ಅವಮಾನ-ಆಕ್ರೋಶಕ್ಕೆ ಯಶಸ್ಸಿನ ಉತ್ತರ: ಬಿಗ್‌ಬಾಸ್‌ ಕನ್ನಡ ಸೀಸನ್ 10 ರನ್ನರ್ ಅಪ್ ಡ್ರೋನ್ ಪ್ರತಾಪ್‌!

ಬಿಗ್‌ಬಾಸ್‌ಕನ್ನಡ 10ನೇ ಸೀಸನ್‌ನಲ್ಲಿ ಡ್ರೋನ್‌ ಪ್ರತಾಪ್‌ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಅವರೇ ಹೇಳಿಕೊಂಡಂತೆ ಅವರು ಇದನ್ನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. 

Bigg Boss Kannada Season 10 Runner Up Drone Pratap gvd

ಬಿಗ್‌ಬಾಸ್‌ಕನ್ನಡ 10ನೇ ಸೀಸನ್‌ನಲ್ಲಿ ಡ್ರೋನ್‌ ಪ್ರತಾಪ್‌ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಅವರೇ ಹೇಳಿಕೊಂಡಂತೆ ಅವರು ಇದನ್ನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಉಳಿದಿದ್ದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ಹರಟಿ ನಂತರ ಬಿಗ್‌ಬಾಸ್‌ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು.  ಮುಖ್ಯವೇದಿಕೆಯಲ್ಲಿ ಸಂಗೀತಾ ಶೃಂಗೇರಿ ಎರಡನೇ ರನ್ನರ್ ಅಪ್ ಆಗಿದ್ದಾರೆ ಎಂದು ಕಿಚ್ಚ ಘೋಷಿಸಿದರು. ನಂತರ ವೇದಿಕೆಯ ಮೇಲೆ ಉಳಿದಿದ್ದು ಕಾರ್ತಿಕ್ ಮತ್ತು ಡ್ರೋನ್ ಪ್ರತಾಪ್. ಕಿಚ್ಚನ ಒಂದು ಕೈಯಲ್ಲಿ ಕಾರ್ತಿಕ್ ಕೈ ಮತ್ತೊಂದು ಕೈಯಲ್ಲಿ ಪ್ರತಾಪ್‌ ಕೈ ಇತ್ತು. ಆ ಟೆನ್ಷನ್‌ ಅನ್ನು ಮಾತುಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಇಡೀ ಕರ್ನಾಟಕವೇ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಗಳಿಗೆ ಅದು.

ಅದರಲ್ಲಿ ಸುದೀಪ್‌ ಅವರು ಕಾರ್ತಿಕ್ ಅವರ ಕೈಯನ್ನು ಎತ್ತಿ ಹಿಡಿದರು. ಅಂದರೆ ಡ್ರೋನ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಅವರಿಗೆ ಹತ್ತು ಲಕ್ಷ ರೂಪಾಯಿಗಳ ಬಹುಮಾನ ಪಡೆದುಕೊಂಡಿದ್ದಾರೆ. ಡ್ರೋನ್ ಪ್ರತಾಪ್ ಅವರ ಹಲವು ಏರಿಳಿತಗಳ ಜರ್ನಿಯನ್ನು ಅಕ್ಷರಗಳಲ್ಲಿ ಹಿಡಿದಿಡುವ ಪ್ರಯತ್ನ ಜಿಯೊಸಿನಿಮಾ ಮಾಡುತ್ತಿದೆ.  ಮನೆಯೊಳಗೆ ಪ್ರವೇಶಿಸಿದ ಪ್ರತಾಪ್‌, ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸಿದರು. ಅವ ಸುಳ್ಳುಗಾರ, ಮೋಸಗಾರ ಎಂಬ ಮಾತುಗಳನ್ನು ಕೇಳಿಸಿಕೊಂಡರು. ತಮ್ಮೆದುರೇ ತಮ್ಮನ್ನು ಆಡಿಕೊಳ್ಳುವ, ತಮಾಷೆ ಮಾಡಿ ನಗುವ ಸದಸದಸ್ಯರ ಮಾತಿಗೆ ಕಿವಿಯಾದರು. ಆದರೆ ಅವರು ಹಲವು ವರ್ಷಗಳ ನಂತರ ತಮ್ಮ ತಂದೆಯ ಜೊತೆ ಮಾತಾಡಿದ್ದು, ಎಷ್ಟೋ ವರ್ಷಗಳ ನಂತರ ಅಮ್ಮನನ್ನು ನೋಡಿದ್ದು ಕೂಡ ಇದೇ ಮನೆಯಲ್ಲಿ! ಈ ಎರಡೂ ಅಂಚಿನ ರೋಲರ್‍‌ಕೋಸ್ಟರ್ ಜರ್ನಿಗೆ ಸಾಕ್ಷಿಯಾಗಿದ್ದು ಬಿಗ್‌ಬಾಸ್‌ ವೇದಿಕೆ ಮತ್ತು ಅದರ ವೀಕ್ಷಕರು. ಡ್ರೋನ್ ಪ್ರತಾಪ್ ಅವರು ಬಿಗ್‌ಬಾಸ್ ಮನೆಯೊಳಗೆ ಸವೆಸಿದ ದಾರಿಯ ಒಂದು ಕಿರುನೋಟವನ್ನು ಜಿಯೊಸಿನಿಮಾ ನಿಮ್ಮ ಮುಂದಿಡುತ್ತಿದೆ.

