ಬಿಗ್‌ಬಾಸ್ ಕನ್ನಡ 10 ವಿನ್ನರ್ ಕಾರ್ತಿಕ್ ಮಹೇಶ್: ನಾಯಕತ್ವದ ಗುಣವಿದ್ದ ಅವರ ಪಯಣ ಹೇಗಿತ್ತು ಗೊತ್ತಾ?
ಬಿಗ್‌ಬಾಸ್‌ಕನ್ನಡ 10ನೇ ಸೀಸನ್‌ನಲ್ಲಿ ಕಾರ್ತಿಕ್ ಮಹೇಶ್ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಮೊದಲಿನಿಂದಲೂ ಆತ್ಮವಿಶ್ವಾಸದಿಂದಲೇ ಇದ್ದ ಕಾರ್ತಿಕ್ ಅವರು ಕೊನೆಯ ಕ್ಷಣದಲ್ಲಿ ಟೆನ್ಷನ್‌ಗೆ ಒಳಗಾದಂತೆ ಕಾಣಿಸುತ್ತಿದ್ದರು.
ಬಿಗ್‌ಬಾಸ್‌ಕನ್ನಡ 10ನೇ ಸೀಸನ್‌ನಲ್ಲಿ ಕಾರ್ತಿಕ್ ಮಹೇಶ್ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಮೊದಲಿನಿಂದಲೂ ಆತ್ಮವಿಶ್ವಾಸದಿಂದಲೇ ಇದ್ದ ಕಾರ್ತಿಕ್ ಅವರು ಕೊನೆಯ ಕ್ಷಣದಲ್ಲಿ ಟೆನ್ಷನ್‌ಗೆ ಒಳಗಾದಂತೆ ಕಾಣಿಸುತ್ತಿದ್ದರು. ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಉಳಿದಿದ್ದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ಹರಟಿ ನಂತರ ಬಿಗ್‌ಬಾಸ್ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು. ಮುಖ್ಯವೇದಿಕೆಯಲ್ಲಿ ಸಂಗೀತಾ ಶೃಂಗೇರಿ ಎರಡನೇ ರನ್ನರ್ ಅಪ್ ಆಗಿದ್ದಾರೆ ಎಂದು ಕಿಚ್ಚ ಘೋಷಿಸಿದರು. ನಂತರ ವೇದಿಕೆಯ ಮೇಲೆ ಉಳಿದಿದ್ದು ಕಾರ್ತಿಕ್ ಮತ್ತು ಡ್ರೋಣ್ ಪ್ರತಾಪ್.
ಕಿಚ್ಚನ ಒಂದು ಕೈಯಲ್ಲಿ ಕಾರ್ತಿಕ್ ಕೈ ಮತ್ತೊಂದು ಕೈಯಲ್ಲಿ ಪ್ರತಾಪ್ ಕೈ ಇತ್ತು. ಆ ಟೆನ್ಷನ್ ಅನ್ನು ಮಾತುಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಇಡೀ ಕರ್ನಾಟಕವೇ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಗಳಿಗೆ ಅದು. ಇಬ್ಬರ ಕೈಯಲ್ಲಿ ಕಿಚ್ಚ ಕಾರ್ತಿಕ್ ಅವರ ಕೈ ಎತ್ತಿ ಹಿಡಿದರು. ಅದು ಕಾರ್ತಿಕ್ ಬದುಕಿನಲ್ಲಿಯಷ್ಟೇ ಅಲ್ಲ, ಅವರ ಅಭಿಮಾನಿಗಳೆಲ್ಲರ ಮನಸಲ್ಲಿಯೂ ಅತ್ಯಂಗ ಮಹತ್ವದ ಅಮೂಲ್ಯವಾದ ಗಳಿಗೆ. ಅತ್ಯಂತ ಯಶಸ್ಸು ಕಂಡ ಹತ್ತನೇ ಐತಿಹಾಸಿಕ ಸೀಸನ್‌ನಲ್ಲಿ ಕಾರ್ತಿಕ್ ಮಹೇಶ್ ಅವರು ಗೆಲುವನ್ನು ಸಾಧಿಸಿದ್ದಾರೆ. ಐವತ್ತು ಲಕ್ಷ ರೂಪಾಯಿಗಳು, ಜೊತೆಗೆ ಒಂದು ಮಾರುತಿ ಬ್ರೀಜಾ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಬಿಗ್‌ಬಾಸ್ ಮನೆಯಲ್ಲಿನ ಜರ್ನಿಯನ್ನು ಕಟ್ಟುಕೊಡುವ ಪ್ರಯತ್ನವನ್ನು ಜಿಯೊಸಿನಿಮಾ ಇಲ್ಲಿ ಮಾಡುತ್ತಿದೆ.
ಅವಮಾನ-ಆಕ್ರೋಶಕ್ಕೆ ಯಶಸ್ಸಿನ ಉತ್ತರ: ಬಿಗ್‌ಬಾಸ್ ಕನ್ನಡ ಸೀಸನ್ 10 ರನ್ನರ್ ಅಪ್ ಡ್ರೋನ್ ಪ್ರತಾಪ್!
ಕಟ್ಟುಮಸ್ತು ಮೈಕಟ್ಟು, ಪುಟ್ಟ ಮಗುವಿನಂಥ ಮನಸ್ಸು, ಮಗುವಿನ ಹಟ, ಜಿದ್ದು, ಕಿರುಚಾಟ, ಯಾರನ್ನಾದರೂ ಥಟ್ಟನೆ ಹಚ್ಚಿಕೊಳ್ಳುವ, ಹಚ್ಚಿಕೊಂಡವರಿಂದ ಬಿಡಿಸಿಕೊಳ್ಳಲಾಗದೆ ಒದ್ದಾಡುವ ಅಪ್ಪಟ ಭಾವುಕತೆ… ಇದು ಬಿಗ್‌ಬಾಸ್ 10ನೇ ಸೀಸನ್‌ನ ಟಾಪ್ 6 ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ಕಾರ್ತಿಕ್ ಮಹೇಶ್ ಅವರ ವ್ಯಕ್ತಿತ್ವದ ತುಣುಕುಚಿತ್ರಗಳು. ಹತ್ತಾರು ಧಾರವಾಹಿ, ನಾಯಕನಾಗಿ ನಟಿಸಿದ್ದ ‘ಡೊಳ್ಳು’ ಎಂಬ ಸಿನಿಮಾಗೆ ಸಿಕ್ಕ ರಾಷ್ಟ್ರಪ್ರಶಸ್ತಿಯ ಮಾನ್ಯತೆ ಜೊತೆಗಿಟ್ಟುಕೊಂಡು ಬಿಗ್‌ಬಾಸ್ ಗ್ರ್ಯಾಂಡ್ ಪ್ರೀಮಿಯರ್ ವೇದಿಕೆ ಏರಿದ್ದ ಕಾರ್ತಿಕ್ ಮನಸ್ಸಲ್ಲಿ, ‘ಮುಂದೇನು?’ ಎಂಬ ಪ್ರಶ್ನೆ ಎದ್ದುನಿಂತಿತ್ತು.
ಪ್ರೇಕ್ಷಕರ ವೋಟಿಂಗ್‌ನಲ್ಲಿನಲ್ಲಿ ಪಾಸ್ ಆಗದೆ ‘ಹೋಲ್ಡ್’ ಸೀಟ್‌ನಲ್ಲಿ ಕೂತಾಗಲೂ ಅವರ ಮನಸ್ಸಲ್ಲಿ ಇದ್ದಿದ್ದು ಒಂದೇ ಪ್ರಶ್ನೆ, ‘ಮುಂದೇನು?’. ನಂತರ ‘ಅಸಮರ್ಥ’ರ ಪಟ್ಟ ಹೊತ್ತು ಮನೆಯೊಳಗೆ ಹೊಕ್ಕ ಕ್ಷಣದಿಂದ ಪ್ರತಿದಿನವೂ ಅವರು ‘ಮುಂದೇನು ಎಂಬ ಪ್ರಶ್ನೆಯನ್ನು ಎದುರಿಸುತ್ತಲೇ ಬಂದಿದ್ದಾರೆ. ಆ ಪ್ರಶ್ನೆಗೆ ಉತ್ತರ ಹುಡುಕುತ್ತಲೇ ತಮ್ಮ ಜಿದ್ದಿನ ಆಟ, ಸ್ನೇಹದ ನಡತೆ, ಆಟ ಎಂದು ಬಂದರೆ ಸ್ನೇಹಿತರನ್ನೂ ಎದುರುಹಾಕಿಕೊಳ್ಳುವ ನಿಷ್ಪಕ್ಷಪಾತಗುಣದಿಂದ ಅವರು ಗಮನಸೆಳೆದಿದ್ದಾರೆ. ಒಂದು ಹಂತದಲ್ಲಿಯಂತೂ ಬಿಗ್‌ಬಾಸ್ ಮನೆ ಎಂದರೆ ವಿನಯ್ ವರ್ಸಸ್ ಕಾರ್ತಿಕ್ ಎಂಬ ಮಟ್ಟಿಗೆ ಹೋಗಿದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಏರಿಳಿತ, ಮನರಂಜನೆ, ನೋವು, ದುಃಖ ಎಲ್ಲ ಭಾವಗಳೂ ತುಂಬಿರುವ ಕಾರ್ತಿಕ್ ಮಹೇಶ್ ಅವರ ಬಿಗ್‌ಬಾಸ್ ಜರ್ನಿಯ ಕೆಲವು ಚಿತ್ರಗಳು ಇಲ್ಲಿವೆ:
