ಭಾಗ್ಯ- ತಾಂಡವ್ ಒಂದಾಗ್ತಾರಾ? ವೀಕ್ಷಕರ ಪ್ರಶ್ನೆಗೆ ನೇರಪ್ರಸಾರದಲ್ಲಿ ಬಂದ ಪೂಜಾ ಹೇಳಿದ್ದೇನು?
ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ- ತಾಂಡವ್ ಒಂದಾಗ್ತಾರಾ? ವೀಕ್ಷಕರ ಪ್ರಶ್ನೆಗೆ ನೇರಪ್ರಸಾರದಲ್ಲಿ ಬಂದ ಪೂಜಾ ಹೇಳಿದ್ದೇನು?
ನಿಮ್ಮ ಸಹಾಯ ಇಲ್ಲದೇ ನಾನು ಹೇಗೆ ಎಲ್ಲರನ್ನೂ ಸಾಕಬಲ್ಲೆ ಎನ್ನುವುದನ್ನು ತೋರಿಸುತ್ತೇನೆ ಎಂದು ಮಕ್ಕಳು, ಅತ್ತೆ-ಮಾವನನ್ನು ಕರೆದುಕೊಂಡು ಭಾಗ್ಯ ಮನೆಬಿಟ್ಟು ಹೋಗಿದ್ದಾಳೆ. ಅತ್ತೆ-ಮಾವ, ಮಕ್ಕಳನ್ನು ಕರೆದುಕೊಂಡು ಭಾಗ್ಯ ಮನೆ ಬಿಟ್ಟು ತವರು ಸೇರಿದ್ದಾಳೆ. ಗಂಡನಿಲ್ಲದೇ ಹೇಗೆ ಬಾಳುವುದು ಎನ್ನುವುದನ್ನು ತೋರಿಸಿಕೊಡುವ ಚಾಲೆಂಜ್ ಹಾಕಿದ್ದಾಳೆ. ಈಗ ಇಬ್ಬರು ಬೆಳೆದುನಿಂತ ಮಕ್ಕಳು, ಅಮ್ಮ-ಅಮ್ಮ, ಅತ್ತೆ-ಮಾವ ಸೇರಿದಂತೆ ತಂಗಿ ಪೂಜಾ ಹಾಗೂ ಸುಂದ್ರಿ ಎಲ್ಲರ ಜವಾಬ್ದಾರಿಯನ್ನೂ ಭಾಗ್ಯ ಹೊತ್ತುಕೊಂಡಿದ್ದಾಳೆ. ಇಂಥ ಗಂಡ ನಿನಗೆ ಬೇಕಾ, ಬಿಟ್ಟು ಬಾ ಎಂದು ಒಂದೇ ಸಮನೆ ಕಮೆಂಟ್‌ನಲ್ಲಿ ಭಾಗ್ಯಳಿಗೆ ಬುದ್ಧಿ ಹೇಳುತ್ತಿದ್ದವರು ಫುಲ್ ಖುಷ್ ಆಗಿದ್ದಾರೆ. ಹೀಗೆ ಗಂಡನ ಮನೆ ಬಿಟ್ಟು ತವರು ಸೇರುವ ಹೆಣ್ಣುಮಕ್ಕಳನ್ನು ನಿಜ ಜೀವನದಲ್ಲಿ ಇದೇ ಕಮೆಂಟಿಗರು ಎಷ್ಟು ಪ್ರೋತ್ಸಾಹ ಕೊಡುತ್ತಾರೋ ಗೊತ್ತಿಲ್ಲ, ಒಟ್ಟಿನಲ್ಲಿ ಸೀರಿಯಲ್‌ನಲ್ಲಿ ಮುಂಚಿನಿಂದಲೂ ಭಾಗ್ಯಳ ಮೇಲೆ ಆಗುತ್ತಿರುವ ಅನ್ಯಾಯವನ್ನು ಕಣ್ಣಾರೆ ಕಂಡವರಂತೂ ಭಾಗ್ಯಳಿಗೆ ಗಂಡನನ್ನು ಬಿಟ್ಟುಬಿಡಲು ಸಲಹೆ ಕೊಟ್ಟು ಈಗ ಖುಷಿಯಿಂದ ಇದ್ದಾರೆ. ಗಂಡನಿಗೆ ವಿಚ್ಛೇದನ ಕೊಡದಿದ್ದರೂ ಲವರ್ ಶ್ರೇಷ್ಠಾಳ ಕೈಗೆ ಭಾಗ್ಯ ತನ್ನ ಗಂಡನನ್ನು ಒಪ್ಪಿಸಿ ಬಂದಾಗಿದೆ.
