Asianet Suvarna News Asianet Suvarna News

ಮುಕ್ತ ಧಾರಾವಾಹಿಯ ’ಗೌರಿ’ ಬಿಕಿನಿ ವಿಡಿಯೋ ವೈರಲ್!

‘ಏಸಾ ದೇಖಾ ನಹೀ, ಖೂಬ್‌ಸೂರತ್‌ ಕೋಯೀ..’

ರಾಹತ್‌ ಫತೇ ಆಲಿಖಾನ್‌ ದನಿಯಲ್ಲಿ ಅಲೆ ಅಲೆಯಾಗಿ ಬರುವ ಹಾಡು. ಜಾವೇದ್‌ ಅಖ್ತರ್‌ ಬರೆದ ಈ ಹಾಡಿನಲ್ಲಿ ಹೆಣ್ಣಿನ ದೇಹದ ಅದ್ಭುತ ವರ್ಣನೆ ಇದೆ. ಈ ಹಾಡನ್ನು ಬಳಸಿಕೊಂಡು ದಿವ್ಯಾ ರಘುರಾಮ್‌ ಒಂದು ವೀಡಿಯೋವನ್ನು ಫೇಸ್‌ಬುಕ್‌ನಲ್ಲಿ ತೇಲಿ ಬಿಟ್ಟಿದ್ದಾರೆ. ಆ ವೀಡಿಯೋದಲ್ಲಿರುವುದು ಬಿಕಿನಿ ಹಾಕಿ ಸಮುದ್ರದ ಮಧ್ಯ ನಿಂತು ನಗುವ ಮಧ್ಯ ವಯಸ್ಸಿನ ಹೆಣ್ಣಿನ ದೇಹ. ಕಂದು ಬಣ್ಣದ, ತುಸು ದಪ್ಪ ಅನಿಸುವ ಪಕ್ಕಾ ಭಾರತೀಯ ಕರ್ವಿ ಮೈಕಟ್ಟು, ಕಣ್ಣಲ್ಲಿ ಮಿಂಚು. ಎಲ್ಲೂ ಫೆäಟೋಶಾಪ್‌ ಮಾಡಿದ ಗುರುತಿಲ್ಲ. ‘ಬಿಕಿನಿ’ ಅಂದ ಕೂಡಲೇ ನಮ್ಮ ಮನಸ್ಸಿಗೆ ಬರುವ ತೆಳ್ಳನೆಯ ಬಾಗಿ ಬಳುಕುವ ಹೆಣ್ಣಿನ ದೇಹಕ್ಕಿಂತ ಇದು ಭಿನ್ನ. ಆದರೆ ಇಲ್ಲೂ ಒಂದು ಸೌಂದರ್ಯವಿದೆ, ನೋಡುವ ಕಣ್ಣು ನಮಗಿರಬೇಕಷ್ಟೇ.

Divya raghuram bikini post on women's day goes viral
Author
Bengaluru, First Published Mar 10, 2019, 2:53 PM IST

ಪ್ರಿಯಾ

ಈ ವೀಡಿಯೋದಲ್ಲಿರುವ ಹೆಣ್ಣು ಸ್ವತಃ ದಿವ್ಯಾ ರಘುರಾಮ್‌ ಅವರೇ. ಬರೀ ದಿವ್ಯಾ ಅಂದರೆ ಫಕ್ಕನೆ ಯಾರು ಅಂತ ಹೊಳೆಯಲಿಕ್ಕಿಲ್ಲ. ಟಿ.ಎನ್‌ ಸೀತಾರಾಮ್‌ ಅವರ ಧಾರಾವಾಹಿಗಳನ್ನು ನೋಡುತ್ತಿದ್ದವರಿಗೆ ‘ಮುಕ್ತ’ ಸೀರಿಯಲ್‌ನ ‘ಗೌರಿ’ ಅಂದರೆ ಗೊತ್ತಾದೀತು. ನೀಟಾಗಿ ಕಾಟನ್‌ ಸೀರೆಯುಟ್ಟು ಬರುತ್ತಿದ್ದ ಗೌರಿ ಇಲ್ಲಿ ಏಕ್‌ದಂ ಬಿಕಿನಿ ಉಡುಗೆಯಲ್ಲಿದ್ದಾರೆ. ಮಾಲ್ಡೀವ್ಸ್ನ ನೀಲಿ ಕಡಲಲ್ಲಿ ಈ ಫೋಟೋಗಳನ್ನು ಸೆರೆಹಿಡಿದವರು ದಿವ್ಯಾ ಪತಿ ಬಾಲಾಜಿ ಮನೋಹರ್‌.

