ಅಮೃತಧಾರೆ: ಹೆಂಡ್ತಿ ಹೆಸರು ಸೇರ್ಸಿಕೊಂಡ ದೇವರ ನಾಡಿದು, ಮದ್ವೆಯಾದ್ಮೇಲೆ ಅಪ್ಪನ ಹೆಸರೂ ಉಳಿಸಿಕೊಳ್ಳಬಾರ್ದಾ?
ಅಮೃತಧಾರೆ ಸೀರಿಯಲ್‌ನ (Amruthadhare serial) ಭೂಮಿಕ ಗಂಭೀರ ಪ್ರಶ್ನೆಯನ್ನ ಸಮಾಜದ ಮುಂದಿಟ್ಟಿದ್ದಾಳೆ. ಹುಟ್ಟಿದ ಮನೆಯನ್ನ ಬಿಟ್ಟು ಬರೋ ಹೆಣ್ಣು ಹೆಸ್ರಿನ ಪಕ್ಕನೂ ಅಪ್ಪನ್ನ ಉಳಿಸ್ಕೊಳ್ಳೋ ಹಾಗಿಲ್ವಾ?
ಅಮೃತಧಾರೆ (Amruthadhare serial) ಜೀ ಕನ್ನಡದಲ್ಲಿ ಟಿಆರ್‌ಪಿ ಲಿಸ್ಟ್ ನಲ್ಲಿ ಮೇಲೆ ಕೆಳಗೆ ಜೀಕುತ್ತಾ ಇದೆ. ಎರಡು ವಾರಗಳ ಕೆಳಗೆ ಟಿಆರ್‌ಪಿ ಇಳೀತಾ ಬರ್ತಿದ್ದ ಹಾಗೆ ಭೂಮಿಕಾ ಯರ್ರಾಬಿರ್ರಿ ಕುಡಿದು ಮಾಡೋ ತುಂಟಾಟಕ್ಕೆ ವೀಕ್ಷಕರು ಜೈ ಅಂದು ಟಿಆರ್ ಪಿ ಏರಿಸಿಬಿಟ್ಟರು. ಸದ್ಯ ಈ ಸೀರಿಯಲ್ ಟಾಪ್ ೩ ಸೀರಿಯಲ್ ಆಗಿ ಗುರುತಿಸಿಕೊಂಡಿದೆ. ಕಳೆದೆರಡು ವಾರ ಕುಡುಕಿ ಭೂಮಿಕಾ ಮಾಡಿರೋ ಅವಾಂತರ ನೋಡಿ ಬಿದ್ದು ಬಿದ್ದೂ ನಕ್ಕಿದ್ದ ವೀಕ್ಷಕರು ಇದೀಗ ಆಕೆ ಎತ್ತಿರೋ ಸೆನ್ಸಿಟಿವ್ ಪ್ರಶ್ನೆಗೆ ಭಾವುಕರಾಗಿದ್ದಾರೆ. ಈ ಹಿಂದೆಯೂ ಹೆಣ್ಣು ಮಕ್ಕಳು ಫೇಸ್ ಮಾಡೋ ಕೆಲವು ಸಮಸ್ಯೆಗಳ ಬಗ್ಗೆ ಈ ಸೀರಿಯಲ್ ಟೀಮ್ ಸೀರಿಯಸ್ ಪ್ರಶ್ನೆ ಎತ್ತಿತ್ತು. ಇದೀಗ ಮದುವೆಯಾದ ಹೆಣ್ಣಿಗೆ ಎದುರಾಗುವ ಕೆಲವು ಸ್ವಾಭಿಮಾನಕ್ಕೆ ಸಂಬಂಧಿಸಿದ ವಿಷಯವನ್ನು ಪ್ರಶ್ನೆ ಮಾಡಿದೆ. ಇದಕ್ಕೆ ವೀಕ್ಷಕರೆಲ್ಲ ಭೂಮಿಕ ಪರವಾಗಿಯೇ ಉತ್ತರ ನೀಡಿದ್ದಾರೆ.