ಬಿಗ್‌ಬಾಸ್‌ ಸೀಸನ್‌ 10 ಎರಡನೇ ರನ್ನರ್ ಅಪ್‌ ಸಂಗೀತಾ ಶೃಂಗೇರಿ: ಹಲವು ಸ್ವರಗಳ ಏರಿಳಿತ ಸೇರಿ ಆದ ಬ್ಯಾಂಗಲ್‌ ಕ್ವೀನ್!

ಕುಗ್ಗಿದ್ದ ಪ್ರತಾಪ್ ಅವರ ಕೈ ಹಿಡಿದ ಕಿಚ್ಚ: ಮೊದಲ ವಾರವೇ ಪ್ರತಾಪ್‌, ಅವರನ್ನು ಮನೆಯ ಸದಸ್ಯರ ಮಾತುಗಳು ಕುಗ್ಗಿಸಿದ್ದವು. ಅಲ್ಲಿ ಆದ ಅವಮಾನದಿಂದ ಬೇಸತ್ತ ಪ್ರತಾಪ್ ಬಾತ್‌ರೂಮಿಗೆ ಹೋಗಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ವಿಶೇಷವಾಗಿ ತುಕಾಲಿ ಸಂತೋಷ್ ಅವರು ಪ್ರತಾಪ್ ಮೇಲೆ ಮಾಡಿದ ಜೋಕ್‌ಗಳು ಅವರನ್ನು ಸಾಕಷ್ಟು ನೋವನ್ನುಂಟು ಮಾಡಿದ್ದವು. ವಾರಾಂತ್ಯದಷ್ಟರಲ್ಲಿ ಸಾಕಷ್ಟು ನಿತ್ರಾಣಗೊಂಡಿದ್ದ ಪ್ರತಾಪ್ ಅವರ ಬೆಂಬಲಕ್ಕೆ ನಿಂತಿದ್ದು ಕಿಚ್ಚ ಸುದೀಪ್‌. ‘ಇನ್ನೊಬ್ಬರನ್ನು ನೋಯಿಸಿ ಜೋಕ್ ಮಾಡುವುದು ಒಳ್ಳೆಯ ಹಾಸ್ಯದ ಲಕ್ಷಣವಲ್ಲ’ ಎಂದು ತುಕಾಲಿ ಅವರನ್ನು ಎಚ್ಚರಿಸಿದ ಅವರು, ‘ಕೈ ಮುಗಿದರೆ ದೇವರೇ ಕ್ಷಮಿಸ್ತಾನಂತೆ. ನಾವ್ಯಾರು ಇನ್ನೊಬ್ಬರಿಗೆ ಶಿಕ್ಷೆ ಕೊಡೋಕೆ’ ಎಂದು ಪ್ರತಾಪ್ ವಿರುದ್ಧ ಮುಗಿಬಿದ್ದವರಿಗೆ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇದು ಪ್ರತಾಪ್ ಅವರಿಗೆ ಸಾಕಷ್ಟು ಆತ್ಮವಿಶ್ವಾಸ ತುಂಬಿತ್ತು. ಮನೆಯಲ್ಲಿ ಹೊಸ ಉತ್ಸಾಹದೊಂದಿಗೆ ಆಟಕ್ಕೆ ನಿಲ್ಲುವಂತೆ ಮಾಡಿತ್ತು. 

