ಮೊದಲ ಲಕ್ಷುರಿ ಕಾರು ಖರೀದಿಸಿದ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್, ಹೊಸ ಕಾರು ಖರೀದಿ ಹಿಂದಿನ ಕೆಲ ಘಟನೆಗಳನ್ನು ಬಹಿರಂಗಪಡಿಸಿದ್ದಾರೆ. ಶ್ರುತಿ ಖರೀದಿಸಿದ ಹೊಸ ಕಾರು ಯಾವುದು? ಇದರ ಬೆಲೆ ಎಷ್ಟು?

ಬೆಂಗಳೂರು (ಜ.28) ಬಿಗ್ ಬಾಸ್ ಮಾಜಿ ಸ್ಪರ್ಧಿ, ಗಾಯಕಿ ಶ್ರುತಿ ಪ್ರಕಾಶ್ ಹೊಸ ಕಾರು ಖರೀದಿಸಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ಇದು ಶ್ರುತಿ ಪ್ರಕಾಶ್ ಖರೀದಿಸಿದ ಮೊದಲ ಲುಕ್ಷುರಿ ಕಾರು. ಇಷ್ಟೇ ಅಲ್ಲ ಹಲವು ದಿನಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದ ಶ್ರುತಿ ಪ್ರಕಾಶ್ ಇದೀಗ ಸಂತಸ ಹಂಚಿಕೊಂಡಿದ್ದಾರೆ. ಹೊಸ ಕಾರು ನೋಡಿ ಭಾವುಕರಾದ ಶ್ರುತಿ ಪ್ರಕಾಶ್, ಪೂಜೆ ಮಾಡಿ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ. ಅಷ್ಟಕ್ಕೂ ಶ್ರುತಿ ಪ್ರಕಾಶ್ ಖರೀದಿಸಿದ ಹೊಸ ಲಕ್ಷುರಿ ಕಾರು ಸ್ಕೋಡಾ ಸ್ಲಾವಿಯಾ ಮಾಂಟೆ ಕಾರ್ಲೋ.

ಕಾರು ಡೋರ್ ತೆರೆದಾಗ ಭಾವುಕರಾದ ಶ್ರುತಿ ಪ್ರಕಾಶ್

ಹೊಸ ಸ್ಕೋಡಾ ಸ್ಲಾವಿಯಾ ಮಾಂಟೆ ಕಾಲ್ರೋ ಸ್ಪೆಷಲ್ ಎಡಿಶನ್ ಕಾರು ಖರೀದಿಸಿದ ಶ್ರುತಿ ಪ್ರಕಾಶ್, ಕಾರಿನ ಕವರ್ ಸರಿಸಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಕಾರಿನ ಡೋರ್ ತೆರೆಯುತ್ತಿದ್ದಂತೆ ಶ್ರುತಿ ಪ್ರಕಾಶ್ ಭಾವುಕರಾಗಿದ್ದಾರೆ. ಕಾರಣ ಹಲವರು ಶ್ರುತಿ ಪ್ರಕಾಶ್‌ಗೆ ಸಾಧ್ಯವಿಲ್ಲ ಎಂದು ಹೀಯಾಳಿಸಿದ್ದರು. ಹಲವು ಅಡೆ ತಡೆಗಳ ನಡುವೆ ಶ್ರುತಿ ಪ್ರಕಾಶ್ ಕಾರು ಖರೀದಿಸಿದ್ದಾರೆ. ಹೀಗಾಗಿ ಕಾರು ನೋಡಿದ ಬೆನ್ನಲ್ಲೇ ಭಾವುಕರಾಗಿದ್ದರು.

ಕಾರು ಖರೀದಿಸಿ ಸಂತಸ ಹಂಚಿಕೊಂಡ ಶ್ರುತಿ ಪ್ರಕಾಶ್

ಹೊಸ ಕಾರು ಖರೀದಿಸಿದ ಬಳಿಕ ಸಂತಸ ಹಂಚಿಕೊಂಡ ಶ್ರುತಿ ಪ್ರಕಾಶ್ ನನಗೆ ಮೊದಲ ಪ್ರೀತಿ ರೀತಿ ಭಾಸವಾಗುತ್ತಿದೆ ಎಂದಿದ್ದಾರೆ. 10 ವರ್ಷ ಬಾಂಬೆ ಜೀವನದಲ್ಲಿ ಹಲವು ಸವಾಲು ಎದುರಿಸಿದ್ದೇನೆ, ತಾಳ್ಮೆ, ನಂಬಿಕೆ, ಹೋರಾಟವನ್ನು ಕಲಿತಿದ್ದೇನೆ. ಪ್ರತಿ ಬಾರಿ ಆಡಿಷನ್ ಹೋಗಿ ಕಾಯುತ್ತಿದ್ದೆ, ನನ್ನ ಅವಕಾಶಕ್ಕಾಗಿ ಹಾತೊರೆಯುತ್ತಿದ್ದೆ, ಪ್ರಯತ್ನಿಸುತ್ತದ್ದೆ. ನನಗೆ ಕೆಲಸವಿರಲಿ, ಇಲ್ಲದಿರಲಿ ಪ್ರತಿ ದಿನ ನಾನು ಹೋರಾಟ ಮಾಡುತ್ತಲೇ ಇದ್ದೆ. ಹಲವರು ಅಷ್ಟೇ ಅಲ್ಲ ವಿಶ್ವವೇ ನಿನ್ನಿಂದ ಆಗಲ್ಲ ಎಂದು ಹೀಯಾಳಿಸಿತ್ತು. ಆದರೆ ನನ್ನೊಳಗೆ ಸಣ್ಮ ಧ್ವನಿಯೊಂದು ನಿನ್ನಿಂದ ಸಾಧ್ಯ ಎಂದಿತ್ತು. ದೇವರ ಆಶೀರ್ವಾದ, ಪೋಷಕರ ಬೆಂಬಲ, ಎಲ್ಲರ ಪ್ರೀತಿ, ವಿಶ್ವಾಸದ ಜೊತೆಗೆ ನನ್ನಲ್ಲಿ ನಂಬಿಕೆ ಇಟ್ಟು ಮುನ್ನಡೆಯುವ ಆತ್ಮವಿಶ್ವಾಸ ಕೈಹಿಡಿಯಿತು. ಮೊದಲ ಕಾರು, ಹಲವು ಕನಸುಗಳಲ್ಲಿ ಒಂದು ಕನಸು ಮನೆಗೆ ಬಂದಿದೆ. ಪಯಣ ಆರಂಭವಾಗಿದೆ.

ಶ್ರುತಿ ಪ್ರಕಾಶ್ ಖರೀದಿಸಿದ ಕಾರಿನ ಬೆಲೆ ಎಷ್ಟು?

ಶ್ರುತಿ ಪ್ರಕಾಶ್ ಸ್ಕೋಡಾ ಸಿಗ್ನೇಚರ್ ಕಲರ್ ಬ್ಲೂ ಕಾರು ಖರೀದಿಸಿದ್ದಾರೆ. ಇದರ ಆರಂಭಿಕ ಬೆಲೆ 17.99 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಇದರ ಆನ್ ರೋಡ್ ಬೆಲೆ ಸರಿಸುಮಾರು 22 ಲಕ್ಷ ರೂಪಾಯಿ. 1498 cc ಎಂಜಿನ್ ಹೊಂದಿರುವ ಈ ಕಾರು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. 147.51 bhp ಪವರ್ ಹಾಗೂ 250Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 19.36 ಕಿಲೋಮೀಟರ್ ಮೈಲೇಜ್ ನೀಡಲಿದೆ. ಎಬಿಎಸ್ ಸೇರಿದಂತೆ ಹಲವು ಸುರಕ್ಷಾ ಫೀಚರ್ ಈ ಕಾರಿನಲ್ಲಿದೆ. 6 ಏರ್ ಬ್ಯಾಗ್ ನೀಡಲಾಗಿದೆ. ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಶನ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.

View post on Instagram