ಗ್ರಾಹಕರನ್ನು ತಪ್ಪುದಾರಿಗೆಳೆಯುವ ಪ್ರೈಮ್ ಸಬ್‌ಸ್ಕ್ರಿಪ್ಶನ್‌ ತಂತ್ರಗಳಿಗಾಗಿ ಅಮೆಜಾನ್, ಅಮೆರಿಕದ ಎಫ್‌ಟಿಸಿ ಜೊತೆ ₹21,000 ಕೋಟಿ ಮೊತ್ತದ ಇತ್ಯರ್ಥಕ್ಕೆ ಒಪ್ಪಿದೆ. ಈ ಒಪ್ಪಂದದ ಅಡಿಯಲ್ಲಿ, ತಿಳಿಯದಂತೆ ಚಂದಾದಾರರಾದ ಅಥವಾ ರದ್ದುಗೊಳಿಸಲು ಕಷ್ಟಪಟ್ಟ ಅರ್ಹ ಗ್ರಾಹಕರಿಗೆ ಹಣವನ್ನು ಮರುಪಾವತಿಸಲಾಗುತ್ತದೆ.

ವಾಷಿಂಗ್ಟನ್ (ಮಾ.28): ಆನ್‌ಲೈನ್ ರಿಟೇಲ್ ದೈತ್ಯ ಅಮೆಜಾನ್ ತನ್ನ ಪ್ರೈಮ್ ಸಬ್‌ಸ್ಕ್ರಿಪ್ಶನ್‌ (Prime Subscription) ವಿಚಾರದಲ್ಲಿ ಗ್ರಾಹಕರ ದಿಕ್ಕು ತಪ್ಪಿಸಿದೆ ಎಂಬ ಆರೋಪದ ಮೇಲೆ ಅಮೆರಿಕದ ಫೆಡರಲ್ ಟ್ರೇಡ್ ಕಮಿಷನ್ (FTC) ಜೊತೆ ಸುಮಾರು $2.5 ಬಿಲಿಯನ್ (ಅಂದಾಜು ₹21,000 ಕೋಟಿ) ಮೊತ್ತದ ಬೃಹತ್ ಇತ್ಯರ್ಥಕ್ಕೆ (Settlement) ಒಪ್ಪಿಕೊಂಡಿದೆ. ಗ್ರಾಹಕರನ್ನು ತಮಗರಿವಿಲ್ಲದಂತೆ ಪ್ರೈಮ್ ಸಬ್‌ಸ್ಕ್ರಿಪ್ಶನ್‌ ಸೇರಿಸಿಕೊಳ್ಳುವುದು ಮತ್ತು ಒಮ್ಮೆ ಸೇರಿದ ಮೇಲೆ ಅದನ್ನು ರದ್ದುಗೊಳಿಸುವುದನ್ನು (Cancellation) ಉದ್ದೇಶಪೂರ್ವಕವಾಗಿ ಕಠಿಣಗೊಳಿಸಿದ್ದಕ್ಕಾಗಿ ಅಮೆಜಾನ್‌ಗೆ ಈ ದಂಡ ವಿಧಿಸಲಾಗಿದೆ.

Add Asianetnews Kannada as a Preferred SourcegooglePreferred

ನಿಯಮ ಉಲ್ಲಂಘನೆಗಾಗಿ ಸಂಸ್ಥೆಯ ಇತಿಹಾಸದಲ್ಲೇ ನೀಡಲಾದ ಅತಿ ದೊಡ್ಡ ದಂಡದ ಮೊತ್ತವಾಗಿ $1 ಬಿಲಿಯನ್ ಸಿವಿಲ್ ಪೆನಾಲ್ಟಿ ಹಾಕಲಾಗಿದೆ. ತಮಗರಿವಿಲ್ಲದಂತೆ ಪ್ರೈಮ್‌ಗೆ ಸೇರಿದ ಅಥವಾ ರದ್ದುಗೊಳಿಸಲು ಸಾಧ್ಯವಾಗದ ಗ್ರಾಹಕರಿಗೆ ಬರೋಬ್ಬರಿ $1.5 ಬಿಲಿಯನ್ ಹಣವನ್ನು ರೀಫಂಡ್‌ ಮಾಡಲಾಗುತ್ತದೆ.

ಯಾರಿಗೆ ಸಿಗಲಿದೆ ಹಣ? 