ತಂತ್ರಗಾರಿಕೆಯಲ್ಲಿ ನಿಪುಣ: ಸದಾ ಒಬ್ಬಂಟಿಯಾಗಿ, ಯಾವುದರಲ್ಲಿಯೂ ಅಷ್ಟಾಗಿ ಪಾಲ್ಗೊಳ್ಳದ ಕಾರ್ತಿಕ್‌ ಅವರೊಳಗಿದ್ದ ತಂತ್ರಗಾರ ನಿಚ್ಛಳವಾಗಿ ಕಾಣಿಸಿಕೊಂಡಿದ್ದು ನಾಲ್ಕನೇ ವಾರದಲ್ಲಿ. ಆ ವಾರ ನಾಮಿನೇಷನ್‌ ಪಾಸ್‌ಗಳನ್ನು ಬಲೂನ್‌ನಲ್ಲಿ ತುಂಬಿ ಮನೆಯಿಡೀ ಬಲೂನ್‌ಗಳನ್ನು ಇಡಲಾಗಿತ್ತು. ಸದಸ್ಯರು ಬಲೂನ್‌ಗಳನ್ನು ಒಡೆದು ಅದರೊಳಗಿನ ಪಾಸ್‌ಗಳನ್ನು ಹುಡುಕಿ ತೆಗೆದುಕೊಳ್ಳಬೇಕಿತ್ತು. ಈ ಟಾಸ್ಕ್‌ನಲ್ಲಿ ಅತ್ಯಂತ ತಾಳ್ಮೆಯಿಂದಲೇ ಆಡಿದ ಪ್ರತಾಪ್ ಅವರಿಗೆ ಒಟ್ಟು ಐದು ಪಾಸ್‌ಗಳು ಸಿಕ್ಕಿದ್ದವು. ಒಬ್ಬರ ಕೈಯಿಂದ ಇನ್ನೊಬ್ಬರು ಪಾಸ್‌ ಅನ್ನು ಕಸಿದುಕೊಳ್ಳಬಹುದು ಎಂಬ ಕಾರಣಕ್ಕೆ ಪ್ರತಾಪ್‌ ಒಂದೇ ಒಂದು ಪಾಸ್‌ ಅನ್ನು ಕಿಸೆಯಲ್ಲಿಟ್ಟುಕೊಂಡು ಉಳಿದವನ್ನು ಮೈಕ್‌ ಕವರ್ ಒಳಗೆ ಇಟ್ಟಿದ್ದರು. 