ಇಂಗ್ಲೀಷರ ಜೊತೆಗೆ ಇಂಗ್ಲೀಷ್ ಸಂಸ್ಕೃತಿಯ ಪ್ರಭಾವ ನಮ್ಮ ಸಂಸ್ಕೃತಿಯ ಮೇಲಾಗಿ ಬಹಳ ಕಾಲವಾಯ್ತು. ಹಾಗೆ ನೋಡಿದರೆ ನಮ್ಮ ಅಜ್ಜಿ, ಪಿಜ್ಜಿಯರ ಹೆಸರಲ್ಲಿ ಗಂಡನ ಹೆಸರು ಸೇರುತ್ತಿದ್ದದ್ದು ಕಡಿಮೆ. ನಾವು ಪೂಜಿಸುವ ದೇವಾನುದೇವತೆಗಳೆಲ್ಲ ಹೆಂಡತಿಯ ಹೆಸರನ್ನು ತಮ್ಮ ಹೆಸರಿನ ಮುಂದೆ ಇಟ್ಟುಕೊಂಡವರು. ಸೀತಾರಾಮ, ಲಕ್ಷ್ಮೀಪತಿ, ರಾಧಾಕೃಷ್ಣ, ಲಕ್ಷ್ಮೀ ನಾರಾಯಣ ಹೀಗೆ ಯಾವ ಹೆಚ್ಚಿನೆಲ್ಲ ದೇವರ ಹೆಸರಿನ ಮೊದಲು ಅವರ ಪತ್ನಿಯ ಹೆಸರಿದೆ. ಆದರೆ ಇಂಗ್ಲೀಷ್ ಸಂಸ್ಕೃತಿಯಲ್ಲಿ ಹಾಗಲ್ಲ, ವಿವಾಹಿತ ಹೆಣ್ಣು ಗಂಡನ ಸರ್‌ನೇಮ್ ಇಟ್ಟುಕೊಳ್ಳುವ ರೂಢಿ. ಇಡೀ ಜಗತ್ತಲ್ಲಿ ಮೇಲ್ ಡಾಮಿನೆನ್ಸ್ ಯಾವ ಲೆವೆಲ್‌ನಲ್ಲಿದೆ ಅನ್ನೋದಕ್ಕೆ ಇದು ಉದಾಹರಣೆ. ಏಕೆಂದರೆ ಇಂಗ್ಲೀಷ್ ಸಂಸ್ಕೃತಿಯನ್ನು ಫಾಲೋ ಮಾಡುವ ವಿಶ್ವದ ಹಲವೆಡೆ ಹೆಚ್ಚಿನವರು ಈ ಪರಂಪರೆಯನ್ನೂ ಫಾಲೋ ಮಾಡುತ್ತಾರೆ. ಆದರೆ ನಮ್ಮಲ್ಲಿ ಆ ಪರಂಪರೆ ಇರಲಿಲ್ಲ. ಆದರೆ ಕ್ರಮೇಣ ಅದನ್ನು ಹೇರುವ ಪರಿಪಾಠ ಬೆಳೆಯುತ್ತಾ ಬಂತು. ಈಗಂತೂ ಹೆಚ್ಚಿನ ವಿವಾಹಿತ ಹೆಣ್ಣುಮಕ್ಕಳು ತಮ್ಮ ಹೆಸರಿನ ಜೊತೆಗೆ ಪತಿಯ ಹೆಸರು ಸೇರಿಸಿಕೊಳ್ಳುತ್ತಾರೆ. ಇದು ತಪ್ಪು ಅನ್ನೋದು ಅರ್ಥ ಅಲ್ಲ. ಆದರೆ ಅದನ್ನು ಹೆಣ್ಣಿನ ಆಯ್ಕೆಗೆ ಬಿಡಬೇಕು ಅನ್ನುವುದು ಸ್ವಾಭಿಮಾನಿ ಹೆಣ್ಣುಮಕ್ಕಳ ಅಭಿಪ್ರಾಯ.