ಭಾಗ್ಯ ಅಂತೂ ಬದಲಾಗುತ್ತಾಳೆ, ತಾಂಡವ್‌ಗೆ ಬುದ್ಧಿ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಭಾಗ್ಯ ಬದಲಾಗುವುದನ್ನು ನೋಡಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಅದರ ನಡುವೆಯೇ, ಇದೀಗ ಭಾಗ್ಯಳ ತಂಗಿ ಪೂಜಾ ಇನ್‌ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ಕಾಣಿಸಿಕೊಂಡಿದ್ದಾರೆ. ವೀಕ್ಷಕರು ಕೇಳುವ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ. ಹಲವರು ಪೂಜಾ ಪಾತ್ರವನ್ನುಕೊಂಡಾಡಿದ್ದರೆ, ಮತ್ತೆ ಕೆಲವರು ಭಾಗ್ಯಲಕ್ಷ್ಮಿಯ ಬಗ್ಗೆ ಮನದಾಳದ ಮಾತು ಹೇಳಿಕೊಂಡಿದ್ದಾರೆ. ಸೀರಿಯಲ್ ಬಗ್ಗೆ ಮಾತನಾಡಿದ ಪೂಜಾ, ನನ್ನ ಅಕ್ಕನ ಲೈಫ್ ಬದಲಾಗುತ್ತದೆ. ಆಕೆ ತುಂಬಾ ಸ್ಟ್ರಾಂಗ್, ಯಾವುದೇ ಮನೆಯಲ್ಲಿಯೂ ಇಂಥ ಹೆಣ್ಣು ಮಕ್ಕಳು ಇದ್ದರೆ ಅವರಿಗೆ ಭಾಗ್ಯ ಸ್ಫೂರ್ತಿಯಾಗಬೇಕು, ಹೆಣ್ಣು ಸಹಿಸಿಕೊಳ್ಳುವಷ್ಟು ಸಹಿಸಿಕೊಳ್ಳಬೇಕು. ಆದರೆ ಅದು ಒಂದು ಹಂತ ಮೀರಿದಾಗ ಹೆಣ್ಣು ಮಕ್ಕಳೂ ಸ್ಟ್ರಾಂಗ್ ಆಗಬೇಕು ಎಂದು ಹೇಳಿದ್ದಾರೆ.
ಎರಡು ಮಕ್ಕಳಾಗೋ ತನಕ ಸುಮ್ಮನಿದ್ದಿ ಯಾಕೆ? ಲೈವ್‌ನಲ್ಲಿ ಬೆವರಿಳಿಸಿದ ವೀಕ್ಷಕರಿಗೆ ತಾಂಡವ್ ಉತ್ತರ ಕೇಳಿ...
