Dead-End Job: ಸಾಮಾನ್ಯ ಕೆಲಸಕ್ಕಿಂತ 50 ಪಟ್ಟು ಹೆಚ್ಚು ಸಂಬಳ ನೀಡುವ ಕೆಲಸದ ಆಫರ್ ಸಿಕ್ಕರೆ ಯಾರು ತಾನೇ ಬೇಡ ಎನ್ನುತ್ತಾರೆ? ಆದರೆ ಇಲ್ಲೊಬ್ಬ ಯುವಕನಿಗೆ ಇದೇ ಕೆಲಸ ದೊಡ್ಡ ದುಃಸ್ವಪ್ನವಾಗಿ ಪರಿಣಮಿಸುತ್ತದೆ. ಸಾಲದ ಸುಳಿಯಿಂದ ಹೊರಬರಲು ನಿಗೂಢ ಕೆಲಸ ಒಪ್ಪಿಕೊಳ್ಳುವ ಯುವಕನ ಬದುಕಿನಲ್ಲಿ ನಡೆಯುವ ಭಯಾನಕ ಘಟನೆಗಳೇ 'ಡೆಡ್-ಎಂಡ್ ಜಾಬ್' ಸೀರಿಸ್ನ ಕಥೆ.
ಭಯಾನಕವಾದ ಮತ್ತೊಂದು ಸೀರಿಸ್ ಒಟಿಟಿಗೆ
ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗಮನ ಸೆಳೆದಿದ್ದ ವೆಬ್ ಸೀರಿಸ್ ಇದೀಗ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಟಾಪ್ ಟ್ರೆಂಡಿಂಗ್ ಪಟ್ಟಿಯಲ್ಲೂ ಸ್ಥಾನ ಪಡೆದುಕೊಂಡಿದೆ. ಕೆಲವು ಸಮಯದ ಹಿಂದೆ ಒಟಿಟಿಯಲ್ಲಿ ಬಿಡುಗಡೆಯಾಗಿದ್ದ 'ಇಫ್ ವಿಶಸ್ ಕುಡ್ ಕಿಲ್' (If Wishes Could Kill) ವೆಬ್ ಸೀರಿಸ್ ಭಾರೀ ಸದ್ದು ಮಾಡಿತ್ತು. ಇದೀಗ ಅದಕ್ಕಿಂತಲೂ ಭಯಾನಕವಾದ ಮತ್ತೊಂದು ಸೀರಿಸ್ ಒಟಿಟಿಗೆ ಬಂದಿದೆ.
ಸೀರೀಸ್ ಕಥೆ ಏನು?
ಇತ್ತೀಚೆಗೆ ಬಿಡುಗಡೆಯಾಗಿರುವ ಈ ಸೀರಿಸ್ ಮಿಸ್ಟರಿ ಮತ್ತು ಹಾರರ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ. ಸದ್ಯ ಇಂಟರ್ನೆಟ್ನಲ್ಲಿ ಈ ಸೀರಿಸ್ ಬಗ್ಗೆಯೇ ಚರ್ಚೆಯಾಗುತ್ತಿದೆ. ಇದರ ಕೆಲವು ದೃಶ್ಯಗಳನ್ನು ನೋಡಿದರೆ ಪ್ರೇಕ್ಷಕರ ಮೈ ಜುಮ್ಮೆನ್ನುತ್ತದೆ. ನಿರುದ್ಯೋಗಿಯಾಗಿದ್ದು, ಸಾಲದ ಸುಳಿಯಲ್ಲಿ ಸಿಲುಕಿರುವ ಯುವಕನಿಗೆ ಇದ್ದಕ್ಕಿದ್ದಂತೆ ಸಾಮಾನ್ಯ ಸಂಬಳಕ್ಕಿಂತ 50 ಪಟ್ಟು ಹೆಚ್ಚು ಸಂಬಳ ನೀಡುವ ಕೆಲಸ ಸಿಗುತ್ತದೆ.
ರಹಸ್ಯ ಮತ್ತು ಭಯದಿಂದ ಕೂಡಿದ ಕಥೆ
ಆದರೆ 50 ಪಟ್ಟು ಹೆಚ್ಚು ಸಂಬಳ ಸಿಗುತ್ತದೆ ಎಂಬ ಸಂತೋಷ ಕೆಲವೇ ನಿಮಿಷಗಳಲ್ಲಿ ತನ್ನ ಪಾಲಿಗೆ ಭಯಾನಕ ದುಃಸ್ವಪ್ನವಾಗಲಿದೆ ಎಂಬುದು ಆತನಿಗೆ ತಿಳಿದಿರುವುದಿಲ್ಲ. ಒಟ್ಟು 8 ಎಪಿಸೋಡ್ಗಳನ್ನು ಹೊಂದಿರುವ ಈ ವೆಬ್ ಸೀರಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪ್ರದರ್ಶನ ಕಂಡಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದಲೂ ಉತ್ತಮ ಮೆಚ್ಚುಗೆ ಪಡೆದುಕೊಂಡಿದೆ. ಆ ಸೀರಿಸ್ ಹೆಸರೇ 'ಡೆಡ್-ಎಂಡ್ ಜಾಬ್' (Dead-End Job).