ಪ್ರತಾಪ್‌ ಬಳಿ ಇದ್ದ ಒಂದು ಪಾಸ್‌ ಅನ್ನು ಕಾರ್ತಿಕ್, ಸ್ನೇಹಿತ್ ಮತ್ತು ಮೈಕಲ್ ಸೇರಿಕೊಂಡು ಬಲವಂತವಾಗಿ ಕಿತ್ತುಕೊಂಡರು. ಹಾಗಾಗಿ ಪ್ರತಾಪ್ ಬಳಿ ಪಾಸ್‌ಗಳು ಇಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಪಾಸ್ ಗಳಿಸುವ ಅವಧಿ ಮುಗಿದಾಗ ಪ್ರತಾಪ್ ತಮ್ಮ ಬಳಿ ಇದ್ದ ಇನ್ನೂ ನಾಲ್ಕು ಪಾಸ್‌ಗಳನ್ನು ತೆರೆದು ತೋರಿಸಿದರು.ಅದನ್ನು ಕಂಡು ಮನೆಮಂದಿಯೆಲ್ಲರೂ ಬೆಕ್ಕಸ ಬೆರಗಾಗಿದ್ದಂತೂ ನಿಜ. ತಾವು ಒಡೆದ ಬಲೂನ್‌ಗಳ ಒಳಗೇ ಇದ್ದ ನಾಮಿನೇಷನ್‌ ಪಾಸ್‌ಗಳನ್ನೇ ಮನೆಯ ಉಳಿದ ಸದಸ್ಯರು ಗುರ್ತಿಸದೆ ನಿರ್ಲಕ್ಷಿಸಿದ್ದರು. ಅದನ್ನೂ ಪ್ರತಾಪ್ ಎತ್ತಿಕೊಂಡಿದ್ದರು. 

ಇದಲ್ಲದೆ ಅವತ್ತು ಅವರು ನಾಮಿನೇಷನ್‌ ಪಾಸ್‌ಗಳನ್ನು ಬಳಸಿಕೊಂಡು ಸೇವ್ ಮಾಡಿದ ನಾಲ್ಕು ಜನರೂ ಮಹಿಳಾ ಸ್ಪರ್ಧಿಗಳು ಎಂಬುದನ್ನೂ ಗಮನಿಸಬೇಕು. ಇದೂ ಕೂಡ ಪ್ರತಾಪ್ ತಂತ್ರಗಾರಿಕೆಯ ಭಾಗವೇ ಎಂಬುದು ಮುಂದಿನ ದಿನಗಳಲ್ಲಿ ಅವರೆಲ್ಲರೂ ಬೇರೆ ಬೇರೆ ರೀತಿಯಲ್ಲಿ ಪ್ರತಾಪ್ ಬೆಂಬಲಕ್ಕೆ ನಿಂತಿದ್ದೇ ಸಾಕ್ಷಿ. ಇದಲ್ಲದೆ ಐದನೇ ವಾರವೂ ಅವರು ತಮ್ಮ ತಂತ್ರನಿಪುಣತೆಯನ್ನು ತೋರಿಸಿ ಮನೆಯ ಕ್ಯಾಪ್ಟನ್ ಆಗಿದ್ದರು. ಪಾಯಿಂಟ್ಸ್‌ ಖರೀದಿಸುವ ವಾರದಲ್ಲಿಯೂ ಪ್ರತಾಪ್‌ ಅವರ ಸ್ಟ್ರಾಟಜಿಯಿಂದಲೇ ಸಂಗೀತಾ ತಂಡ ಗೆಲುವು ಕಂಡಿದ್ದಲ್ಲದೇ, ಅವರ ತಂಡದಲ್ಲಿದ್ದ ನಮ್ರತಾ, ಪ್ರತಾಪ್ ಅವರ ಬೆಂಬಲದೊಂದಿಗೆ ಕ್ಯಾಪ್ಟನ್ ಕೂಡ ಆದರು. ಇಂಥ ಹತ್ತು ಹಲವು ನಿದರ್ಶನಗಳನ್ನು ಪ್ರತಾಪ್ ಜರ್ನಿಯಲ್ಲಿ ನೋಡಬಹುದು.

