Anchor Anushree Wedding Gift: ನಟಿ, ನಿರೂಪಕಿ ಅನುಶ್ರೀ, ರೋಶನ್ ಅವರು ಮದುವೆಯಾಗಿದ್ದಾರೆ. ಶಾಸ್ತ್ರದ ವೇಳೆ ಎರಡೂ ಕುಟುಂಬಗಳು ದುಬಾರಿ ಗಿಫ್ಟ್ ನೀಡಿವೆ.
ನಟಿ, ನಿರೂಪಕಿ ಅನುಶ್ರೀ ಹಾಗೂ ರೋಶನ್ ಅವರು ಬಾಳ ಬಂಧನಕ್ಕೆ ಒಳಗಾಗಿದ್ದಾರೆ. ಈಗ ಅನುಶ್ರೀ ಹಾಗೂ ರೋಶನ್ ಕುಟುಂಬಸ್ಥರು ಪರಸ್ಪರ ನೀಡಿದ ಉಡುಗೊರೆಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ.
ಲವ್ ಮ್ಯಾರೇಜ್ ಆಗಿರುವ ಜೋಡಿ
ಆಗಸ್ಟ್ 28ರಂದು ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಇವರ ಮದುವೆ ಆಗಿದೆ. ಅನುಶ್ರೀ, ರೋಶನ್ ಮದುವೆ ಫೋಟೋ, ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಅನುಶ್ರೀ, ರೋಶನ್ ಪರಿಚಯ ಆಗಿತ್ತು. ಅಲ್ಲಿಂದ ಇವರಿಬ್ಬರ ಸ್ನೇಹ ಶುರುವಾಗಿ ಪ್ರೀತಿಯಾಗಿ ಮದುವೆಯಾಗಿದ್ದಾರೆ. ಈ ಪ್ರೀತಿಗೆ ಎರಡೂ ಕುಟುಂಬಗಳು ಒಪ್ಪಿಗೆ ನೀಡಿವೆ. “ನಾನು ಲವ್ ಮಾಡ್ತಿದೀನಿ ಅಂದರೆ ಯಾರೂ ನಂಬುತ್ತಿರಲಿಲ್ಲ” ಎಂದು ಅನುಶ್ರೀ ಅವರೇ ಹೇಳಿದ್ದಾರೆ.
ಅಂದಹಾಗೆ ಅನುಶ್ರೀ ಅವರಿಗೆ ರೋಶನ್ ಅವರು ಬಂಗಾರದ ನಕ್ಲೇಸ್, ಬಂಗಾರದ ಬಳೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಅನುಶ್ರೀ ಸಹೋದರ ಅಭಿಷೇಕ್ ಅವರು ಬಾವನಿಗೆ ಚಿನ್ನದ ಸರ, ಬ್ರಾಸ್‌ಲೇಟ್ ಕೊಟ್ಟಿದ್ದಾರೆ.
ಮದುವೆ ಬಗ್ಗೆ ಅನುಶ್ರೀ ಹೇಳಿದ್ದೇನು?
“ಮದುವೆ ಎನ್ನೋದು ಪ್ರತಿಯೊಂದು ಹೆಣ್ಣಿನ ಕನಸು. ನನಗೂ ಕನಸಿತ್ತು. ತಡವಾದರೂ ಕೂಡ ಸರಿಯಾದ ಸಂಗಾತಿ ಜೊತೆಗೆ ಮದುವೆ ಆಗಿದ್ದೇನೆ ಎನ್ನುವ ಖುಷಿಯಿದೆ. ರೋಶನ್ ತುಂಬ ಸಿಂಪಲ್ ಹುಡುಗ. ಅವರು ಕೋಟ್ಯಾಧೀಶ್ವರ ಅಲ್ಲದಿದ್ದರೂ ಹೃದಯವಂತ. ತುಂಬ ಚೆನ್ನಾಗಿ ಅಡುಗೆ ಮಾಡ್ತಾರೆ. ನಮ್ಮಿಬ್ಬರಿಗೂ ಪುನೀತ್ ಸರ್ ಅಂದರೆ ಇಷ್ಟ, ಅವರ ಕಾರ್ಯಕ್ರಮದಲ್ಲಿ ನಮ್ಮಿಬ್ಬರ ಪರಿಚಯ ಆಗಿದೆ, ಅವರಿಂದಲೇ ಮದುವೆ ಆಗಿದೆ ಎಂದು ಹೇಳಬಹುದು. ನಾವು ಹೇಗೆ ಮದುವೆ ಆಗ್ತೀವಿ ಎನ್ನೋದು ಮುಖ್ಯ ಅಲ್ಲ, ಹೇಗೆ ಬದುಕ್ತೀವಿ ಎನ್ನೋದು ಮುಖ್ಯ” ಎಂದು ಅನುಶ್ರೀ ಹೇಳಿದ್ದಾರೆ.
