ಮುಂಬೈ[ಡಿ.27]: ಕಿರುತೆರೆಯಿಂದ ಬಾಲಿವುಡ್ ವರೆಗೆ ತನ್ನ ಛಾಪು ಮೂಡಿಸಿರುವ ಖ್ಯಾತ ನಟ ಕುಶಾಲ್ ಪಂಜಾಬಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ 37 ವರ್ಷದ ಈ ನಟ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂಬ ವಿಚಾರ ಬಯಲಾಗಿಲ್ಲ. 

ಪಾಲಿ ಹಿಲ್ ನಲ್ಲಿರುವ ಕುಶಾಲ್ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಅವರ ಮನೆಯಲ್ಲಿ ಸೂಸೈಡ್ ಡೆತ್ ನೋಟ್ ಕೂಡಾ ಪತ್ತೆಯಾಗಿದೆ ಎನ್ನಲಾಗಿದೆ. ಸದ್ಯ ವರದಿಯಲ್ಲಿ ಆಕಸ್ಮಿಕ ಸಾವು ಎಂದು ದಾಖಲಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ಕುಶಾಲ್ ಸಿಂಗ್ ನಿಧನದ ಸುದ್ದಿ ಕಿರುತೆರೆ ಖ್ಯಾತ ನಟ ರಣ್ವೀರ್ ಬೋಹ್ರಾ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಬಹಿರಂಗಪಡಿಸಿದ್ದಾರೆ. ಈ ಪೋಸ್ಟ್ ನಲ್ಲಿ ಅವರು ಕುಶಾಲ್ ಸಾವಿನ ಸುದ್ದಿಯಿಂದ ಬೆಚ್ಚಿ ಬಿದ್ದಿದ್ದೇನೆ ಎಂದಿದ್ದಾರೆ. ಅಲ್ಲದೇ 'ನಿನ್ನ ಅಗಲುಬವಿಕೆ ಸುದ್ದಿಯಿಂದ ನನಗೆ ದಂಗಾಗಿದೆ. ಈವರೆಗೂ ಈ ಸತ್ಯ ನನ್ನಿಂದ ಅರಗಿಸಿಕೊಳ್ಳಲಾಗುತ್ತಿಲ್ಲ. ನೀನು ಒಂದು ಅತ್ಯುತ್ತಮ ಸ್ಥಳದಲ್ಲಿದ್ದೀ ಎಂದು ನನಗೆ ತಿಳಿದಿದೆ. ಆದರೆ ಇದನ್ನು ಅರ್ಥೈಸಿಕೊಳ್ಳಲು ಬಹಳ ಕಷ್ಟವಾಗುತ್ತಿದೆ. ಹಲವಾರು ವಿಚಾರಗಳಲ್ಲಿ ನೀವು ನನಗೆ ಪ್ರೇರಣೆ. ನಾನು ಯಾವತ್ತೂ ನಿಮ್ಮನ್ನು ನೆನಪಿಟ್ಟುಕೊಳ್ಳುತ್ತೇನೆ' ಎಂದು ಬರೆದಿದ್ದಾರೆ. ಇದರೊಂದಿಗೆ ಕುಶಾಲ್ ಫೋಟೋ ಕೂಡಾ ಶೇರ್ ಮಾಡಿಕೊಂಡಿದ್ದಾರೆ. RIP ನನ್ನ ಗೆಳೆಯ, ನಗುಮೊಗದ ಹಿಂದೆ ಬಹಳಷ್ಟು ನೋವಿರುತ್ತದೆ ಎಂಬ ಮಾತು ಸತ್ಯವಾಯ್ತು ಎಂದೂ ಬರೆದಿದ್ದಾರೆ.

ಕುಶಾಲ್ ಪಂಜಾಬಿ 1982ರ ಏಪ್ರಿಲ್ 23ರಂದು ಜನಿಸಿದ್ದರು. ಓರ್ವ ಕಿರುತೆರೆ ನಟ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಕುಶಾಲ್ ಪಂಜಾಬಿ ಹಲವಾರು ಬಾಲಿವುಡ್ ಸಿನಿಮಾಗಳಲ್ಲೂ ತನ್ನ ಅದೃಷ್ಟ ಪರೀಕ್ಷೆ ನಡೆಸಿದ್ದರು. 

ಇಶ್ಕ್ ಮೆಂ ಮರ್ಜಾವಾಂ, ಮೌಥ್ ಫುಲ್ ಆಫ್ ಸ್ಕೈ, ಲವ್ ಮ್ಯಾರೇಜ್, ದೇಖೋ ಮಗರ್ ಪ್ಯಾರ್ ಸೆ, ಕಭೀ ಹಾಂ ಕಭೀ ನಾಂ, ಯೆ ದಿಲ್ ಚಾಹೇ ಮೋರ್, ಫಿಯರ್ ಫ್ಯಾಕ್ಟರ್, ಕಸಂ ಸೆ, ಅಂತರಿಕ್ಷ್, ಹಮ್ ತುಮ್, ಜೋರ್ ಕಾ ಜಟ್ಕಾ, ಆಸ್ ಮಾನ್ ಸೆ ಆಗೆ, ತೇರಿ ಮೇರಿ ಲವ್ ಸ್ಟೋರಿ ಹಾಗೂ ರಾಜಾ ಕೀ ಆಯೇಗಿ ಬಾರಾತ್ ಮೊದಲಾದ ಧಾರವಾಹಿ ಹಾಗೂ ಕಿರುತೆರೆ ಕಾರ್ಯಕ್ರಮಗಳಲ್ಲಿ ನಟಿಸಿದ್ದರು. ಇನ್ನು ಸಲಾಂ ಎ ಇಶ್ಕ್, ಧನ್ ಧನಾ ಧನ್ ಗೋಲ್, ಕ್ರೀಜಿ ಕುಕ್ಕಡ್ ಫ್ಯಾಮಿಲಿ, ಹಮ್ ಕೋ ಇಶ್ಕ್ ನೆ ಮಾರಾ ಮೊದಲಾದ ಸಿನಿಮಾಗಲ್ಲೂ ನಟಿಸಿದ್ದರು.