ಚೀನಾದ ಸೂಪರ್‌ಮಾರ್ಕೆಟ್‌ವೊಂದರಲ್ಲಿ ಡಾ. ರಾಜ್‌ಕುಮಾರ್ ಅವರ 'ನಾವಾಡುವ ನುಡಿಯೇ..' ಹಾಡು ಕೇಳಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕನ್ನಡದ ಹೆಮ್ಮೆಯನ್ನು ಸಾರುವ ಈ ಹಾಡು, ಚೀನಾದಲ್ಲಿ ಕೇಳಿಬಂದಿದ್ದು ಅಭಿಮಾನಿಗಳಿಗೆ ಹೆಮ್ಮೆ ತಂದಿದೆ. ಈ ಘಟನೆ ಕನ್ನಡ ಚಿತ್ರರಂಗದ ಜಾಗತಿಕ ಮನ್ನಣೆಗೆ ಸಾಕ್ಷಿಯಾಗಿದೆ.
ಬೆಂಗಳೂರು (ಜ.21): ಅದೆಷ್ಟೇ ಸೂಪರ್‌ಸ್ಟಾರ್‌ಗಳು ಬಂದರು ಕರ್ನಾಟಕದಲ್ಲಿ, ಕನ್ನಡಕ್ಕೆ ಮತ್ತೊಬ್ಬ ಡಾ. ರಾಜ್‌ಕುಮಾರ್ ಬರೋಕೆ ಸಾಧ್ಯವೇ ಇಲ್ಲ. ಕರ್ನಾಟಕದಲ್ಲಿ ಅವರಿಗೆ ಕ್ರೇಜ್ ಕಡಿಮೆಯಾದ ಸಂದರ್ಭವೇ ಇಲ್ಲ. ಈಗ ಡಾ.ರಾಜ್‌ಕುಮಾರ್ ಅವರ ಕ್ರೇಜ್ ಪಕ್ಕದ ರಾಜ್ಯಗಳಿಗೆ ಮಾತ್ರವಲ್ಲ, ದೇಶವನ್ನೂ ದಾಟಿ ಕನ್ನಡವೇ ಗೊತ್ತಿಲ್ಲದ ಚೀನಾ ದೇಶಕ್ಕೆ ಹೋಗಿ ಮುಟ್ಟಿದೆ. ಚೀನಾದ ದೇಶದ ಸೂಪರ್‌ಮಾರ್ಕೆಟ್‌ವೊಂದರಲ್ಲಿ ಡಾ.ರಾಜ್‌ಕುಮಾರ್ ಅವರ ಐಕಾನಿಕ್ ಹಾಡುಗಳಲ್ಲಿ ಒಂದಾದ 'ನಾವಾಡುವ ನುಡಿಯೇ..' ಹಾಡು ಕೇಳಿ ಅಲ್ಲಿದ್ದ ಕನ್ನಡಿಗರು ಅಚ್ಚರಿಪಟ್ಟಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಇನ್ಸ್‌ಟಾಗ್ರಾಮ್‌ನಲ್ಲಿ ಕಪಲ್ ಆಫ್ ಕರ್ನಾಟಕ (couple_of_karnataka) ಈ ವಿಡಿಯೋವನ್ನು ಒಂದು ದಿನದ ಹಿಂದೆ ಹಂಚಿಕೊಂಡಿದ್ದು, ಇಲ್ಲಿಯವರೆಗೂ 75 ಸಾವಿರಕ್ಕೂ ಅಧಿಕ ಮಂದಿ ಈ ರೀಲ್ಸ್‌ಅನ್ನು ವೀಕ್ಷಣೆ ಮಾಡಿದ್ದು, 10 ಸಾವಿರಕ್ಕೂ ಅಧಿಕ ಮಂದಿ ಲೈಕ್ ಒತ್ತಿದ್ದಾರೆ. ಗಂಧದ ಗುಡಿ ಸಿನಿಮಾದ ಐಕಾನಿಕ್ ಗೀತೆಗಳಲ್ಲಿ ಒಂದಾಗಿರುವ ನಾವಾಡುವ ನುಡಿಯೆ ಹಾಡನ್ನು ಸೂಪರ್ ಮಾರ್ಕೆಟ್‌ನಲ್ಲಿ ಪ್ಲೇ ಮಾಡಲಾಗಿತ್ತು. ಈ ವೇಳೆ ಸೂಪರ್‌ಮಾರ್ಕೆಟ್ ಬಳಿ ಹೋಗಿರುವ ಕರ್ನಾಟಕ ಮೂಲದ ದಂಪತಿಗಳಿಗೆ ಒಂದು ಕಡೆ ರಾಜಣ್ಣ ಹಾಡು ಕೇಳಿ ಖುಷಿಯಾಗಿದ್ದರೆ, ಇನ್ನೊಂದೆಡೆ ಈ ಹಾಡನ್ನು ಪ್ಲೇ ಮಾಡಿದ್ದು ಯಾಕೆ ಎನ್ನುವ ಕುತೂಹಲ ಉಂಟಾಗಿತ್ತು. ಅದಕ್ಕಾಗಿ ಸೂಪರ್ ಮಾರ್ಕೆಟ್‌ನ ಒಳಗೆ ಹೋಗಿ ವಿಚಾರಿಸಿದಾಗ ತಾಂತ್ರಿಕ ಸಮಸ್ಯೆಯಿಂದ ಈ ಹಾಡು ಪ್ಲೇ ಆಗಿರುವುದಾಗಿ ಗೊತ್ತಾಗಿದೆ.
