ʼತ್ರಿಪುರ ಸುಂದರಿʼ ಧಾರಾವಾಹಿಯಲ್ಲಿ ನಟಿಸಿದ್ದ ದಿವ್ಯಾ ಸುರೇಶ್ ಅವರು ಈಗ ಮತ್ತೊಂದು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರಂತೆ.
ಕನ್ನಡ ಕಿರುತೆರೆಯಲ್ಲಿ ʼತ್ರಿಪುರ ಸುಂದರಿʼಯಾಗಿ ಮೆರೆದಿದ್ದ ದಿವ್ಯಾ ಸುರೇಶ್ ಈಗ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರಂತೆ. ಅತಿ ಶೀಘ್ರದಲ್ಲಿಯೇ ಈ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಲಿದೆಯಂತೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರೋಮೋ ರಿಲೀಸ್!
ದಿವ್ಯಾ ಸುರೇಶ್ ಯಾವ ವಾಹಿನಿಯ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ? ಕಥೆ ಏನು? ಪಾತ್ರ ಏನು? ಹೀರೋ ಯಾರು? ಹೀಗೆ ಸಾಕಷ್ಟು ಪ್ರಶ್ನೆಗಳಿದ್ದು, ಇದಕ್ಕೆಲ್ಲ ಪ್ರೋಮೋದಲ್ಲಿಯೇ ಉತ್ತರ ಸಿಗಲಿದೆ. ಈ ಪ್ರೋಮೋ ರಿಲೀಸ್ ಆಗುವವರೆಗೆ ಕಾಯಬೇಕಿದೆ.
ಧಾರಾವಾಹಿ, ಸಿನಿಮಾಗಳಲ್ಲಿ ನಟನೆ!
ದಿವ್ಯಾ ಸುರೇಶ್ ಅವರು ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯ ‘ನನ್ ಹೆಂಡ್ತಿ ಎಂಬಿಬಿಎಸ್’,ವಿಜಯ್ ಸೂರ್ಯ ನಟನೆಯ ‘ಪ್ರೇಮಲೋಕ’ ಸೀರಿಯಲ್‌ನಲ್ಲಿ, ʼಜೋಡಿಹಕ್ಕಿʼ ಧಾರಾವಾಹಿಯಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ‘ರೌಡಿ ಬೇಬಿ’, ‘3rd ಕ್ಲಾಸ್’, ‘9 ಹಿಲ್ಟನ್ ಹೌಸ್’ ಚಿತ್ರಗಳಲ್ಲಿಯೂ ಅವರು ಅಭಿನಯಿಸಿದ್ದರು. ನಟ ರಾಜವರ್ಧನ್ ಹೀರೋ ಆಗಿದ್ದ ‘ಹಿರಣ್ಯ’ ಸಿನಿಮಾದಲ್ಲಿಯೂ ಅವರು ನಟಿಸಿದ್ದರು. ಇನ್ನು ʼತ್ರಿಪುರ ಸುಂದರಿʼ ಧಾರಾವಾಹಿ ನಂತರದಲ್ಲಿ ಅವರು ಪರಭಾಷೆಯ ಧಾರಾವಾಹಿಯಲ್ಲಿಯೂ ನಟಿಸಿದ್ದರು.
