ನಟ, ಕಾಮಿಡಿಯನ್ ಮಡೆನೂರು ಮನು ವಿರುದ್ಧ ಅ*ತ್ಯಾಚಾರ ಆರೋಪ ಮಾಡಲಾಗಿದೆ. ಅಷ್ಟೇ ಅಲ್ಲದೆ ಕನ್ನಡದ ಸ್ಟಾರ್ ನಟರ ವಿರುದ್ಧ ಅವರು ಆಡಿದ ಆಡಿಯೋವೊಂದು ವೈರಲ್ ಆಗಿತ್ತು. ಈ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡ ಮಡೆನೂರು ಮನು ವಿರುದ್ಧ ಸಹನಟಿಯೋರ್ವರು ಅ*ತ್ಯಾಚಾರ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೆ ಶಿವರಾಜ್‌ಕುಮಾರ್, ಧ್ರುವ ಸರ್ಜಾ, ದರ್ಶನ್ ಬಗ್ಗೆ ಅವಹೇಳನಕಾರಿ ಪದ ಬಳಸಿರುವ ಆಡಿಯೋ ವೈರಲ್ ಆಗಿದೆ. ಈಗ ಈ ಬಗ್ಗೆ ಮಡೆನೂರು ಮನು ಅವರು ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ.
ಮಡೆನೂರು ಮನು ಹೇಳಿದ್ದೇನು?
ನನ್ನ ಸಿನಿಮಾ ರಿಲೀಸ್‌ಗಿಂತ ಮುಂಚೆ ನಾನು ಜೈಲಿನ ಒಳಗಡೆ ಹೋಗಿ, ಅದು ರಿಲೀಸ್ ಆಗೋಷ್ಟರಲ್ಲಿ ಏನೇನು ಆಯ್ತು ಅನ್ನೋದು ಹೊರಗಡೆ ಬಂದಮೇಲೆ ನನಗೆ ಗೊತ್ತಾಗಿದೆ. ಒಂದು ಸಿನಿಮಾ ಚೆನ್ನಾಗಿದೆ ಅಂದಾಗ ನನ್ನ ಬಗ್ಗೆ ಒಂದಾದ ಮೇಲೆ ಒಂದು ಆಡಿಯೋ ರಿಲೀಸ್ ಮಾಡ್ತಾರೆ. ಆ ರೀತಿ ಆಡಿಯೋ ವಿಡಿಯೋ ರೆಕಾರ್ಡ್‌ಗಳು ಮಾಡುವಂತ ಐಡಿಯಾ ನನಗೆ ಏನಾದರೂ ಇದ್ದಿದ್ರೆ ನಾನು ಸಾಕ್ಷಿಗಳನ್ನು ಹುಟ್ಟು ಹಾಕುತ್ತಿದ್ದೆ. ನಾನು ಆತರ ಕಂಪನಿಗಳು ಯಾವುದು ಓಪನ್ ಮಾಡಿಲ್ಲ. ನನಗೆ ವ್ಯವಸಾಯ ಜೊತೆಗೆ ಕಲೆ ಎರಡನ್ನೇ ನಂಬಿಕೊಂಡು ಬಂದಿದ್ದೇನೆ.
ನಾನು, ನನ್ನ ಹೆಂಡತಿ ಕರ್ಕೊಂಡು ಹೋಗಿ ಏನಾದರೂ ದೂರು ಕೊಟ್ಟಿದ್ರೆ ಅದು ಬೇರೆ ಥರ ಆಗ್ತಿತ್ತು. ಆದರೆ ಜನರು ಮಾತ್ರ ಇದೆಲ್ಲ ನಮ್ಮ ಸಿನಿಮಾ ಗಿಮಿಕ್ ಅಂತ ಹೇಳ್ತಾರೆ. ನಾನು ಇದುವರೆಗೂ ಯಾವುದೇ ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲು ಹತ್ತಿರಲಿಲ್ಲ. ನಾನು ಆ ಆಡಿಯೋ ಕೇಳಿದಾಗ ಅದು ನಂದಲ್ಲ ಅಂತ ಅಂದುಕೊಂಡಿದ್ದೆ. ಫ್ರೆಂಡ್ಸ್ ಸರ್ಕಲ್ ಬಳಿ ಆಡಿಯೋ ಇತ್ತು, ಅದನ್ನು 50000 ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರಂತೆ. ಹೀಗಾಗಿ ಆ ಆಡಿಯೋ ರಿಲೀಸ್ ಮಾಡಿದವರು ಯಾರು ಎನ್ನೋದು ಗೊತ್ತಾಗಿದೆ. ಆ ಆಡಿಯೋ ಕೇಳಿದರೆ ಅಸಹ್ಯ ಅನಿಸಿತು. ನನ್ನ ಮೇಲೆ ಇಷ್ಟು ದ್ವೇಷ ಸಾಧಿಸೋ ಬದಲು ವಿಷ ಕೊಡಿ. ಏನು ದೃಷ್ಟಿ ಬಿತ್ತೋ ಏನೋ ನನ್ನ ದುರಾದೃಷ್ಟ ಈ ರೀತಿ ಆಗಿದೆ.