ನಾಯಕತ್ವದ ಗುಣ: ಬಿಗ್‌ಬಾಸ್ ಜರ್ನಿಯುದ್ದಕ್ಕೂ ಕಾರ್ತಿಕ್ ಮಹೇಶ್ ಅವರಲ್ಲಿ ಎದ್ದು ಕಾಣಿಸಿದ್ದು ನಾಯಕತ್ವದ ಗುಣ ಅವರು ಈ ಸೀಸನ್‌ನಲ್ಲಿ ಎರಡು ಬಾರಿ ಮನೆಯ ಕ್ಯಾಪ್ಟನ್ ಆಗಿದ್ದರು. ಕ್ಯಾಪ್ಟನ್ ಆಗಿದ್ದಾಗಲಷ್ಟೇ ಅಲ್ಲ, ಗೇಮ್ ಆಡುವಾಗ, ಮನೆಯ ಉಳಿದ ಚಟುವಟಿಕೆಗಳಲ್ಲಿ ಎಲ್ಲವೂ ಅವರಲ್ಲಿನ ಮುಂದಾಳು ಎದ್ದು ಕಾಣಿಸುತ್ತಿದ್ದ. ಹಾಗೆಂದು ಅವರೇನೂ ಶಿಸ್ತಿನ ಸಿಪಾಯಿ ಆಗಿರಲಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರ ಮಾತನ್ನೂ ಕೇಳಿಸಿಕೊಂಡು ಎಲ್ಲರನ್ನೂ ಖುಷಿಖುಷಿಯಾಗಿಟ್ಟ ಕ್ಯಾಪ್ಟನ್ ಅವರು. ನಾಲ್ಕನೇ ವಾರದಲ್ಲಿ ‘ಉಗ್ರಂ’ ತಂಡದ ಮುಂದಾಳಾಗಿ ತನಿಷಾ ನೇತೃತ್ವದ ‘ಭಜರಂಗಿ’ ತಂಡವನ್ನು ಹಿಂದಿಕ್ಕಿ ಗೆಲುವಿನ ದಡ ಮುಟ್ಟಿಸಿದ್ದು ಇದೇ ಕಾರ್ತಿಕ್. ಏಳನೇ ವಾರದಲ್ಲಿ ಪ್ರತಾಪ್, ನಮೃತಾ, ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಅವರಿಂದ ಸಾಕಷ್ಟು ಸ್ಪರ್ಧೆಯನ್ನು ಎದುರಿಸಿಯೂ ಅವರು ನಾಯಕನ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. ಎಂಟನೇ ವಾರವೂ ಅವರು ನಾಯಕನಾಗಿ ಆಯ್ಕೆಯಾಗುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು.
ಜಿಯೊಸಿನಿಮಾ ಫನ್ ಫ್ರೈಡೆಯಲ್ಲಿ ಹೆಜ್ಜೆಗುರುತು: ಮನೆಯೊಳಗಿನ ಕೆಲಸಗಳು, ಟಾಸ್ಕ್‌ಗಳನ್ನು ಹೊರತುಪಡಿಸಿ ಜಿಯೊ ಸಿನಿಮಾ ಫನ್‌ಫ್ರೈಡೆ ಟಾಸ್ಕ್‌ಗಳಲ್ಲಿಯೂ ಕಾರ್ತಿಕ್ ಅವರ ಕಾಂಪಿಟೇಷನ್ ಗಮನಾರ್ಹವಾದದ್ದು. ‘ಚಂಡ ಮಾರುತ’ ಟಾಸ್ಕ್‌ನಲ್ಲಿ ಸಂಗೀತಾ ಜೊತೆಗೂಡಿ ಅವರು ಆಡಿದ ಆಟಕ್ಕೆ ಗೆಲುವಿನ ಪ್ರತಿಫಲ ದೊರೆತಿತ್ತು. ‘ಬ್ರೇಕ್ ದ ಬಲೂನ್’ ಟಾಸ್ಕ್‌ನಲ್ಲಿಯೂ ಈ ಜೋಡಿ ಮೋಡಿ ಮಾಡಿ ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಅವರ ವಿರುದ್ಧ ಎರಡನೇ ಹಂತದಲ್ಲಿ ಗೆಲುವು ಸಾಧಿಸಿತ್ತು.