ಆಗ ಒಬ್ಬರು ಭಾಗ್ಯ ಮತ್ತು ತಾಂಡವ್ ಒಂದಾಗ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಏಕೆಂದರೆ, ಸದ್ಯ ಸೀರಿಯಲ್‌ನಲ್ಲಿ ಇರುವ ಕುತೂಹಲ ಅದೊಂದೇ. ಆದರೆ ಪೂಜಾ ಈ ಪ್ರಶ್ನೆಯಿಂದ ಜಾಣ್ಮೆಯಿಂದ ನುಣುಚಿಕೊಂಡಿದ್ದು ಯಾವ ಉತ್ತರವನ್ನೂ ನೀಡಲಿಲ್ಲ. ಅಷ್ಟಕ್ಕೂ ಇದೇ ಕ್ಲೈಮ್ಯಾಕ್ಸ್ ಆಗಿರುವ ಕಾರಣ, ನಟ-ನಟಿಯರು ಇದನ್ನು ಬಿಟ್ಟುಕೊಡುವುದಿಲ್ಲ ಎನ್ನುವುದು ತಿಳಿದ ವಿಷಯವೇ. ಆದರೂ ವೀಕ್ಷಕರಿಗೆ ಇನ್ನಿಲ್ಲದ ಕುತೂಹಲ. ಗಂಡನನ್ನು ಬಿಟ್ಟುಬಿಡು ಎಂದು ಭಾಗ್ಯಳಿಗೆ ಹೇಳುತ್ತಿದ್ದರೂ, ಅವರಿಬ್ಬರೂ ಒಂದಾಗಲಿ, ತಾಂಡವ್‌ಗೆ ಪತ್ನಿಯ ಮಹತ್ವ ಗೊತ್ತಾಗಲಿ ಎನ್ನುವವರೂ ಇದ್ದಾರೆ. ಆದರೆ ಪೂಜಾ ಇದಕ್ಕೆ ಸರಿಯಾದ ಉತ್ತರ ಕೊಡಲಿಲ್ಲ. ಭಾಗ್ಯಕ್ಕನ ಲೈಫ್ ಸರಿ ಹೋಗತ್ತೆ. ನಾವೆಲ್ಲಾ ಅವಳ ಜೊತೆಯಾಗಿ ನಿಂತುಕೊಳ್ಳುತ್ತೇವೆ.ಅತ್ತೆ ಕೂಡ ಸಹಾಯ ಮಾಡುತ್ತಿದ್ದಾರೆ. ಸೊಸೆಗಾಗಿ ಮನೆ ಬಿಟ್ಟು ಬಂದಿದ್ದಾರೆ ಎಂದಷ್ಟೇ ಹೇಳಿದ್ದಾರೆ.
ಅಂದಹಾಗೆ ಪೂಜಾ ಪಾತ್ರಧಾರಿಯ ಹೆಸರು, ಆಶಾ ಅಯ್ಯನರ್. ಇದಾಗಲೇ 'ಮೂರುಗಂಟು' ಹಾಗೂ 'ರಾಧಾರಮಣ' ಧಾರಾವಾಹಿಗಳಲ್ಲೂ ನಟಿಸಿ ಮನೆಮಾತಾಗಿರುವ ನಟಿ ಸದ್ಯ 'ಭಾಗ್ಯಲಕ್ಷ್ಮೀ' ಹಾಗೂ 'ಲಕ್ಷ್ಮೀಬಾರಮ್ಮ' ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಇವರು ದಾವಣಗೆರೆ ಮೂಲದವರು. ಸೇಂಟ್ ಜಾನ್ಸ್ ಹೈ ಸ್ಕೂಲ್‌ನಲ್ಲಿ ಕಲಿತಿರುವ ನಟಿ ಸದ್ಯ ಸೀರಿಯಲ್ಗಳಲ್ಲಿ ಫುಲ್ ಬಿಜಿ. ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿರುತ್ತಾರೆ. ಈಚೆಗೆ ಯೂಟ್ಯೂಬ್ ಚಾನೆಲ್ ಕೂಡ ತೆರೆದಿದ್ದು, ಅದರಲ್ಲಿ ಭಿನ್ನ ರೀತಿಯ ವಿಡಿಯೋ ಶೇರ್ ಮಾಡುತ್ತಿರುತ್ತಾರೆ. ಫೋಟೋಶೂಟ್ ಕೂಡ ಮಾಡಿಸಿಕೊಳ್ಳುತ್ತಿದ್ದಾರೆ. ‘ಭರ್ಜರಿ ಬ್ಯಾಚುಲರ್ಸ್’ ತಂಡಕ್ಕೂ ಸೇರಿರುವ ನಟಿ, ರುದ್ರ ಮಾಸ್ಟರ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಗಂಡನನ್ನು ಲವರ್ ಗೆ ಒಪ್ಪಿಸಿದ ಮೇಲೂ ಅವಳ ಜೊತೆನೇ ಹೀಗೆಲ್ಲಾ ಡಾನ್ಸ್ ಮಾಡೋದು ಬೇಕಿತ್ತಾ ಭಾಗ್ಯಂಗೆ?