ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತ ಹನುಮಂತ ಅವರ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.  ಸಂಭ್ರಮ ಮನೆಯಲ್ಲಿ ಸೂತಕ ಆವರಿಸಿದೆ. ಮೂರು ದಿನಗಳ ನಂತರ ಸಂಭ್ರಮಾಚರಣೆ ಮಾಡಲು ನಿರ್ಧರಿಸಲಾಗಿದೆ.

ಹಾವೇರಿ (ಜ.27): ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತ ಗಾಯಕ ಹನುಮಂತ ಅವರ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಇಡೀ ರಾಜ್ಯದ ಜನತೆಯ ಮನಸ್ಸನ್ನು ಗೆದ್ದು ಬಿಗ್ ಬಾಸ್ ಟ್ರೋಫಿ ಗೆದ್ದುಕೊಂಡು ಮನೆಗೆ ಹೋಗಿ ಸಂಭ್ರಮಿಸಬೇಕು ಎಂದುಕೊಂಡಿದ್ದ ಹನುಮಂತ ಇದೀಗ ಪ್ರೀತಿ ಪಾತ್ರರನ್ನು ಕಳೆದುಕೊಂಡು ದುಃಖಿತನಾಗಿದ್ದಾನೆ.

ನಿನ್ನೆ ರಾತ್ರಿ ವೇಳೆ ಹಳ್ಳಿ ಹೈದ ಹನುಮಂತ ಅವರು ಬಿಗ್ ಬಾಸ್ ಸೀಸನ್ 11ರ ಟ್ರೋಫಿಯನ್ನು ಗೆದ್ದಿದ್ದಾರೆ. ಹನುಮಂತು ಅವರು ಗ್ರಾಮಕ್ಕೆ ಬರುವಾಗ ಅವರನ್ನು ದೊಡ್ಡದಾಗಿ ಮೆರವಣಿಗೆ ಮಾಡಬೇಕು ಎಂದು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಹನುಮಂತ ಅವರು ಬಿಗ್ ಬಾಸ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ಮಾಡದಂತಹ ಸ್ಥಿತಿ ಮನೆಯಲ್ಲಿ ನಿರ್ಮಾಣವಾಗಿದೆ. ಬಿಗ್ ಬಾಸ್ ವಿನ್ನರ್ ಹನುಮಂತನ ಸ್ವಂತ ಚಿಕ್ಕಪ್ಪ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಸಂಭ್ರಮದ ಮನೆಯಲ್ಲಿ ಸೂತಕ ಆವರಸಿದ್ದು, ಹನುಮಂತನ ಅಭಿಮಾನಿಗಳು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.

ಹನುಮಂತನ ಮನೆಗೆ ಬಂದ ಅಭಿಮಾನಿಗಳಿಗೆ ನಿರಾಸೆ: ಬಿಗ್ ಬಾಸ್ ಫಿನಾಲೆ ಕಾರ್ಯಕ್ರಮ ವೀಕ್ಷಣೆಗೆ ಹೋಗಿದ್ದ ಹನುಮಂತನ ಅಪ್ಪ, ಅಮ್ಮನಿಗೆ ಇದೀಗ ಸುದ್ದಿಯನ್ನು ತಿಳಿಸಲಾಗಿದೆ. ಹೀಗಾಗಿ, ಹನುಮಂತ ಸೇರಿದಂತೆ ಅಪ್ಪ, ಅಮ್ಮ ಎಲ್ಲರೂ ದುಃಖದಿಂದಲೇ ಬೆಂಗಳೂರಿನಿಂದ ವಾಪಸ್ ಆಗುತ್ತಿದ್ದಾರೆ. ಇನ್ನು ಹನುಮಂತ ಬಿಗ್ ಬಾಸ್ ಟ್ರೋಫಿ ಗೆದ್ದ ಬೆನ್ನಲ್ಲಿಯೇ ಅವರನ್ನು ನೋಡಲು ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಚಿಲ್ಲೂರುಬಡ್ನಿ ಗ್ರಾಮದ ಹನುಮಂತನ ಮನೆಗೆ ಆಗಮಿಸುತ್ತಿದ್ದಾರೆ. ಸಾವಿರಾರು ಜನರು ಆಗಮಿಸುತ್ತಿದ್ದರೂ, ಅವರಿಗೆ ಮನೆಯಲ್ಲಿ ಸೂತಕ ಉಂಟಾಗಿದೆ ಎಂದು ಹೇಳಿ ವಾಪಸ್ ಕಳುಹಿಸಲಾಗುತ್ತಿದೆ.

ಇದನ್ನೂ ಓದಿ: ಹನುಮಂತ ಬಿಗ್ ಬಾಸ್ ಗೆಲ್ಲಲು ಕಾರಣ 'ಆಟ' ಮಾತ್ರವಲ್ಲ, ಇನ್ನೇನೋ ಬೇರೆ ಇದೆ..!

ಮೂರು ದಿನಗಳ ನಂತರ ಸಂಭ್ರಮಾಚರಣೆ ನಿರ್ಧಾರ: ಹನುಮಂತ ಅವರ ಚಿಕ್ಕಪ್ಪ ದೇವಪ್ಪ ನಿಧನರಾದ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ಯಾವುದೇ ಅದ್ದೂರಿ ಸಂಭ್ರಮಾಚರಣೆ ಮಾಡದಿರಲು ಮನೆಯವರು ನಿರ್ಧಾರ ಮಾಡಿದ್ದಾರೆ. ಮೂರು ದಿನದ ಕಾರ್ಯ ಮುಗಿದ ನಂತರ ಸಂಭ್ರಮಾಚರಣೆ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಸದ್ಯ ಬೆಂಗಳೂರಿನಲ್ಲಿ ಇರುವ ಹನುಮಂತ ಹಾಗೂ ಆತನ ಕುಟುಂಬಸ್ಥರ ಆಗಮನಕ್ಕಾಗಿ ಮನೆಯಲ್ಲಿ ಕಾದು ಕುಳಿತಿದ್ದಾರೆ.