ನವದೆಹಲಿ[ಅ.11]: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಅಶ್ಲೀಲತೆಯನ್ನು ಉತ್ತೇಜಿಸುವ ಹಿಂದಿ ಭಾಷೆಯ ‘ಬಿಗ್‌ಬಾಸ್‌-13’ ಕಾರ್ಯಕ್ರಮದ ಮೇಲೆ ನಿಷೇಧ ಹೇರಬೇಕೆಂದು ಬಿಜೆಪಿ ಶಾಸಕ ಹಾಗೂ ಕರ್ಣಿ ಸೇನೆ ದೂರು ನೀಡಿದ ಬೆನ್ನಲ್ಲೇ, ನಟ ಸಲ್ಮಾನ್‌ ಖಾನ್‌ ನಡೆಸಿಕೊಡುವ ‘ಬಿಗ್‌ಬಾಸ್‌-13’ ಕಾರ್ಯಕ್ರಮದ ಕುರಿತು ವರದಿ ನೀಡುವಂತೆ ವಿದ್ಯುನ್ಮಾನ ಮಾಧ್ಯಮಗಳ ಮೇಲೆ ನಿಗಾ ವಹಿಸುವ ಕೇಂದ್ರಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಬಹು ನಿರೀಕ್ಷಿತವಾದ ಬಿಗ್‌ಬಾಸ್‌ ಪ್ರಸಾರದ ಮೇಲೆ ಕೇಂದ್ರ ಸರ್ಕಾರ ನಿಷೇಧದ ಚಾಟಿ ಬೀಸಲಿದೆಯೇ ಎಂಬುದರ ಬಗ್ಗೆ ಪ್ರಶ್ನೆ ಉದ್ಭವಿಸಿದೆ.

ಬಿಗ್ ಬಾಸ್ ಓಪನಿಂಗ್‌ಗೆ ಕ್ಷಣಗಣನೆ, ಬೆಳೆಗೆರೆ ಸೇರಿ ಕಂಟೆಸ್ಟಂಟ್ ಗಳ ಫೈನಲ್ ಲಿಸ್ಟ್

ಈ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಪತ್ರ ಬರೆದಿದ್ದ ಉತ್ತರ ಪ್ರದೇಶ ಬಿಜೆಪಿ ಶಾಸಕ ನಂದ ಕಿಶೋರ್‌ ಅವರು, ‘ಬಿಗ್‌ಬಾಸ್‌-13’ ಕಾರ‍್ಯಕ್ರಮವು ಅಶ್ಲೀಲತೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಅಂಶ ಒಳಗೊಂಡಿದ್ದು, ಇದರಿಂದ ಸಮಾಜದ ಸಾಮರಸ್ಯವನ್ನು ಹಾಳು ಮಾಡುತ್ತದೆ ಎಂದು ಉಲ್ಲೇಖಿಸಿದ್ದರು.

ಅಲ್ಲದೆ, ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಪುರಾತನ ಸಂಸ್ಕೃತಿಯ ಪ್ರಾಮುಖ್ಯತೆ ಬಗ್ಗೆ ಸಾರುತ್ತಿದ್ದಾರೆ. ಮತ್ತೊಂದು ಕಡೆ ನಾವು ಇಂಥ ಹೇಸಿಗೆಯ ಟೀವಿ ಶೋಗಳನ್ನು ವೀಕ್ಷಿಸಬೇಕಾಗಿದೆ. ಸಾಮಾನ್ಯವಾಗಿ ಕುಟುಂಬಸ್ಥರೆಲ್ಲರೂ ಕುಳಿತು ಟೀವಿ ನೋಡಬೇಕಾದ ವೇಳೆಯೇ ಈ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಈ ಕಾರ್ಯಕ್ರಮವನ್ನು ಕುಟುಂಬಸ್ಥರೆಲ್ಲರೂ ಕುಳಿತು ವೀಕ್ಷಿಸುವುದು ಅಸಾಧ್ಯವಾದುದ್ದಾಗಿದೆ. ಹೀಗಾಗಿ ಇಂಥ ಟೀವಿ ಶೋಗಳ ಪ್ರಸಾರಕ್ಕೆ ಅನುಮತಿ ನೀಡಬಾರದು. ಬಿಗ್‌ಬಾಸ್‌ ನಿಷೇಧಿಸಬೇಕು. ಸಲ್ಮಾನ್‌ ವಿರುದ್ಧ ರಾಷ್ಟ್ರದ್ರೋಹದ ಕೇಸು ದಾಖಲಿಸಬೇಕು ಎಂದು ತಮ್ಮ ಪತ್ರದಲ್ಲಿ ಬಿಜೆಪಿ ಶಾಸಕ ಕೋರಿಕೊಂಡಿದ್ದರು.

ಸ್ಯಾಂಡಲ್‌ವುಡ್‌ನಲ್ಲಿ ಜಾಕಿ ಹೊಸ ಸಾಹಸ, ಶೋಕಿವಾಲನ ಲುಕ್‌ಗೆ ಫುಲ್‌ ಮಾರ್ಕ್ಸ್

ಅಲ್ಲದೆ, ಸೋಮವಾರ ಮತ್ತು ಬುಧವಾರ ಗಾಜಿಯಾಬಾದ್‌ ಸೇರಿದಂತೆ ಇತರೆಡೆ ಕೆಲ ಹಿಂದೂ ಸಂಘಟನೆಗಳು ಬಿಗ್‌ಬಾಸ್‌ ಕಾರ್ಯಕ್ರಮ ಹಾಗೂ ಈ ಕಾರ್ಯಕ್ರಮ ನಡೆಸಿಕೊಡುವ ಸಲ್ಮಾನ್‌ ಖಾನ್‌ ಅವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದವು.