ನಟಿ ಹೇಮಾ ಪ್ರಭಾತ್ ಸರಿಗಮಪ ಶೋನಲ್ಲಿ ಅಮೆರಿಕ ಅಮೆರಿಕ ಸಿನಿಮಾ ನೆನಪುಗಳನ್ನ ಹಂಚಿಕೊಂಡಿದ್ದಾರೆ. ಸೂರ್ಯನನ್ನ ಮದುವೆ ಆಗ್ಲಿಲ್ಲ ಅಂತ ಜನರು ಬೈದಿದ್ದರ ಬಗ್ಗೆ ಮಾತನಾಡಿದ್ದಾರೆ.

ಝೀ ಕನ್ನಡದ ಸರಿಗಮಪ ರಿಯಾಲಿ ಶೋಗೆ ಸ್ಯಾಂಡಲ್‌ವುಡ್ ನಟ ರಮೇಶ್ ಅರವಿಂದ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ರಮೇಶ್ ಅರವಿಂದ್ ಸಿನಿಮಾಗಳನ್ನು ಹಾಡುಗಳನ್ನು ಹಾಡುವ ಮೂಲಕ ಪ್ರತಿಭಾನ್ವಿತ ನಟನ ಸಾಧನೆಯನ್ನು ಆಚರಿಸಲಾಯ್ತು. ಇದೇ ಕಾರ್ಯಕ್ರಮಕ್ಕೆ ಅಮೆರಿಕ ಅಮೆರಿಕ ಸಿನಿಮಾ ಖ್ಯಾತಿಯ ನಟಿ ಹೇಮಾ ಪ್ರಭಾತ್ ಸಹ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಸ್ಪರ್ಧಿಗಳಾದ ಶಿವಾನಿ ಮತ್ತು ದೀಪಕ್ ಇಬ್ಬರು ಅಮೆರಿಕ ಅಮೆರಿಕ ಸಿನಿಮಾದ ಐಕಾನಿಗ್ ಸಾಂಗ್ "ಯಾವ ಮೋಹನ ಮುರಳಿ ಕರೆಯಿತು" ಹಾಡನ್ನು ಅತ್ಯದ್ಭುತವಾಗಿ ಹಾಡಿದರು. ಗಾಯನದ ಬಳಿಕ ಚಿತ್ರ ಮತ್ತು ಶೂಟಿಂಗ್ ದಿನಗಳನ್ನು ನಟ ರಮೇಶ್ ಅರವಿಂದ್ ಮತ್ತು ಹೇಮಾ ಪ್ರಭಾತ್ ನೆನಪು ಮಾಡಿಕೊಂಡರು. 

ನಾಗತಿಹಳ್ಳಿ ಚಂದ್ರಶೇಖರ್‌ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾವೇ ಅಮೆರಿಕ ಅಮೆರಿಕ. ಇಂದಿಗೂ ಸಿನಿಮಾ ನೋಡುಗರ ಹೃದಯದಲ್ಲಿ ಪ್ರೀತಿಯ ಹೂ ಅರಳುವಂತೆ ಮಾಡುತ್ತದೆ. ಸ್ನೇಹನಾ ಅಥವಾ ಪ್ರೀತಿನಾ ಎಂಬ ಪ್ರಶ್ನೆಗೆ ಉತ್ತರ ಬೇಕಾದ್ರೆ ಈ ಸಿನಿಮಾವನ್ನು ನೀವು ನೋಡಲೇಬೇಕು. ತ್ರಿಕೋನ ಪ್ರೇಮ ಕಥೆಯನ್ನು ಹೊಂದಿದ್ದ ಅಮೆರಿಕಾ ಅಮೆರಿಕಾ ಸಿನಿಮಾದಲ್ಲಿ ಸೂರ್ಯನಾಗಿ ರಮೇಶ್ ಅರವಿಂದ್, ಭೂಮಿಯಾಗಿ ಹೇಮಾ ಮತ್ತು ಶಶಾಂಕ್ ಆಗಿ ಅಕ್ಷಯ್ ಆನಂದ್ ನಟಿಸಿದ್ದರು. ಇವರ ಜೊತೆಯಲ್ಲಿ ವೈಶಾಲಿ ಕಾಸರವಳ್ಳಿ, ಹೆಚ್‌ಜಿ ದತ್ತಾತ್ತೇಯ, ಸಿಆರ್ ಸಿಂಹ, ಶಿವರಾಂ ಸೇರಿದಂತೆ ಹಲವು ಹಿರಿಯ ತಾರೆಯರು ನಟಿಸಿದ್ದರು. 

