ಕಾಮಿಡಿ ಕ್ವೀನ್ ಭಾರತಿ ಸಿಂಗ್ ತಮ್ಮ ವಿಡಿಯೋ ಬ್ಲಾಗ್‌ನಲ್ಲಿ ಮನೆಗೆಲಸದವರ ಬಳಿ ಕ್ಷಮೆ ಕೇಳಿದ್ದಾರೆ.  ಈ ವಿಡಿಯೋವನ್ನು ಭಾರತಿ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬಹಿರಂಗವಾಗಿ ಮನೆಗೆಲಸದವರ ಬಳಿ ಕ್ಷಮೆ ಕೇಳಿದ ಭಾರತಿ ಸಿಂಗ್!

ಮುಂಬೈ: ಕಿರುತೆರೆಯ ಕಾಮಿಡಿ ಕ್ವೀನ್ ಅಂತಾನೇ ಕರೆಸಿಕೊಳ್ಳುವ ಹಾಸ್ಯ ಕಲಾವಿದೆ ಭಾರತಿ ಸಿಂಗ್ ತಮ್ಮ ವಿಡಿಯೋ ಬ್ಲಾಗ್‌ನಲ್ಲಿ ಮನೆಗೆಲಸದವರ ಬಳಿ ಕ್ಷಮೆ ಕೇಳಿದ್ದಾರೆ. ಭಾರತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ಕಿರುತೆರೆಯ ಜನಪ್ರಿಯ ಜೋಡಿ. ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಸೆರೆ ಹಿಡಿದುಕೊಳ್ಳುವ ಭಾರತಿ ಮತ್ತು ಹರ್ಷ ಆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಬುಧವಾರ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಮನೆಯಲ್ಲಿ ಅಡುಗೆ ಕೆಲಸ ಮಾಡುವ ರೂಪಾ ಅವರನ್ನು ಅಂಡರ್‌ಎಸ್ಟಿಮೇಟ್ ಮಾಡಿದ್ದಕ್ಕೆ ಕ್ಷಮೆ ಕೇಳಿದ್ದಾರೆ.

ಭಾರತಿ ಮನೆಯಲ್ಲಿ ಕೆಲಸ ಮಾಡುವ ರೂಪಾ ಮತ್ತು ಮನಿಶಾ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ರೂಪಾ ಮೂಲತಃ ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದಾರೆ. ಇತ್ತೀಚಿನ ವಿಡಿಯೋದಲ್ಲಿ ರೂಪಾ ತಮ್ಮೂರಿನಲ್ಲಿ ಮಾಡಲಾಗುವ ಬಾಳೆ ಹೂವು ಬಳಸಿ ಪಕೋಡ ಮತ್ತು ಪಲ್ಯ ಮಾಡೋದಾಗಿ ಹೇಳುತ್ತಾರೆ. ಬಾಳೆ ಹೂವಿನ ಅಡುಗೆ ಬಗ್ಗೆ ಮಾಹಿತಿ ಇಲ್ಲದ ಭಾರತಿ ಸಿಂಗ್, ಅದನ್ನು ತಿಂದ್ರೆ ಸಾಯಲ್ಲ ತಾನೇ ಎಂದು ತಮಾಷೆ ಮಾಡುತ್ತಾರೆ. ಇತ್ತ ಭಾರತಿ ಗಂಡ ಹರ್ಷ ಸಹ ಪಕೋಡ ಮಾಡೋದು ಬೇಡ, ಪಲ್ಯ ಮಾಡುವಂತೆ ಹೇಳುತ್ತಾರೆ.

