ಚಿತ್ರದುರ್ಗ: ಮದುವೆಗೆ ಬಂದವರೇ ಇಪ್ಪತ್ತು ಮಂದಿ ಗಂಡು ಹಾಗೂ ಹೆಣ್ಣು ಎರಡೂ ಕಡೆಯ ಸಂಪ್ರದಾಯಗಳು ಅರ್ಧ ತಾಸಿನಲ್ಲಿ ಮುಗಿದು ಹೋದವು. ವರ, ವಧುವಿಗೆ ತಾಳಿಕಟ್ಟಿದ. ನಂತರ ಬಂದವರೆಲ್ಲ ಉಪ್ಪಿಟ್ಟು, ಕೇಸರಿಬಾತ್‌ ತಿಂದು ದೇವಸ್ಥಾನದಿಂದ ಕಣ್ಮರೆಯಾದರು.

ಚಿತ್ರದುರ್ಗ ತಾಲೂಕಿನ ಜಾನುಕೊಂಡು ಲಕ್ಷ್ಮಿರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ನಡೆದ ಸರಳ ವಿವಾಹವೊಂದರ ಲಹರಿಯಿದು. ಮಗಳು ಜಾನಕಿ ಸೀರಿಯಲ್‌ನಲ್ಲಿ ಸಂಜನಾ ಪಾತ್ರಧಾರಿಯಾಗಿ ನಟಿಸಿರುವ ಸುಪ್ರಿಯಾ ಅವರು ಸಾಫ್ಟ್‌ವೇರ್‌ ಎಂಜಿನಿಯರ್‌ ವಿಜಯ್‌ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ಎರಡೂ ಕುಟುಂಬಗಳ ಒಪ್ಪಿಗೆ ಸಂಬಂಧ ವಿವಾಹ ಕಾರ್ಯ ನೆರವೇರಿದ ಬಗೆಯಿದು.

'ಮಗಳು ಜಾನಕಿ' ಚಿರಂತನ್‌ ಆಪ್ತಮಿತ್ರ ದೀಪಕ್, ಯಾರಿವರು?

ರಂಗನಾಥ್‌ ಸ್ವಾಮಿ ದೇವಸ್ಥಾನದ ಪೂಜಾರಿ ಪೌರೋಹಿತ್ಯ ವಹಿಸಿ ಕಂಕಣ ಭಾಗ್ಯ ನೆರವೇರಿಸಿದರು. ತಾಳಿ, ಕಾಲುಂಗುರು, ರೇಷ್ಮೆ ಸೀರೆ ಹೊರತುಪಡಿಸಿ ಕೇವಲ ಐದು ಸಾವಿರ ರು. ವೆಚ್ಚದಲ್ಲಿ ಮದುವೆ ನೆರವೇರಿತು. ಕೊರೋನೋ ಇಲ್ಲದಿದ್ದರೆ 5 ಸಾವಿರದ ಮುಂಭಾಗ ಮತ್ತೆ ಮೂರು ಸೊನ್ನೆಗಳು ಸೇರ್ಪಡೆಯಾಗುತ್ತಿದ್ದವೋ ಏನೋ.

‘ಮಗಳು ಜಾನಕಿ’ ನೀವು ನೋಡಿರದ ಫೋಟೋಗಳಿವು!

ವಧು ಹೇಳಿ ಕೇಳಿ ಸೀರಿಯಲ್‌ ನಟಿ, ವರ ಸಾಫ್ಟ್‌ವೇರ್‌ ಎಂಜಿನಿಯರ್‌. ಲಕ್ಷಾಂತರ ರುಪಾಯಿ ಕಲ್ಯಾಣ ಮಂಟಪದ ಬಾಡಿಗೆ, ಬರುವವರಿಗೆ ಭೂರಿ ಭೋಜನ ಎಲ್ಲ ಲೆಕ್ಕಚಾರಗಳು ಸಾಲು ಸಾಲಾಗಿ ಬರುತ್ತಿದ್ದವು. ಮದುವೆ, ಮದುವೆಯೇ. ಇಪ್ಪತ್ತು ಜನ ಬಂದರೇನು, ಇಪ್ಪತ್ತು ಲಕ್ಷ ಖರ್ಚು ಮಾಡಿದರೇನು? ಏನೇ ಆಗಲಿ ವಿವಾಹಕ್ಕೊಂದು ಸರಳತೆ ಚೌಕಟ್ಟು ನೀಡಿದ ಕೊರೋನಾಗೆ ಪುಟ್ಟದೊಂದು ಥ್ಯಾಂಕ್ಸ್‌ ಹೇಳಲೇಬೇಕು.