ಗಮನಸೆಳೆದ ʼತ್ರಿಪುರ ಸುಂದರಿʼ ಪಾತ್ರ
ʼತ್ರಿಪುರ ಸುಂದರಿʼ ಧಾರಾವಾಹಿಯಲ್ಲಿ ಆಮ್ರಪಾಲಿ ಪಾತ್ರದಲ್ಲಿ ದಿವ್ಯಾ ಸುರೇಶ್ ನಟಿಸಿದ್ದರು. ಈ ಪಾತ್ರಕ್ಕೋಸ್ಕರ ದಿವ್ಯಾ ಸುರೇಶ್ ಅವರು ಗ್ರಾಂಥಿಕ ಭಾಷೆಯಲ್ಲಿ ಮಾತನಾಡಬೇಕಾಗಿತ್ತು. ಹೀಗಾಗಿ ಅವರು ಎರಡು ತಿಂಗಳು ವರ್ಕ್‌ಶಾಪ್‌ನಲ್ಲಿ ಭಾಗವಹಿಸಿ ಆ ಭಾಷೆ ಕಲಿತರು. ಆ ಪಾತ್ರಕ್ಕೋಸ್ಕರ ಅವರು ಕೆಲ ಸ್ಟಂಟ್ ಮಾಡಬೇಕಿತ್ತು. ಹೀಗಾಗಿ ಅವರು ಎರಡು ತಿಂಗಳುಗಳ ಕಾಲ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆದರು. ಅಷ್ಟೇ ಅಲ್ಲದೆ ಕತ್ತಿ ವರಸೆ ಮಾಡೋದನ್ನು ಕಲಿತುಕೊಂಡರು. ದಿವ್ಯಾ ಸುರೇಶ್ ಅವರ ಗಂಧರ್ವ ಕನ್ಯೆಯ ಲುಕ್‌ಗೆ ಒಳ್ಳೆಯ ಪ್ರಶಂಸೆ ವ್ಯಕ್ತಪಡಿಸಿದ್ದರು. ಆಮ್ರಪಾಲಿ ಪಾತ್ರಕ್ಕೆ ಇಡೀ ಸೀರಿಯಲ್ ಟೀಂ ಸಾಕಷ್ಟು ಶ್ರಮ ಹಾಕಿತ್ತು. ಈ ಪಾತ್ರಕ್ಕೆ ಪಕ್ಕಾ ಚೌಕಟ್ಟು ಹಾಕಿಕೊಂಡು ಕೆಲಸ ಮಾಡಿದ್ದರು. ಈ ಲುಕ್‌ಗೆ ಭಾರೀ ಮೆಚ್ಚುಗೆ ಸಿಕ್ಕಿತ್ತು.
ʼಬಿಗ್ ಬಾಸ್ʼ ಸ್ಪರ್ಧಿ!
ʼಬಿಗ್ ಬಾಸ್ ಕನ್ನಡ ಸೀಸನ್ 8ʼ ಶೋನಲ್ಲಿ ದಿವ್ಯಾ ಸುರೇಶ್ ಅವರು ಭಾಗವಹಿಸಿದ್ದರು. ಅವರ ಆಟಕ್ಕೆ ಚೆನ್ನಾಗಿ ಪ್ರತಿಕ್ರಿಯೆ ಸಿಕ್ಕಿತ್ತು. ಈ ಸೀಸನ್‌ನಲ್ಲಿ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಅವರ ಸ್ನೇಹ ಭಾರೀ ಹೈಲೈಟ್ ಆಗಿತ್ತು. ಇದಾದ ನಂತರದಲ್ಲಿ ಅವರು ಧಾರಾವಾಹಿ, ಸಿನಿಮಾಗಳಲ್ಲಿ ಬ್ಯುಸಿಯಾದರು.
ಮದುವೆ ಯಾವಾಗ?
ಅಂದಹಾಗೆ ಕೆಲ ತಿಂಗಳುಗಳ ಹಿಂದೆ ಅವರು ಬಾಯ್‌ಫ್ರೆಂಡ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು, ಪ್ರೀತಿ ವಿಷಯವನ್ನು ಅಧಿಕೃತಪಡಿಸಿದ್ದರು. ಯಾವಾಗ ಅವರು ಮದುವೆ ಆಗ್ತಾರೆ ಅಂತ ಕಾದು ನೋಡಬೇಕಿದೆ.
ಅಂದಹಾಗೆ ದಿವ್ಯಾ ಸುರೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಆಗಾಗ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲದೆ ವಿಧ ವಿಧವಾದ ಕಾಸ್ಟ್ಯೂಮ್‌ನಲ್ಲಿ ಫೋಟೋಶೂಟ್‌ಗಳನ್ನು ಮಾಡಿಸುತ್ತಿರುತ್ತಾರೆ.
