ಬಿಗ್ ಬಾಸ್ ಕನ್ನಡದ 'ಅಗ್ನಿ ಪರೀಕ್ಷೆ'ಯಲ್ಲಿ 'ಮಾಡರನ್ ಮಹಾಕವಿ ಮಂಜ' ಎಂಬ ಸ್ಪರ್ಧಿ ತನ್ನ ವಿಶಿಷ್ಟ ರ್ಯಾಪ್, ಮಿಮಿಕ್ರಿ ಮತ್ತು ಪಂಚ್ ಡೈಲಾಗ್‌ಗಳಿಂದ ಗಮನ ಸೆಳೆದಿದ್ದಾರೆ. ಚಂದನ್ ಶೆಟ್ಟಿ ಮುಂದೆಯೇ ಸೈಕ್ ಆಗಿ ರ್ಯಾಪ್ ಮಾಡಿ, ಸಾಮಾಜಿಕ ಸಂದೇಶ ಸಾರಿದ ಇವರ ಪ್ರೋಮೊ ಇದೀಗ ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆ ಗಳಿಸುತ್ತಿದೆ.

ಬಿಗ್ ಬಾಸ್ ಮನೆಗೆ ಹೋಗಲು ಜನ ಸಾಮಾನ್ಯರಿಗೆ ನಡೆಯುತ್ತಿರುವ ಅಗ್ನಿ ಪರೀಕ್ಷೆಗೆ ಬಂದಿರುವ ಮಾಡ್ರನ್ ಕವಿ ಮಂಜ ಮಾತ್ರ ಸೈಕ್ ಆಗಿ ರ್ಯಾಪ್ ಮಾಡಿದ್ದಾರೆ. ಕರ್ನಾಟಕದ ರ್ಯಾಪರ್ ಕಿಂಗ್ ಖ್ಯಾತಿಯ ಚಂದನ್ ಶೆಟ್ಟಿ ಮುಂದೆಯೇ ಪ್ರತಿಯೊಂದು ಸಾಲನ್ನೂ ವಿಭಿನ್ನ ನಟರ ಧ್ವನಿಯಲ್ಲಿ ಮಿಮಿಕ್ರಿ ಮಾಡುತ್ತಾ ಹೇಳುವ ಮೂಲಕ ವೇದಿಕೆ ಮೇಲಿರುವ ಜಡ್ಜ್‌ಗಳಿಗೆ ದಿಗಿಲು ಬಡಿಸಿದ್ದಾನೆ.

ಕನ್ನಡ ಕಿರುತೆರೆಯ ಬಿಗ್ಗೆಸ್ಟ್ ರಿಯಾಲಿಟಿ ಶೋ 'ಬಿಗ್ ಬಾಸ್' (Bigg Boss Kannada) ಮನೆ ಪ್ರವೇಶಿಸುವ ಮುನ್ನ ನಡೆಯುವ ‘ಅಗ್ನಿ ಪರೀಕ್ಷೆ’ ಸುತ್ತಿನಲ್ಲಿ ವಿಶಿಷ್ಟ ಪ್ರತಿಭೆಗಳ ಸಂತೆ ನೆರೆದಿದೆ. ಇದೀಗ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೊದಲ್ಲಿ ತನ್ನ ಅದ್ಭುತ ರೈಮಿಂಗ್, ಟೈಮಿಂಗ್ ಮತ್ತು ಪಂಚ್ ಡೈಲಾಗ್‌ಗಳ ಮೂಲಕ ಎಂಟ್ರಿ ಕೊಟ್ಟಿರುವ ‘ಮಾಡರನ್ ಮಹಾಕವಿ ಮಂಜ’ ನೆಟ್ಟಿಗರ ಗಮನ ಸೆಳೆದಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ!

ಯಾರಿದು ‘ಮಾಡರನ್ ಮಹಾಕವಿ ಮಂಜ’?

ವೇದಿಕೆಗೆ ಕಾಲಿಡುತ್ತಲೇ 'ಉಗೇ ಮಾದಪ್ಪ...' ಎಂದು ಜೈಕಾರ ಹಾಕಿ ಆರಂಭಿಸಿದ ಮಂಜ, ತನ್ನನ್ನು ತಾನು ಪರಿಚಯಿಸಿಕೊಂಡ ರೀತಿ ನಿಜಕ್ಕೂ ಸಖತ್ ಫನ್ನಿ ಹಾಗೂ ಪವರ್‌ಫುಲ್ ಆಗಿತ್ತು!

