ಅವರ ‘ ಜೋಗಿ ಕಾಡತಾನ’ ಭಾವಗೀತೆ ಸೂಪರ್ ಹಿಟ್ ಆಗಿದೆ.
ಅಶ್ವತ್‌್ಥ ನನ್ನ ಸಹ ಸ್ಪರ್ಧಿ ಅಂದುಕೊಂಡಿದ್ದರು!
ಮೋಹನ್ ಸಿ ಅಶ್ವತ್‌್ಥ ಅವರ ಗಾಯನದ ಅಭಿಮಾನಿ. ಅವರ ಹಾಡು ಕೇಳುತ್ತಾ ಬೆಳೆದವರು. ಆದರೆ ಒಂದು ಹಂತದಲ್ಲಿ ಮೋಹನ್ ಅವರನ್ನು ಅಶ್ವತ್ಥ ಸಹ ಸ್ಪರ್ಧಿಯಾಗಿ ಭಾವಿಸಿದರು. ಇದು ಆಪ್ತರಿಂದ ಮೋಹನ್ ಅವರಿಗೂ ತಿಳಿಯಿತು. ಈ ಬಗ್ಗೆ ವಿವರಿಸುವ ಮೋಹನ್. ‘ಅಶ್ವತ್ಥ ನನ್ನನ್ನು ಕಾಂಪಿಟೀಟರ್ ಅಂದುಕೊಂಡಿದ್ದರು, ಆ ಬಗ್ಗೆ ಅವರಿಗೆ ಚಡಪಡಿಕೆ ಇತ್ತು ಅಂತ ಕವಿಯೊಬ್ಬರಿಂದ ತಿಳಿಯಿತು. ಅವರ ಗಾಯನದ ವೈಭವ ನೋಡಿಕೊಂಡು ಬೆಳೆದ ನನಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಇನ್ನೇನು ಬೇಕು? ಅದೇ ನನಗೆ ಆಶೀರ್ವಾದ’ ಎನ್ನುತ್ತಾರೆ.
ಕ್ಯೂಆರ್ ಕೋಡ್ ಇರುವ ಉಪಾಸನಾ ಪುಸ್ತಕ
ಮೋಹನ್ ಸಂಗೀತ ಸಂಯೋಜಿಸಿರುವ ಸುಮಾರು 500 ಹಾಡುಗಳ ‘ಉಪಾಸನಾ’ ಕೃತಿ ಜುಲೈಯಲ್ಲಿ ಹೊರಬರುತ್ತಿದೆ. ಇದರಲ್ಲಿ ಈ ಹಾಡುಗಳ ಕ್ಯೂಆರ್ ಕೋಡ್ ಇರುವುದು ವಿಶೇಷ. ಅದನ್ನು ಸ್ಕಾ್ಯನ್ ಮಾಡಿದ ಕೂಡಲೇ ಆ ಹಾಡಿನ ಯೂಟ್ಯೂಬ್ ಲಿಂಕ್ ಓಪನ್ ಆಗುತ್ತೆ. ಎಲ್ಲ ಹಾಡುಗಳನ್ನೂ ಓದುವ ಜೊತೆಗೆ ಕೇಳುವ ಅವಕಾಶ. ಇದಕ್ಕಾಗಿ ಮೋಹನ್ ಒಂದೂವರೆ ವರ್ಷ ಪರಿಶ್ರಮಪಟ್ಟಿದ್ದಾರೆ.