BBK9 ನಾನು ಗಡಿನಾಡ ಕನ್ನಡಿಗ ಎಂದ ರೂಪೇಶ್ ಶೆಟ್ಟಿ ಕುಟುಂಬಕ್ಕೆ ಬೆದರಿಕೆ, ದೂರು ದಾಖಲು
ಸಂಕಷ್ಟದಲ್ಲಿ ಸಿಲುಕಿಕೊಂಡ ಬಿಗ್ ಬಾಸ್ ಸ್ಪರ್ಧೆ. ಗಡಿನಾಡ ಕನ್ನಡಿಗ ಎಂದಿದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ ನೆಟ್ಟಿಗರು...
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕರಾವಳಿಯ ಯುವಕ ರೂಪೇಶ್ ಶೆಟ್ಟಿ ನೀಡಿದ ಹೇಳಿಕೆಯೊಂದರ ವಿರುದ್ದ ಸದ್ಯ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗಿದ್ದು, ಕೆಲವರು ಸಾಮಾಜಿಕ ತಾಣಗಳಲ್ಲಿ ಪರೋಕ್ಷ ಬೆದರಿಕೆ ಒಡ್ಡಿದ್ದರ ಹಿನ್ನೆಲೆಯಲ್ಲಿ ರೂಪೇಶ್ ಪೋಷಕರು ಮಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಬಿಗ್ ಬಾಸ್ ನಲ್ಲಿ ಕನ್ನಡ ರಾಜ್ಯೋತ್ಸವದ ದಿನ ಮಾತನಾಡುತ್ತಾ ರೂಪೇಶ್ ಶೆಟ್ಟಿ, ನಾನು ಗಡಿನಾಡ ಕನ್ನಡಿಗ ಅಂತ ಹೇಳಿ, ತಾನು ಹುಟ್ಟಿ ಬೆಳೆದ ಊರಿನ ಬಗ್ಗೆ ಮಾತನಾಡಿದ್ದರು. ಆದರೆ ಇದು ಕೆಲ ತುಳು ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ತುಳುನಾಡಿನಲ್ಲಿ ಹೆಸರು ಗಳಿಸಿ ಇದೀಗ ಗಡಿನಾಡ ಕನ್ನಡಿಗ ಅಂತ ಹೇಳಿರುವುದು ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗಿತ್ತು. ಹಲವು ತುಳುವರು ರೂಪೇಶ್ ಬೆಂಬಲಕ್ಕೆ ನಿಂತರೂ ಮತ್ತೆ ಕೆಲವರು ರೂಪೇಶ್ ವಿರುದ್ದ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ರೂಪೇಶ್ ಪೋಷಕರಿಗೂ ಕೆಲವರು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಗೆ ದೂರು ನೀಡಿದ್ದಾರೆ. ಸದ್ಯ ದೂರು ಸ್ವೀಕರಿಸಿದ ಕಮಿಷನರ್ ಶಶಿಕುಮಾರ್, ಸೆನ್ ಪೊಲೀಸ್ ಠಾಣೆಗೆ ಕಳುಹಿಸಿ ಕೋರ್ಟ್ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಅಷ್ಟಕ್ಕೂ ಬಿಗ್ ಬಾಸ್ ನಲ್ಲಿ ರೂಪೇಶ್ ಹೇಳಿದ್ದೇನು?
'ನಾನು ಕಲಿತದ್ದು ಕನ್ನಡ ಮೀಡಿಯಂನಲ್ಲಿ. ಆದರೆ ನಾನು ಗಡಿನಾಡ ಕನ್ನಡಿಗ. ನಾನು ಹುಟ್ಟಿದ್ದು ಮಂಗಳೂರಿನಿಂದ 30 ಕಿ.ಮೀ ದೂರದ ಕೇರಳದ ಕಾಸರಗೋಡಿನಲ್ಲಿ. ನಾವು ಗಡಿನಾಡ ಕನ್ನಡಿಗರು. ಕನ್ನಡ ಕಲಿಯಲು ಆಸೆ ಇದ್ದರೂ ಅಲ್ಲಿ ಕಲಿಯೋದು ಕಷ್ಟ. ಅಲ್ಲಿ ಶಾಲೆಯಲ್ಲಿ ಕನ್ನಡ ಕಲಿಸೋ ಮಾಸ್ಟರ್ ಇಲ್ಲ. ಆದರೆ ನಾನು ಕೇರಳದಲ್ಲಿ ಇದ್ದರೂ ಕನ್ನಡ ಮೀಡಿಯಂನಲ್ಲಿ ಕಲಿತಿದ್ದು. ಅಷ್ಟು ಆತ್ಮವಿಶ್ವಾಸವನ್ನು ಕನ್ನಡ ಕಲಿಸಿ ಅಲ್ಲಿನ ಶಿಕ್ಷಕರು ನಮಗೆ ಕೊಟ್ಟಿದ್ದಾರೆ' ಹೀಗೆ ರೂಪೇಶ್ ಶೆಟ್ಟಿ ಬಿಗ್ ಬಾಸ್ ನಲ್ಲಿ ಹೇಳಿದ್ದರು. ಆದರೆ ತುಳುವ ಅಂತ ಹೇಳಿಕೊಳ್ತಾ ಇದ್ದ ರೂಪೇಶ್ ಶೆಟ್ಟಿ ಗಡಿನಾಡ ಕನ್ನಡಿಗ ಅಂತ ಹೇಳಿರೋದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಬೆರಳೆಣಿಕೆಯವ ಕೆಲವರು ರೂಪೇಶ್ ಶೆಟ್ಟಿ ನಟಿಸಿದ ತುಳು ಚಿತ್ರಗಳನ್ನು ಬಹಿಷ್ಕರಿಸೋ ಬಗ್ಗೆ ಪೋಸ್ಟ್ ಹಾಕಿದ್ದರೆ, ಮತ್ತೆ ಕೆಲವರು ರೂಪೇಶ್ ಶೆಟ್ಟಿ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೇ ನಮ್ಮ ಬೆಂಬಲ ತುಳುವನಿಗೆ ಹೊರತು, ಗಡಿನಾಡ ಕನ್ನಡಿಗನಿಗೆ ಅಲ್ಲ ಅನ್ನೋ ಪೋಸ್ಟ್ ಕೂಡ ಹರಿದಾಡಿದೆ. ಜೊತೆಗೆ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ರೂಪೇಶ್ ಶೆಟ್ಟಿಯನ್ನ ಗಡಿನಾಡಿಗೆ ಓಡಿಸಬೇಕು ಅಂತ ಪೋಸ್ಟ್ ಹಾಕಲಾಗಿದೆ.