ಕುತೂಹಲದಿಂದ ರೆಸಿಪಿ ವೀಕ್ಷಿಸಿದ ಭಾರತಿ ಮತ್ತು ಮನಿಶಾ

ಕೊನೆಗೆ ಬಾಳೆ ಹೂವಿನ ಪಕೋಡ ಮಾಡುವಂತೆ ಭಾರತಿ ಒಪ್ಪಿಗೆ ನೀಡುತ್ತಾರೆ. ಭಾರತಿ ಸಿಂಗ್ ಒಪ್ಪಿಗೆ ನೀಡುತ್ತಿದ್ದಂತೆ ರೂಪಾ ಖುಷಿಯಾಗಿ ಪಕೋಡ ಮಾಡಲು ಮುಂದಾಗುತ್ತಾರೆ. ಈ ವೇಳೆ ಭಾರತಿ ಸಿಂಗ್ ಕುತೂಹಲದಿಂದ ಅಡುಗೆ ಮಾಡೋದನ್ನು ನೋಡಲು ಬರುತ್ತಾರೆ. ಈ ವೇಳೆ ಮೊದಲ ಬಾರಿಗೆ ಬಾಳೆ ಹೂವಿನ ಪಕೋಡ ಮಾಡುತ್ತಿರೋದಾಗಿ ಹೇಳಿದಾಗ, ಮತ್ತೆ ಇದನ್ನು ತಿಂದು ಆಸ್ಪತ್ರೆ ಸೇರುವಂತಾಗಬಾರದು ಎಂದು ಭಾರತಿ ತಮಾಷೆ ಮಾಡುತ್ತಾರೆ. ನಂತರ ನೀವು ಅಡುಗೆ ಮಾಡಿ ಅಂತೇಳಿ ಭಾರತಿ ಕಿಚನ್‌ನಿಂದ ಹೊರ ಬರುತ್ತಾರೆ. ಮುಂದೆ ಬಾಳೆ ಹೂವಿನ ಪಕೋಡ ಮಾಡೋದು ಹೇಗೆ ಅಂತ ಮನೀಶಾ ಸಹ ನೋಡಲು ಬರುತ್ತಾಳೆ.

ಬಾಳೆ ಹೂವಿನ ಪಕೋಡ ರೆಸಿಪಿ

ಎರಡರಿಂದ ಮೂರು ಗಂಟೆ ಕಡಲೆಬೇಳೆ ನೆನೆಸಿಕೊಂಡು ಅದನ್ನು ರುಬ್ಬಿಕೊಳ್ಳಬೇಕು. ಬಾಳೆ ಹೂವಿನ ಮೊಗ್ಗು ಬಿಡಿಸಿ ಚಿಕ್ಕದಾಗಿ ಕತ್ತರಿಸಿ ಬೇಯಿಸಿಕೊಳ್ಳಬೇಕು. ತದನಂತರ ಕಡಲೆಬೇಳೆ ಮಿಶ್ರಣಕ್ಕೆ ಬಾಳೆ ಮೊಗ್ಗ ಸೇರಿಸಬೇಕು. ನಂತರ ಈ ಮಿಶ್ರಣಕ್ಕೆ ಕೋತಂಬರಿ ಸೊಪ್ಪು ಸೇರಿದಂತೆ ಒಂದಿಷ್ಟು ಮಸಾಲೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಅಂಗೈಯಲ್ಲಿ ವಡೆ ರೀತಿಯಲ್ಲಿ ತಟ್ಟಿಕೊಂಡು ಬಿಸಿಯಾಗಿರುವ ಎಣ್ಣೆಗೆ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಂಡ್ರೆ ರುಚಿಯಾದ ಬಾಳೆ ಹೂವಿನ ಪಕೋಡ ಸವಿಯಲು ಸಿದ್ಧವಾಗುತ್ತದೆ.