ಸುಮಾರು $51 (ಅಂದಾಜು ₹4,200) ವರೆಗೆ ಸ್ವಯಂಚಾಲಿತ ರಿಫಂಡ್ ಪಡೆಯಲು ಎಲ್ಲರೂ ಅರ್ಹರಾಗಿಲ್ಲ. 2019 ಜೂನ್ 23 ರಿಂದ 2025 ಜೂನ್ 23 ರ ನಡುವೆ 'ಸಿಂಗಲ್ ಪೇಜ್ ಚೆಕ್‌ಔಟ್' ಲಿಂಕ್‌ಗಳ ಮೂಲಕ ಸದಸ್ಯತ್ವ ಪಡೆದವರು ಈ ರೀಫಂಡ್‌ಗೆ ಅರ್ಹರಾಗಿದ್ದಾರೆ.ಕಳೆದ ವರ್ಷದ ಸೆಪ್ಟೆಂಬರ್ ನಂತರ ಒಪ್ಪಂದ ಪ್ರಕಟವಾದ 90 ದಿನಗಳ ಒಳಗೆ ಅರ್ಹ ಗ್ರಾಹಕರಿಗೆ ಹಣ ಮರುಪಾವತಿಯಾಗಲಿದೆ. ಇದರ ಹೊರತಾಗಿ, ಸದಸ್ಯತ್ವ ರದ್ದತಿ ಪ್ರಕ್ರಿಯೆಯಲ್ಲಿ ತೊಂದರೆ ಅನುಭವಿಸಿದ ಸುಮಾರು 3 ಕೋಟಿಗೂ ಹೆಚ್ಚು ಗ್ರಾಹಕರಿಗೆ ಕ್ಲೈಮ್ ಸಲ್ಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ.

ಅಮೆಜಾನ್‌ ಪ್ರೈಮ್‌ ಗ್ರಾಹಕರಿಗೆ ಬರುತ್ತಿರುವ ಚೆಕ್‌ಗಳು..

ಅಮೆಜಾನ್ ಮಾಡಿದ್ದ ಮೋಸವೇನು?

ಎಫ್‌ಟಿಸಿ ದೂರಿನ ಪ್ರಕಾರ, ಅಮೆಜಾನ್ ಉದ್ದೇಶಪೂರ್ವಕವಾಗಿಯೇ ಗ್ರಾಹಕರು ವಸ್ತುವನ್ನು ಖರೀದಿಸುವಾಗ ಪ್ರೈಮ್‌ಗೆ ಚಂದಾದಾರರಾಗುವಂತೆ ವಿನ್ಯಾಸಗೊಳಿಸಿತ್ತು. ಹಲವು ಸಂದರ್ಭಗಳಲ್ಲಿ 'ಟ್ರಾನ್ಸಾಕ್ಷನ್ ಪೂರ್ಣಗೊಳಿಸಿ' ಎಂಬ ಬಟನ್ ಒತ್ತಿದಾಗ ಗ್ರಾಹಕರಿಗೆ ಅರಿವಿಲ್ಲದಂತೆ ಪ್ರೈಮ್ ಮೆಂಬರ್‌ಶಿಪ್ ಆಕ್ಟಿವೇಟ್ ಆಗುತ್ತಿತ್ತು. ಒಂದು ವೇಳೆ ಗ್ರಾಹಕ ರದ್ದುಗೊಳಿಸಲು ಪ್ರಯತ್ನಿಸಿದರೆ, ಆ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಲಾಗಿತ್ತು. ಇದನ್ನು ಸರಿಪಡಿಸಲು ಕಂಪನಿಯು ನಿರಾಕರಿಸಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಅಮೆಜಾನ್ ಪ್ರೈಮ್ ಅಂದ್ರೆ ಏನು?

ಅಮೆಜಾನ್ ಪ್ರೈಮ್ ವರ್ಷಕ್ಕೆ $139 (ಅಂದಾಜು ₹11,500) ಅಥವಾ ತಿಂಗಳಿಗೆ $14.99 (ಅಂದಾಜು ₹1,200) ಶುಲ್ಕ ವಿಧಿಸುತ್ತದೆ. ಇದರಲ್ಲಿ ವೇಗದ ಶಿಪ್ಪಿಂಗ್, ವಿಡಿಯೋ ಸ್ಟ್ರೀಮಿಂಗ್ ಮತ್ತು ಹೋಲ್ ಫುಡ್ಸ್‌ನಲ್ಲಿ ರಿಯಾಯಿತಿ ಸಿಗುತ್ತದೆ. ಪ್ರಸ್ತುತ ವಿಶ್ವದಾದ್ಯಂತ 20 ಕೋಟಿಗೂ ಹೆಚ್ಚು ಸದಸ್ಯರಿದ್ದಾರೆ.