ಕಾರ್ತಿಕ್- ಸಂಗೀತಾ- ತನಿಷಾ ತ್ರಿವಳಿ ಸ್ನೇಹ: ಅಸಮರ್ಥರ ತಂಡದಲ್ಲಿ ಒಂದಾಗಿ ಮನೆಯೊಳಗೆ ಪ್ರವೇಶಿಸಿದ ಕಾರ್ತಿಕ್, ಸಂಗೀತಾ ಮತ್ತು ತನಿಷಾ ಬಹುತೇಗ ಆಪ್ತ ಸ್ನೇಹಿತರಾದರು. ಅದರಲ್ಲಿಯೂ ಸಂಗೀತಾ ಮತ್ತು ಕಾರ್ತಿಕ್ ಅವರ ಸಂಬಂಧಕ್ಕೆ ಕೆಲವು ಸಲ ರೊಮ್ಯಾಂಟಿಕ್ ಆಂಗಲ್ ಕೂಡ ದಕ್ಕಿತ್ತು. ಆದರೆ ಆರಂಭದಲ್ಲಿಯೇ, ‘ಲವ್ ಗಿವ್ ಎಲ್ಲ ಬೇಡ… ಫ್ರೆಂಡ್ ಆಗಿರೋಣ’ ಎಂದು ಸಂಗೀತ ಸ್ಪಷ್ಟವಾಗಿ ಹೇಳಿದ್ದರು. ಅದಕ್ಕೆ ಕಾರ್ತಿಕ್ ಕೂಡ ಒಪ್ಪಿದ್ದರು. ಈ ಮೂವರ ಫ್ರೆಂಡ್‌ಷಿಪ್ ಬಿಗ್‌ಬಾಸ್ ಮನೆಯಲ್ಲಿ ಸಾಕಷ್ಟು ದೂರ ಸಾಗಿತ್ತು. ಒಮ್ಮೆ ಸಂಗೀತಾ ಜೈಲಿಗೆ ಹೋದಾಗ ಕಾರ್ತಿಕ್ ನೇರವಾಗಿಯೇ, ‘ನಾವು ಮೊದಲ ದಿನದಿಂದಲೂ ಒಬ್ಬರಿಗೊಬ್ಬರು ನಿಂತಿದ್ದೇವೆ. ಮುಂದೆಯೂ ನಿಲ್ಲುತ್ತೇವೆ’ ಎಂದೇ ಹೇಳಿದ್ದರು.
ಜೈಲು ಅವಧಿ ಮುಗಿದಾಗ, ಸಂಗೀತಾಳನ್ನು ಹೆಗಲ ಮೇಲೆ ಹೊತ್ತು ಮನೆಯೊಳಗೆ ತಂದ ಸನ್ನಿವೇಶ ಅವರಿಬ್ಬರ ಸ್ನೇಹಸಂಬಂಧದ ಬಗ್ಗೆ ಬಹಳಷ್ಟನ್ನು ಹೇಳುವಂತಿತ್ತು. ಹಲವು ಸಲ ಕಾರ್ತಿಕ್, ತನ್ನ ಸ್ನೇಹಿತರಾದ ಸಂಗೀತಾ ಮತ್ತು ತನಿಷಾ ಪರವಾಗಿ ನಿಂತಿದ್ದಾರೆ. ಅವರೊಟ್ಟಿಗೆ ಸೇರಿ ಆಡಿದ್ದಾರೆ. ಮನೆಯ ಉಳಿದ ಸಮಯದಲ್ಲಿಯೂ ಅವರ ನೋವುಗಳಿಗೆ ಜೊತೆಯಾಗಿದ್ದಾರೆ. ಕಣ್ಣೀರು ಒರೆಸಿದ್ದಾರೆ. ಹಾಗೆಯೇ ತಮ್ಮ ನೋವು ನಲಿವುಗಳನ್ನೂ ಅವರೊಟ್ಟಿಗೆ ಹಂಚಿಕೊಂಡಿದ್ದಾರೆ. ಆದರೆ ಸಂಗೀತಾ ಜೊತೆಗಿನ ಈ ಸ್ನೇಹ ಒಂದು ಹಂತದ ನಂತರ ಸಡಿಲಗೊಳ್ಳುತ್ತ ಬಂದಿತು. ಸಂಗೀತಾ ತಮ್ಮ ಕಂಪರ್ಟ್ ಝೋನ್ ಬಿಟ್ಟು ಹೊರಬರಲೆಂದು ವಿನಯ್ ಅವರಿದ್ದ ತಂಡದಲ್ಲಿ ಆಡಲು ನಿರ್ಧರಿಸಿದಾಗ ಆ ಸಂಬಂಧ ಇನ್ನಷ್ಟು ಸಡಿಲಾಗಿದ್ದು ನಿಜ. ಅಂಥ ಒಂದು ಸಂದರ್ಭದಲ್ಲಿ ಸಂಗೀತಾ ಎಸೆದ ಛಾಲೆಂಜ್ ಅನ್ನು ಸವಾಲಾಗಿ ಸ್ವೀಕರಿಸಿದ ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ತಮ್ಮ ತಲೆಯನ್ನು ಬೋಳಿಸಿಕೊಂಡಿದ್ದರು.
