'ಮಿಸ್ ಬಿಕಿನಿ ಇಂಡಿಯಾ'ಗೆ ಕಾಂಗ್ರೆಸ್ ಟಿಕೆಟ್ ಕೊಟ್ರೆ ಹೀಗೆಲ್ಲಾ ಆಗೋದಾ? ಮೊನ್ನೆ ಹಲ್ಲೆ, ಇಂದು ಪಕ್ಷದಿಂದ್ಲೇ ಔಟ್!
ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಸ್ಪರ್ಧಿಸಿ ಸೋತಿದ್ದ ಮಿಸ್ ಬಿಕಿನಿ ಇಂಡಿಯಾ ಅರ್ಚನಾ ಗೌತಮ್ಗೆ ಪಕ್ಷದಿಂದಲೇ ಉಚ್ಛಾಟನೆ ಮಾಡಲಾಗಿದೆ. ಏನಿದು ವಿಷ್ಯ?
ಕಳೆದ ವರ್ಷ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಭಾರಿ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಹಸ್ತಿನಾಪುರದ ‘ಮಿಸ್ ಬಿಕಿನಿ ಇಂಡಿಯಾ’ (Miss Bikini India), ಬಿಗ್ಬಾಸ್ ಖ್ಯಾತಿಯ ಅರ್ಚನಾ ಗೌತಮ್ (Archana Gautam) ಅವರಿಗೆ ಪಕ್ಷದಿಂದಲೇ ಆರು ವರ್ಷಗಳವರೆಗೆ ಉಚ್ಛಾಟನೆ ಮಾಡಲಾಗಿದೆ. ಮೊನ್ನೆಯಷ್ಟೇ ಅರ್ಚನಾ ಮತ್ತು ಅವರ ತಂದೆಯ ಮೇಲೆ ದೆಹಲಿಯ ಕಾಂಗ್ರೆಸ್ ಕಚೇರಿ ಎದುರು ಭಾರಿ ಹಲ್ಲೆ ಮಾಡಲಾಗಿತ್ತು. ಮೊನ್ನೆ ಅರ್ಚನಾ ಅವರು ತಂದೆಯೊಂದಿಗೆ ಪಕ್ಷದ ಕಚೇರಿಗೆ ಎಂಟ್ರಿ ಕೊಡುವ ಸಮಯದಲ್ಲಿ, ಅವರ ಪಕ್ಷದ ಕಚೇರಿ ಎದುರೇ ಹೊಡೆದು ಥಳಿಸಲಾಗಿತ್ತು. ಇದರ ವಿಡಿಯೋ ವೈರಲ್ ಆಗಿತ್ತು. ಇದೀಗ ಅವರನ್ನು ಆರು ವರ್ಷಗಳ ಕಾಲ ಕಾಂಗ್ರೆಸ್‌ನಿಂದ ಹೊರಹಾಕಲಾಗಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಅಂಶು ಅವಸ್ತಿ ಖಚಿತಪಡಿಸಿದ್ದಾರೆ. ಉತ್ತರ ಪ್ರದೇಶದ ಮೀರತ್‌ನ ಕಾಂಗ್ರೆಸ್ ಘಟಕದಿಂದ ಬಂದ ದೂರುಗಳ ಆಧಾರದ ಮೇಲೆ ಪಕ್ಷವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅಂಶು ಅವಸ್ತಿ ತಿಳಿಸಿದ್ದಾರೆ.
2022 ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಅರ್ಚನಾ ಗೌತಮ್ ಹಸ್ತಿನಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಕೇವಲ 1519 ಮತಗಳನ್ನು ಪಡೆದ ಕಾರಣ ಠೇವಣಿ ಕಳೆದುಕೊಂಡಿದ್ದರು. ಅಷ್ಟಕ್ಕೂ ಇವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದಾಗಲೇ ಬಿಜೆಪಿ ಪಕ್ಷದ ವಿರುದ್ಧ ಟೀಕಿಸಿತ್ತು. ಬಿಕಿನಿ ಧರಿಸಿ ಸುದ್ದಿಯಲ್ಲಿರೋ ಮಹಿಳೆಗೆ ಟಿಕೆಟ್ ನೀಡಿದ್ದರಿಂದ ಬಿಜೆಪಿ ಟೀಕಿಸಿತ್ತು. ‘ಕಾಂಗ್ರೆಸ್ಸಿಗರಿಗೆ ಅಭ್ಯರ್ಥಿಗಳು ಸಿಗುತ್ತಿಲ್ಲ. ಹೀಗಾಗಿ ಅದು ಚೀಪ್ ಗಿಮಿಕ್ ಮಾಡುತ್ತಿದೆ. ಹಸ್ತಿನಾಪುರದಂಥ ಕ್ಷೇತ್ರದಲ್ಲಿ ಸಂಸ್ಕೃತಿಯ ಬಗ್ಗೆ ಗೌರವ ಇರುವವರಿಕೆ ಟಿಕೆಟ್ ನೀಡದೇ ಕೇವಲ ಮತಗಳಿಕೆಯ ಉದ್ದೇಶದಿಂದ ಅರ್ಚನಾಗೆ ಟಿಕೆಟ್ ನೀಡಲಾಗಿದೆ. ರಾಜಕೀಯದ ಗಂಧಗಾಳ ಕೂಡ ಆಕೆಗೆ ಗೊತ್ತಿಲ್ಲ’ ಎಂದು ಬಿಜೆಪಿ ಲೇವಡಿ ಮಾಡಿತ್ತು.
