‘ಗಾನ ಚಂದನ’ ರಿಯಾಲಿಟಿ ಶೋ ಮೊದಲ ಸುತ್ತಿಗೆ 79 ಮಂದಿ ಗಾಯಕರು ಆಯ್ಕೆ ಆಗಿದ್ದು, ಸಂಗೀತದ ಎಲ್ಲಾ ಪ್ರಕಾರಗಳಲ್ಲೂ ಸ್ಪರ್ಧೆಯಲ್ಲಿ ಹಾಡುವ ಅವಕಾಶ ಈ ಗಾಯಕರಿಗೆ ಅವಕಾಶ ನೀಡಲಾಗಿದೆ. 18 ರಿಂದ 35 ವರ್ಷದೊಳಗಿನ ಗಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

‘ಆತ್ಮಾವಲೋಕನ’ ಹಾಗೂ ‘ಉಳಿದವರು ಕಂಡಂತೆ’ಎಂಬ ಅಂಕ ನೀಡುವ ವಿಶಿಷ್ಟ್ಯ ವ್ಯವಸ್ಥೆಯನ್ನು ಇದೇ ಮೊದಲು ‘ಗಾನಚಂದನ’ ರಿಯಾಲಿಟಿ ಶೋ ಪರಿಚಯಿಸುತ್ತಿದೆ. ಆತ್ಮಾವಲೋಕನ ವ್ಯವಸ್ಥೆಯಲ್ಲಿ ಸ್ಪರ್ಧಿಗಳೇ ತಮಗೆ ತಾವು ಅಂಕ ಕೊಟ್ಟುಕೊಳ್ಳಬಹುದು. ಉಳಿದಂತೆ ತೀರ್ಪಗಾರರಾದ ಬಿ.ಆರ್‌. ಛಾಯಾ ಹಾಗೂ ವಿ.ಮನೋಹರ್‌ ‘ಉಳಿದವರು ಕಂಡಂತೆ’ ವಿಭಾಗದಲ್ಲಿ ಸ್ಪರ್ಧಿಗಳಿಗೆ ಅಂಕ ನೀಡುತ್ತಾರೆ. ಶೋ ಆರಂಭದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಧ್ಯಮದ ಮುಂದೆ ಬಂದಿದ್ದ ಗಾಯಕಿ ಬಿ.ಆರ್‌. ಛಾಯಾ ಹಾಗೂ ಸಂಗೀತ ನಿರ್ದೇಶಕ ವಿ.ಮನೋಹರ್‌ ಈ ಶೋ ಬಗ್ಗೆ ಮಾಹಿತಿ ಕೊಟ್ಟರು.

33 ವರ್ಷಗಳ ಬಳಿಕ ಹೀಗಿದ್ದಾರೆ ಟೀವಿಯ ರಾಮ, ಸೀತೆ, ಲಕ್ಷ್ಮಣ!

‘ ಗಾನ ಚಂದನ ರಿಯಾಲಿಟಿ ಶೋ ವ್ಯವಸ್ಥಿತ ಪೂರ್ವ ಸಿದ್ಧತೆಗಳ ಮೂಲಕ ಶುರುವಾಗಿದೆ. ಶೋಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಲು ಪ್ರತಿ ಜಿಲ್ಲೆಗೂ ಹೋಗಿ ಆಡಿಷನ್‌ ನಡೆಸಲಾಗಿದೆ. ಅದಕ್ಕಾಗಿ ರಾಜ್ಯಾದ್ಯಂತ ಸುತ್ತಾಟ ನಡೆದಿದೆ. ಈ ಆಡಿಷನ್‌ನಲ್ಲಿ ಒಟ್ಟು 490 ಹಾಡುಗಾರರು ಬಂದಿದ್ದರು. ಶೋನ ನೀತಿ, ನಿಯಮಗಳ ಅನುಸಾರ ಅಂತಿಮವಾಗಿ 79 ಗಾಯಕರು ಉಳಿದುಕೊಂಡಿದ್ದಾರೆ. ಪ್ರತಿ ಜಿಲ್ಲೆಯಿಂದ ಒಬ್ಬರನ್ನು ಆಯ್ಕೆ ಮಾಡಿಕೊಂಡರೆ ಚೆನ್ನಾಗಿರುತ್ತದೆ ಎನ್ನುವುದು ನಮ್ಮ ತೀರ್ಮಾನ ಆಗಿತ್ತು. ಆದರೆ ಚೆನ್ನಾಗಿ ಹಾಡಿದ್ದರಿಂದ ಕೆಲ ಜಿಲ್ಲೆಗಳಲ್ಲಿ ನಾಲ್ಕು ಜನರನ್ನು ಆಯ್ದುಕೊಳ್ಳಲಾಗಿದೆ’ ಎಂದರು ಗಾಯಕಿ ಬಿ.ಆರ್‌. ಛಾಯಾ.

ಶೋ ವಿಶೇಷತೆ ಕುರಿತು ಸಂಗೀತ ನಿರ್ದೇಶಕ ಮನೋಹರ್‌ ವಿವರಿಸಿದರು. ಇತರೆ ಚಾನೆಲ್‌ಗಳಲ್ಲಿ ರಿಯಾಲಿಟಿ ಶೋಗಳ ಹಾಗೆ ಇಲ್ಲಿ ಯಾವುದೇ ಅತಿರೇಕಗಳು ಇರುವುದಿಲ್ಲ. ಸುಮಾರಾಗಿ ಹಾಡುವವರು ಚೆನ್ನಾಗಿ ಹಾಡುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಉದಯೋನ್ಮುಖ ಕಲಾವಿದರಿಗೆ ಇದೊಂದು ಕಲಿಕೆಯ ವೇದಿಕೆ ಆಗಲಿ ಎನ್ನುವ ಆಶಯ ನಮ್ಮದಾಗಿದೆ. ಆದರೂ ಇದೊಂದು ಸ್ಪರ್ಧೆಯ ರಿಯಾಲಿಟಿ ಶೋ. ಇಲ್ಲಿ ಗೆದ್ದವರಿಗೆ 1 ಲಕ್ಷ ರೂ. ಬಹುಮಾನ ನೀಡಲಾಗುತ್ತಿದೆ’ಎಂದು ಮನೋಹರ್‌ ಹೇಳಿದರು. ಪದ್ಮಾಪಾಣಿ ಹಾಜರಿದ್ದರು. ಪ್ರತಿ ಗುರುವಾರ ಮತ್ತು ಶುಕ್ರವಾರ 7-30 ರಿಂದ 8-15ರವರೆಗೆ ದೂರದರ್ಶನದ ಚಂದನ ವಾಹಿನಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.