ಮೋಸ ಆಗ್ತಿದೆ ಎಂದು ಡ್ರೋನ್ ಪ್ರತಾಪ್ ಪೋಸ್ಟ್: ನಿಮ್ ಪರ ನಾವಿದ್ದೀವಿ ಎಂದ ಫ್ಯಾನ್ಸ್
ಮೋಸ ಆಗ್ತಿದೆ ಎಂದು ಡ್ರೋನ್ ಪ್ರತಾಪ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೇರ್ ಮಾಡಲಾಗಿದೆ. ಅಸಲಿಗೆ ಏನಿದು ಮೋಸ? ಫ್ಯಾನ್ಸ್ ಹೇಳ್ತಿರೋದೇನು?
ಸದ್ಯ ಬಿಗ್‌ಬಾಸ್ 10ನಲ್ಲಿ ಸಕತ್ ಹೈಲೈಟ್ ಆಗ್ತಿರೋರು ಡ್ರೋನ್ ಪ್ರತಾಪ್. ಬಹುತೇಕ ಎಲ್ಲರಿಗೂ ಇವರ ಮೇಲೆಯೇ ಕಣ್ಣು. ಕಾಂಟ್ರವರ್ಸಿಯಿಂದ ಫೇಮಸ್ ಆಗಿದ್ದ ಡ್ರೋನ್ ಪ್ರತಾಪ್, ಇದೇ ಕಾಂಟ್ರವರ್ಸಿ ಕಾರಣದಿಂದಲೇ ಬಿಗ್‌ಬಾಸ್‌ಗೆ ಆಯ್ಕೆ ಆಗಿದ್ದಾರೆ ಎನ್ನುವುದೇನೂ ಗುಟ್ಟಾಗಿ ಉಳಿದಿಲ್ಲ. ಡ್ರೋನ್ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್ಗಳು ದಾಖಲಾದವು. ಇದಾದ ಬಳಿಕ ಕಥೆ ಕಟ್ಟಿ ತಮ್ಮಿಂದ ಲಕ್ಷಾಂತರ ರೂಪಾಯಿ ಪಡೆದುಕೊಂಡಿರುವುದಾಗಿ ಹಲವರು ಆರೋಪ ಮಾಡಿದ್ದೂ ಇದೆ. ನಟ ಜಗ್ಗೇಶ್ ಕೂಡ ಡ್ರೋನ್ ಪ್ರತಾಪ್ ತಮಗೆ ಹೇಗೆ ಮೋಸ ಮಾಡಿದ್ದ ಎನ್ನುವುದನ್ನು ಹೇಳಿಕೊಂಡಿದ್ದರು. ಈತನ ಮಾತನ್ನು ನಂಬಿ ಕೆಟ್ಟೆ, ನನ್ನ ಬುದ್ಧಿಗೆ ಏನೆನ್ನಬೇಕು ಎಂದೂ ಬೇಸರ ವ್ಯಕ್ತಪಡಿಸಿದ್ದರು. ಸ್ವಲ್ಪ ಸಮಯ ತಲೆ ಮರೆಸಿಕೊಂಡು ಮತ್ತೆ ಈಗ ಬಿಗ್‌ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ ಪ್ರತಾಪ್.
ಇವರ ನಡವಳಿಕೆಯಿಂದಾಗಿ ಹೆಚ್ಚು ಮಂದಿ ಫ್ಯಾನ್ಸ್ ಗಳಿಸುತ್ತಿದ್ದಾರೆ ಪ್ರತಾಪ್. ಬಿಗ್‌ಬಾಸ್ ಮನೆಯಲ್ಲಿಯೂ ಇವರಿಗೆ ಒಳ್ಳೆಯ ಹೆಸರು ಇದ್ದು, ಇವರೇ ವಿನ್ ಆಗಬೇಕು ಎಂದು ಬಯಸುವವರು ಹಲವರಿದ್ದಾರೆ. ಇವರ ಫ್ಯಾನ್ಸ್ ಪೇಜ್ ಅನ್ನೂ ತೆರೆದು ಅದರಲ್ಲಿ ಇವರ ಬೆಂಬಲಕ್ಕೆ ಹಲವರು ನಿಂತಿದ್ದಾರೆ. ಈ ನಡುವೆಯೇ ಮೋಸ ನಡೆಯುತ್ತಿರುವ ಕುರಿತು ಡ್ರೋನ್ ಪ್ರತಾಪ್ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಒಂದನ್ನು ಶೇರ್ ಮಾಡಲಾಗಿದೆ. ಅಷ್ಟಕ್ಕೂ ಬಿಗ್‌ಬಾಸ್ ಮನೆಗೆ ಹೋದರೆ ಅಲ್ಲಿ ಮೊಬೈಲ್ ಬಳಕೆ ಇಲ್ಲ ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಬಿಗ್‌ಬಾಸ್ ಸ್ಪರ್ಧಿಗಳ ಸ್ನೇಹಿತರು ಇಲ್ಲವೇ ಅವರ ಕುಟುಂಬಸ್ಥರು ಸೋಷಿಯಲ್ ಮೀಡಿಯಾದಲ್ಲಿ ಇವರ ಪರವಾಗಿ ಮಾಹಿತಿ ನೀಡುತ್ತಿರುತ್ತಾರೆ. ಅದೇ ರೀತಿ ಡ್ರೋನ್ ಪ್ರತಾಪ್ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದಲೂ ಪೋಸ್ಟ್ ಒಂದನ್ನು ಶೇರ್ ಮಾಡಲಾಗಿದೆ.
