'ಪೆಪ್ಪಾ ಪಿಗ್‌' ಸ್ಟೇಜ್ ಶೋ; ಕಾರ್ಟೂನ್ ಪ್ರಪಂಚದಲ್ಲಿ ಮೈಮರೆತ ಮಕ್ಕಳು

ಪೆಪ್ಪಾ ಪಿಗ್‌ ಹೆಸರು ಕೇಳಿದ ಕೂಡಲೇ ಮಕ್ಕಳ ಕಣ್ಣು ಅರಳುತ್ತದೆ. ಪೆಪ್ಪಾ ಪಿಗ್ ಮ್ಯೂಸಿಕಲ್ ಲೈವ್‌ ನೋಡಿ ಮಕ್ಕಳು ಸಂಭ್ರಮಿಸಿದ್ದಾರೆ. 

Children Enjoying peppa pig stage show in Bangalore sgk

ಪೆಪ್ಪಾ ಪಿಗ್‌ ಹೆಸರು ಕೇಳಿದ ಕೂಡಲೇ ಮಕ್ಕಳ ಕಣ್ಣು ಅರಳುತ್ತದೆ. ಅಷ್ಟೇ ಅಲ್ಲ, ಹಿರಿಯರ ಮನಸ್ಸೂ ಅತ್ತ ಹೊರಳುತ್ತದ. ಯಾಕೆಂದರೆ ಪೆಪ್ಪಾ ಮಾಡಿದ ಮೋಡಿಯೇ ಅಂಥದ್ದು. ನಿಕ್ ಜ್ಯೂನಿಯರ್ ವಾಹಿನಿಯಲ್ಲಿ ಪ್ರಸಾರವಾಗುವ ಪೆಪ್ಪಾ ಪಿಗ್ ಕಾರ್ಟೂನ್ ಪಾತ್ರ ಕಳೆದ ಎರಡು ದಶಕದಲ್ಲಿ ಮಕ್ಕಳ ನೆಚ್ಚಿನ ಪಾತ್ರವಾಗಿ ಜನಪ್ರಿಯಗೊಂಡಿದೆ. ಪೆಪ್ಪಾ ಪಿಗ್‌ ಮತ್ತದರ ಕುಟುಂಬದ ಸದಸ್ಯರು ಸುತ್ತ ಹೆಣೆಯುವ ಕಥೆಗಳು ಎಳೆಯ ಮಕ್ಕಳ ಮನಸ್ಸುಗಳನ್ನು ಹಿಡಿದಿಟ್ಟಿದೆ. ತಮ್ಮ ಬಾಲ್ಯದ ಭಾಗವಾಗಿರುವ ಈ ಪಾತ್ರವನ್ನು ನೇರವಾಗಿ ನೋಡುವ ಮನಸ್ಸು ಯಾರಿಗಿರುವುದಿಲ್ಲ ಹೇಳಿ? ಅಂಥದ್ದೊಂದು ಅವಕಾಶಕ್ಕೆ ವೇದಿಕೆಯಾಗಿ ಮತ್ತು ಅದರ ಸಂಭ್ರಮದ ಅವಿಸ್ಮರಣೀಯ ಕ್ಷಣಗಳಿಗೆ ಬೆಂಗಳೂರಿನ ಮಿಲ್ಲರ್ಸ್‌ ರಸ್ತೆಯಲ್ಲಿರುವ ಅಂಬೇಡ್ಕರ್ ಭವನ ಇಂದು (ನವೆಂಬರ್ 19) ಸಾಕ್ಷಿಯಾಯಿತು. 

ಪೆಪ್ಪಾ ಪಿಗ್ ಮ್ಯೂಸಿಕಲ್ ಲೈವ್‌

ಪೆಪ್ಪಾ ಪಿಗ್ ಮತ್ತದರ ಬಳಗವನ್ನು ಇಟ್ಟುಕೊಂಡು ರೂಪಿಸಿದ ಸಂಗೀತ ರೂಪಕ ‘ಪೆಪ್ಪಾ ಪಿಗ್ ಮ್ಯೂಸಿಕಲ್ ಲೈವ್’. ಕಿರುತೆರೆಯಲ್ಲಿ ಜನಪ್ರಿಯವಾಗಿರುವ ಕಾರ್ಟೂನ್ ಪಾತ್ರಗಳನ್ನು ಮಕ್ಕಳಿಗೆ ವೇದಿಕೆಯ ಮೇಲೆ ನೇರವಾಗಿ ನೋಡುವ ಅವಕಾಶ ಒದಗಿಸುವುದು ಮತ್ತು ಅತ್ಯುತ್ತಮ ಮನರಂಜನೆಯ ಅನುಭವ ನೀಡುವುದು ಈ ಷೋದ ಉದ್ದೇಶ. ಈ ಮುಂಚೆ ಮುಂಬೈನಲ್ಲಿಯೂ ಪ್ರದರ್ಶನ ಕಂಡು ಸಾಕಷ್ಟು ಯಶಸ್ವಿಯಾಗಿತ್ತು. ಆ ಯಶಸ್ಸಿನ ಹುಮ್ಮಸ್ಸಿನೊಂದಿಗೆ ಬೆಂಗಳೂರಿನಲ್ಲಿಯೂ ಮ್ಯೂಸಿಕಲ್ ಷೋ ಆಯೋಜಿಸಲಾಗಿತ್ತು. ಈವತ್ತು ಅಂದರೆ ನವೆಂಬರ್ 19ರ ಬೆಳಿಗ್ಗೆ ಮೊದಲ ಪ್ರದರ್ಶನಕ್ಕೆ ಸಿಕ್ಕ ಪ್ರತಿಕ್ರಿಯೆಯೇ ಅದ್ಭುತ.