ದಿವ್ಯಾ ಅವರು ಸೋಶಿಯಲ್‌ ಮೀಡಿಯಾದಲ್ಲಿ ಈ ವೀಡಿಯೋ ಹಾಕಿದ್ದಕ್ಕೆ ಒಂದು ಗಟ್ಟಿಉದ್ದೇಶ ಇದೆ. ಹೆಣ್ಣಿನ ಸೌಂದರ್ಯ, ವ್ಯಕ್ತಿತ್ವಕ್ಕೆ ಹಾಕಿದ ಚೌಕಟ್ಟನ್ನು ಮೀರಿ ಬೆಳೆಯಬೇಕು, ನಾವು ಹೇಗಿದ್ದೇವೋ ಅದನ್ನೇ ಸಂತೋಷವಾಗಿ ಒಪ್ಪಿಕೊಳ್ಳಬೇಕು, ಹಾಗಿದ್ದರೆ ಮಾತ್ರ ಲೈಫ್‌ ಖುಷಿಯಾಗಿರಲು ಸಾಧ್ಯ ಎಂದು ನಂಬಿದವರು ಅವರು. ಅದಕ್ಕೆ ಪೂರಕವಾಗಿದೆ ಈ ವೀಡಿಯೋ. ವಿದೇಶದಲ್ಲಿ ಸಾಕಷ್ಟುಮಹಿಳೆಯರು ತಮ್ಮ ದೇಹದ ಶೇಪ್‌ ಬಗ್ಗೆ, ಬಣ್ಣದ ಬಗ್ಗೆ ತಲೆ ಕೆಡಿಸಿಕೊಳಲ್ಲ. ತಮಗೆ ಹೇಗೆ ಬೇಕೋ ಹಾಗೆ ಬಿಂದಾಸ್‌ ಆಗಿ ಬದುಕುತ್ತಿರುತ್ತಾರೆ. ಆದರೆ ನಮ್ಮ ದೇಶದಲ್ಲಿ ಮಾತ್ರ ದೇಹದ ಬಗ್ಗೆ ಮುಜುಗರ ಪಟ್ಟುಕೊಳ್ಳುವುದು ಹೆಚ್ಚು. ನಾವೆಲ್ಲ ಈ ಸ್ಟೀರಿಯೊಟೈಪ್‌ನಿಂದ ಹೊರಬರದ ಹೊರತು ಆತ್ಮವಿಶ್ವಾಸ ಬರಲ್ಲ. ಕುಗ್ಗಿ ಬದುಕಬೇಕಾಗುತ್ತದೆ. ಹಾಗಂತ ಎಲ್ಲ ಹೆಣ್ಣುಮಕ್ಕಳೂ ಈ ಥರ ಬೋಲ್ಡ್‌ ಆಗಿ ಇರಬೇಕು ಅಂತಲ್ಲ. ಆದರೆ ಪ್ರತೀ ಹೆಣ್ಣೂ ತನ್ನ ಅಸ್ಮಿತೆಯನ್ನು ಸಂತೋಷದಿಂದ ಒಪ್ಪಿಕೊಳ್ಳಬೇಕು. ಆಕೆಯ ದೇಹ, ಬಣ್ಣ ಎಲ್ಲವೂ ಒಂದು ಚಾರ್ಟ್‌ನಲ್ಲಿ ಇದ್ದ ಹಾಗಿರಲು ಸಾಧ್ಯವಿಲ್ಲ. ತನ್ನ ವಿಭಿನ್ನತೆಯನ್ನು ಹೆಣ್ಣು ಸಂಭ್ರಮಿಸಬೇಕು ಅನ್ನುವ ಕಾಳಜಿ ದಿವ್ಯಾ ಅವರ ಈ ವೀಡಿಯೋ ಹಿಂದಿದೆ.