ದಿದಿಯರ ನೆಚ್ಚಿನ ತಮ್ಮ!:  ‘ಯಾವಾಗಲೂ ದಿದಿಯರ ಮಡಿಲಿನಲ್ಲಿಯೇ ಇರುತ್ತಾನೆ’, ‘ದಿದಿಯರ ಬೆಂಬಲ ಇಲ್ದಿದ್ರೆ ಅವ್ನತ್ರ ಏನೂ ಮಾಡಕ್ಕಾಗಲ್ಲ’, ‘ದಿದಿ ದಿದಿ ಅಂತ ಯಾವಾಗ್ಲೂ ಅದೇ ಆಯ್ತು’ ಹೀಗೆ ಹತ್ತು ಹಲವು ಟೀಕೆಗಳನ್ನು ಪ್ರತಾಪ್ ಆಗಾಗ ಕೇಳಿಸಿಕೊಂಡಿದ್ದಿದೆ. ಆದರೆ ಅವರು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮನೆಯೊಳಗೆ ದಿದಿಯರ ನೆಚ್ಚಿನ ತಮ್ಮನಾಗಿದ್ದದ್ದು ಅವರ ಜರ್ನಿಯನ್ನು ಎಷ್ಟೋ ಸಹನೀಯಗೊಳಿಸಿದ್ದಂತೂ ನಿಜ. ಎಲಿಮಿನೇಷನ್ ಪಾಸ್‌ ನಲ್ಲಿ ಸೇವ್ ಮಾಡುವಾಗ ಪ್ರತಾಪ್ ಮನೆಯ ಹೆಣ್ಣುಮಕ್ಕಳನ್ನೇ ಸೇವ್ ಮಾಡಿದ್ದು, ಅವರಲ್ಲಿ ಪ್ರತಾಪ್ ಬಗ್ಗೆ ಒಂದು ರೀತಿಯ ಕೃತಜ್ಞತಾಭಾವವನ್ನು ಹುಟ್ಟಿಸಿತ್ತು. ಅಲ್ಲದೆ, ಪ್ರತಾಪ್ ಕುಗ್ಗಿದ್ದಾಗ ಅವನ ಬೆಂಬಲಕ್ಕೆ ನಿಂತವರೂ ಈ ದೀದಿಯರೇ. 

ನಮ್ರತಾ, ಕಲಿಸಿಕೊಟ್ಟ ಡಾನ್ಸ್‌ ಅನ್ನು ಕಿಚ್ಚನ ಮುಂದೆ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದರು. ಬಾತ್‌ರೂಮಿನಲ್ಲಿ ಹೋಗಿ ಅಳುವಾಗ,ಒಬ್ಬಂಟಿಯಾಗಿ ಮಂಕಾಗಿ ಕೂತಾಗ ಅವರ ಜೊತೆಗೆ ನಿಂತಿದ್ದು ಸಂಗೀತಾ, ನಮ್ರತಾ, ಭಾಗ್ಯಶ್ರೀ ಹೀಗೆ ಬಹುತೇಕ ಹೆಣ್ಣುಮಕ್ಕಳೇ. ಸದಸ್ಯರ ಕುಟುಂಬದವರು ಮನೆಯೊಳಗೆ ಬರುವ ವಾರದಲ್ಲಿ ಪ್ರತಾಪ್ ಅವರ ಅಪ್ಪ, ಅಮ್ಮ ಮನೆಯ ಹೆಣ್ಣುಮಕ್ಕಳಿಗೆಲ್ಲ ಸೀರೆ ತಂದುಕೊಟ್ಟಿದ್ದೂ ಪ್ರತಾಪ್ ಜೊತೆಗೆ ದಿದಿಯರ ಆಪ್ತಬಾಂಧವ್ಯ ಹೆಚ್ಚಿಸಲು ಕಾರಣವಾಯ್ತು. ಕೊನೆಯ ವಾರದವರೆಗೂ ಸಂಗೀತಾ, ಪ್ರತಾಪ್ ಅವರ ಬೆನ್ನಿಗೆ ನಿಂತಿದ್ದು, ಮನೆಯಿಂದ ಹೊರಬಂದ ಮೇಲೂ, ‘ಅವನು ಯಾವಾಗಲೂ ನನ್ನ ಚಿಕ್ಕ ತಮ್ಮನಾಗೇ ಇರ್ತಾನೆ’ ಎಂದು ನಮ್ರತಾ ಭಾವುಕರಾಗಿ ಹೇಳಿದ್ದು ಇವೆಲ್ಲವೂ ಪ್ರತಾಪ್ ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ.