ಡ್ರೋನ್ ಪ್ರತಾಪ್ ಕುರಿತು ನಟ ಜಗ್ಗೇಶ್ ಹೊಸ ಪೋಸ್ಟ್: ಅಭಿಮಾನಿಗಳು ಏನೆಂದ್ರು?
ಅದರಲ್ಲಿ ಡ್ರೋನ್ ಪ್ರತಾಪ್, ‘ಸ್ನೇಹಿತರೇ ನಾವು ನಮ್ಮ ಖಾತೆಯಿಂದಾಗಲಿ ಹಾಗೂ ಅಧಿಕೃತ ಫ್ಯಾನ್ ಪೇಜ್ನಿಂದಾಲೀ ಯಾವುದೇ ರೀತಿಯ ಪೇಯ್ಡ್ ಪ್ರಮೋಷನ್ ಅಥವಾ ಪೇಯ್ಡ್ ಕೊಲಾಬರೇಷನ್ ಮಾಡುತ್ತಿಲ್ಲ. ಕೆಲವು ಫ್ಯಾನ್ ಪೇಜ್ಗಳಲ್ಲಿ ಈ ರೀತಿಯ ನಡವಳಿಕೆ ಕಂಡು ಬಂದಿದೆ. ಕೆಲವರು ನಮಗೆ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದ ನೀವುಗಳು ಮೋಸ ಹೋಗಬೇಡಿ. ಅದಕ್ಕೆ ನಾವು ಹೊಣೆಯಾಗಿರುವುದಿಲ್ಲ. ಅಂಥ ಖಾತೆಗಳನ್ನು ನೀವುಗಳು ರಿಪೋರ್ಟ್ ಮಾಡಬಹುದು’ ಎಂದು ಪೋಸ್ಟ್ ಮಾಡಿದ್ದು ಎಚ್ಚರಿಕೆ ನೀಡಲಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹೆಚ್ಚಾಗುತ್ತಿದೆ. ಯಾರಾದರೂ ಫೇಮಸ್ ಆದ ತಕ್ಷಣ ಅವರ ಖಾತೆಯನ್ನು ಹೈಜಾಕ್ ಮಾಡಿ ಇಲ್ಲವೇ ಅವರದ್ದೇ ರೀತಿಯ ಇನ್ನೊಂದು ಸೋಷಿಯಲ್ ಮೀಡಿಯಾ ಖಾತೆ ತೆರೆದು ಹಣ ಕೇಳುವ ದಂಧೆ ಇಲ್ಲವೇ ಇನ್ನಾವುದೋ ಚಟುವಟಿಕೆ ನಡೆಸಲಾಗುತ್ತದೆ. ಅದೇ ರೀತಿ ತಮಗೂ ಆಗಿರುವುದಾಗಿ ಡ್ರೋನ್ ಪ್ರತಾಪ್ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಲಾಗಿದೆ.
ಇದಕ್ಕೆ ನೂರಾರು ಮಂದಿ ಕಮೆಂಟ್ ಮಾಡಿದ್ದು, ಡ್ರೋನ್ ಪ್ರತಾಪ್‌ಗೆ ಜೈ ಎನ್ನುತ್ತಿದ್ದಾರೆ. ನಾನು ನಿಮ್ಮ ಅಭಿಮಾನಿ ಎಂದು ಹೇಳಿಕೊಂಡಿರುವ ಹಲವಾರು ಫ್ಯಾನ್ಸ್, ಈ ಬಾರಿ ಡ್ರೋನ್ ಪ್ರತಾಪ್ ಗೆಲ್ಲಬೇಕು ಎನ್ನುತ್ತಿದ್ದು, ಅವರ ಪರವಾಗಿ ತಾವೇ ಮತಯಾಚನೆಯನ್ನೂ ಮಾಡುತ್ತಿದ್ದಾರೆ. ಅಷ್ಟಕ್ಕೂ ಬಿಗ್‌ಬಾಸ್ ಶುರುವಾಗಿ ಎರಡನೆಯ ತಿಂಗಳಿಗೆ ಕಾಲಿಟ್ಟಿದ್ದು, ಇಲ್ಲಿಯವರೆಗೆ ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಈ ವಾರ ಒಂದು ತಂಡದ ನಾಯಕನಾಗಿ ನಾಲ್ಕಕ್ಕೆ ನಾಲ್ಕು ಮ್ಯಾಚ್ ಗೆದ್ದಿದ್ದಾರೆ. ಹಲವರು ತಮ್ಮ ನೆಚ್ಚಿನ ಸ್ಪರ್ಧಿಗಳ ಪರ ಬ್ಯಾಟಿಂಗ್ ಬೀಸುತ್ತಿದ್ದಾರೆ, ಅವರೇ ಗೆಲ್ಲಲಿ ಎನ್ನುತ್ತಿದ್ದಾರೆ. ಅದೇ ರೀತಿ ಡ್ರೋನ್ ಪ್ರತಾಪ್ ಪರವಾಗಿ ಹಲವರು ನಿಂತಿದ್ದಾರೆ.
ನಾನು ನಂದಿನಿ ಖ್ಯಾತಿಯ ವಿಕ್ಕಿ 'ಬಿಗ್‌ಬಾಸ್' ಮನೆಯೊಳಕ್ಕೆ! ಆದ್ರೆ ಇಲ್ಲಿದೆ ಬಹು ದೊಡ್ಡ ಟ್ವಿಸ್ಟ್...