ನಟ ದರ್ಶನ್ ಪ್ರಕರಣದಲ್ಲಿ ಅನುಪಮಾ ಗೌಡ ಸಾರ್ವಜನಿಕರ ಅಭಿಪ್ರಾಯ ಕೇಳಿದ್ದಾರೆ. ರೇಣುಕಾಸ್ವಾಮಿ ರೀತಿಯಲ್ಲಿ ಅಶ್ಲೀಲ ಸಂದೇಶಗಳನ್ನು ಕಳಿಸಿವವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ. ಮೆಸೇಜ್‌ಗೂ ಮುನ್ನ ನಿಮ್ಮ ಮನೆಯ ಹೆಣ್ಣುಮಕ್ಕಳ ಬಗ್ಗೆ ಯೋಚಿಸುವಂತೆ ಕೇಳಿದ್ದಾರೆ.

ಬೆಂಗಳೂರು (ಜು.29): ಕನ್ನಡ ಚಿತ್ರರಂಗದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜನಸಾಮಾನ್ಯ ವ್ಯಕ್ತಿಯೊಬ್ಬ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಕೊಲೆ ಮಾಡಿದ ಪ್ರಕರಣ ಇದೀಗ ಸದ್ದು ಮಾಡುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿರುವಾಗ ಇದೀಗ ನಟಿ ಮತ್ತು ನಿರೂಪಕಿ ಅನುಪಮಾ ಗೌಡ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದು, ಸರಿಯೇ? ತಪ್ಪಾ? ನಿಮ್ಮ ಅಭಿಪ್ರಾಯ ಹೇಳಿ ಎಂದು ಕೇಳಿದ್ದಾರೆ.

ರೇಣುಕಸ್ವಾಮಿ ಹಾಗೆಯೇ ಅಶ್ಲೀಲ ಮೆಸೇಜ್‌ಗಳನ್ನು ಮಾಡುವವರು ಅಥವಾ ಒಂದು ಪೋಸ್ಟ್‌ಗೆ ಅಶ್ಲೀಲವಾಗಿ ಕಾಮೆಂಟ್ ಮಾಡೋ ವ್ಯಕ್ತಿಗಳು ನಮ್ಮ ಸುತ್ತ ಮುತ್ತ ಇದಾರೆ. ಇದರಲ್ಲಿ ದೊಡ್ಡ ಆಶ್ಚರ್ಯ ಏನು ಇಲ್ಲ. ಆದರೆ, ಹೀಗೆ ಅಶ್ಲೀಲವಾಗಿ ಮೆಸೇಜ್ ಮತ್ತು ಕಾಮೆಂಟ್‌ಗಳನ್ನು ಮಾಡುವ ಮೊದಲು ನಿಮ್ಮ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳ ಬಗ್ಗೆ ಯೋಚೆ ಮಾಡುತ್ತೀರಾ? ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಈ ತರಹದ ಅಶ್ಲೀಲ ಮೆಸೇಜ್‌ಗಳು ಬಂದರೆ ನೀವು ಏನ್ ಮಾಡುತ್ತೀರಿ? ಅಥವಾ ನೀವು ಇಷ್ಟಪಡುವ ಕಲಾವಿದರಿಗೆ ಅಶ್ಲೀಲ ಮೆಸೇಜ್‌ಗಳು, ಕಾಮೆಂಟ್‌ಗಳು ಬಂದರೆ ಏನು ಮಾಡಬೇಕು? ಎಂಬ ಅಭಿಪ್ರಾಯವನ್ನು ಕೇಳಿದ್ದಾರೆ. ಜೊತೆಗೆ ತಮ್ಮ ಪೋಸ್ಟ್‌ಗೆ ನಿಮ್ಮ ಅಭಿಪ್ರಾಯವನ್ನು ಹೇಳುವುದಕ್ಕೆ ಒಂದು ಕಾಲಂ ಕೂಡ ಕೊಟ್ಟಿದ್ದಾರೆ.

ನಟಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ, ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಕೊಲೆಯಾಗಿ ಒಂದು ವರ್ಷ ಕಳೆದಿದೆ. ಇದೀಗ ದರ್ಶನ್ ಸೇರಿ 17 ಜನರ ಗ್ಯಾಂಗ್‌ನ ಎಲ್ಲ ಸದಸ್ಯರೂ ಜಾಮೀನಿನ ಮೇಲೆ ಹೊರಗೆ ಸುತ್ತಾಡುತ್ತಿದ್ದಾರೆ. ಆದರೆ, ದರ್ಶನ್ ಸೇರಿ ಕೊಲೆ ಮಾಡಿದ ಪ್ರಮುಖ 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದ್ದು ಸರಿಯಲ್ಲ ಎಂದು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸರ್ಕಾರದಿಂದ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಾಗ ಕೊಲೆ ಆರೋಪಿಗಳ ಮೇಲೆ ಇಷ್ಟೊಂದು ಸಾಕ್ಷಿಗಳಿದ್ದರೂ, ಹೈಕೋರ್ಟ್ ಇವರನ್ನು ನಿರ್ದೋಷಿ ಎಂಬಂತೆ ಜಾಮೀನು ನೀಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತೀರ್ಪು ಕಾಯ್ದಿರಿಸಿದೆ.

ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವಾಗ ನಟಿ ರಮ್ಯಾ ಅವರು ರೇಣುಕಾಸ್ವಾಮಿ ಪರವಾಗಿ ನ್ಯಾಯ ಸಿಗಬೇಕು ಎಂಬ ಅರ್ಥದಲ್ಲಿ ಒಂದು ಸಂದೇಶವನ್ನು ಹಾಕಿದ್ದರು. 'ಸುಪ್ರೀಂ ಕೋರ್ಟ್ ಭಾರತದ ಸಾಮಾನ್ಯ ಜನರ ಪಾಲಿಗೆ ಆಶಾಕಿರಣ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇದೆ' ಅಂತ ಬರೆದುಕೊಂಡಿದ್ದರು. ಈ ಮೂಲಕ ಒನ್ಸ್ ಅಗೈನ್ ದರ್ಶನ್​ಗೆ ಶಿಕ್ಷೆಯಾಗಲಿ ಅಂತ ಬಹಿರಂಗವಾಗಿ ಧ್ವನಿ ಎತ್ತಿದ್ದರು. ನಟಿ ರಮ್ಯಾ ಅವರ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದಕ್ಕೆ ನಟ ದರ್ಶನ್ ಅಭಿಮಾನಿಗಳು ತೀವ್ರ ಕಟ್ಟದಾಗಿ ಕಾಮೆಂಟ್ ಮತ್ತು ನೇರವಾಗಿ ಮೆಸೇಜ್‌ಗಳನ್ನು ಮಾಡಿದ್ದಾರೆ. ಈ ಬಗ್ಗೆ ಕಿಡಿಕಾರಿದ ನಟಿ ರಮ್ಯಾ ರೇಣುಕಾಸ್ವಾಮಿಗೂ ದರ್ಶನ್ ಅಭಿಮಾನಿಗಳಿಗೂ ಏನೂ ವ್ಯತ್ಯಾಸವಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ಆದರೂ ಕೆಟ್ಟ ಸಂದೇಶಗಳು ಬರುವುದು ನಿಲ್ಲದಿದ್ದಾಗ ಎಲ್ಲ ಅಶ್ಲೀಲ ಸಂದೇಶಗಳನ್ನು ಪೋಸ್ಟ್ ಆಗಿ ಹಂಚಿಕೊಮಡು ನಿನ್ನೆ 40 ಜನರ ವಿರುದ್ಧ ದೂರು ನೀಡಿದ್ದಾರೆ.

ನಟಿ ರಮ್ಯಾ ವಿರುದ್ಧವೂ ದೂರು:

ದರ್ಶನ್ ಕೊಲೆ ಆರೋಪಿ ಆಗಿರುವ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವಾಗ ಈ ಬಗ್ಗೆ ಮಾತನಾಡಿದ ನಟಿ ರಮ್ಯಾ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ದೂರು ಕೊಡುವುದಾಗಿ ಹೇಳಿದ್ದರು. ಜೊತೆಗ, ದರ್ಶನ್ ಅಭಿಮಾನಿಗಳು ಕೂಡ ರಮ್ಯಾ ವಿರುದ್ಧ ದೂರು ಕೊಡಲು ಸಿದ್ಧತೆ ನಡೆಸಿದ್ದಾರೆ. ಜೊತೆಗೆ, ನಟಿ ರಕ್ಷಿತಾ ಅವರು ರಮ್ಯಾ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರ ಮಾನಸಿಕ ಸ್ಥಿತಿ ತಿಳಿದುಕೊಳ್ಳಲು ಸಾಧ್ಯವಿಲ್ಲ, ದಯೆ ತೋರಿಸಿ ಎಂಬಾರ್ಥದಲ್ಲಿ ಪೋಸ್ಟ್ ಹಾಕಿದ್ದರು. ಆದರೆ, ನಟಿ ರಮ್ಯಾ ಅವರಿಗೆ ನಟ ಶಿವರಾಜ್‌ಕುಮಾರ್, ಯುವ ರಾಜ್‌ಕುಮಾರ್, ಕನ್ನಡ ಚಲನಚಿತ್ರಮಂಡಳಿ ಸದಸ್ಯರು, ನಟ ಅಹಿಂಸಾ ಚೇತನ್, ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಸೇರಿ ಹಲವರು ಬೆಂಬಲಿಸಿದ್ದಾರೆ.