ಅಮೆರಿಕಾ ಅಮೆರಿಕಾ ಕಥೆ ಏನು?
ಭೂಮಿ, ಸೂರ್ಯ ಮತ್ತು ಶಶಾಂಕ್ ಮೂವರು ಬಾಲ್ಯದ ಗೆಳೆಯರು. ಶಶಾಂಕ್ ಕೆಲಸ ಅರಸಿ ಅಮೆರಿಕಾಗೆ ಹೋಗುತ್ತಾನೆ. ಭೂಮಿ ಮತ್ತು ಸೂರ್ಯ ಜೊತೆಯಲ್ಲಿ ಓದುತ್ತಿರುತ್ತಾರೆ. ಭೂಮಿಯನ್ನು ಪ್ರೀತಿಸುವ ಸೂರ್ಯ ಈ ವಿಷಯವನ್ನು ಯಾರೊಂದಿಗೂ ಹೇಳಿಕೊಳಲ್ಲ. ಇನ್ನೇನು ತನ್ನ ಪ್ರೀತಿಯನ್ನು ಹೇಳಿಕೊಳ್ಳಬೇಕುವಷ್ಟರಲ್ಲಿ ಶಶಾಂಕ್ ಮತ್ತು ಭೂಮಿ ಮದುವೆ ನಿಶ್ಚಯವಾಗುತ್ತದೆ. ಆದರೂ ಸೂರ್ಯ ತನ್ನ ಪ್ರೀತಿಯನ್ನ ಹೃದಯದಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ. ಮದುವೆ ಬಳಿಕ ಭೂಮಿ ಮತ್ತು ಶಶಾಂಕ್ ಅಮೆರಿಕಾಗೆ ಶಿಫ್ಟ್ ಆಗುತ್ತಾರೆ. ಹೀಗೆ ಕೆಲಸದ ನಿಮಿತ್ ಸೂರ್ಯ ಅಮೆರಿಕಾಗೆ ಹೋದ ಸಂದರ್ಭದಲ್ಲಿ ಶಶಾಂಕ್ ಅಪಘಾತದಲ್ಲಿ ಸಾಯುತ್ತಾನೆ. ಆ ವೇಳೆಗಾಗಲೇ ಸೂರ್ಯ ತನ್ನನ್ನು ಪ್ರೀತಿಸುತ್ತಿರುವ ವಿಷಯ ಗೊತ್ತಾಗುತ್ತದೆ. ಗಂಡ ಶಶಾಂಕ್ ನಿಧನದ ಬಳಿಕ ಬಾಲ್ಯದ ಮತ್ತು ಆಪ್ತ ಗೆಳೆಯನನ್ನು ಭೂಮಿ ಮದುವೆ ಆಗ್ತಾಳಾ? ಮತ್ತೆ ಭಾರತಕ್ಕೆ ಬರ್ತಾಳಾ ಅನ್ನೋದು ಚಿತ್ರದ ಕಥೆ. 