ಅದೇನೇ ಇದ್ದರೂ, ಆಳವಾದ ಸಾಂಸ್ಕೃತಿಕ ಅನುರಣನಕ್ಕೆ ಹೆಸರುವಾಸಿಯಾದ ಈ ಹಾಡು ಕನ್ನಡದ ಹೆಮ್ಮೆಗೆ ಗೌರವ ಸಲ್ಲಿಸುತ್ತದೆ ಮತ್ತು ಡಾ. ರಾಜ್‌ಕುಮಾರ್ ಅವರ ಅಭಿಮಾನಿಗಳಲ್ಲಿ ಅಚ್ಚುಮೆಚ್ಚಿನ ಹಾಡಾಗಿ ಉಳಿದಿದೆ. ಕರ್ನಾಟಕದ ಸಾಂಸ್ಕೃತಿಕ ಪ್ರತಿಮೆಯಾಗಿ ಉಳಿದಿರುವ ಡಾ. ರಾಜ್‌ಕುಮಾರ್ ಅವರ ಫಾಲೋವರ್‌ಗಳಿಗೆ ಈ ವಿಡಿಯೋ ಅಪಾರ ಹೆಮ್ಮೆ ತಂದಿದೆ.
'ಚೆನ್ನೈ ಅಲ್ಲಿ ಕನ್ನಡ ಹಾಡು ಕೇಳೋದೇ ಅಪರೂಪ ಅಂತದ್ರಲ್ಲಿ China ದಲ್ಲಿ ಕನ್ನಡ ಹಾಡು ನಾವು ಭಾರತೀಯರು ಇನ್ನು ಜಾತಿ , ಧರ್ಮ,ಭಾಷೆ ಅಂತ ಇದೀವಿ ಆದ್ರೆ ಬೇರೆ ದೇಶದವರು ಕುವೆಂಪು ರವರ ವಿಶ್ವಮಾನವ ಸಂದೇಶವನ ಪಾಲಿಸುತ್ತಿದ್ದಾರೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಚೀನಾ ಎಂದಿಗೂ ಕನ್ನಡಿಗರ ಸರಳತೆಯನ್ನು ಅರ್ಥ ಮಾಡಿಕೊಂಡಿದೆ. ಚೀನಾದಲ್ಲಿ ಇನ್ನಷ್ಟು ಅಣ್ಣಾವ್ರ ಹಾಡು ಮೊಳಗಲಿ ಎಂದು ಮತ್ತೊಬ್ಬರು ಬರೆದಿದ್ದಾರೆ. ಗ್ರೇಟೆಸ್ಟ್ ಆಫ್ ಆಲ್ ಟೈಮ್ ಅನ್ನೋದಕ್ಕೂ ಕಾರಣವಿದೆ. ಈ ಹಾಡು ಎಲ್ಲಾ ರೀತಿಯ ಪರಿಸ್ಥಿತಿಗಳಿಗೂ ಸೂಕ್ತವಾದಂಥದ್ದು ಎಂದು ಬರೆದಿದ್ದಾರೆ.
ಟಾಕ್ಸಿಕ್ ಬಳಿಕ ಕಾಂತಾರ-2 ಸಿನಿಮಾ ತಂಡದಿಂದಲೂ ಅರಣ್ಯ ನಿಯಮ ಉಲ್ಲಂಘನೆ?
ಕರ್ನಾಟಕದಲ್ಲಿ ಅಣ್ಣಾವ್ರು ಎಂದೇ ಫೇಮಸ್ ಆಗಿರುವ ವರನಡ ಡಾ.ರಾಜ್‌ಕುಮಾರ್, ದಿಗ್ಗಜ ನಟ, ಗಾಯಕ ಹಾಗೂ ರಾಜ್ಯದ ಅತಿದೊಡ್ಡ ಸಾಂಸ್ಕೃತಿಕ ರಾಯಭಾರಿ. 1929 ಏಪ್ರಿಲ್ 24 ರಂದು ಸಿಂಗಾನಲ್ಲೂರು ಪುಟ್ಟಸಾಮಯ್ಯ ಮುತ್ತುರಾಜ್ ಆಗಿ ಜನಿಸಿದ ಡಾ.ರಾಜ್‌ಕುಮಾರ್ ನಂತರ ಕನ್ನಡ ಸಿನಿಮಾದ ಫೇಸ್ ಆಗಿ ಬದಲಾದರು. ಐದು ದಶಕಗಳ ಸಿನಿ ಜೀವನದಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಜನಮಾನಸದಲ್ಲಿ ಉಳಿದುಕೊಂಡ ತಾರೆ.
ಆಡಿಷನ್‌ಗೆ ಹೋಗುವಾಗಲೇ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರಖ್ಯಾತ ಸೀರಿಯಲ್ ನಟ!
ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿದ್ದ ಅವರು ಪೌರಾಣಿಕ ಪಾತ್ರಗಳಿಂದ ಹಿಡಿದು ಸಾಮಾಜಿಕವಾಗಿ ಪ್ರಸ್ತುತವಾಗಿರುವ ವ್ಯಕ್ತಿಗಳವರೆಗೆ ವಿವಿಧ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸಿದರು. ಪದ್ಮಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಡಾ. ರಾಜ್‌ಕುಮಾರ್ ಒಬ್ಬ ನಿಪುಣ ಗಾಯಕರೂ ಆಗಿದ್ದರು, ಅವರ ಭಕ್ತಿಗೀತೆಗಳು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಲೇ ಇವೆ.
