ಬಿಗ್ ಬಾಸ್ ಖ್ಯಾತಿಯ ನಟ ರಂಜಿತ್ ತಮ್ಮ ಕಾರಿಗೆ ಶಾಸಕರ ಪಾಸ್ ಬಳಸಿಕೊಂಡು ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಮಡಿವಾಳ ಸಂಚಾರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದಕ್ಕೆ ನೆಟ್ಟಿಗರು ಉತ್ತರ ಕೊಟ್ಟಿದ್ದಾರೆ.
ಬೆಂಗಳೂರು (ನ.29): ಕಿರುತೆರೆ ಹಾಗೂ ಬಿಗ್ ಬಾಸ್ ಖ್ಯಾತಿಯ ನಟ ರಂಜಿತ್ ಅವರು ಇದೀಗ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ. ತಮ್ಮ ಕಾರಿಗೆ ಶಾಸಕರ (MLA) ಪಾಸ್ ಹಾಕಿಕೊಂಡು ಸಂಚರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ಮಡಿವಾಳ ಸಂಚಾರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಾಹಿತಿ ಪ್ರಕಾರ, ನಟ ರಂಜಿತ್ ಅವರು ತಮ್ಮ ಖಾಸಗಿ ಕಾರಿನ ಮುಂಭಾಗದಲ್ಲಿ ಶಾಸಕರಿಗೆ ಮೀಸಲಾದ ಅಧಿಕೃತ ಪಾಸ್ ಅನ್ನು ಅಂಟಿಸಿಕೊಂಡು ನಗರದಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಈ ಘಟನೆ ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಿಡಿಯೋ ಆಧರಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆ ಪಾಸ್ ಯಾವ ಶಾಸಕರಿಗೆ ಸಂಬಂಧಿಸಿದ್ದು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಒಂದು ವೇಳೆ ಆ ಪಾಸ್‌ಗೆ ರಂಜಿತ್ ಅವರಿಗೆ ಯಾವುದೇ ಸಂಬಂಧ ಇಲ್ಲದಿದ್ದರೆ, ನಿಯಮ ಉಲ್ಲಂಘನೆಗಾಗಿ ಅವರ ವಿರುದ್ಧ ಕಾನೂನು ಕ್ರಮ ಮತ್ತು ದಂಡ ಬೀಳುವ ಸಾಧ್ಯತೆ ಇದೆ.
ನೆಟ್ಟಿಗರಿಂದ ಉತ್ತರ
ಇನ್ನು ರಂಜಿತ್ ಶಾಸಕರ ಪಾಸ್ ಹಾಕಿರುವ ಕಾರಲ್ಲಿ ಓಡಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವರು ಕಾಮೆಂಟ್ ಮಾಡಿದ್ದಾರೆ. ಒಬ್ಬ ವ್ಯಕ್ತಿ ನಮ್ ಕರ್ನಾಟಕದಲ್ಲಿ ಯಾರ್ ಬೇಕಾದ್ರು, MLA ಆಗಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು, ಶಾಸಕರ ಪಾಸ್ ಅಕೊಂಡು ಇವರು ಟೋಲ್ ಗಳಲ್ಲಿ ಹಣ ಉಳಿಸುತ್ತಾ ಜೀವನ ಮಾಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಹಲವು ನೆಟ್ಟಿಗರು ರಂಜಿತ್ ತಮ್ಮ ಕಾರಿಗೆ ಶಾಸಕರ ಪಾಸ್ ಹಾಕಿಕೊಂಡಿದ್ದಕ್ಕೆ ಕಿಡಿಕಾರಿದ್ದಾರೆ.
ವಿವಾದಗಳ ಸುಳಿಗೆ ಸಿಲುಕಿದ ರಂಜಿತ್
ರಂಜಿತ್ ಅವರಿಗೆ ವಿವಾದಗಳು ಹೊಸದೇನಲ್ಲ. ಅವರು ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಉತ್ತಮ ಸ್ಪರ್ಧಿಯಾಗಿದ್ದರೂ ಸಹ, ವಕೀಲರಾದ ಜಗದೀಶ್ ಅವರ ಮೇಲೆ ಹಲ್ಲೆ ಮಾಡಿ, ಮನೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸ್ಪರ್ಧೆಯಿಂದ ಹೊರಬಿದ್ದಿದ್ದರು. ಈ ಘಟನೆ ಕಿರುತೆರೆ ವಲಯದಲ್ಲಿ ಸಾಕಷ್ಟು ಸುದ್ದಿಯಾಗಿತ್ತು.
ಬಿಗ್ ಬಾಸ್‌ನಿಂದ ಹೊರಬಂದ ನಂತರ, ಖ್ಯಾತಿಯ ಬೆನ್ನಲ್ಲೇ ಮಾನಸ ಎಂಬ ಯುವತಿಯನ್ನು ಅದ್ಧೂರಿಯಾಗಿ ಮದುವೆಯಾಗಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ರಂಜಿತ್ ಅವರ ಪತ್ನಿ ಮಾನಸ ಮತ್ತು ಅವರ ಅಕ್ಕನ ನಡುವೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಗಲಾಟೆ ನಡೆದಿತ್ತು. ಮನೆಯ ವಿಚಾರಕ್ಕೆ ನಡೆದ ಈ ಗಲಾಟೆಯಲ್ಲಿ ಪರಸ್ಪರ ಹಲ್ಲೆ ಮತ್ತು ನಿಂದನೆ ಮಾಡಿಕೊಂಡ ವಿಡಿಯೋಗಳು ವೈರಲ್ ಆಗಿದ್ದವು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿತ್ತು.
ಕಾನೂನಿನ ಸಂಕಷ್ಟ ಖಚಿತ
ಈ ಎಲ್ಲ ಪ್ರಕರಣಗಳಿಂದ ಸುದ್ಧಿಯಲ್ಲಿದ್ದ ರಂಜಿತ್ ಅವರು ಈಗ ಶಾಸಕರ ಪಾಸ್ ಬಳಸಿ ಓಡಾಟ ನಡೆಸುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಶಾಸಕರ ಪಾಸ್ ಅನ್ನು ದುರುಪಯೋಗಪಡಿಸಿಕೊಂಡರೆ, ಅದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಟೋಲ್ ಶುಲ್ಕಗಳಿಂದ ತಪ್ಪಿಸಿಕೊಳ್ಳಲು ಅಥವಾ ಅನಗತ್ಯ ವಿಐಪಿ ಸೌಲಭ್ಯ ಪಡೆಯಲು ಈ ರೀತಿಯ ಪಾಸ್‌ಗಳನ್ನು ಬಳಸುವುದು ಗಂಭೀರ ಅಪರಾಧ.
ಪೊಲೀಸರ ತನಿಖೆಯ ನಂತರ ಈ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಮತ್ತು ನಟ ರಂಜಿತ್ ಅವರು ಎದುರಿಸಬೇಕಾದ ಕಾನೂನು ಪರಿಣಾಮಗಳು ಏನೆಂಬುದು ತಿಳಿಯಲಿದೆ.