ಇದನ್ನೂ ಓದಿ: Mystery Thriller OTT: ಕೊನೆ 10 ನಿಮಿಷದ ಕ್ಲೈಮ್ಯಾಕ್ಸ್‌ಗಾಗಿಯೇ ಮಲಯಾಳಂನ ಈ ಸಿನಿಮಾ ನೋಡಬೇಕು

ಜನ ನನಗೆ ಬೈದಿದ್ರು!
ಈ ಸಿನಿಮಾ ಬಿಡುಗಡೆಯಾದ ನಂತರ ತುಂಬ ಜನರು ಯಾಕೆ ನೀನು ಸೂರ್ಯನನ್ನು ಮದುವೆಯಾಗಲಿಲ್ಲ ಅಂತ ಬೈದಿದ್ದರು. ಅಂದು ನಾನು ಸುಮ್ಮನೇ ನಗುತ್ತಿದ್ದೆ. ಒಂದು ವೇಳೆ ಚಿತ್ರದಲ್ಲಿ ಸೂರ್ಯನನ್ನು ಭೂಮಿ ಮದುವೆಯಾಗಿದ್ರೆ 'ಅಮೆರಿಕ ಅಮೆರಿಕ' ಎಂಬ ಸಿನಿಮಾ ಇಷ್ಟು ಸೂಪರ್ ಹಿಟ್ ಆಗುತ್ತಿರಲಿಲ್ಲ ಎಂದು ನಟಿ ಹೇಮಾ ಹೇಳಿದ್ದಾರೆ. ಅಂದು ನಾವೆಲ್ಲರೂ ಹೊಸ ಕಲಾವಿದರು. ನಮ್ಮ ಜೊತೆ ಕೆಲಸ ಮಾಡಲು ಒಪ್ಪಿಕೊಂಡಿದ್ದಕ್ಕೆ ರಮೇಶ್ ಸರ್‌ಗೆ ಧನ್ಯವಾದಗಳು ಎಂದು ಹೇಮಾ ಹೇಳಿದರು. 

ಇನ್ನು ಇದೇ ವೇದಿಕೆಯಲ್ಲಿ ರಮೇಶ್ ಅರವಿಂದ್ ಮತ್ತು ಹೇಮಾ, ಇದೇ ಸಿನಿಮಾದ ನೂರು ಜನ್ಮಕ್ಕೂ ಹಾಡನ್ನು ರಿಕ್ರಿಯೇಟ್ ಮಾಡಿದ್ದರು. ಸೂರ್ಯ ಅಂದು ಪತ್ರದಲ್ಲಿ ಪ್ರೇಯಸಿ ಹೆಸರು ಬರೆದಿರಲಿಲ್ಲ, ಇಂದು ಬರೆದುಕೊಟ್ಟಿಲ್ಲ ಎಂದು ಹೇಳಿದರು. ಆಗ ರಮೇಶ್ ಪೆನ್ನು ತೆಗೆದುಕೊಂಡು ಹೇಮಾ ಅವರ ಬೆನ್ನ ಮೇಲೆಯೇ ಕಾಗದ ಇರಿಸಿ ಪ್ರೀತಿಯಿಂದ ರಮೇಶ್ ಅರವಿಂದ್ ಎಂದು ಬರೆದರು. ಸಿನಿಮಾ ಡೈಲಾಗ್‌ ಹೇಳುವ ಮೂಲಕ ಹೇಮಾ ಎಲ್ಲರನ್ನು ರಂಜಿಸಿದರು. ರಮೇಶ್ ಅರವಿಂದ್, ಸಿನಿಮಾದ ಯಾವ ಮೋಹನ ಮುರಳಿ ಕರೆಯಿತು ಹಾಡು ಹೇಗೆ ತೆರೆಯ ಮೇಲೆ ತರಲಾಯ್ತು ಮತ್ತು ಜನರಿಗೆ ಹೇಗೆ ಹತ್ತಿರವಾಯ್ತು ಎಂಬುದನ್ನು ವಿವರಿಸಿದರು.

ಇದನ್ನೂ ಓದಿ: ಗರ್ಭಿಣಿ ಹೆಂಗಸು, ಕಾಣೆಯಾದ ಗಂಡ, ರಹಸ್ಯಗಳ ಮೇಲೆ ರಹಸ್ಯ - ಕ್ಲೈಮ್ಯಾಕ್ಸ್ ತನಕ ಯಾರೂ ಕುರ್ಚಿ ಬಿಡಲಿಲ್ಲ!