ಅಲೋಕ್ ಎನ್ನುವವನು ನನ್ನ ಮಾತುಗಳನ್ನು ರೆಕಾರ್ಡ್ ಮಾಡಿದ್ದಾನೆ. ದರ್ಶನ್ ಪುಟ್ಟಣ್ಣಯ್ಯ ಅವರ ಜೊತೆ ಮಾತನಾಡಿ, ಸಿನಿಮಾ ಯಶಸ್ಸಿಗೆ ಬೈಟ್ ಕೊಡಿ ಅಂತ ಹೇಳಿದ್ದೆ. ಶಿವಣ್ಣ, ಧ್ರುವ ಸರ್ಜಾ ಅವರು ಬೆಂಬಲ ಕೊಟ್ಟ ಬಗ್ಗೆಯೂ ನಾನು ಅಲೋಕ್ ಹಾಗೂ ಆ ಲೇಡಿ ಜೊತೆ ಮಾತನಾಡಿದ್ದೆ. ನನಗೆ ಆ ಲೇಡಿ ಮನೆಯಲ್ಲಿ ಒಂದು ಡ್ರಿಂಕ್ಸ್ ಕೊಡಲಾಗಿತ್ತು, ಅದರಲ್ಲಿ ಯಾವುದೇ ಲೇಬಲ್ ಇರಲಿಲ್ಲ. ಹೀಗಾಗಿ ನಾನು ಏನು ಮಾತನಾಡಿದೆ ಎನ್ನೋದು ಗೊತ್ತಿಲ್ಲ.
ನಾನು ಯಾರಿಗೂ ಸಾವು ಬಯಸೋದಿಲ್ಲ. ಆದರೆ ಮನಸ್ಸಿನಿಂದ ನಾನು ಏನೂ ಹೇಳಿಲ್ಲ. ಡ್ರಿಂಕ್ಸ್‌ವೊಳಗಡೆ ಏನು ಮಿಕ್ಸ್ ಮಾಡಿದ್ದರೋ ಏನೋ ಹೀಗಾಗಿ ಏನೇನೋ ಆಗಿದೆ. ಮೂರು ವರ್ಷದಿಂದ ಡಯೆಟ್ ಮಾಡುತ್ತಿದ್ದರಿಂದ ನಾನು ಕುಡಿಯುತ್ತಿರಲಿಲ್ಲ. ಆ ಆಡಿಯೋ ಸತ್ಯ ಆಗಿದ್ದರೆ ನಾನು ಆಡಿಯೋ ಡಿಲಿಟ್ ಮಾಡಿಸುತ್ತಿದ್ದೆ. ಇಷ್ಟು ವರ್ಷಗಳಿಂದ ಕಷ್ಟಪಟ್ಟು ಬಂದಿರೋ ನಾನು ಯಾಕೆ ಈ ರೀತಿ ಮಾಡ್ತೀನಿ. ನನಗೆ ಬ್ಯಾಕ್‌ಗ್ರೌಂಡ್ ಇಲ್ಲ, ಹಣವೂ ಇಲ್ಲ, ದುಡ್ಡು ಇದ್ದಿದ್ರೆ ನನ್ನ ಜೊತೆಗೆ ಇದ್ದವರು ಯಾರಾದರೂ ಅವರಿಗೆ ಹೋಗಿ ಹೊಡೆಸುತ್ತಿದ್ದೆ.
ನನ್ನ ಮೊಬೈಲ್‌ಗೆ ಲಾಕ್ ಇರಲಿಲ್ಲ. ಕಳೆದ ಎರಡು ತಿಂಗಳ ಹಿಂದೆ ನಾನು ಮೊಬೈಲ್ ಲಾಕ್ ಮಾಡಿದ್ದೆ. ಈ ಎಲ್ಲ ಆಟಗಳನ್ನು ಒಂದು ಲೇಡಿ ಆಡಿಸುತ್ತಿದ್ದಾರೆ. ಅವರು ಗಂಡ ಹಾಗೂ ಮಗು ಜೊತೆಗೆ ಇದ್ದಾರೆ. ಅವರು ಯಾರು ಎನ್ನೋದು ಹದಿನೈದು ದಿನಗಳಲ್ಲಿ ಗೊತ್ತಾಗುತ್ತದೆ. ನಾನು ಈಗ ಜೈಲಿನಿಂದ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಕ್ಕೆ ಈಗ ಸಂತ್ರಸ್ತೆಯ ಹೆಸರು ಹೇಳೋ ಹಾಗಿಲ್ಲ.
ನಾನು ಇನ್ನೊಂದು ಸಿನಿಮಾಕ್ಕೆ ತಯಾರಿ ಕೂಡ ಮಾಡಿಕೊಂಡಿದ್ದೆ. ಆದರೆ ಈ ಸಿನಿಮಾಕ್ಕೆ ನನ್ನ ಕಟೌಟ್ ಮಾಡಿದ್ದರು, ಸಿನಿಮಾ ರಿಲೀಸ್ ಹಿಂದಿನ ದಿನ ಈ ರೀತಿ ಆಯ್ತು.