ವಿವಿಧ ಕಥೆಗಳು

ಪೆಪ್ಪಾ ಪಿಗ್, ಜಾಜ್‌ ಪಿಗ್‌, ಡ್ಯಾಡಿ ಪಿಗ್, ಮಮ್ಮಿ ಪಿಗ್ ಇವರ ಜೊತೆಗೇ ಸುಝಿ ಕುರಿಯ ಸಂಗೀತಕಥದ ಮೋಡಿಗೆ ಇಡೀ ಸಭಾಂಗಣವೇ ಮೈಮರೆತಿತ್ತು. ಅವರು ಪ್ರಸ್ತುತಪಡಿಸಿದ ಒಂದೊಂದು ಕಥೆಯೂ ಹೊಟ್ಟೆ ಹುಣ್ಣಾಗಿಸುವಷ್ಟು ನಗುವನ್ನು ಉಕ್ಕಿಸುವಂಥವು. ನಗುವಿನ ಜೊತೆಗೇ ಒಂದು ನೀತಿ ಸಂದೇಶವನ್ನೂ ಎಳೆಯ ಮನಸ್ಸಿನಲ್ಲಿ ಬಿತ್ತುವ ಕೆಲಸವನ್ನೂ ಈ ಪ್ರದರ್ಶನ ಮಾಡಿದ್ದು ವಿಶೇಷ. ಚಂದದ ಸಂಗೀತದೊಂದಿಗೆ ಗ್ಯ್ರಾಂಡ್‌ಪಾ ಪಿಗ್ ಮತ್ತು ಗ್ಯ್ರಾಂಡ್‌ ಮಾ ವೇದಿಕೆಯ ಮೇಲೆ ಬಂದಾಗ ಚಿಣ್ಣರ ಚಪ್ಪಾಳೆಯ ಸದ್ದು ಮುಗಿಲು ಮುಟ್ಟಿತ್ತು. 

ಏನಿದು ಪೆಪ್ಪಾ ಪಿಗ್?

ಪೆಪ್ಪಾ ಪಿಗ್ ಇದು ಬ್ರಿಟಿಷ್ ಮೂಲದ ಪ್ರಿಸ್ಕೂಲ್‌ ಆನಿಮೇಟೆಡ್ ಟೆಲಿವಿಷನ್ ಸೀರಿಸ್. ಇದರ ಕರ್ತೃ ಆಸ್ಟ್ಲೇ ಬೇಕರ್ ಡೇವೈಸ್‌. ಇದರ ಕೇಂದ್ರದಲ್ಲಿರುವುದು ಪೆಪ್ಪಾ ಮತ್ತದರ ಕುಟುಂಬ ಮತ್ತು ಸ್ನೇಹಿತ ಪಾತ್ರಗಳು. ಈ ಷೋ ಮೊದಲು ಪ್ರಸಾರವಾಗಿದ್ದು 2004 ಮೇ 31ರಲ್ಲಿ.  2021 ಮಾರ್ಚ್‌ನಲ್ಲಿ ಇದರ 7ನೇ ಸೀಸನ್ ಆರಂಭಗೊಂಡಿದೆ. ಈಗ ಪೆಪ್ಪಾ ಪಿಗ್ ಭಾರತವೂ ಸೇರಿದಂತೆ ಪ್ರಪಂಚದ 180ಕ್ಕೂ ಅಧಿಕ ದೇಶಗಳಲ್ಲಿ ಪ್ರಸಾರವಾಗುತ್ತ ಚಿಣ್ಣರ ನೆಚ್ಚಿನ ಕಾರ್ಟೂನ್‌ ಪಾತ್ರವಾಗಿದೆ. ಈ ಷೋದ ಪಾತ್ರಗಳನ್ನೇ ಇಟ್ಟುಕೊಂಡು ರೂಪಿಸಿದ ಸಂಗೀತ ರೂಪಕ ಪೆಪ್ಪಾ ಪಿಗ್ ಮ್ಯೂಸಿಕಲ್ ಲೈವ್. ಟೀವಿಯಲ್ಲಿ ನೋಡಿದ ಪಾತ್ರಗಳನ್ನು ನೇರವಾಗಿ ನೋಡುವ, ಆಸ್ವಾದಿಸುವ ಅವುಗಳ ಜೊತೆಗೆ ಫೋಟೊ ತೆಗೆಸಿಕೊಳ್ಳುವ ಮೂಲಕ ಮಕ್ಕಳ ಬದುಕಿನಲ್ಲಿ ಅವಿಸ್ಮರಣೀಯ ಗಳಿಗೆಗಳನ್ನು ಕಟ್ಟಿಕೊಡುವ ಉದ್ದೇಶವಾಗಿದೆ. ವಯಕಾಮ್ 18 ಮತ್ತು ಬುಕ್ ಮೈ ಶೋ ಸಹಭಾಗಿತ್ವದಲ್ಲಿ ಈ ಶೋ ಆಯೋಜಿಸಲಾಗಿದೆ.

Latest Videos
Follow Us:
Download App:
  • android
  • ios