ಆದರೆ 'ಅಮೃತಧಾರೆ' ಸೀರಿಯಲ್‌ನಲ್ಲಿ ನಾಲ್ಕು ತಲೆಮಾರನ್ನು ಕಂಡ ಅಜ್ಜಿ ತನ್ನ ಮೊಮ್ಮಗನ ಹೆಂಡತಿಯ ಹೆಸರಿನ ಜೊತೆಗೆ ಆಕೆಯ ತಂದೆ ಹೆಸರನ್ನು ತೆಗೆಯಲು ಮುಂದಾಗಿದ್ದಾಳೆ. ಭೂಮಿಕಾ ಸದಾಶಿವ ಅಂತಿರುವ ಕಡೆ ಭೂಮಿಕಾ ಗೌತಮ್ ದಿವಾನ್ ಅಂತ ಹೆಸರು ಸೇರಿಸಲು ಸಂಬಂಧಪಟ್ಟವರನ್ನು ಮನೆಗೇ ಕರೆಸಿದ್ದಾಳೆ. ಇದು ಭೂಮಿಕಾಗೆ ನುಂಗಲಾರದ ತುತ್ತು. ಅಜ್ಜಿ ಮಾತಿಗೆ ಎದುರಾಡದ ಗೌತಮ್ ಗೂ ಇದು ಭೂಮಿಕಾಗೆ ಇಷ್ಟವಿಲ್ಲ ಅಂತ ಗೊತ್ತು. ಭೂಮಿಕಾ ತನ್ನ ಹೆಸರಿನ ಮುಂದಿರುವ ತನ್ನ ತಂದೆಯ ಹೆಸರಿನ ಬಗ್ಗೆ ಹೆಮ್ಮೆಯಿಂದ ಆತನ ಎದುರು ಹೇಳಿಕೊಂಡಿದ್ದಾಳೆ. ಇದೀಗ ಆಕೆಯ ಎದುರು ತನ್ನ ಹೆಸರು ಹಾಕಿಸಲು ಅಜ್ಜಿ ಹೊರಟಿರೋದು ಆತನಿಗೂ ಇಷ್ಟ ಇದ್ದಂತಿಲ್ಲ. ಆದರೆ ಅಜ್ಜಿ ಯಾರ ಮಾತೂ ಕೇಳೋವಳಲ್ಲ ಅಂತ ಗೊತ್ತು. ಈಗ ಏನ್ ಕರಾಮತ್ತು ಮಾಡಿ ಗೌತಮ್ ತನ್ನ ಪತ್ನಿಯ ಸ್ವಾಭಿಮಾನ ಕಾಯುತ್ತಾನೆ ಅನ್ನೋ ಕುತೂಹಲ ಇದೆ.
ಇನ್ನೊಂದೆಡೆ ವೀಕ್ಷಕರು ಇದಕ್ಕೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆ ಆದ ಕೂಡಲೇ ಹೆಣ್ಣಿನ ಇಷ್ಟಕ್ಕೆ ವಿರುದ್ಧವಾಗಿ ಆಕೆಯ ಹೆಸರಿನ ಸರ್‌ನೇಮ್ ಬದಲಿಸೋದು ಅಮಾನವೀಯ ಎಂದಿದ್ದಾರೆ. ಛಾಯಾಸಿಂಗ್ ಭೂಮಿಕಾ ಪಾತ್ರ, ರಾಜೇಶ್ ನಟರಂಗ ಗೌತಮ್ ದಿವಾನ್ ಪಾತ್ರದಲ್ಲಿ ನಟಿಸಿದ್ದಾರೆ.
ಅಮೃತಧಾರೆ ಗೌತಮ್ ರಿಯಲ್ ಅತ್ತೆ ಭಾವಿ ಅಳಿಯನ ಬಗ್ಗೆ ಕಂಡಿದ್ದ ಕನಸೇನು? ಆಗಿದ್ದೇನು?