ಮಂತ್ರ ಮಾಂಗಲ್ಯ ಆಗುವ ಕನಸಿತ್ತು
37ನೇ ವಯಸ್ಸಿಗೆ ಅನುಶ್ರೀ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರೋಶನ್ ಅವರು ಐಟಿ ಉದ್ಯಮಿ. ಇಬ್ಬರಿಗೂ ಮಂತ್ರ ಮಾಂಗಲ್ಯದ ಮೂಲಕ ಮದುವೆ ಆಗುವ ಕನಸಿತ್ತು. ಆದರೆ ಕೆಲ ನಿಯಮಗಳಿದ್ದರಿಂದ ಆಗಲಿಲ್ಲ. ಬಹಳ ಸರಳವಾಗಿ ಮದುವೆ ಆಗಬೇಕು ಎಂದುಕೊಂಡಿದ್ದ ಈ ಜೋಡಿ ಆತ್ಮೀಯರು, ಕುಟುಂಬಸ್ಥರು, ಚಿತ್ರರಂಗದವರು ಸಾಕ್ಷಿಯಾಗಿ ಮದುವೆಯಾಗಿದೆ.
ಮದುವೆ ಮಂಟಪದ ಬಳಿ ಅಪ್ಪು ಫೋಟೋ
ಕೆಂಪು, ಕೇಸರಿ ಮಿಶ್ರಿತ ಸೀರೆಯಲ್ಲಿ ಅನುಶ್ರೀ ಕಂಗೊಳಿಸಿದ್ದಾರೆ. ರೇಷ್ಮೆ ಪಂಚೆ, ಶರ್ಟ್ ಧರಿಸಿ ರೋಶನ್ ಮಿಂಚಿದ್ದಾರೆ. ಅಂದಹಾಗೆ ಮದುವೆ ಮಂಟಪದ ಬಳಿ ಪುನೀತ್ ರಾಜ್‌ಕುಮಾರ್ ಅವರ ಫೋಟೋವನ್ನು ಇಡಲಾಗಿತ್ತು. ಈ ಮೂಲಕ ಅನುಶ್ರೀ ತನ್ನ ಮದುವೆಯಲ್ಲಿಯೂ ಪುನೀತ್ ಸ್ಮರಣೆ ಮಾಡಿದ್ದಾರೆ.
ಸೆಲೆಬ್ರಿಟಿಗಳು ಭಾಗಿ
ನಟ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ಶ್ರೀದೇವಿ ಭೈರಪ್ಪ, ಪ್ರೇಮಾ, ಶ್ವೇತಾ ಚೆಂಗಪ್ಪ, ಅಕುಲ್ ಬಾಲಾಜಿ ದಂಪತಿ, ರಶ್ಮಿ ಪ್ರಭಾಕರ್ ದಂಪತಿ, ರಾಜ್ ಬಿ ಶೆಟ್ಟಿ, ಜಗ್ಗೇಶ್, ಧನಂಜಯ, ಚೈತ್ರಾ ಜೆ ಆಚಾರ್, ನಾಗಭೂಷಣ್ ದಂಪತಿ, ನವೀನ್ ಸಾಗರ್ ಸೇರಿದಂತೆ ಜೀ ಕನ್ನಡ ವಾಹಿನಿಯ ತಂತ್ರಜ್ಞರು ಕೂಡ ಆಗಮಿಸಿದ್ದರು.