Netflixನಲ್ಲಿ ಟ್ರೆಂಡಿಂಗ್ನಲ್ಲಿದೆ ಈ ಸೀರಿಸ್
ಇದು ದಕ್ಷಿಣ ಕೊರಿಯಾದ ಮಿಸ್ಟರಿ ಹಾರರ್ ಥ್ರಿಲ್ಲರ್ ಸೀರಿಸ್ ಆಗಿದೆ. 8 ಎಪಿಸೋಡ್ಗಳ ಈ ಕೆ-ಡ್ರಾಮಾ ಮೊದಲು 31ನೇ ಬೂಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಈ ಸಂದರ್ಭದಲ್ಲಿ ಸೀರಿಸ್ನ ಒಟ್ಟು ನಾಲ್ಕು ಎಪಿಸೋಡ್ಗಳನ್ನು ಪ್ರದರ್ಶಿಸಲಾಗಿತ್ತು. ಆಗಲೇ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಈ ಸೀರಿಸ್ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಅಕ್ಟೋಬರ್ 30ರಿಂದ Netflixನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಸೀರಿಸ್ಗೆ ಸಿಕ್ಕಿದೆ ಉತ್ತಮ ರೇಟಿಂಗ್
ಬಿಡುಗಡೆಯಾದ ಕೇವಲ ಒಂದು ದಿನದಲ್ಲೇ 'ಡೆಡ್-ಎಂಡ್ ಜಾಬ್' (Dead-End Job Series On OTT) Netflixನ ಟಾಪ್ 10 ಟ್ರೆಂಡಿಂಗ್ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ. IMDbನಲ್ಲೂ ಈ ಸೀರಿಸ್ಗೆ 7.6 ರೇಟಿಂಗ್ ಸಿಕ್ಕಿದೆ. ಈ ಸೀರಿಸ್ನಲ್ಲಿ ಲೀ ಜೇ-ವೂಕ್ (Lee Jae-wook), ಗೋ ಮಿನ್-ಸಿ (Go Min-si) ಮತ್ತು ಕಿಮ್ ಮಿನ್-ಹಾ (Kim Min-ha) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಏನಿದು 'ಡೆಡ್-ಎಂಡ್ ಜಾಬ್' ಸೀರಿಸ್ ಕಥೆ?
ಈ ಸೀರಿಸ್ನ ಕಥೆ ಹ್ಯುಕ್-ಜುನ್ (ಲೀ ಜೇ-ವೂಕ್) ಎಂಬ ಯುವಕನ ಸುತ್ತ ಸಾಗುತ್ತದೆ. ಆತನಿಗೆ ಒಂದು ನಿಗೂಢ ಉದ್ಯೋಗ ಏಜೆನ್ಸಿಯ ಪರಿಚಯವಾಗುತ್ತದೆ. ಈ ಏಜೆನ್ಸಿ ಪಾರ್ಟ್ಟೈಮ್ ಕೆಲಸಕ್ಕೆ ಸಾಮಾನ್ಯ ಸಂಬಳಕ್ಕಿಂತ ಬರೋಬ್ಬರಿ 50 ಪಟ್ಟು ಹೆಚ್ಚು ಹಣ ನೀಡುವುದಾಗಿ ಹೇಳುತ್ತದೆ. ಹೆಚ್ಚುತ್ತಿರುವ ಸಾಲದ ಹೊರೆಯಿಂದ ಮುಕ್ತಿ ಪಡೆಯಬೇಕೆಂಬ ಆಸೆಯಿಂದ ಹ್ಯುಕ್-ಜುನ್ ಆ ರಹಸ್ಯ ಕೆಲಸವನ್ನು ಒಪ್ಪಿಕೊಳ್ಳುತ್ತಾನೆ. ಆರಂಭದಲ್ಲಿ ಎಲ್ಲವೂ ಒಳ್ಳೆಯ ಅವಕಾಶದಂತೆ ಕಾಣುತ್ತದೆ. ಆದರೆ ಕೆಲವೇ ಸಮಯದಲ್ಲಿ ಆತನ ಜೀವನ ದುಃಸ್ವಪ್ನವಾಗಿ ಬದಲಾಗುತ್ತದೆ. ಆತ ಎಂದಿಗೂ ಊಹಿಸದಂತಹ ಭಯಾನಕ ಸ್ಥಳವೊಂದಕ್ಕೆ ತಲುಪುತ್ತಾನೆ. ಅಲ್ಲಿಂದ ಆತನ ಜೀವನ ಬದಲಾಗುತ್ತೆ. ಮುಂದೇನಾಗುತ್ತೆ, ತಿಳಿಯಲು ಸೀರೀಸ್ ನೋಡಿ.