ನಂತರ ನಾಮಿನೇಷನ್‌ನಲ್ಲಿ, ಮನೆಯೊಳಗಿನ ಚಟುವಟಿಕೆಗಳ ಸಂದರ್ಭದಲ್ಲಿಯೆಲ್ಲ ಸಂಗೀತಾ ಮತ್ತು ಕಾರ್ತೀಕ್ ನಡುವಿನ ಗ್ಯಾಪ್ ಹೆಚ್ಚುತ್ತಲೇ ಹೋಯಿತು. ಒಂದು ಹಂತದಲ್ಲಿ ಈ ಸ್ನೇಹವನ್ನು ಬೇರ್ಪಡಿಸುವುದು ಸಾಧ್ಯವೇ ಇಲ್ಲ ಎಂಬಂತೆ ಕಾಣಿಸುತ್ತಿದ್ದ ಈ ಜೋಡಿ ಪರಸ್ಪರ ಕಿತ್ತಾಡುವ ಹೆಜ್ಜೆಹೆಜ್ಜೆಗೂ ಜಗಳವಾಡುವ ಎದುರಾಳಿಗಳಾಗಿ ಬದಲಾದರು. ಬೆರ್ಚುಗೊಂಬೆಯ ತಲೆಮೇಲಿನ ಮಡಕೆ ಒಡೆಯುವ ಸಂದರ್ಭದಲ್ಲಿ ಕಾರ್ತಿಕ್, ಸಂಗೀತಾ ಚಿತ್ರವಿರುವ ಮಡಕೆಯನ್ನು ಪುಡಿಗಟ್ಟಿ, ‘ಸಂಗೀತಾ ಅವರಲ್ಲಿ ನನ್ನನ್ನು ಕಳೆದರೆ ನಾನು ಜಿರೋ ಎಂದು ಕೆಲವರ ವಾದ. ಅದು ಸುಳ್ಳು ಅಂತ ನಾನು ಪ್ರೂವ್ ಮಾಡಿ ತೋರಿಸುತ್ತೇನೆ’ ಎಂದು ಹೇಳಿದ್ದರು. ಆದರೆ ಅದಾದ ನಂತರ ಕಾರ್ತಿಕ್ ಅವರ ಗ್ರಾಫ್ ನಿಧಾನಕ್ಕೆ ಇಳಿಯುತ್ತಲೇ ಬಂತು. ತನಿಷಾ ಅವರನ್ನು ನಾಮಿನೇಟ್ ಮಾಡುವುದರ ಮೂಲಕ ಅವರ ಅವರ ಸ್ನೇಹದಲ್ಲಿಯೂ ಒಡಕು ಬಂದಿತು. ಅವರ ನೆಚ್ಚಿನ ಅಕ್ಕ ಸಿರಿ ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಹೋದರು. ನಮ್ರತಾ ಜೊತೆಗಿನ ಅವರ ಸಂಬಂಧ ಬೇರೆಯದೇ ಆಯಾಮ ಪಡೆದುಕೊಳ್ಳುವ ಸೂಚನೆ ಸಿಕ್ಕಿತ್ತು. ಈ ಎಲ್ಲದರಿಂದ ಕಾರ್ತಿಕ್ ಮಾನಸಿಕವಾಗಿ ಕುಗ್ಗಿದ್ದು ಸುಳ್ಳಲ್ಲ. ಮನೆಯೊಳಗೆ ಒಬ್ಬಂಟಿಯಾದರು ಕೂಡ.