ರುಚಿ ರುಚಿಯಾದ ಬಾಳೆ ಹೂವಿನ ಪಕೋಡ ತಯಾರಿಸಿದ ರೂಪಾ, ಗ್ರೀನ್ ಚಿಲ್ಲಿ ಚಟ್ನಿ ಮತ್ತು ಟೊಮೆಟೋ ಕೆಚಪ್‌ನೊಂದಿಗೆ ಭಾರತಿ ಮತ್ತು ಹರ್ಷಗೆ ತಿನ್ನಲು ನೀಡುತ್ತಾರೆ. ಮೊದಲ ಬಾರಿಗೆ ಬಾಳೆ ಹೂವಿನ ಪಕೋಡ ಸವಿದ ಭಾರತಿ ಸಿಂಗ್ ಮತ್ತು ಹರ್ಷ ಹೊಸ ರುಚಿಗೆ ಫಿದಾ ಆಗುತ್ತಾರೆ. ಭಾರತಿಯಂತು ಅಡುಗೆಮನೆಗೆ ಹೋಗಿ ರೂಪಾ ಅವರನ್ನು ತಬ್ಬಿಕೊಂಡು ಮೆಚ್ಚುಗೆ ಸೂಚಿಸುತ್ತಾರೆ. ರೂಪಾ ಮನೆಕೆಲಸದಾಕೆ ಆದ್ರೂ ಭಾರತಿ ಸಿಂಗ್ ಅವರನ್ನು ಅಕ್ಕಾ ಅಂತಾನೇ ಕರೆಯುತ್ತಾರೆ.

ಕ್ಷಮೆ ಕೇಳಿದ ಭಾರತಿ ಸಿಂಗ್

ರಾತ್ರಿ ಮಲಗುವ ಮುನ್ನ ಭಾರತಿ ಸಿಂಗ್ ವಿಡಿಯೋದಲ್ಲಿ ಬಾಳೆ ಹೂವಿನ ಪಕೋಡ ಮಾಡುವ ಮುನ್ನ ನಾನು ರೂಪಾ ದೀದಿಯನ್ನು ತುಂಬಾ ಕಡೆಗಣನೆ ಮಾಡಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಬಾಳೆ ಹೂ ಅಂದ್ರೆ ಕೆಂಪಾದ ದೊಡ್ಡ ಗೊಂಚಲು ಇರುತ್ತೆ ಅಂತ ಮಾತ್ರ ಗೊತ್ತಿತ್ತು. ಅದರೊಳಗಿನ ಮೊಗ್ಗು ಬಳಸಿ ಹೀಗೆಲ್ಲಾ ಅಡುಗೆ ಮಾಡ್ತಾರೆ ಅಂತೆ ನನಗೆ ಖಂಡಿತವಾಗಿಯೂ ತಿಳಿದಿರಲಿಲ್ಲ. ಆಹಾರಗಳು ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆಯಾಗಿರುತ್ತವೆ. ನಾನು ಪಂಜಾಬಿ, ನಮ್ಮ ಕಡೆಯ ಪಾಕವಿಧಾನ ರೂಪಾ ದೀದಿಗೆ ಗೊತ್ತಿರಲ್ಲ. ಹಾಗೆ ನನಗೂ ಈ ಪಾಕ ತಿಳಿದಿರಲಿಲ್ಲ. ಪಕೋಡ ಮಾಡಿದ ಬಳಿಕ ಉಳಿದ ಬಾಳೆ ಹೂವಿನಿಂದ ಪಲ್ಯವನ್ನು ಮಾಡಿಟ್ಟಿದ್ದಾರೆ. ಥ್ಯಾಂಕ್ ಯು ರೂಪಾ ದೀದಿ. ನಾನು ಪಕೋಡ ಜೊತೆಯಲ್ಲಿಯೇ ಚಪಾತಿ ತಿಂದು ಊಟ ಮುಗಿಸಿದೆ ಎಂದು ಭಾರತಿ ಸಿಂಗ್ ಹೇಳಿದ್ದಾರೆ.

ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು. ಈ ರೀತಿ ಕ್ಷಮೆ ಕೇಳುವುದು ಎಲ್ಲರಿಂದ ಸಾಧ್ಯವಿಲ್ಲ. ನಿಮ್ಮ ಸರಳತೆಗೆ ನಾವು ಫಿದಾ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.

YouTube video player