ಬಿಗ್ ಬಾಸ್ ಮನೆಗೂ ಬೀಗ ಹಾಕಿದ ಕೊರೋನಾ.. ಅರ್ಧಕ್ಕೆ ಬಂದ್!
ಕನ್ನಡದ ಅತಿದೊಡ್ಡ ರಿಯಾಲಿಟಿ ಶೋಕ್ಕೆ ಬ್ರೇಕ್ ಹಾಕಿದ ಕೊರೋನಾ/ ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ಮೊಟಕು/ ಸುದೀಪ್ ಸಹ ಕೆಲ ವಾರದಿಂದ ವಾರದ ಕತೆಯಲ್ಲಿ ಕಾಣಿಸಿಕೊಂಡಿರಲಿಲ್ಲ
ಬೆಂಗಳೂರು(ಮೇ 08) ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕೊರೋನಾ ಪಾಲಾಗಿದೆ. ಐಪಿಎಲ್ ರದ್ದಾದ ನೋವಿನಲ್ಲಿದ್ದವರಿಗೆ ಮತ್ತೊಂದು ಸುದ್ದಿ ಬಂದಿದ್ದು ಬಿಗ್ ಬಾಸ್ ಶೋ ಅರ್ಧಕ್ಕೆ ಸ್ಥಗಿತವಾಗುತ್ತಿದೆ.
ಈ ಬಗ್ಗೆ ಶೋ ನಡೆಸಿಕೊಡುತ್ತಿದ್ದ ವಾಹಿನಿಯ ಬಿಜಿನಸ್ ಹೆಡ್ ಪರಮೇಶ್ವರ ಗುಂಡ್ಕಲ್ ಸೋಶಿಯಲ್ ಮೀಡಿಯಾ ಮುಖೇನ ಮಾಹಿತಿ ನೀಡಿದ್ದಾರೆ. ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್ ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲಕ್ಕೆ ಬಂದು ಮನಸ್ಸಿಗೆ ವಿಚಿತ್ರವಾದ ತಳಮಳ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲಾ ಖುಷಿಯಾಗಿದ್ದಾರೆ. ಐಸೋಲೇಷನ್ನಿನಲ್ಲಿ ಇರುವುದರಿಂದ ಸುರಕ್ಷಿತವಾಗಿಯೂ ಇದ್ದಾರೆ. ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ.
ಅನಾರೋಗ್ಯದಿಂದ ಹೊರಬಂದ ದಿವ್ಯಾ ಯು ಸ್ಥಿತಿ ಏನಾಗಿದೆ?
ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ.
ಮನಸ್ಸು ಭಾರವಾಗಿದೆ. ಈ ಶೋ ನಿಲ್ಲುತ್ತಿದೆ ಅಂತಲ್ಲ. ಹೊರಗಡೆ ಗಾಳಿಯಲ್ಲಿ ಓಡಾಡುತ್ತಿರುವ ಕಣ್ಣಿಗೆ ಕಾಣದ ಅನಿಶ್ಚಿತತೆಯಿಂದ ಇನ್ನಿಲ್ಲದ ಕಳವಳ. ಎಲ್ಲರಿಗೂ ಈ ಕಳವಳಕ್ಕೊಂದು ಉತ್ತರ ಬೇಗ ಸಿಗಲಿ. ಸುರಕ್ಷಿತವಾಗಿರಿ ಎಂದು ಪರಮೇಶ್ವರ ಮನವಿ ಮಾಡಿಕೊಂಡಿದ್ದಾರೆ.
ಕೊರೋನಾ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಸೆಮಿ ಲಾಕ್ ಡೌನ್ ಮೊರೆ ಹೋಗಿದೆ. ಒಳಾಂಗಣ ಮತ್ತು ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಈ ಅನಿವಾರ್ಯ ಸಹ ಶೋ ನಿಲ್ಲಲು ಕಾರಣವಾಗಿದೆ. ಕಳೆದ ಬಾರಿಯ ಲಾಕ್ ಡೌನ್ ವೇಳೆ ಟಿಎನ್ ಸೀತಾರಾಮ್ ಅವರ ಮಗಳು ಜಾನಕಿ ಧಾರಾವಾಹಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಮಲೆಯಾಳಂ ಬಿಗ್ ಬಾಸ್ ಗೂ ಕೊರೋನಾ ಕಾಟ ಕೊಟ್ಟಿತ್ತು.
ಬಿಗ್ ಬಾಸ್ ಮನೆಯಲ್ಲಿ ಅರವಿಂದ್, ಲ್ಯಾಗ್ ಮಂಜು, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ಶಮಂತ್, ರಘು, ವೈಷ್ಣವಿ ಗೌಡ, ನಟಿ ನಿಧಿ ಸುಬ್ಬಯ್ಯ, ಶುಭಾ ಪೂಂಜಾ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡ ಚಕ್ರವರ್ತಿ ಮತ್ತು ಪ್ರಿಯಾಂಕಾ ತಿಮ್ಮೇಶ್ ಇದ್ದರು. ಅನಾರೋಗ್ಯದ ಕಾರಣ ಮತ್ತೊಬ್ಬ ಸ್ಪರ್ಧಿ ದಿವ್ಯಾ ಯು ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು
ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್ ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ...
Posted by Parameshwar Gundkal on Saturday, 8 May 2021