'ನನ್ನ ಹೆಸರು ಮಾಡರನ್ ಮಹಾಕವಿ ಮಂಜ ಅಂತ... ಆ ತರ, ಈ ತರ ಅನ್ನೋ ತರಾವರಿ ಜನಗಳ ನಡುವೆ ನಾನೊಂತರ ಭಯಂಕರ ಬರಹಗಾರರ ನೆಕ್ಸ್ಟ್ ಲೆವೆಲ್! ಅಚ್ಚ ಕನ್ನಡದ ಸ್ವಚ್ಛ ಮನಸ್ಸಿನ ಪದ ಬಳಕೆಗಾರ ನಾನು. ನಾನು ಬರೆಯೋದ್ರಲ್ಲಿ ಪ್ರತಿಯೊಂದರಲ್ಲೂ ರೈಮಿಂಗ್ ಇರುತ್ತೆ, ಟೈಮಿಂಗ್ ಇರುತ್ತೆ, ಮೀನಿಂಗ್ ಇರುತ್ತೆ. ಯಾಕಂದ್ರೆ ನನ್ನ ಥಿಂಕಿಂಗ್ ಹಂಗಿರುತ್ತೆ... Think like a king, that's why it's called thinking!' ಎಂದು ಪಂಚ್ ಹೊಡೆದು ನಗೆಯ ಅಲೆ ಎಬ್ಬಿಸಿದ್ದಾನೆ.

ವೇದಿಕೆಯಲ್ಲಿ ಸೈಕ್ ರೈಮಿಂಗ್, ಮಿಮಿಕ್ರಿ & ಸೋಷಿಯಲ್ ಮೆಸೇಜ್!

ಕೇವಲ ಮಾತು ಮಾತ್ರವಲ್ಲದೆ ಗಾಯಕ 'ತಾಯಿಕುಮಾರ್' ಅವರ ವಾಯ್ಸ್ ಅನುಕರಿಸಿ ಹಾಡು ಹೇಳಿದ ಮಂಜ, ತನ್ನದೇ ಶೈಲಿಯ ರ್ಯಾಪ್ ಕವನಗಳ ಮೂಲಕ ಜೀವನದ ನೋವು ಹಾಗೂ ಯುವಜನತೆಗೆ ಸಂದೇಶವನ್ನು ನೀಡಿದ್ದಾನೆ:

'ಬರ್ಗೆಟ್ಟ ಬಾಳಲ್ಲಿ ಬೇಜಾನ್ ಬೆಂದೋಗಿದ್ದೀನಿ, ಕನಸು ನನಸಾಗದೆ ಕಣ್ಣೀರಲ್ಲೇ ನೆಂದೋಗಿದ್ದೀನಿ... ಮೇಡ್ ಇನ್ ಕರ್ನಾಟಕ, ಸೈಕಾಗಿ ಬಂದಿದ್ದೀನಿ!'

'ಅಪ್ಪಿ-ತಪ್ಪಿ ಕೂಡ ತಪ್ಪಾಗುತ್ತೆ ಒಮ್ಮೊಮ್ಮೆ, ಮಾಡಿದ ತಪ್ಪನ್ನ ಮಾಡಬಾರದು ಇನ್ನೊಮ್ಮೆ... ಸೋಲು ಸೋತು ಹೋಗುತ್ತೆ ಪ್ರಯತ್ನ ಪಡು ಮತ್ತೊಮ್ಮೆ!'

'ಎಲ್ಲರಿಗೂ ಆಸೆ ಉಂಟು, ಆದರೆ ಪೇರೆಂಟ್ಸ್ ಪ್ರೀತಿ ಮಾತ್ರ ಪರ್ಮನೆಂಟ್... ಯುವಕರೆಲ್ಲ ಯಾಕೆ ನಶೆಯಲ್ಲೇ ಬಿದ್ದಿದ್ದೀರಾ?' ಎಂದು ಪ್ರಾಸಬದ್ಧವಾಗಿ ಸಾಲುಗಳನ್ನು ಪೋಣಿಸಿ ಮೆಚ್ಚುಗೆ ಗಳಿಸಿದ್ದಾನೆ.

ಪ್ರೋಮೊಗೆ ನೆಟ್ಟಿಗರು ಫಿದಾ!

ಮಂಜನ ಈ ಮಾತುಗಾರಿಕೆ, ಎನರ್ಜಿ ಹಾಗೂ ತಮಾಷೆಯ ಕವನಗಳನ್ನು ನೋಡಿ ನೆಟ್ಟಿಗರು ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. 'ಇವನು ಪಕ್ಕಾ ಬಿಗ್ ಬಾಸ್ ಮನೆಗೆ ಹೋದ್ರೆ ಫುಲ್ ಎಂಟರ್‌ಟೈನ್‌ಮೆಂಟ್ ಗ್ಯಾರಂಟಿ' ಎಂದು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.