ಕಣ್ಣಿನ ಗಾಯ, ಆರೋಗ್ಯದ ಏರುಪೇರು: ರಕ್ಕಸರು ಗಂಧರ್ವರ ಟಾಸ್ಕ್‌ನ ವಾರದಲ್ಲಿ ಕುರ್ಚಿಯಲ್ಲಿ ಕೂಡಿಸಿ ನೀರನ್ನು ಸೋಕಿದಾಗ ಪ್ರತಾಪ್ ಮತ್ತು ಸಂಗೀತಾ ಕಣ್ಣುಗಳಿಗೆ ಗಾಯವಾಗಿತ್ತು. ಅದರಿಂದಾಗಿ ಅವರು ಕೆಲಕಲ ಆಸ್ಪತ್ರೆಯನ್ನೂ ಸೇರುವಂತಾಗಿತ್ತು. ತಿರುಗಿ ಬಂದಮೇಲೂ ಹಲವು ದಿನಗಳ ಕಾಲ ಕಣ್ಣಿಗೆ ಕಪ್ಪು ಕನ್ನಡಕ ಇಟ್ಟುಕೊಂಡೇ ಇರುವಂತಾಗಿತ್ತು.ಈ ಹಂತದಲ್ಲಿ ಸಂಗೀತಾ ಜೊತೆಗೆ ಅವರ ಬಾಂಧವ್ಯ ಇನ್ನಷ್ಟು ಗಟ್ಟಿಗೊಂಡಿತು. ಮನೆಯೊಳಗೆ ತಿರುಗಿ ಬಂದಾಗ ಅವರಿಬ್ಬರೂ ಮೊದಲಿಗಿಂತ ಹೆಚ್ಚು ಸ್ಟ್ರಾಂಗ್ ಆಗಿದ್ದಿದ್ದು ಎದ್ದು ಕಾಣಿಸುವಂತಿತ್ತು. ಸ್ವಾಮೀಜಿ ಅವರು ಭವಿಷ್ಯ ನುಡಿಯುತ್ತ, ನೀನು ಕುಟುಂಬದಿಂದ ದೂರವಿರುವುದು ಒಳಿತು ಎಂದು ಹೇಳಿದ್ದು ಪ್ರತಾಪ್ ಅವರನ್ನು ಕುಗ್ಗಿಸಿತ್ತು. ಅದೇ ನೋವಿನಲ್ಲಿ ಅವರು ಸರಿಯಾಗಿ ಊಟ ಮಾಡದೆ, ಕೊನೆಗೆ ಇನ್‌ಫೆಕ್ಷನ್‌ ಸಮಸ್ಯೆಯಿಂದ ಮತ್ತೆ ಆಸ್ಪತ್ರೆಗೆ ದಾಖಲಾಗುವಂತಾಗಿತ್ತು. ಹೀಗೆ ಈ ಸೀಸನ್‌ನಲ್ಲಿ ಪ್ರತಾಪ್ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿ ತಿರುಗಿ ಬಂದರು. 