‘ಸ್ವತಃ ಐಶ್ವರ್ಯಾ ರೈಯೇ ಎಷ್ಟೋ ಸಲ ನಾವಂದುಕೊಂಡ ಐಶ್ವರ್ಯಾ ರೈ ಆಗಿರಲ್ಲ. ಫೋಟೋಶಾಪ್‌ ಮಾಡಿ ಕಲರ್‌ ಬ್ರೈಟ್‌ ಮಾಡಿ ತೆಗೆದ ಆಕೆಯ ಫೋಟೋ ನೋಡಿ ನಾವೂ ಹಾಗಾಗ್ಬೇಕು ಅಂತ ಕನಸು ಕಾಣ್ತಿರುತ್ತೇವೆ. ಇಂಥ ಫೇಕ್‌ಗಳಿಂದ ಹೊರಬಂದು ರಿಯಲ್‌ ಲೈಫ್‌ ಅನ್ನು ಒಪ್ಪಿಕೊಳ್ಳಬೇಕು. ನಾವು ಚೆಂದ ಇಲ್ಲ ಅಂತ ಕೆಲವರು ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಮೇಕಪ್‌ ಮಾಡಿಕೊಳ್ಳುತ್ತಾರೆ. ಅದು ಅವರವರ ಇಷ್ಟ. ಅದನ್ನು ನಾನು ವಿರೋಧಿಸಲ್ಲ. ಆದರೆ ಅಷ್ಟುಮಾಡಿದ ಬಳಿಕವೂ ಅವರಿಗೆ ತಾವು ಸುಂದರವಾಗಿದ್ದೇವೆ ಅನ್ನುವ ಸಮಾಧಾನವಿರುತ್ತಾ ಅನ್ನುವುದು ಮುಖ್ಯ. ಖಂಡಿತಾ ಇರಲ್ಲ. ತಮ್ಮ ದೇಹವನ್ನು ಕೊರತೆ ಅಂದುಕೊಂಡು ಅವರು ಕುಗ್ಗಿಯೇ ಇರುತ್ತಾರೆ. ನಾನು ಚೆನ್ನಾಗಿದ್ದೀನಿ ಅಂತ ಮನಸ್ಸಿಗೆ ಬರದ ಹೊರತು ಅವರು ಎಷ್ಟೇ ಕಸರತ್ತು ಮಾಡಿದರೂ ಪ್ರಯೋಜನ ಇಲ್ಲ.’ ಅನ್ನುವ ದಿಟ್ಟಮಾತು ದಿವ್ಯಾ ಅವರದು.

 

ತನ್ನ ವೀಡಿಯೋಗೆ ಸಂಬಂಧಿಸಿ ದಿವ್ಯಾ ಬರೆದ ಕೆಲವು ಸಾಲುಗಳ ಭಾವಾನುವಾದ ಇಲ್ಲಿದೆ:

ನಾನು ಹೇಳಬೇಕಾಗಿರೋದು ಇಷ್ಟೇ. ಚೆಲುವಿಗೆ ಆಕಾರದ ಹಂಗಿಲ್ಲ. ನೀವೆಷ್ಟೇ ಮೇಕಪ್‌ ಮಾಡಿಕೊಂಡರೂ, ಸರ್ಜರಿ ಮಾಡಿಸಿಕೊಂಡರೂ, ದುಬಾರಿ ಬಟ್ಟೆ, ಆಭರಣ ತೊಟ್ಟರೂ, ಡಯಟ್ಟು, ವ್ಯಾಯಾಮ, ಬ್ರಾಂಡೆಡ್‌ ಮೇಕಪ್‌, ಫೋಟೋ ಶಾಪ್‌ ಮಾಡಿದ ಫೋಟೋಗುಚ್ಛ- ತೆರೆದಿಟ್ಟರೂ ನೀವು ಸುಂದರವಾಗಿದ್ದೀರಿ ಅನ್ನಿಸುವುದು ಅಂತರಾಳದಿಂದ ನೀವು ಸಂತೋಷವಾಗಿದ್ದಾಗ ಮಾತ್ರ. ಚೆಲುವು ಹೊರಗೆ ಕಾಣುವುದು ಅಲ್ಲವೇ ಅಲ್ಲ, ಅದು ಅಂತರಂಗದ ಚಿಲುಮೆ. ಅದು ಶುರುವಾಗುವುದು ಹೇಗಿದ್ದೀವೋ ಹಾಗೆ ನಮ್ಮನ್ನು ನಾವು ಒಪ್ಪಿಕೊಳ್ಳುವುದರಿಂದ ಮತ್ತು ನಮ್ಮನ್ನು ನಾವು ಪ್ರೀತಿಸುವುದರಿಂದ.