ವಿನಯ್ ಅವರಿಗೆ ಎದುರಾಳಿ: ಕಾರ್ತಿಕ್ ಅವರ ಬಿಗ್‌ಬಾಸ್ ಜರ್ನಿಯಲ್ಲಿ ವಿನಯ್ ಗೌಡ ಅವರ ಪಾಲು ದೊಡ್ಡದಿದೆ. ಬಿಗ್‌ಬಾಸ್ ಷೋಗಿಂತಲೂ ಮೊದಲಿನಿಂದ, ಅಂದರೆ ಕಳೆದ ಹತ್ತು ವರ್ಷಗಳಿಂದ ಸ್ನೇಹಿತರಾಗಿದ್ದ ವಿನಯ್ ಮತ್ತು ಕಾರ್ತೀಕ್ ಸ್ನೇಹಿತರು. ಮೊದಲ ಬಾರಿಗೆ ಬಿಗ್‌ಬಾಸ್ ಮನೆಯಲ್ಲಿ ಭೇಟಿಯಾದಾಗ ವಿನಯ್, ‘ಫಿನಾಲೆ ದಿನ ಸುದೀಪ್ ಅವರ ಒಂದು ಕೈಯಲ್ಲಿ ನಿನ್ನ ಕೈ ಇದ್ದರೆ, ಇನ್ನೊಂದು ಕೈಯಲ್ಲಿ ನನ್ನ ಕೈ ಇರಬೇಕು’ ಎಂದು ಕಾರ್ತಿಕ್ ಅವರ ಹೆಗಲು ತಟ್ಟಿದ್ದರು. ಹಾಗೆಂದು ಅವರು ಎಂದು ಹೆಗಲೆಣೆಯಾಗಿ ಆಡಿಲ್ಲ. ಸದಾ ಎದುರಾಳಿಗಳಾಗಿ ಒಬ್ಬರಿಗೊಬ್ಬರು ಕೌಂಟರ್ ಕೊಟ್ಟುಕೊಂಡೇ ಆಡಿದರು. ಅದು ಕೆಲವೊಮ್ಮೆ ಅತಿರೇಕಕ್ಕೆ ಹೋಗಿದ್ದೂ ಇದೆ.
ಹಳ್ಳಿ ಟಾಸ್ಕ್ ಆಗುವಾಗ ವಿನಯ್ ಮತ್ತು ಕಾರ್ತಿಕ್ ನಡುವೆ ಜಗಳ ತಾರಕಕ್ಕೇರಿತ್ತು. ಸಂಗೀತಾ ಮತ್ತು ವಿನಯ್ ನಡುವಿನ ಜಗಳ ನಿಲ್ಲಿಸುವಲ್ಲಿಯೂ ಕಾರ್ತಿಕ್ ಮುಖ್ಯಪಾತ್ರ ವಹಿಸಿದ್ದರು. ನಂತರ ರಾಕ್ಷಸರು ಗಂಧರ್ವರು ಟಾಸ್ಕ್‌ನಲ್ಲಿ ಇದು ಇನ್ನೊಂದು ಹಂತಕ್ಕೆ ಹೋಗಿತ್ತು. ವಿನಯ್ ರಾಕ್ಷಸನಾದಾಗ, ಕಾರ್ತಿಕ್ ಮುಖಕ್ಕೆ ಹಿಟ್ಟು ಎರೆಚಿದ್ದು ಕಾರ್ತಿಕ್ ಸಹನೆಯನ್ನು ಕೆಣಕಿತ್ತು. ಅವರು ಕೋಪದಲ್ಲಿ ನೆಲಕ್ಕೆಸೆದ ಚಪ್ಪಲಿ ವಿನಯ್ ಮೇಲೆ ಹೋಗಿ ಬಿದ್ದಿತ್ತು.ಇದು ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿತ್ತು.ಇಷ್ಟೆಲ್ಲ ಆದರೂ ವಿನಯ್ ಜೊತೆಗಿನ ಕಾರ್ತಿಕ್ ಸ್ನೇಹಕ್ಕೆ ಕುಂದು ಬಂದಿಲ್ಲ. ಇತ್ತೀಚೆಗಷ್ಟೇ, ‘ನಿಮ್ಮ ಜೊತೆಗೆ ಫಿನಾಲೆಯಲ್ಲಿ ಇರುವ ಇನ್ನೊಬ್ಬ ಸ್ಪರ್ಧಿ ಯಾರಾಗಿರಬೇಕು?’ ಎಂಬ ಬಿಗ್‌ಬಾಸ್ ಪ್ರಶ್ನೆಗೆ ಕಾರ್ತಿಕ್ ಆರಿಸಿಕೊಂಡಿದ್ದು ವಿನಯ್ ಅವರ ಹೆಸರನ್ನೇ!