ಭಾವುಕ ಪುನರ್‍‌ಮಿಲನ: ನಾನು ನನ್ನ ಕುಟುಂಬದಿಂದ ಮೂರು ವರ್ಷಗಳಿಂದ ದೂರ ಇದ್ದೇನೆ. ಅವರನ್ನು ಮಾತಾಡಿಸಬೇಕು ಎಂದು ಪ್ರತಾಪ್ ಯಾವಾಗಲೂ ಹೇಳುತ್ತಲೇ ಇದ್ದರು. ಆರನೇ ವಾರಾಂತ್ಯದ ಕಿಚ್ಚಿನ ಎಪಿಸೋಡ್‌ನಲ್ಲಿ ಅವರ ಕನಸು ನನಸಾಯಿತು. ಪೋನ್‌ನಲ್ಲಿ ಪ್ರತಾಪ್ ತಂದೆಯ ಧ್ವನಿ ಮೊಳಗುತ್ತಿದ್ದಂತೆಯೇ ಪ್ರತಾಪ್‌, ‘ಅಪ್ಪಾ’ ಎಂದು ಕರೆಯುತ್ತ ಬಿಕ್ಕಿ ಬಿಕ್ಕಿ ಅತ್ತರು. ವರ್ಷಗಳ ನಂತರ ಅವರು ತಂದೆಯ ಜೊತೆಗೆ ಮಾತಾಡಿದ್ದು ಎಂಥವರ ಹೃದಯವನ್ನೂ ಕರಗಿಸುವಂತತ್ತು. ಮತ್ತೊಂದು ವಾರದಲ್ಲಿ ಎಲ್ಲ ಸದಸ್ಯರ ಕುಟುಂಬದವರೂ ಮನೆಯೊಳಗೆ ಬಂದರು. ಪ್ರತಾಪ್‌ಗೆ ನಮ್ಮ ಕುಟುಂಬದವರು ಬರುತ್ತಾರೋ ಇಲ್ಲವೋ ಎಂಬ ಅನುಮಾನ ಇದ್ದೇ ಇತ್ತು. ಅದಕ್ಕಾಗಿ ಊಟವನ್ನೂ ಮಾಡದೆ ಕಾದಿದ್ದರು. ಕೊನೆಗೂ ಪ್ರತಾಪ್ ತಂದೆ ತಾಯಿ ಮನೆಯೊಳಗೆ ಬಂದಾಗ ಚಿಕ್ಕ ಮಗುವಿನಂತೆ ಖುಷಿಯಿಂದ ಕುಣಿದಾಡಿದರು.  ತಂದೆಯ ಕೈಯಾರೆ ಬಾಳೆಹಣ್ಣು ತಿನ್ನಿಸಿಕೊಂಡರು. ಕುಟುಂಬದ ಪರಿಸ್ಥಿತಿ ವಿಚಾರಿಸಿಕೊಂಡು, ಇಲ್ಲಿಂದ ಬಂದ ಕೂಡಲೇ ಮನೆಗೆ ಬರುತ್ತೇನೆ. ತಂಗಿಯ ಮದುವೆ ನಾನೇ ನಿಂತು ಮಾಡಿಸುತ್ತೇನೆ ಎಂದು ಮಾತುಕೊಟ್ಟರು. ಅವರ ಪುನರ್‍‌ಮಿಲನ ನೋಡಿ ಎಲ್ಲರೂ ಭಾವುಕಗೊಂಡಿದ್ದರು.

ಆಕ್ರೋಶದ ಮಾತಿಗೆ ತಾಳ್ಮೆಯ ಉತ್ತರ: ಪ್ರತಾಪ್ ಎಂಥ ಸಂದರ್ಭದಲ್ಲಿಯೂ ತಾಳ್ಮೆ ಕಳೆದುಕೊಂಡಿದ್ದು ವಿರಳ. ವಿನಯ್, ಕಾರ್ತಿಕ್, ಸಂಗೀತಾ ಅಥವಾ ಇನ್ಯಾವುದೇ ಮನೆಯ ಸದಸ್ಯರು ಆಕ್ರೋಶದಲ್ಲಿ ಅವರ ಮೇಲೆ ಮುಗಿಬಿದ್ದಾಗಲೂ ಅವರು ಮಾತ್ರ ತಾಳ್ಮೆ ಕಳೆದುಕೊಳ್ಳದೆ ತಣ್ಣಗಿನ ಧ್ವನಿಯಲ್ಲಿ, ಸ್ಪಷ್ಟವಾದ ಮಾತುಗಳಲ್ಲಿ ವಿವರಣೆ ಕೊಡುತ್ತಿದ್ದರು.  ಈ ತಾಳ್ಮೆ ಅವರ ಈ ಜರ್ನಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಊಹಿಸಲೂ ಸಾಧ್ಯವಿಲ್ಲದಷ್ಟು ಏರಿಳಿತಗಳ ಪ್ರಯಾಣವನ್ನು ದಾಟಿ ಪ್ರತಾಪ್‌ ಫಿನಾಲೆ ವೀಕ್‌ಗೆ ಅಡಿಯಿಟ್ಟಿದ್ದರು. ‘ಟಿಕೆಟ್‌ ಟು ಫಿನಾಲೆ’ ವಾರದಲ್ಲಿ ಎಲ್ಲರಿಗಿಂತ ಹಚ್ಚು ಅಂಕಗಳನ್ನು ಪಡೆದುಕೊಂಡಿದ್ದರು. ತಾನು ಫಿನಾಲೆ ವಾರಕ್ಕೆ ಕಾಲಿಟ್ಟಿದ್ದೇನೆ ಎಂದೇ ಅಂದುಕೊಂಡಿದ್ದ ಅವರಿಗೆ ಬಿಗ್‌ಬಾಸ್ ಶಾಕ್ ಕೊಟ್ಟಿದ್ದರು. 