ಇಲ್ಲಿ ಹೊಳೆಯುವ ನನ್ನ ಮೈಬಣ್ಣ, ನುಣುಪಾದ ಚರ್ಮ ಕಂಡು ಬೆರಗಾಗಬೇಡಿ. ಅದು ಹಾಗೆ ಕಾಣಿಸಲು ತಂತ್ರಜ್ಞಾನದ ಕೊಡುಗೆ ಸಾಕಷ್ಟಿದೆ. ಫಿಲ್ಟರ್‌ಗಳನ್ನು ಬಳಸಿದ್ದಾರೆ, ಬಂಗಾರದ ಬೆಳಕಲ್ಲಿ ಚಿತ್ರೀಕರಿಸಿದ್ದಾರೆ. ಅಲ್ಲದೇ ಹೋದರೆ ನಾನೂ ನಿಮ್ಮ ಮೈಬಣ್ಣದವಳೇ.

ಅಂಕಲ್‌ಗಳು ಈ ವಿಡಿಯೋ ನೋಡಿ ನನಗೆ ಡೈರೆಕ್ಟ್ ಮೆಸೇಜು ಮಾಡೋಕೆ ಹೋಗಬೇಡಿ. ನಮಸ್ತೆ, ತಿಂಡಿ ಆಯ್ತಾ ಅಂತೆಲ್ಲ ಕೇಳಬೇಡಿ. ನಾನು ತಿಂಡಿ ತಿಂದೇ ತಿನ್ನುತ್ತೇನೆ. ಆ ಬಗ್ಗೆ ನಿಮ್ಮ ಕಾಳಜಿಗೆ ಧನ್ಯವಾದ ಕಣ್ರೀ. ಮತ್ತೆ, ಹಾಯ್‌ ಅನ್ನೋ ಸಾವಿರಾರು ಸಂದೇಶಗಳನ್ನು ನನ್ನ ಇನ್‌ಬಾಕ್ಸಲ್ಲಿ ಕೆಟ್ಟಹಾರರ್‌ ಕತೆಗಳಂತೆ ನೋಡದೇ ಬಿದ್ದಿವೆ. ಅದಕ್ಕಿಂತ ಹೆಚ್ಚಿಗೇನಾದರೂ ಹೇಳುತ್ತಾರೇನೋ ಅಂತ ನಾನು ಕಾಯುತ್ತಿರುತ್ತೇನೆ. ದಯವಿಟ್ಟು ‘ಹಾಯ’ಬೇಡಿ!

ಫ್ಲರ್ಟು ಮಾಡುವ ಗಂಡ‚ಸರೇ, ತೊಂದರೆ ತಗೋಬೇಡಿ. ನಾನು ಸಂತೃಪ್ತ ಗೃಹಿಣಿ! ಈ ಫೋಟೋ ತೆಗೆದವನೇ ನನ್ನ ಗಂಡ. ನಾನು ಬೆಳಗ್ಗೆ ಏಳುವ ಹೊತ್ತಿಗೆ ಇಲ್ಲಿ ಕಾಣಿಸುವ ಥರ ಇರೋದಿಲ್ಲ ಮತ್ತೆ. ನಾನು ಅನಾಕರ್ಷಕವಾಗಿಯೇ ಕಾಣಿಸುತ್ತೇನೆ, ಬೆಳಗೆದ್ದಾಗ. ಹಾಂ. ನಂಗೊಂಚೂರು ಮೀಸೆಯೂ ಉಂಟು.