ಫ್ರಾಂಕ್ ಫ್ಲರ್ಟ್: ಕಳೆದ ಕೆಲವು ವಾರಗಳ ಹಿಂದೆ ಕಾರ್ತಿಕ್ ನಮ್ರತಾ ನಡುವೆ ತಮಾಷೆಯ ಮಾತುಕತೆಗಳು ನಡೆಯುತ್ತಿದ್ದವು. ಕಾರ್ತಿಕ್, ನಮ್ರತಾ ಜೊತೆಗೆ ಡೇಟಿಂಗ್ ಹೋಗುವ ಟ್ರ್ಯಾಕ್ ತುಂಬ ವಾರಗಳಿಂದಲೂ ನಡೆಯುತ್ತಲೇ ಬಂದಿತ್ತು. ಹಲವು ಸಲ ಕಾರ್ತಿಕ್ ತಮಾಷೆಗಾಗಿ, ನಮ್ರತಾ ಜೊತೆಗೆ ಫ್ಲರ್ಟ್ ಮಾಡುತ್ತಿರುವಂತೆಯೇ ನಡೆದುಕೊಳ್ಳುತ್ತಿದ್ದರು. ಅದನ್ನು ನಮ್ರತಾ ಕೂಡ ಅಷ್ಟೇ ಹೆಲ್ದಿಯಾಗಿ ತೆಗೆದುಕೊಂಡು ಫ್ರಾಂಕ್ ಮಾಡುತ್ತಿದ್ದರು. ‘ಕಾರ್ತೀಕ್ ಕೈ ಹಿಡಿದುಕೊಂಡಾಗ ನನಗೇನೋ ಕಂಫರ್ಟ್ ಫೀಲ್ ಆಗುತ್ತದೆ. ನನಗೆ ಎಂದೂ ಅವರ ಟಚ್ ಬ್ಯಾಡ್ ಎನಿಸಿಲ್ಲ’ ಎಂದು ನಮ್ರತಾ ಹಲವು ಬಾರಿ ಹೇಳಿದ್ದರು. ಆದರೆ ಈ ಎಲ್ಲದಕ್ಕೂ ಹೊಸದೇ ತಿರುವು ಬಂದಿದ್ದು, ಈ ಸೀಸನ್‌ನ ಹಳೆಯ ಸ್ಪರ್ಧಿಗಳು ಮತ್ತೆ ಮನೆಯೊಳಗೆ ಬಂದಾಗ. ಒಂದೆಡೆ ಸ್ನೇಹಿತ್, ಮನೆಯೊಳಗೆ ಬಂದು ನಮ್ರತಾಳನ್ನು ನಿರ್ಲಕ್ಷಿಸಿದರು. ‘ನೀವು ಕಾರ್ತಿಕ್ ನಡೆಗಳು ಹೊರಗಡೆ ಅಗ್ಲಿಯಾಗಿ ಕಾಣಿಸುತ್ತಿವೆ’ ಎಂದು ಪದೇ ಪದೇ ಹೇಳಿದ್ದರು. ಕಾರ್ತೀಕ್‌ಗೆ ಕೂಡ, ‘ನಿಮ್ಮೊಳಗೊಬ್ಬ ಜಂಟಲ್‌ಮೆನ್ ನೋಡಿದ್ದೀನಿ. ಹಾಗೇ ಇರಿ’ ಎಂದಿದ್ದರು. ಸಿರಿ, ಕಾರ್ತಿಕ್ ಅವರನ್ನು ಪಕ್ಕಕ್ಕೆ ಕರೆದು ‘ನಮ್ರತಾ ಜೊತೆಗೆ ಹಾಗೆ ನಡೆದುಕೊಳ್ಳುವುದನ್ನು ಬಿಡು’ ಎಂದು ಬುದ್ಧಿ ಹೇಳಿದ್ದರು. ಇದು ತಮ್ಮ ನಡವಳಿಕೆ ಹೊರಗಿನಿಂದ ನೋಡುವವರಿಗೆ ಅಗ್ಲಿಯಾಗಿ ಕಾಣಿಸುತ್ತಿದೆ ಎಂದು ಅನಿಸುವಂತೆ ಆಯಿತು. ಅದು ಅವರನ್ನು ಸಾಕಷ್ಟು ಕುಗ್ಗಿಸಿತು ಕೂಡ.
