ಕಲರ್ಸ್ ಕನ್ನಡದ ಅಧಿಕೃತ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆಗಳು ಏಕಾಏಕಿ ಕಣ್ಮರೆಯಾಗಿವೆ. ಬಿಗ್ ಬಾಸ್ನಂತಹ ಕಾರ್ಯಕ್ರಮಗಳ ಅಪ್ಡೇಟ್ಗಾಗಿ ಕಾಯುತ್ತಿದ್ದ ವೀಕ್ಷಕರಿಗೆ ಇದರಿಂದ ಆಘಾತವಾಗಿದ್ದು, ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ ಎಂದು ಹೇಳಲಾಗುತ್ತಿದೆ.
ಕಲರ್ಸ್ ಕನ್ನಡ (Colors Kannada) ಇನ್ಸ್ಟಾಗ್ರಾಮ್, ಫೇಸ್ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾ ಒಂದೆರಡು ಗಂಟೆಗಳಿಂದ ಮಾಯವಾಗಿವೆ. ಸರ್ಚ್ ಮಾಡಿದರೂ ಇವು ಸಿಗುತ್ತಿಲ್ಲ. ಅಷ್ಟಕ್ಕೂ ಹಲವು ಸೀರಿಯಲ್ಗಳು ಮತ್ತು ಬಿಗ್ ಬಾಸ್ನಂಥ ರಿಯಾಲಿಟಿ ಷೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡುವ ದೊಡ್ಡ ವರ್ಗವೇ ಇದೆ. ಟಿವಿಗಳಲ್ಲಿ ಸೀರಿಯಲ್ ಮತ್ತು ಬಿಗ್ಬಾಸ್ನಂಥ ರಿಯಾಲಿಟಿ ಷೋಗಳನ್ನು ನೋಡುವ ಬದಲು ಅವುಗಳ ಪ್ರೊಮೋ ನೋಡುವವರು ಅಧಿಕ ಮಂದಿ ಇದ್ದಾರೆ. ಅದರಲ್ಲಿಯೂ ಬಿಗ್ಬಾಸ್ಗೆ ದೊಡ್ಡ ವೀಕ್ಷಕ ವೃಂದವೇ ಇರುವುದು ಕಮೆಂಟ್ಸ್ಗಳಿಂದ ತಿಳಿದು ಬರುತ್ತದೆ. ಪ್ರೊಮೋ ಹಾಕಿದ ಕೆಲವೇ ನಿಮಿಷಗಳಲ್ಲಿ ಸಾವಿರ ಸಾವಿರ ಮಂದಿ ಲೈಕ್ಸ್, ಕಮೆಂಟ್ಸ್ ಮಾಡುವುದನ್ನು ನೋಡಿದರೆ ಇದರ ಡಿಮಾಂಡ್ ತಿಳಿಯುತ್ತದೆ.
ಸೋಷಿಯಲ್ ಮೀಡಿಯಾ ಕಾಣೆ
ಆದರೆ, ಏಕಾಏಕಿ ಸೋಷಿಯಲ್ ಮೀಡಿಯಾದಿಂದ ಇದು ಕಾಣೆಯಾಗಿಬಿಟ್ಟಿದೆ. ಇಂದು ಬೇರೆ ಬಿಗ್ಬಾಸ್ನ ವೀಕೆಂಡ್ ವಿಶೇಷತೆ ಇದೆ. ಇದಾಗಲೇ ಬಿಗ್ಬಾಸ್ನಲ್ಲಿ ರಾಜ್ಯೋತ್ಸವದ ವಿಶೇಷತೆಗಳ ಬಗ್ಗೆ ಕಲರ್ಸ್ ಕನ್ನಡ ಪ್ರೊಮೋಗಳನ್ನು ರಿಲೀಸ್ ಮಾಡಿದೆ. ಅಷ್ಟೇ ಅಲ್ಲದೇ, ಬಿಗ್ಬಾಸ್ನಲ್ಲಿ ಕ್ಷಣ ಕ್ಷಣದ ಮಾಹಿತಿ ನೋಡಲು ಸೋಷಿಯಲ್ ಮೀಡಿಯಾ ನೋಡುಗರಿಗೂ ಶಾಕ್ ಆಗಿದೆ. ಕಲರ್ಸ್ ಕನ್ನಡ ಹೆಸರಿನಲ್ಲಿ ಹಲವರು ಪೇಜ್ ಓಪನ್ ಮಾಡಿರುವ ಕಾರಣ ಅವುಗಳನ್ನು ಕ್ಲಿಕ್ ಮಾಡುವ ವರ್ಗವೂ ಇದೆ. ಕಲರ್ಸ್ ಕನ್ನಡದ ಮುಂದೆ ಬ್ಲೂ ಟಿಕ್ ಇದ್ದರೆ ಮಾತ್ರ ಅದು ಆಫೀಷಿಯಲ್ ಪುಟ ಎನ್ನುವುದು ಹಲವರಿಗೆ ತಿಳಿದಿಲ್ಲ.
ತಾಂತ್ರಿಕ ಸಮಸ್ಯೆ
ಒಟ್ಟಿನಲ್ಲಿ ಕಲರ್ಸ್ ಕನ್ನಡದ ಸೋಷಿಯಲ್ ಮೀಡಿಯಾ ಮಾಯ ಆಗಿದೆ. ಇದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ತಾಂತ್ರಿಕ ಸಮಸ್ಯೆ ಆಗಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಅಕೌಂಟ್ಗಳು ಡಿ-ಆಕ್ಟಿವೇಟ್ ಆಗಿದೆ ಎಂಬ ಮಾಹಿತಿ ಬಂದಿದ್ದರೂ, ಇದರ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಬರಬೇಕಿದೆ. ಯಾವಾಗ ಇದು ಸರಿಯಾಗುತ್ತದೆ ಎನ್ನುವ ಬಗ್ಗೆಯೂ ತಿಳಿದಿಲ್ಲ.
ಕನ್ನಡದಂತೆಯೇ ಹಿಂದಿಯ ಖಾತೆಯೂ ಇದೇ ರೀತಿ ಆಗಿದೆ. instagram ನಲ್ಲಿ ಪ್ರೊಮೋ ನೋಡಲು ಆಗದವರುಫೇಸ್ಬುಕ್ ನೋಡಲು ಹೋದರೆ ಅಲ್ಲಿಯೂ ಇದೇ ಸ್ಥಿತಿ ಉಂಟಾಗಿದೆ. ಇದು ಯಾವಾಗ ಸರಿಯಾಗುತ್ತದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