ಕಾಂಗ್ರೆಸ್ ಮುಖಂಡೆ ‘ಮಿಸ್ ಬಿಕಿನಿ ಇಂಡಿಯಾ’ ಅರ್ಚನಾಗೆ ಪಕ್ಷದ ಕಚೇರಿಗೆ ನೋ ಎಂಟ್ರಿ! ತೀವ್ರ ಹಲ್ಲೆ
ಅದಕ್ಕೆ ಪ್ರತಿಕ್ರಿಯಿಸಿದ್ದ ಅರ್ಚನಾ ಅವರು, ‘2014ರಲ್ಲಿ ನಾನು ಮಿಸ್ ಉತ್ತರಪ್ರದೇಶ ಆಗಿದ್ದೆ. 2018ರಲ್ಲಿ ಮಿಸ್ ಬಿಕಿನಿ ಇಂಡಿಯಾ ಆದೆ. 2018ರಲ್ಲಿ ಮಿಸ್ ಕಾಸ್ಮೋ ವರ್ಲ್ಡ್ ಅದೆ. ಆದರೆ ಈಗ ಸಮಾಜಸೇವೆ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ. ಕಲಾವಿದರು ರಾಜಕೀಯಕ್ಕೆ ಬರಬಾರದೇ? ಕೇಂದ್ರದಲ್ಲಿ ನಟಿಯರು ಸಚಿವರಾಗಿಲ್ಲವೇ? ವೃತ್ತಿಗೂ ರಾಜಕೀಯಕ್ಕೂ ತಳಕು ಹಾಕಬಾರದು’ ಎಂದಿದ್ದರು. ಕಾಂಗ್ರೆಸ್ ಕೂಡ ಇದೇ ಮಾತು ಹೇಳಿ ಟೀಕಾಕಾರರ ಬಾಯಿ ಮುಚ್ಚಿಸಿತ್ತು. ಆದರೆ ಇದೀಗ, ಕಾಂಗ್ರೆಸ್ ಅರ್ಚನಾಗೆ ರಾಜಕೀಯ ಹಿನ್ನೆಲೆ ಇರಲಿಲ್ಲ ಎಂದು ಹೇಳಿದೆ. ಅರ್ಚನಾ ಅವರಿಗೆ ರಾಜಕೀಯ ಹಿನ್ನೆಲೆ ಇರದಿದ್ದರೂ ಪಕ್ಷವು ಅವರನ್ನು ನಂಬಿತ್ತು. ಗೌರವದ ಸ್ಥಾನ ನೀಡಿ ಹಸ್ತಿನಾಪುರ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಆದರೆ ಅವರ ಬೆಂಬಲಕ್ಕೆ ನಿಂತಿದ್ದ ಮೀರತ್ ಘಟಕದ ಪಕ್ಷದ ಕಾರ್ಯಕರ್ತರು ಆಕೆಯ ವಿರುದ್ಧ ಅನುಚಿತ ವರ್ತನೆಯ ಬಗ್ಗೆ ದೂರುಗಳನ್ನು ನೀಡಿದ್ದಾರೆ. ಹೀಗಾಗಿ ಪಕ್ಷದ ಶಿಸ್ತು ಸಮಿತಿ ಅರ್ಚನಾ ಗೌತಮ್ ಅವರನ್ನು ಪಕ್ಷದಿಂದ ಉಚ್ಚಾಟಿಸಲು ನಿರ್ಧರಿಸಿದೆ ಎಂದು ಅಂಶು ಅವಸ್ತಿ ಹೇಳಿದ್ದಾರೆ.
ಅಷ್ಟಕ್ಕೂ ಮೊನ್ನೆ ಅರ್ಚನಾ ಅವರು, ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಜನರಲ್ ಸೆಕ್ರೆಟರಿ ಪ್ರಿಯಾಂಕಾ ಗಾಂಧಿ ಅವರಿಗೆ ಶುಭಾಶಯ ತಿಳಿಸಲು ಕಾಂಗ್ರೆಸ್ ಕಚೇರಿಗೆ ಬಂದಿದ್ದರು. ಆ ಸಮಯದಲ್ಲಿ ಹಲ್ಲೆ ನಡೆದಿದೆ. ಆದರೆ ಅವರಿಗೆ ಆಫೀಸ್ ಒಳಗಡೆ ಬಿಡಲಿಲ್ಲ ಎನ್ನಲಾಗಿದೆ. ಬದಲಾಗಿ ಪ್ರವೇಶ ದ್ವಾರದಲ್ಲಿಯೇ ಥಳಿಸಿ, ಹೊಡೆದು ರಸ್ತೆಯಲ್ಲಿಯೇ ದೈಹಿಕ ದೌರ್ಜನ್ಯ ಎಸಗಲಾಗಿದೆಯಂತೆ. ಈ ಕುರಿತು ಖುದ್ದು ಅರ್ಚನಾ ಗೌತಮ್ ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಅವರು ನಮ್ಮನ್ನು ಆಫೀಸ್ ಒಳಗೆ ಹೋಗಲು ಬಿಡಲಿಲ್ಲ. ಗೇಟ್ ಕೂಡಾ ತೆರೆಯಲಿಲ್ಲ. ಮೇಲಿಂದ ಆದೇಶ ನೀಡಲಾಗಿದೆ, ನಿಮ್ಮ ಎಂಟ್ರಿ ನಿರಾಕರಿಸಲಾಗಿದೆ ಎಂದು ತಿಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಅರ್ಚನಾ ಹೇಳಿದ್ದರು.
ಸೆಲ್ಫಿ ತೆಗೆದುಕೊಳ್ಳಲು ಬಂದಾಕೆ ನಟ ಪ್ರಭಾಸ್ ಕೆನ್ನೆಗೆ ಹೊಡೆಯೋದಾ? ವಿಡಿಯೋ ವೈರಲ್!