ನೀನಿಷ್ಟಇಲ್ಲ ಅನ್ನೋ ಸಂಬಂಧಿಕರಿಗೆ ಸೇಮ್‌ ಟು ಯೂ! ನಾನು ಸಂಸ್ಕಾರವಂತೆ ಅಲ್ಲ ಅಂತ ಮೂಗು ಮುರಿಯೋರಿಗೆ ಒಂದು ಮಾತು, ನಾನು ಯಾವತ್ತೂ ಭಯಂಕರ ಸಂಸ್ಕಾರಿ ಆಗಿರಲೇ ಇಲ್ಲ. ನಾನು ಪೋಸ್ಟ್‌ ಮಾಡಿದ ವೀಡಿಯೋದ ಹಿನ್ನೆಲೆ ಗಾಯನದಲ್ಲಿ ಬರುವ ಜಾವೇದ್‌ ಅಖ್ತರ್‌ ಅವರ ಸಾಲಿನಲ್ಲಿ ಬರುವ ‘ಅಜಂತಾ ಕಿ ಮೂರತ್‌ ಕೊಯಿ..’ ಆಗಲು ಪ್ರಾಮಾಣಿಕವಾಗಿ ಪ್ರಯತ್ನಿಸುವವಳು ನಾನು.

ಸೀರಿಯಲ್‌ನಲ್ಲಿ ಗೌರಿಯ ಪಾತ್ರ ಮಾಡಿದ ತಕ್ಷಣ ನನ್ನನ್ನು ಹೊರ ಜಗತ್ತಿನಲ್ಲೂ ಗೌರಿಯಂತೇ ಕಾಣುವವರು ಹಲವರು. ಜೀನ್ಸ್‌ನಲ್ಲಿ ನನ್ನ ಕಂಡರೆ ಅವರು ತಬ್ಬಿಬ್ಬಾಗುತ್ತಾರೆ. ಮುಖ ತಿರುಗಿಸಿಕೊಂಡು ಹೋಗುತ್ತಾರೆ. ನೀವು ಗೌರೀನಾ? ಹೂಂ, ನಾನೇ ಗೌರಿ. ಏನು ಮಾಡೋಣಾ. ನಾನಿರೋದೇ ಹಾಗೆ. ನಾಳೆಯಿಂದ ನನ್ನನ್ನು ಅನ್‌ಫಾಲೋ ಮಾಡಿ. ನಾನು ‘ಅ​-ಗೌರಿ’ಯಾಗಿಯೇ ಇರಬೇಕೆಂದು ತೀರ್ಮಾನಿಸಿದ್ದೇನೆ!

ನಿಮಗೊಂದು ತಮಾಷೆ ಗೊತ್ತಾ? ಡಿಗ್ರಿ ಮುಗಿಸುವವರೆಗೂ ನಾನು ಸ್ಲೀವ್‌ಲೆಸ್‌ ಉಡುಪುಗಳನ್ನೂ ತೊಟ್ಟುಕೊಂಡವಳಲ್ಲ. ನನ್ನ ಉಡುಪುಗಳ ಬಗ್ಗೆ ಬಹಳ ಕಾನ್ಶಿಯಸ್‌ ಆಗಿರುತ್ತಿದ್ದೆ. ನನ್ನ ಸ್ನೇಹಿತರೊಬ್ಬರು ಹುರಿದುಂಬಿಸಿ ಬೆಂಬಲ ನೀಡದಿದ್ದರೆ ಇನ್ನೂ ಹಾಗೆಯೇ ಇರುತ್ತಿದ್ದೆ. ಈಗ ನಾನೊಬ್ಬ ಚಾರಿತ್ರ್ಯಹೀನ ಹೆಣ್ಣಿನ ಹಾಗೆ ಕಾಣಬಹುದು, ಯಾಕೆಂದರೆ ಬಿಕಿನಿ ತೊಟ್ಟಿದ್ದೀನಿ. ಇನ್ನೂ ಮುಂದುವರಿದು ‘ಬಿಂಬೊ’ ಅಂತನಾದ್ರೂ ಅನಿಸಬಹುದು. ಶಾಂತಂ ಪಾಪಂ!

Follow Us:
Download App:
  • android
  • ios