ಈ ಚಳಿಯಲ್ಲಿ ತಾಂಡವ್ ಮೈಮೇಲೆ ಭಾಗ್ಯ ನೀರು ಹೊಯ್ದಾಗ ಶೂಟಿಂಗ್ನಲ್ಲಿ ಆಗಿದ್ದೇನು? ವಿಡಿಯೋ ವೈರಲ್
ಕುಡಿದು ಬಂದ ತಾಂಡವ್ ಮೇಲೆ ಪತ್ನಿ ಭಾಗ್ಯ ಬಕೆಟ್ನಿಂದ ನೀರು ಹಾಕುತ್ತಾಳೆ. ಅಸಲಿಗೆ ಶೂಟಿಂಗ್ನಲ್ಲಿ ನಡೆದದ್ದು ಏನು?
ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್ ಇದೀಗ ವೀಕ್ಷಕರಿಗೆ ಸಕತ್ ಮಜಾ ಕೊಡುತ್ತಿದೆ. ಇಲ್ಲಿಯವರೆಗೆ ಅಳುಮುಂಜಿಯಾಗಿದ್ದ ಭಾಗ್ಯ, ಪತಿ ಮತ್ತು ಆತನ ಲವರ್ ಶ್ರೇಷ್ಠಾ ಮೇಲೆ ಸೇಡು ತೀರಿಸಿಕೊಳ್ತಿರೋ ಪರಿಗೆ ವೀಕ್ಷಕರು ಭಲೇ ಭಲೇ ಎನ್ನುತ್ತಿದ್ದಾರೆ. ತನ್ನ ಪತಿ ಬೇರೊಬ್ಬಳ ಜೊತೆ ಸಂಬಂಧ ಹೊಂದಿರುವುದು ಎಲ್ಲರಿಗೂ ತಿಳಿದಿದ್ದರೂ ಭಾಗ್ಯಳಿಗೆ ತಿಳಿಯಲು ತಿಂಗಳುಗಟ್ಟಲೆ ಸೀರಿಯಲ್ ಎಳೆದಿದ್ದರಿಂದ ವೀಕ್ಷಕರು ಒಂದು ಹಂತದಲ್ಲಿ ಸಾಕಷ್ಟು ಟೀಕಿಸಿದ್ದರು. ಈ ಸೀರಿಯಲ್ ಪ್ರೊಮೋ ಬಿಡುಗಡೆಯಾಗುತ್ತಲೇ ಕಮೆಂಟ್ ಬಾಕ್ಸ್ನಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡದ್ದೂ ಇದೆ. ಆದರೆ ಇದೀಗ ಸೀರಿಯಲ್ಗೆ ಟ್ವಿಸ್ಟ್ ಕೊಡಲಾಗಿದ್ದು, ಭಾಗ್ಯ ಬದಲಾಗಿದ್ದಾಳೆ. ಕುತೂಹಲ ಘಟ್ಟದಲ್ಲಿ ಸೀರಿಯಲ್ ಬಂದು ನಿಂತಿದೆ.
ಸವತಿ ಶ್ರೇಷ್ಠಾ ಭಾಗ್ಯಳ ಮನೆ ಸೇರಿದ್ದಾಳೆ. ಭಾಗ್ಯ ಮತ್ತು ಅತ್ತೆ ಕುಸುಮಾ ಆಕೆಯನ್ನು ಪೂಜೆ ಮಾಡಿ ಮನೆ ತುಂಬಿಸಿಕೊಂಡಿದ್ದು, ಇದೀಗ ಮನೆ ಕೆಲಸ ಮಾಡಿಸುತ್ತಲೇ ಆಕೆಗೆ ಟಾರ್ಚರ್ ಕೊಡುತ್ತಿದ್ದಾರೆ. ಮಲಗಿದ್ದಲ್ಲೇ ಎಲ್ಲಾ ಸೌಕರ್ಯ ಪಡೆಯುತ್ತಿದ್ದ ಶ್ರೇಷ್ಠಾಳಿಗೆ ಇದೀಗ ತಾಂಡವ್ ಮನೆ ಬಿಸಿತುಪ್ಪ ಆಗಿದೆ. ನುಂಗಲೂ ಆಗಲ್ಲ, ಉಗುಳಲೂ ಆಗಲ್ಲ ಅಂಥ ಪರಿಸ್ಥಿತಿ. ಆದರೆ ತಾಂಡವ್ ಜೊತೆ ಇರಬೇಕು ಎಂದರೆ, ಅತ್ತೆ ಕುಸುಮಾಳನ್ನು ಒಲಿಸಿಕೊಳ್ಳಬೇಕು ಎಂದರೆ ಭಾಗ್ಯ ಮಾಡುವ ಎಲ್ಲಾ ಕೆಲಸಗಳನ್ನೂ ಆಕೆ ಮಾಡಲೇಬೇಕಿದೆ. ಇದಕ್ಕಾಗಿ ಭಾಗ್ಯಳ ಮಕ್ಕಳು ಕೂಡ ಅಮ್ಮನಿಗೆ ಸಪೋರ್ಟ್ ಮಾಡುತ್ತಿದ್ದಾರೆ.
