ಬೀದಿನಾಯಿಗಳ ಅನಿರೀಕ್ಷಿತ ಮನಸ್ಥಿತಿಯ ಕುರಿತ ಸುಪ್ರೀಂ ಕೋರ್ಟ್ ಅಭಿಪ್ರಾಯಕ್ಕೆ ನಟಿ ರಮ್ಯಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಪುರುಷರ ಮನಸ್ಥಿತಿಯೂ ಅನಿರೀಕ್ಷಿತ, ಹಾಗಂತ ಎಲ್ಲರನ್ನೂ ಜೈಲಿಗೆ ಹಾಕುತ್ತೀರಾ ಎಂದು ಪ್ರಶ್ನಿಸುವ ಮೂಲಕ ಅವರು ಹೊಸ ಚರ್ಚೆಗೆ ಕಾರಣರಾಗಿದ್ದಾರೆ.
ಬೆಂಗಳೂರು (ಜ.7): ಬೀದಿನಾಯಿಗಳು ಕಚ್ಚುವಾಗ ಅವುಗಳ ಮನಸ್ಥಿತಿ ನಮಗೆ ಅರ್ಥವಾಗೋದಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗಾಗಿ ಅವುಗಳನ್ನು ಟೆಂಟ್‌ಗಳಿಗೆ ಶಿಫ್ಟ್ ಮಾಡುವುದೇ ಸರಿ ಎಂದು ಹೇಳಿದೆ. ಸುಪ್ರೀಂ ಕೋರ್ಟ್ ಅಭಿಪ್ರಾಯಕ್ಕೆ ಅಸಮ್ಮತಿ ವ್ಯಕ್ತಪಡಿಸಿರುವ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ರಸ್ತೆಯಲ್ಲಿ ತಿರುಗಾಡುವಾಗ ಪುರುಷನ ಮನಸ್ಥಿತಿ ಕೂಡ ನಮಗೆ ಅರ್ಥವಾಗೋದಿಲ್ಲ. ಆತ ಯಾವಾಗ ರೇ*ಪ್ ಮಾಡ್ತಾನೋ, ಕೊ*ಲೆ ಮಾಡ್ತಾನೋ ಗೊತ್ತಿಲ್ಲ. ಹೀಗಿರುವಾಗ ಎಲ್ಲಾ ಪುರುಷರನ್ನು ಜೈಲಿಗೆ ಹಾಕುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಬೀದಿನಾಯಿಗಳ ಹಾವಳಿ ಮತ್ತು ಅವುಗಳ ವರ್ತನೆಯ ಕುರಿತು ಸುಪ್ರೀಂಕೋರ್ಟ್ ನೀಡಿದ ಹೇಳಿಕೆಯ ವಿರುದ್ಧ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (ದಿವ್ಯ ಸ್ಪಂದನ) ಕಿಡಿಕಾರಿದ್ದಾರೆ. ಪ್ರಾಣಿ ಪ್ರೇಮಿಯಾಗಿರುವ ರಮ್ಯಾ, ನ್ಯಾಯಾಲಯದ ಅಭಿಪ್ರಾಯವನ್ನು ಪುರುಷರ ಮನಸ್ಥಿತಿಗೆ ಹೋಲಿಸುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಬೀದಿನಾಯಿಗಳ ಹಾವಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುವ ವೇಳೆ ಸುಪ್ರೀಂಕೋರ್ಟ್, "ಬೀದಿನಾಯಿಗಳ ಮನಸ್ಥಿತಿ ಯಾವಾಗ ಹೇಗಿರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಅವು ಯಾವಾಗ ಕಚ್ಚುತ್ತವೆ ಅಥವಾ ಯಾವಾಗ ಶಾಂತವಾಗಿರುತ್ತವೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ," ಎಂದು ಅಭಿಪ್ರಾಯಪಟ್ಟಿತ್ತು.
ನ್ಯಾಯಾಲಯದ ತರ್ಕ ಪ್ರಶ್ನಿಸಿದ ರಮ್ಯಾ
ನ್ಯಾಯಾಲಯದ ಈ ತರ್ಕವನ್ನು ಪ್ರಶ್ನಿಸಿರುವ ರಮ್ಯಾ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. "ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಕೂಡ ಯಾರಿಗೂ ಸಾಧ್ಯವಿಲ್ಲ. ಒಬ್ಬ ಪುರುಷ ಯಾವಾಗ ಅ*ತ್ಯಾಚಾರ ಮಾಡುತ್ತಾನೋ ಅಥವಾ ಯಾವಾಗ ಕೊ*ಲೆ ಮಾಡುತ್ತಾನೋ ಎಂದು ಯಾರೂ ಮುನ್ಸೂಚನೆ ನೀಡಲು ಸಾಧ್ಯವಿಲ್ಲ. ಹಾಗಂತ ಎಲ್ಲಾ ಪುರುಷರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಜೈಲಿಗೆ ಹಾಕಲು ಸಾಧ್ಯವೇ?" ಎಂದು ಪ್ರಶ್ನಿಸಿದ್ದಾರೆ.
ನಾಯಿಗಳ ಮನಸ್ಥಿತಿಯನ್ನು ಅರ್ಥೈಸಲಾಗದು ಎಂಬ ಕಾರಣಕ್ಕೆ ಅವುಗಳ ಮೇಲೆ ಕಠಿಣ ಕ್ರಮ ಅಥವಾ ನಕಾರಾತ್ಮಕ ಧೋರಣೆ ತಳೆಯುವುದನ್ನು ರಮ್ಯಾ ಈ ಮೂಲಕ ವಿರೋಧಿಸಿದ್ದಾರೆ. ಪ್ರಾಣಿಗಳ ಹಕ್ಕುಗಳ ಪರವಾಗಿ ಧ್ವನಿ ಎತ್ತಿರುವ ಅವರ ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.
ಬೀದಿನಾಯಿಗಳ ಹಾವಳಿ ತಡೆಗಟ್ಟಲು ಎಬಿಸಿ (Animal Birth Control) ನಿಯಮಗಳ ಜಾರಿ ಮತ್ತು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಸುಪ್ರೀಂಕೋರ್ಟ್ ವಿಶೇಷ ಗಮನ ಹರಿಸುತ್ತಿದೆ. "ನಾಯಿಗಳಿಗೆ ಆಹಾರ ನೀಡುವವರ ಹಕ್ಕು ಮತ್ತು ಸಾರ್ವಜನಿಕರ ಸುರಕ್ಷತೆಯ ನಡುವೆ ಸಮತೋಲನ ಇರಬೇಕು" ಎಂದು ನ್ಯಾಯಾಲಯ ಈ ಹಿಂದೆಯೂ ತಿಳಿಸಿತ್ತು.