ಅಮ್ಮನ ನೋಡಿದ ಭಾವುಕ ಕ್ಷಣ: ಸದಾ ಸ್ಟ್ರಾಂಗ್ ಆಗಿಯೇ ಕಾಣಿಸುತ್ತಿದ್ದ ಕಾರ್ತಿಕ್, ಭಾವುಕವಾಗಿ ಕಟ್ಟೊಡೆದಿದ್ದು ಅವರ ಅಮ್ಮ ಮನೆಯೊಳಗೆ ಕಾಲಿಟ್ಟಾಗ. 81ನೇ ದಿನ ಕಾರ್ತಿಕ್ ಅಮ್ಮ ಮನೆಯೊಳಗೆ ಬಂದಿದ್ದರು. ಆದರೆ ಆಗ ಬಿಗ್‌ಬಾಸ್ ಇಡೀ ಮನೆಯವರಿಗೆ ‘ಪಾಸ್’ ಕೊಟ್ಟಿತ್ತು. ಅದರ ಪ್ರಕಾರ ಕಾರ್ತಿಕ್ ಕೂಡ ಅಲ್ಲಾಡುವಂತಿರಲಿಲ್ಲ. ಅಮ್ಮ ಬಂದು ಅವರ ಜೊತೆಗೆ ಮಾತಾಡಿಸುವಾಗ ಉತ್ತರಿಸಲಾಗದೆ, ಭಾವುಕತೆಯನ್ನು ತಡೆದುಕೊಳ್ಳಲೂ ಆಗದೇ ಕಂಪಿಸುತ್ತಿದ್ದರು ಕಾರ್ತಿಕ್. ಅವರ ಕಣ್ಣುಗಳಲ್ಲಿ ನೀರು ಧಾರಾಕಾರ ಸುರಿಯುತ್ತಿತ್ತು. ಅಮ್ಮ, ಅವರನ್ನು ತಬ್ಬಿಕೊಂಡು, ಮುತ್ತಿಟ್ಟು, ಅವರಿಗಾಗಿ ಬೋರ್ಡ್ ಮೇಲೆ ಮೆಸೇಜ್ ಬರೆದು ಮುಖ್ಯದ್ವಾರದಿಂದ ಹೊರಗೆ ಹೋದಾಗಲೂ ಕಾರ್ತಿಕ್ ನಿಶ್ಚಲವಾಗಿ ನಿಂತೇ ಇದ್ದರು. ಹೀಗೆ ಬಂದು ಹಾಗೆ ಮರೆಯಾಗಿ ಹೋದ ಅಮ್ಮನ ನೆನೆದು ಅಂದು ಕಾರ್ತಿಕ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಗಟ್ಟಿ ವ್ಯಕ್ತಿತ್ವದ ಅವರೊಳಗಿನ ಮಗು ಮನಸ್ಸು ಅಂದು ಎಲ್ಲರ ಹೃದಯಕರಗಿಸಿತ್ತು.
ಅದಾದ ಕೆಲಹೊತ್ತಿನ ನಂತರ ಕಾರ್ತೀಕ್ ಅವರ ಅಮ್ಮ ಮತ್ತೆ ಮನೆಯೊಳಗೆ ಬಂದು, ಮನೆಯ ಸದಸ್ಯರ ಜೊತೆಗೆಲ್ಲ ಸಂವಾದಿಸಿ ಹೋದರು. ಇಂಥ ಹತ್ತುಹಲವು ಸನ್ನಿವೇಶಗಳು ಕಾರ್ತಿಕ್ ಅವರ ಬಿಗ್‌ಬಾಸ್ ಜರ್ನಿಯಲ್ಲಿ ಇಡಿಕಿರಿದಿವೆ. ಎಮೋಷನಲಿ, ಫಿಜಿಕಲಿ, ಮೆಂಟಲಿ ಎಲ್ಲ ಬಗೆಯಲ್ಲಿಯೂ ಅತ್ಯಂತ ಏರಿಳಿತದ ಹಾದಿಯಲ್ಲಿರುವ ಕಾರ್ತಿಕ್ ಕೊನೆಯ ದಿನಗಳಲ್ಲಿ ಕುಗ್ಗಿದ್ದರು. ಹಿಂದಿನ ಕಾರ್ತಿಕ್ ಇವರೇನಾ ಎನ್ನುವಷ್ಟು ತಣ್ಣಗಾಗಿದ್ದರು. ಕೊನೆಯ ದಿನಗಳಲ್ಲಿ ಮತ್ತೆ ಮೇಲೆದ್ದು ಬರಲು ಶತಪ್ರಯತ್ನ ನಡೆಸಿದರಾದರೂ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಬಿಗ್‌ಬಾಸ್ ಕನ್ನಡದ ಈ ಸೀಸನ್ ಕಾರ್ತೀಕ್ ಮಹೇಶ್ ಅವರಿಲ್ಲದೇ ಇಷ್ಟು ಎಂಟರ್‌ಟೈನಿಂಗ್ ಆಗಿರುತ್ತಿರಲಿಲ್ಲ ಎಂಬುದಂತೂ ಸತ್ಯ. ಇಷ್ಟು ವೈವಿಧ್ಯಮಯವಾಗಿರುವ ಕಾರ್ತಿಕ್ ಮಹೇಶ್ ಅವರ ಜರ್ನಿಯನ್ನು JioCinemaದಲ್ಲಿ ಉಚಿತವಾಗಿ ವೀಕ್ಷಿಸಬಹುದು.