ಸಲಗದ ಮದ ಆನೆಗೆ ಟಾಪ್​ ಮೂರನೇ ಸ್ಥಾನವೂ ಸಿಗಲಿಲ್ಲ: ಬಿಗ್‌ಬಾಸ್ ಮನೆಯಿಂದ ವಿನಯ್ ಗೌಡ ಔಟ್, ಹೇಗಿತ್ತು ಅವರ ಹೆಜ್ಜೆ ಗುರುತುಗಳು!

ಅತಿ ಹೆಚ್ಚು ಅಂಕ ಪಡೆದ ಮೂರು ಸದಸ್ಯರಲ್ಲಿ ಯಾರು ಫಿನಾಲೆ ವಾರಕ್ಕೆ ಹೋಗಬೇಕು ಎಂಬುದನ್ನು ಮನೆಯ ಸದಸ್ಯರು ಬಹುಮತಗೊಂದಿಗೆ ನಿರ್ಧರಿಸಬೇಕು ಎಂದು ಹೇಳಿದ್ದರು. ಆ ಹಂತದಲ್ಲಿ ಪ್ರತಾಪ್‌ಗೆ ವೋಟ್ ಹಾಕಿದ್ದು ವರ್ತೂರು ಸಂತೋಷ್ ಒಬ್ಬರೇ. ಸಂಗೀತಾ ಅತಿಹೆಚ್ಚು ಮತಗಳನ್ನು ಪಡೆದು ಫಿನಾಲೆ ವೀಕ್‌ಗೆ ಹೋಗಿದ್ದರು. ಆದರೆ ಜನರ ಮತಗಳ ಸಹಾಯದಿಂದ ಪ್ರತಾಪ್ ಕೂಡ ಫಿನಾಲೆ ವೀಕ್‌ಗೆ ಪ್ರವೇಶಿಸಿದರು. ಹೀಗೆ ಅತಿ ಹೆಚ್ಚು ಭಾವುಕ, ನೋವಿನ, ಹೆಮ್ಮೆಯ ಗಳಿಗೆಗಳನ್ನು ಹಾದುಬಂದ ಸ್ಪರ್ಧಿ ಪ್ರತಾಪ್. ಬಿಗ್‌ಬಾಸ್‌ ವೇದಿಕೆ ಅವರ ಇಮೇಜ್‌ ಅನ್ನು ಬದಲಿಸಿದ್ದಂತೂ ನಿಜ. ‘ತಾವು ಹಿಂದೆ ಕೆಲವು ಸಂದರ್ಭದಲ್ಲಿ ತಪ್ಪು ಮಾಡಿದ್ದೇನೆ. ತಪ್ಪು ಮಾತಾಡಿದ್ದೇನೆ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ಆದರೆ ಇನ್ನು ಸುಧಾರಿಸಿಕೊಂಡು ನಡೆಯುತ್ತೇನೆ’ಎಂದು ಅವರು ಹೇಳಿದ್ದೇ ಅವರೊಳಗಿನ ಪರಿವರ್ತನೆಗೆ ಸಾಕ್ಷಿ. ಪ್ರತಾಪ್ ಅವರ ಬಿಗ್‌ಬಾಸ್ ಜರ್ನಿಯನ್ನು ಜಿಯೊಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಬಹುದು.

Latest Videos
Follow Us:
Download App:
  • android
  • ios