ಇವೆಲ್ಲವುಗಳ ಮಧ್ಯೆ ತಾಂಡವ್ ಕುಡಿದು ಮನೆಗೆ ಬಂದು ಗಲಾಟೆ ಮಾಡಿರುವ ದೃಶ್ಯವೊಂದು ಸೀರಿಯಲ್ನಲ್ಲಿ ಇದೆ. ಅದು ಶ್ರೇಷ್ಠಾ ಮನೆಗೆ ಬರುವ ಮುನ್ನ ನಡೆದ ಘಟನೆ. ಮದುವೆಯಾಗದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಶ್ರೇಷ್ಠಾ ಬೆದರಿಸಿದ್ದರಿಂದ ತಾಂಡವ್ ಭಯ ಪಟ್ಟು ತಲೆ ಚಿಟ್ಟು ಹಿಡಿದು ಕುಡಿದು ಬಂದಾಗ, ಭಾಗ್ಯ ಬಕೆಟ್ನಿಂದ ಆತನ ಮೈಮೇಲೆ ನೀರು ಸುರಿಯುವ ದೃಶ್ಯವದು. ಆದರೆ ಈ ಒಂದು ದೃಶ್ಯಕ್ಕೆ ಶೂಟಿಂಗ್ ಸೆಟ್ನಲ್ಲಿ ಹೇಗೆಲ್ಲಾ ಕಷ್ಟಪಡಲಾಯಿತು ಎನ್ನುವ ವಿಡಿಯೋ ಅನ್ನು ಭಾಗ್ಯ ಪಾತ್ರಧಾರಿ ಸುಷ್ಮಾ ಅವರು ಶೇರ್ ಮಾಡಿದ್ದಾರೆ.
ಶೂಟಿಂಗ್ ಮಾಡುವ ಸಮಯದಲ್ಲಿ, ತಾಂಡವ್ ಮೇಲೆ ನೇರವಾಗಿ ನೀರು ಹಾಕಿರುವುದಿಲ್ಲ. ಬದಲಿಗೆ ಕ್ಯಾಮೆರಾದ ಮಧ್ಯೆ ಗ್ಲಾಸ್ ಅಳವಡಿಸಲಾಗಿದೆ. ಆ ಗ್ಲಾಸ್ ಮೇಲೆ ಭಾಗ್ಯ ಬಕೆಟ್ನಿಂದ ನೀರು ಚೆಲ್ಲಿದ್ದಾಳೆ. ಆ ಬಳಿಕ ತಾಂಡವ್ ಮೈಯೆಲ್ಲಾ ಒದ್ದೆಯಾದಂತೆ ಇನ್ನೊಂದು ಶೂಟಿಂಗ್ ಮಾಡಲಾಗಿದೆ. ಆದರೆ ನಮಗೆ ತೋರಿಸುವಾಗ ಭಾಗ್ಯ ನೇರವಾಗಿ ತಾಂಡವ್ಗೆ ನೀರು ಸುರಿದಂತೆ ತೋರಿಸಲಾಗಿದೆ. ಈ ಚಳಿಯಲ್ಲಿ ಪಾಪ ತಾಂಡವ್ ಎಂದೆಲ್ಲಾ ವೀಕ್ಷಕರು ಹೇಳಿದ್ದಾರೆ. ಆದರೆ ಲಕ್ಷ್ ಲಕ್ಷಗಟ್ಟಲೆ ಬೆಲೆ ಬಾಳುವ ಕ್ಯಾಮೆರಾಗೆ ಸ್ವಲ್ಪ ನೀರು ಸೋಕಿದರೂ ಡೇಂಜರೇ. ಅದೇ ಕಾರಣಕ್ಕೆ ರಾತ್ರಿಯೆಲ್ಲಾ ಕ್ಯಾಮೆರಾ ಅನ್ನು ನೀರು ಬೀಳದಂತೆ ತಡೆಯಲು ಅದಕ್ಕೆ ಹೇಗೆ ಕವರ್ ಮಾಡಲಾಗಿತ್ತು, ಅದಕ್ಕಾಗಿ ಕ್ಯಾಮೆರಾಮನ್ಗಳು ಎಷ್ಟು ಶ್ರಮ ಪಟ್ಟರು ಎನ್ನುವ ಬಗ್ಗೆ ಸುಷ್ಮಾ ಅವರು ತೋರಿಸಿದ್ದಾರೆ. ಒಂದೇ ಒಂದು ದೃಶ್ಯದ ಶೂಟಿಂಗ್ ಮಾಡಲು ಇಷ್ಟೆಲ್ಲಾ ಶ್ರಮವಹಿಸಬೇಕಲ್ವಾ ಎಂದು ಅಚ್ಚರಿಯಾಗುವುದಂತೂ ದಿಟ.
ಶೂಟಿಂಗ್ ನಡೆದದ್ದು ಹಾಗೂ ಅಂತಿಮವಾಗಿ ತೆರೆ ಮೇಲೆ ಬಂದ ವಿಡಿಯೋಗಳು ಇಲ್ಲಿವೆ: